ಹಟ್ಟಿಯಂಗಡಿ ಗ್ರಾಮಸ್ಥರಿಮದ ಪಂಚಾಯತ್ ಕಛೇರಿ ಮುತ್ತಿಗೆ

Tuesday, 27 September 2016

ಕುಂದಾಪುರ, ಸೆ.27 : ಹಟ್ಟಿಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ ನಿವೇಶನ ರಹಿತ ಅರ್ಜಿದಾರರು ಭೂಮಿ ಹಕ್ಕು ಪತ್ರ ಮಂಜೂರು ಮಾಡಲು ಒತ್ತಾಯಿಸಿ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಕಛೇರಿ ಮುತ್ತಿಗೆ ಹೋರಾಟ ನಡೆಸಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ಮನೆ ನಿವೇಶನ ರಹಿತರಿಗೆ ಕೂಡಲೇ ಭೂಮಿ ಹಕ್ಕು ಪತ್ರ ಮಂಜೂರು ಮಾಡಲು ಈಗಾಗಲೇ ಸರಕಾರಿ ಜಾಗ ಕೆಂಚನೂರು ಗ್ರಾಮದಲ್ಲಿ ಸ.ನಂಬ್ರ 106/2 ವಿಸ್ತೀರ್ಣ 2 ಎಕ್ರೆ, ಸ.ನಂ. 99 ಮತ್ತು 141 ರಲ್ಲಿರುವ ಜನತಾ ಕಾಲೋನಿ ಸ್ಥಳ, ಕನ್ಯಾನ ಗ್ರಾಮದ ಸ.ನಂಬ್ರ 69 ರಲ್ಲಿ ಒಟ್ಟು 6 ಎಕ್ರೆ ಸ್ಥಳಗಳನ್ನು ಗುರುತಿಸಲಾಗಿದ್ದರೂ ಡೀಮ್ಡ್ ಫಾರೆಸ್ಟ್ ನೆಪ ಹೇಳಿ ನಿಧಾನ ದ್ರೋಹ ಎಸಗಲಾಗಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಹೇಳಿದರು. ಕಾನೂನು ತೊಡಕಿದ್ದರೆ- ತೆರವುಗೊಳಿಸಲು ಉಡುಪಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲು ಕ್ರಮವಹಿಸಬೇಕು ಎಂದು ಪ್ರತಿಭಟನಾಕಾರರು- ಸ್ಥಳೀಯ ಪಂಚಾಯತ್ ಅಧ್ಯಕ್ಷರಾದ ರಾಜೀವ ಶೆಟ್ಟಿಯವರನ್ನು ವಿನಂತಿಸಿದರು.

ನಿವೇಶನ ರಹಿತರಿಗೆ ಕೂಡಲೇ ಹಕ್ಕು ಪತ್ರ ಮಂಜೂರು ಮಾಡಲು ವಿಫಲರಾದರೆ ಹೋರಾಟವನ್ನು ತೀವ್ರಗೊಳಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಚಲೋ – ಜೈಲ್ ಬರೋ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ವೆಂಕಟೇಶ ಕೋಣಿ ತಿಳಿಸಿದರು. 

ಬೀಡಿ ವರ್ಕರ್ಸ್ ಯೂನಿಯನ್ ಮುಖಂಡ ಮಹಾಬಲ ವಡೇರ ಹೋಬಳಿ ನಿರ್ದೆಶನ ರಹಿತರ ಹೋರಾಟಕ್ಕೆ ಶುಭ ಶಂಸನೆ ಕೋರಿ ಮಾತನಾಡಿದರು. ಮುಖಂಡರಾದ ಅಶೋಕ ಹಟ್ಟಿಯಂಗಡಿ, ರಾಜೀವ ಪಡುಕೋಣೆ, ರಮೇಶ ಪೂಜಾರಿ ಗುಲ್ವಾಡಿ, ನಾಗರತ್ನ ನಾಡ, ಉಪಸ್ಥಿತರಿದ್ದರು. ಕೊನೆಯಲ್ಲಿ ನಿವೇಶನ ರಹಿತರ ಬೇಡಿಕೆಗಳ ಮನವಿಯನ್ನು ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೀವ ಶೆಟ್ಟಿ, ಉಪಾಧ್ಯಕ್ಷರು ಸದಸ್ಯರುಗಳಿಗೆ ಹಸ್ತಾಂತರಿಸಲಾಯಿತು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾನ್‍ಬಾಗ್ ಕಂದಾಯ ಅಧಿಕಾರಿ ರವಿಶಂಕರ ಇದ್ದರು.

 

ವರದಿ : ವೆಂಕಟೇಶ ಕೋಣಿ