ಒಂದೇ ಭೂಮಿ-ಒಂದೇ ದಾರಿ

ಸಂಪುಟ: 
39
ಸಂಚಿಕೆ: 
10
date: 
Sunday, 18 September 2016

ಒಟ್ಟಿನಲ್ಲಿ ಹೇಗಾದರೂ ಮಾಡಿ, ಹಣ ಸಂಪಾದಿಸಿ, ತಿಂದು, ಕುಡಿದು, ಕೈಲಾದಮಟ್ಟಿಗೆ ಮಜವಾಗಿ ಸುಖವಾಗಿ ಇರಬೇಕೆಂದು ಎಲ್ಲರೂ ಬಯಸುವ ಕಾಲ. ಅಂದರೆ, ಖಂಡಿತವಾಗಿಯೂ ಇದು ಚಿಂತಿಸುವ ಕಾಲವಲ್ಲ. ಸುತ್ತ- ಮುತ್ತ ಏನಾಗುತ್ತಿದೆಯೆಂದು ಅರ್ಥಮಾಡಿಕೊಳ್ಳುವ ಕಾಲವಲ್ಲ. ಒಂದು ವೇಳೆ ಹಾಗೆ ಮಾಡಲು ಯತ್ನಿಸಿದರೆ ಏನಾಗುತ್ತದೆ? ಪರಸ್ಪರ ವಿರುದ್ಧವಾದ ಸಂಗತಿಗಳು ಕಾಣತೊಡಗುತ್ತವೆ.

ಇದು ವ್ಯಾಪಾರದ ಯುಗ. ಮನೆಯ ಗೇಟಿಗೆ ಯಾರು ಯಾರೋ ತಗಲುಹಾಕಿದ ಬಿಟ್ಟಿ ತಗಡಿನಿಂದ ಹಿಡಿದು ಯುವಕ-ಯುವತಿಯರ ಕೈಯಲ್ಲಿನ ಸ್ಮಾರ್ಟ್‍ಫೋನ್‍ಗಳ ವರೆಗೆ, ಅಂತರ್ಜಾಲದ ಪುಟಗಳಿಂದ ಹಿಡಿದು ಬಸ್ಸು, ರೈಲುಗಳ ಕಿಟಕಿಗಳ ಮೇಲೆ, ರಸ್ತೆಗಳ ಇಕ್ಕೆಲಗಳಲ್ಲಿ, ಎಲ್ಲಿ ನೋಡಿದರೂ ವ್ಯಾಪಾರೀ ಸಂದೇಶಗಳೇ ಕಣ್ಣಿಗೆ, ಕಿವಿಗೆ ರಾಚುವ ಕಾಲ. 

ಆವೇಶಭರಿತ ಭಾಷಣಕಾರರಿರಲಿ, ಜಗದ್ಗುರುಗಳಿರಲಿ, ಪ್ರಗತಿಪರ ಬುದ್ಧಿಜೀವಿಗಳಿರಲಿ ಬುದ್ಧ, ಬಸವ, ಅಲ್ಲಮ, ಗಾಂಧಿ, ಅಂಬೇಡ್ಕರ್ ಹೆಸರುಗಳನ್ನು ಸಾಲಾಗಿ ಪಠಿಸಿ, ಯಾರೂ ಸಂಘರ್ಷಕ್ಕಿಳಿಯಬಾರದೆಂದೂ, ಎಲ್ಲರೂ ಶಾಂತಿ, ಸೌಹಾರ್ದತೆಗಳನ್ನು ಮೈಗೂಡಿಸಿಕೊಂಡು ಎಲ್ಲರೂ ವಿಶ್ವಮಾನವರಾಗಬೇಕೆಂದು ಜನಸಾಮಾನ್ಯರಿಗೆ ಕರೆಕೊಡುವ ಕಾಲ.

ಎಲ್ಲ ಇಸಮ್ಮುಗಳ ಕಾಲವೂ ಮುಗಿದುಹೋಯಿತೆಂದು, ಸಂಘರ್ಷ, ಹೋರಾಟ, ಚಳುವಳಿಗಳನ್ನು ಬದಿಗಿರಿಸಿ ಯಾವುದೇ ಸಮಸ್ಯೆ ಇದ್ದರೂ ಶಾಂತಿ-ಸೌಹಾರ್ದದಿಂದ, ಮಾತುಕತೆ-ಸಂಧಾನಗಳ ಮೂಲಕ ಬಗೆಹರಿಸಿಕೊಳ್ಳಬೇಕೆಂದೂ, ಮಾತುಕತೆಯಿಂದ ಬಗೆಹರಿಯಲಾಗದ ಯಾವ ಸಮಸ್ಯೆಯೂ ಈ ವಿಶ್ವದಲ್ಲಿ ಇಲ್ಲವೆಂದು ರಾಜಕೀಯ ನೇತಾರರು ಜನರಿಗೆ ಕರೆ ಕೊಡುವ ಕಾಲ. 

ಸರ್ಕಾರಗಳಿಗೆ ಅತಿಹೆಚ್ಚಿನ ದರಗಳ, ವಿವಿಧ ಬಗೆಯ ತೆರಿಗೆಗಳನ್ನು ಪ್ರಾಮಾಣಿಕವಾಗಿ ಸಲ್ಲಿಸುತ್ತಾ, ಬಡತನ ನಿರುದ್ಯೋಗ, ಹಸಿವು, ನೀರು, ಆರೋಗ್ಯ, ವಸತಿ, ಶಿಕ್ಷಣ ಮುಂತಾದ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರದತ್ತ ನೋಡದೆ ಜನರೇ ತಮ್ಮ ಸ್ವಂತ ಖರ್ಚಿನಲ್ಲಿ ಬಗೆಹರಿಸಿಕೊಳ್ಳಬೇಕೆಂದು, ಚುನಾಯಿತ ಸರ್ಕಾರಗಳು ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಸದಾ ಅಭಿವೃದ್ಧಿಯ ಕಡೆಗೆ ಗಮನ ಹರಿಸಲು ಜನರು ಅವಕಾಶ ಮಾಡಿಕೊಡಬೇಕೆಂದು ಪ್ರತಿಷ್ಠಿತ ಜಾಗತಿಕ ವಿಶ್ವದ್ಯಾಲಯಗಳಲ್ಲಿ ಪದವಿ ಪಡೆದ ಪ್ರತಿಭಾನ್ವಿತ ಆರ್ಥಿಕ ಪರಿಣತರು ಪ್ರತಿಪಾದಿಸುವ ಕಾಲ. 

ಹೊಟ್ಟೆ ತುಂಬಿದವರನ್ನು ಕಿತ್ತು ತಿನ್ನುತ್ತಿರುವ ಜೀವನದ ಏಕತಾನತೆ ಮತ್ತು ಮೌಲ್ಯರಾಹಿತ್ಯಗಳ ಹಿಂಸೆಯಿಂದ ಪಾರಾಗಲು ಹಾಸ್ಯಮಯವಾಗಿ ಮಾತನಾಡುವ ಮಾತುಗಾರರು, ನಾಟಕ, ಸಿನಿಮಾಗಳ ನಿರ್ದೇಶಕರು ಮತ್ತು ನಟನಟಿಯರಿಗಾಗಿ ಮುಗಿಬೀಳುವ ಕಾಲ. ಊಟ, ನಿದ್ದೆ, ಮೈಥುನಗಳನ್ನು ವಿನಾಯಿಸಿ ಉಳಿದೆಲ್ಲವನ್ನೂ ಸ್ವತಹ ತಾವೇ ಆಡಿ-ಮಾಡುವ ಬದಲು ಟೀವಿ, ಸಿನಿಮಾಗಳಲ್ಲಿ ಯಾರ್ಯಾರೋ ಆಡಿ-ಮಾಡುವುದನ್ನು ನೋಡಿ ಆನಂದಿಸಬೇಕೆಂದು ಬಯಸುವ ಭ್ರಮಾತ್ಮಕ ಸುಖ-ನೆಮ್ಮದಿಗಳ ಕಾಲ.

ಮನೆಜನರೊಂದಿಗೆ, ಬಂಧು-ಮಿತ್ರರೊಂದಿಗೆ, ಸಹಪ್ರಯಾಣಿರೊಂದಿಗೆ, ಸಹಜೀವಿಗಳೊಂದಿಗೆ ಆತ್ಮೀಯವಾಗಿ ಕಲೆತು ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ಬದಲು, ವಿಚಾರ ವಿನಿಮಯ ಮಾಡಿಕೊಳ್ಳುವ ಬದಲು, ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಿಗೆ ಕಾಣದ ತೋರಿಕೆಯ ವ್ಯಕ್ತಿಗಳೊಂದಿಗೆ ಹುಸಿ ಸಂಬಂಧವಿರಿಸಿಕೊಂಡು ಸಾಮಾಜಿಕರಾಗಿದ್ದೇವೆಂದು ಜನರು ತಮ್ಮನ್ನು ತಾವೇ ನಂಬಿಸಿಕೊಳ್ಳುವ ಕಾಲ. 

ಕಸದ ರಾಶಿಯ ವಿಲೇವಾರಿ, ಕಕ್ಕಸ್ಸುಗಳ ನಿರ್ಮಾಣ, ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವುದು, ಅತ್ಯಾಚಾರಿಗಳಿಗೆ ಕಠಿಣಶಿಕ್ಷೆ, ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸುವುದು, ಬಾಲಕಾರ್ಮಿಕರ ಸಮಸ್ಯೆ, ಸರಗಳ್ಳರನ್ನು ಹಿಡಿಯುವುದು, ಏಟಿಎಮ್‍ಗಳಲ್ಲಿ ಮಹಿಳೆಯರು ಮತ್ತು ವೃದ್ಧರಿಗೆ ರಕ್ಷಣೆಯೊದಗಿಸುವುದು, ಕಪ್ಪುಹಣದ ನಿಯಂತ್ರಣ ಮುಂತಾದ ಗಂಭೀರ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಟಿವಿ ವಾಹಿನಿಗಳಲ್ಲಿ ಅತ್ಯಂತ ಕಾಳಜಿಯಿಂದ ಸಂವಾದ-ವಾಗ್ವಾದಗಳನ್ನು ನಡೆಸುವ ಕಾಲ. 

ಜಾತೀಯತೆ-ಕೋಮುವಾದದ ವಿರುದ್ಧ, ಸಾಧು ಸಜ್ಜನರಲ್ಲಿ, ರಾಜಕಾರಣಿ-ಗುರು-ಹಿರಿಯರಲ್ಲಿ ಹೆಚ್ಚುತ್ತಿರುವ ಕಾಮುಕತೆಯ ವಿರುದ್ಧ, ಜನರಲ್ಲಿ ನೈತಿಕಮೌಲ್ಯಗಳು ಕುಸಿಯುತ್ತಿರುವುದರ ವಿರುದ್ಧ, ಮೂಢನಂಬಿಕೆ-ಕಂದಾಚಾರಗಳ ವಿರುದ್ಧ, ಪ್ರಜ್ಞಾವಂತಜನರು, ಸಮಾಜಸೇವಕರು, ಪ್ರಗತಿಪರ ಸಂಸ್ಥೆಗಳು, ಮೇಣದ ಬತ್ತಿಹಚ್ಚಿ, ಮೌನ ಮೆರವಣಿಗೆ ತೆಗೆದು, ಒಟ್ಟಿನಲ್ಲಿ ಶಾಂತರೀತಿಯಿಂದ, ಪ್ರಜಾತಾಂತ್ರಿಕ ವಿಧಾನಗಳಲ್ಲಿ ಉಗ್ರವಾಗಿ ಪ್ರತಿಭಟಿಸಬೇಕೆಂದು ಲೇಖಕರು, ಚಿಂತಕರು, ಬುದ್ಧಿಜೀವಿಗಳು ಮತ್ತು ಎನ್‍ಜಿವೋಗಳು ಕರೆಕೊಡುವ ಕಾಲ. 

ಎಲ್ಲಿ ನೋಡಿದರೂ ಆತಂಕವಾದಿಗಳು ಎಲ್ಲಿ ಯಾವಾಗ ನುಸುಳಿ ಬಾಂಬ್ ಸಿಡಿಸುತ್ತಾರೋ ಎಂದು ತಿಳಿಯಲು ಎಲ್ಲೆಲ್ಲೂ ಕ್ಯಾಮರಾಗಳನ್ನಿಟ್ಟು ಲೋಹ ಶೋಧಕಗಳಿಂದ ಎಲ್ಲರನ್ನೂ ತಪಾಸಣೆಗೆ ಒಳಪಡಿಸುವ ಕಾಲ. 

ಸ್ಮಾರ್ಟ್‍ಕಾರ್ಡು, ಸ್ಮಾರ್ಟ್ ಫೋನು, ಆಧಾರ್ ಕಾರ್ಡ್‍ಗಳ ಐಡಿಗಳ ಆಧಾರದಿಂದ ಒಬ್ಬರನ್ನೊಬ್ಬರು ಗುರುತಿಸಬೇಕಾದ ಕಾಲ. 

ಒಟ್ಟಿನಲ್ಲಿ ಹೇಗಾದರೂ ಮಾಡಿ, ಹಣ ಸಂಪಾದಿಸಿ, ತಿಂದು, ಕುಡಿದು, ಕೈಲಾದಮಟ್ಟಿಗೆ ಮಜವಾಗಿ ಸುಖವಾಗಿ ಇರಬೇಕೆಂದು ಎಲ್ಲರೂ ಬಯಸುವ ಕಾಲ. 

ಅಂದರೆ, ಖಂಡಿತವಾಗಿಯೂ ಇದು ಚಿಂತಿಸುವ ಕಾಲವಲ್ಲ. ಸುತ್ತ-ಮುತ್ತ ಏನಾಗುತ್ತಿದೆಯೆಂದು ಅರ್ಥಮಾಡಿಕೊಳ್ಳುವ ಕಾಲವಲ್ಲ. ಒಂದುವೇಳೆ ಹಾಗೆ ಮಾಡಲು ಯತ್ನಿಸಿದರೆ ಏನಾಗುತ್ತದೆ? 

ಪರಸ್ಪರ ವಿರುದ್ಧವಾದ ಸಂಗತಿಗಳು ಕಾಣತೊಡಗುತ್ತವೆ. 

ಎಲ್ಲೆಲ್ಲೂ ರಾಜಮಾರ್ಗಗಳು ನಿರ್ಮಾಣವಾಗುತ್ತಿವೆ. ಆದರೆ ಜನರು ಓಡಾಡಲು ಕಾಲುದಾರಿಗಳೇ ಕಾಣುತ್ತಿಲ್ಲ. ಮೈಲಿಗಟ್ಟಲೆ ಬಣ್ಣ-ದೀಪಗಳಿಂದ ಝಗಝಗಿಸುವ ದ್ವಿಪಥ, ಚತುಷ್ಪಥ, ಷಟ್ಫತ, ಅಷ್ಟ ಪಥಗಳು ನಿರ್ಮಾಣವಾಗುತ್ತಿವೆ. ಆದರೆ ಕೃಷಿಭೂಮಿ ದಿನೇ ದಿನೇ ಕಿರಿದಾಗುತ್ತಿದೆ. ನಗರಗಳು ವರ್ತುಲ ರಸ್ತೆ, ಹೊರವರ್ತುಲ ರಸ್ತೆಗಳ ನಿರ್ಮಾಣಗಳ ಮೂಲಕ ಉಪನಗರಗಳು ಮತ್ತು ಸ್ಮಾರ್ಟ್ ನಗರಗಳಾಗಿ ವಿಸ್ತಾರ ಗೊಳ್ಳುತ್ತಿವೆ. ಆದರೆ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಜನರ ಸಂಖ್ಯೆಯೂ ಹೆಚ್ಚುತ್ತಿದೆ. ಹೊಲಗದ್ದೆಗಳಲ್ಲಿ ಕೆಲಸ ಮಾಡಲು ಕೃಷಿ ಕಾರ್ಮಿಕರೇ ಸಿಗುತ್ತಿಲ್ಲ. ಆದರೆ ಹೋಟೆಲ್, ಮಿಲ್ಲು-ಕಾರ್ಖಾನೆಗಳಲ್ಲಿ ಹೆಂಗಸರು-ಮಕ್ಕಳು ಮೂತ್ರವಿಸರ್ಜನೆಗೂ ಬಿಡುವು ಸಿಗದಷ್ಟು ನಿರಂತರವಾಗಿ ದುಡಿಯುತ್ತಿದ್ದಾರೆ. ದೂರ ದೂರದ ರಾಜ್ಯಗಳಿಂದ ಬಡವರು ನಗರಗಳಲ್ಲಿನ ಕೂಲಿ ಕೆಲಸಗಳಿಗಾಗಿ ರೈಲು-ಬಸ್ಸುಗಳಲ್ಲಿ ಸಂಚರಿಸುತ್ತಿದ್ದಾರೆ. ಆದರೆ ಸ್ಥಳೀಯ ಬಡವರು ನಿರುದ್ಯೋಗಿಗಳಾಗಿ ಕಳ್ಳತನ, ವೇಶ್ಯಾವೃತ್ತಿ, ಕುಡಿತ ಮತ್ತು ಮೋಸದಾಟಗಳ ದಾಸರಾಗುತ್ತಿದ್ದಾರೆ.   

ಉದ್ಯೋಗ ಭದ್ರತೆ, ಆಹಾರ ಭದ್ರತೆ ಕಾನೂನುಗಳು ಜಾರಿಯಾಗುತ್ತಿವೆ. ಆದರೆ ನಿವೃತ್ತಿ ವೇತನ, ಕಾರ್ಮಿಕರ ಕಲ್ಯಾಣ ಕಾಯಿದೆಗಳು ರದ್ದಾಗುತ್ತಿವೆ.

ದೇಶಾಭಿಮಾನ, ದೇಶಭಕ್ತಿಗಳ ಬಗೆಗಿನ ರಾಜಕಾರಣಿಗಳ ಆವೇಶ, ಆಗ್ರಹ ದಿನೇ ದಿನೇ ಹೆಚ್ಚುತ್ತಿದೆ. ಆದರೆ ವಿದೇಶೀ ಬಂಡವಾಳ, ವಿದೇಶೀ ವಾಣಿಜ್ಯ ಸಂಸ್ಥೆ-ಉದ್ಯಮಿಗಳ ಪ್ರವೇಶಕ್ಕೆ ದೇಶ ನಿತ್ಯ ಮುಕ್ತವಾಗಿದೆ.

ಎಲ್ಲೆಲ್ಲೂ ಸರಕುಗಳ ಉತ್ಪಾದನೆಗೆ ರೊಬೋಟ್‍ಗಳನ್ನು ಬಳಸುವಂಥ ಅತ್ಯಾಧುನಿಕ ತಂತ್ರಜ್ಞಾನ ವೃದ್ಧಿಯಾಗುತ್ತಿದೆ. ಆದರೆ ಸೇವೆಗಳ ವ್ಯಾಪಾರ ಸರಕುಗಳ ವ್ಯಾಪಾರವನ್ನು ಹಿಂದಕ್ಕೆ ಹಾಕಿ ಅತ್ಯಧಿಕ ಲಾಭ ತರುವ ಉದ್ಯಮವಾಗಿದೆ. 

ಸರ್ಕಾರಗಳು ಜನರ ಹೆಸರಿನಲ್ಲಿ ಜಾಗತಿಕ ಬ್ಯಾಂಕುಗಳಿಂದ ಪಡೆಯುತ್ತಿರುವ ಸಾಲದ ಹೊರೆ ಹೆಚ್ಚುತ್ತಲೇ ಇದೆ. ಆದರೆ ದೇಶದಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. 

ಬ್ಯಾಂಕುಗಳ ಶಾಖೆಗಳು ಹೆಚ್ಚುತ್ತಲೇ ಇವೆ. ಎಲ್ಲರ ಕೈಯಲ್ಲೂ ಹಣ ಹರಿದಾಡುತ್ತಿದೆ. ಆದರೆ ದೇಶದಲ್ಲಿನ ಬಡವರ ಸಂಖ್ಯೆ ಎಷ್ಟು, ವರ್ಷದಿಂದ ವರ್ಷಕ್ಕೆ ಎಷ್ಟು ಹೆಚ್ಚಿದೆ ಅಥವಾ ಕಡಿಮೆಯಾಗಿದೆ ಎಂದು ತಿಳಿದುಕೊಳ್ಳಲು ಪರಿಣತರಿಗೆ ಸಾಧ್ಯವಾಗುತ್ತಿಲ್ಲ. ಈ ಪರಿಣತರಿಗೆ ಬಡತನ ರೇಖೆಯನ್ನು ಹೇಗೆ ಗುರುತಿಸಬೇಕು ಎಂಬುದೇ ತೋಚುತ್ತಿಲ್ಲ.

ಪೆಟ್ರೋಲ್ ಮುಂತಾದ ತೈಲ ಆಧಾರಿತ ಇಂಧನಗಳನ್ನು ಉರಿಸುವುದರಿಂದ, ಗಗನಚುಂಬಿ ಬಹುಮಹಡಿ ಕಟ್ಟಡಗಳ ನಿರ್ಮಾಣದಿಂದ ಭೂ ತಾಪಮಾನ ನಿರಂತರವಾಗಿ ಹೆಚ್ಚುತ್ತಿದೆ. ಆದರೆ ಸಿಮೆಂಟಿನ ಉತ್ಪಾದನೆ, ಬಳಕೆ, ಮೋಟಾರು ವಾಹನಗಳ ಉತ್ಪಾದನೆ, ಮಾರಾಟ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ.

ಮಾರುಕಟ್ಟೆಯಲ್ಲಿ ಆಹಾರಧಾನ್ಯ, ಕೃಷಿ ಉತ್ಪನ್ನಗಳ ಬೆಲೆಗಳು ಏರುತ್ತಲೇ ಇವೆ. ಆದರೆ ರೈತರು ಸಾಲ ತೀರಿಸಲಾಗದೆ ಹಿಂದೆಂದಿಗಿಂತಲೂ ಅತ್ಯಧಿಕ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಎಲ್ಲಿ ನೋಡಿದರೂ ಜನರ ಚಲನವಲನಗಳ ಚಿತ್ರಗಳನ್ನು ತೆಗೆದು ಸಂಗ್ರಹಿಸಿಡುವ ಹದ್ದಿನ ಕಣ್ಣಿನ ಕ್ಯಾಮರಾಗಳು. ಆದರೆ ಸರಗಳ್ಳತನ, ಯುವತಿಯರ ನಾಪತ್ತೆ ಮತ್ತು ಲೈಂಗಿಕ ದೌರ್ಜನ್ಯಗಳ ಹೆಚ್ಚಳ ಮಾಮೂಲಾಗಿದೆ.

ಇದನ್ನು ಆಧುನಿಕೋತ್ತರ ಕಾಲ ಎಂದು ಚರಿತ್ರಕಾರರು, ರಾಜಕೀಯ ಮುತ್ಸದ್ದಿಗಳು, ಸಾಮಾಜಿಕ ತತ್ವಶಾಸ್ತ್ರಜ್ಞರು ವಿವರಿಸುತ್ತಾರೆ. ಇವನ್ನು ಆಧರಿಸಿದ ಸಾಹಿತ್ಯಕ ಕೃತಿಗಳ ಮೌಲ್ಯ ನಿಷ್ಕರ್ಷೆಗಳನ್ನು ಸಾಹಿತ್ಯೋತ್ಸವ, ಚಿತ್ರೋತ್ಸವ ಮತ್ತು ವಿಚಾರ ಸಂಕಿರಣಗಳಲ್ಲಿ ವಿಷಯ ತಜ್ಞರು ತಮ್ಮ ಪ್ರೌಢ ಪ್ರಬಂಧಗಳಲ್ಲಿ ಮಂಡಿಸುತ್ತಿದ್ದಾರೆ. ಪತ್ರಿಕೆಗಳ ಅಂಕಣಗಳಲ್ಲಿ ಪ್ರಕಟಿಸುತ್ತಿದ್ದಾರೆ.

ಇಷ್ಟೆಲ್ಲಾ ಆಗುತ್ತಿದ್ದರೂ ಭಾರತದಲ್ಲಿ ಪ್ರಜಾಪ್ರಭುತ್ವ ಎಂಬುದು ಇದೆಯೆ? ಇದೆ. ಕೆಲವರಿಗೆ ಮಾತ್ರ. 

ಸ್ವಾತಂತ್ರ್ಯ, ಸಮಾನತೆಗಳು ಇವೆಯೆ? ಇವೆ. ಕೆಲವರಿಗೆ ಮಾತ್ರ. 

ಸುಖ-ನೆಮ್ಮದಿಗಳ ಬದುಕು ಇದೆಯೆ? ಇದೆ ಕೆಲವರಿಗೆ ಮಾತ್ರ. 

ಅಭಿವೃದ್ಧಿ ಹೊಂದಲು ಮುಕ್ತ ಅವಕಾಶ ಇದೆಯೆ? ಇದೆ. ಕೆಲವರಿಗೆ ಮಾತ್ರ. 

ಈ ಕೆಲವರು ಯಾರು? 

ಆಳುವ ವರ್ಗದ ಜನ. ಅಂದರೆ, ಶ್ರೀಮಂತ ರಾಜಕಾರಣಿಗಳು, ವ್ಯಾಪಾರೋದ್ಯಮಿಗಳು ಮತ್ತು ಧರ್ಮಗುರುಗಳು. ಇವರೆಲ್ಲರೂ ಬಂಡವಾಳವಾದವೆಂಬ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಸಹೋದರರು.

ಆದರೆ ಸಹೋದರತೆ ಎಂಬುದು ಇರುವುದನ್ನು ಹಂಚಿಕೊಂಡು ತಿನ್ನಬೇಕೆನ್ನುವ ಉನ್ನತ ಮಾನವೀಯ ಮೌಲ್ಯವಲ್ಲವೆ? 

ಹೌದು. ಅದು ಶ್ರೀಮಂತ ರಾಜಕಾರಣಿಗಳು, ಧರ್ಮಗುರುಗಳು ಮತ್ತು ವ್ಯಾಪಾರೋದ್ಯಮಿಗಳ ನಡುವೆ ಮಾತ್ರ ಇದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಕೆಲವೇ ಕೆಲವರಾದ ಈ ಸಹೋದರರು ಇರುವುದೆಲ್ಲವನ್ನೂ ತಮ್ಮ ತಮ್ಮಲ್ಲೇ ಹಂಚಿಕೊಂಡುಬಿಟ್ಟಿದ್ದಾರೆ.

ಈ ಕೆಲವರಲ್ಲದವರು ಯಾರು? 

ಬಡವರು, ದಲಿತರು, ಮಹಿಳೆಯರು, ಕಾರ್ಮಿಕರು ಮತ್ತು ರೈತರು.

ಈ ಸ್ಥಿತಿಯಿಂದ ಬಿಡುಗಡೆ ಪಡೆದು ಎಲ್ಲರಿಗೂ ನ್ಯಾಯ ಒದಗಿಸುವುದು ಸಾಧ್ಯವಿಲ್ಲವೆ? 

ಸಾಧ್ಯ. ಅಲ್ಪಸಂಖಾತರಾದ ‘ಕೆಲವರ’ ಕೈಲಿರುವ ರಾಜ್ಯಾಧಿಕಾರವನ್ನು ಬಹುಸಂಖ್ಯಾತರಾದ ದುಡಿಯುವವರ ಕೈಗೆ ತೆಗೆದುಕೊಂಡು ಆಮೂಲಾಗ್ರವಾದ ರಾಜಕೀಯ ಬದಲಾವಣೆಯ ಮೂಲಕ ಎಲ್ಲರಿಗೂ ಸಮಾನವಾಗಿ ನ್ಯಾಯಯುತವಾದ ಸಮ ಸಮಾಜವನ್ನು ಕಟ್ಟುವುದು.

ಆದರೆ, ಹೇಗೆ?

ಇರುವುದು ಒಂದೇ ದಾರಿ. ಅದೇ ಮಾಕ್ರ್ಸ್‍ವಾದದ ಅಧ್ಯಯನ, ಸಂಘಟನೆ ಮತ್ತು ಹೋರಾಟ. ಅಧ್ಯಯನ ಸಂಘಟನೆಯ ಸ್ವರೂಪವನ್ನು ಸ್ಪಷ್ಟಪಡಿಸುತ್ತದೆ. ಸಂಘಟನೆ ಹೋರಾಟವನ್ನು ಮುನ್ನಡೆಸುತ್ತದೆ.

ಸೆಪ್ಟೆಂಬರ್ 2 ರಂದು ನಡೆದ ಕಾರ್ಮಿಕರ ಅಖಿಲ ಭಾರತ ಮಹಾ ಮುಷ್ಕರ ತೋರಿಸಿಕೊಟ್ಟಿದ್ದು ಇದನ್ನೇ.

ಪ್ರೊ.ವಿ.ಎನ್. ಲಕ್ಷ್ಮಿನಾರಾಯಣ್