ಯಶಸ್ವಿ ಸಿಐಟಿಯು 4 ನೇ ಹಾಸನ ಜಿಲ್ಲಾ ಸಮ್ಮೇಳನ

ಸಂಪುಟ: 
10
ಸಂಚಿಕೆ: 
36
Sunday, 28 August 2016

ಕಲ್ಪತರು ನಾಡು ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಕಾರ್ಮಿಕರ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ. ಸಿಐಟಿಯು 4ನೇ ಹಾಸನ ಜಿಲ್ಲಾ ಸಮ್ಮೇಳನವು ಆಗಸ್ಟ್ 13 ಮತ್ತು 14 ರಂದು ಜೈನ ಕಾಶಿ ಶ್ರವಣಬೆಳಗೊಳದಲ್ಲಿ ನಡೆಯಿತು. ಸಮ್ಮೇಳನದ ಮೊದಲ ದಿನ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಕಾರ್ಮಿಕರ ಕೆಂಬಾವುಟವನ್ನಿಡಿದು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು. ನಂತರ ಪಟ್ಟಣದ ಕಾರು ನಿಲ್ದಾಣದ ಎದುರಿನ ಮೈದಾನದಲ್ಲಿ ಬಹಿರಂಗ ಸಭೆ ನಡೆಯಿತು.

ಬಹಿರಂಗ ಸಭೆ ಉಧ್ಘಾಟಿಸಿ ಮಾತನಾಡಿದ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ.ಎಸ್.ವರಲಕ್ಷ್ಮಿಯವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳಿಂದಾಗಿ ಕಾರ್ಮಿಕರ ಬದುಕು ದಿನದಿಂದ ದಿನಕ್ಕೆ ಸಂಕಷ್ಟಕ್ಕೊಳಗಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದ್ದರೂ ಕಾರ್ಮಿಕರ ಕೂಲಿ, ಸಂಬಳ ಮಾತ್ರ ಹೆಚ್ಚಾಗುತ್ತಿಲ್ಲ. ಕಾರ್ಮಿಕರ ಹಕ್ಕುಗಳನ್ನು ಕಾಪಾಡಲು ಮತ್ತು ದೇಶದ ಸಾರ್ವಭೌಮತೆ-ಐಕ್ಯತೆಯನ್ನು ಕಾಪಾಡುವ ಸಲುವಾಗಿ ಸೆಪ್ಟೆಂಬರ್ 2 ರಂದು ದೇಶದ 11 ಕೇಂದ್ರ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿವೆ. ಇದನ್ನು ಯಶಸ್ವಿಗೊಳಿಸಲು ಎಲ್ಲ ದುಡಿಯುವ ವರ್ಗದ ಜನ ಸಮುದಾಯ ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದರು.

ಬಹಿರಂಗ ಸಭೆಯಲ್ಲಿ ಕೆಎಸ್‍ಆರ್‍ಟಿಸಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಎಚ್.ಆರ್.ನವೀನ್‍ಕುಮಾರ್ ಮಾತನಾಡಿದರು ಸಭೆಯ ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ವಿ.ಸುಕುಮಾರ್ ವಹಿಸಿದ್ದರು ಪ್ರಧಾನ ಕಾರ್ಯದರ್ಶಿ ಧರ್ಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮ್ಮೇಳನ ಪ್ರತಿನಿಧಿ ಅಧಿವೇಶನ ಶ್ರವಣಬೆಳಗೊಳದಲ್ಲಿ ನಡೆಯಿತು. ಜಿಲ್ಲಾ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಜಿಲ್ಲೆಯ 26 ಹೋಬಳಿಗಳಲ್ಲಿ ಹಾಗೂ 6 ತಾಲ್ಲೂಕು ಮಟ್ಟದ ಸಮ್ಮೇಳನಗಳನ್ನು ನಡೆಸಿ ಅಲ್ಲಿ ಆಯ್ಕೆಯಾದ 200 ಪ್ರತಿನಿಧಿಗಳನ್ನೊಳಗೊಂಡ 4ನೇ ಹಾಸನ ಜಿಲ್ಲಾ ಸಮ್ಮೇಳನ ನಡೆಸಲಾಗಿದೆ. ಸಮ್ಮೇಳನದಲ್ಲಿ ಜಿಲ್ಲೆಯ ಕಾರ್ಮಿಕರ ಹಾಗೂ ಜನ ಪರವಾಗಿ ಹಲವಾರು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದ್ದು, ಇದರ ಜಾರಿಗಾಗಿ ಮುಂದಿನ ಮೂರು ವರ್ಷಗಳ ಅವಧಿಗೆ 18 ಪದಾಧಿಕಾರಿಗಳನ್ನೊಳಗೊಂಡಂತೆ 68 ಸದಸ್ಯರ ನೂತನ ಜಿಲ್ಲಾ ಸಮಿತಿ ಆಯ್ಕೆಯಾಯಿತು.

ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳು:

ಗೌರವ ಅಧ್ಯಕ್ಷರು         : ವಿ.ಸುಕುಮಾರ್.
ಜಿಲ್ಲಾಧ್ಯಕ್ಷರು              : ಧರ್ಮೇಶ್
ಉಪಾಧ್ಯಕ್ಷರು            : ಜಿ.ಪಿ.ಸತ್ಯನಾರಾಯಣ, ವೈ.ಆರ್.ಮಂಜಮ್ಮ, ಇಂದಿರಮ್ಮ, ಕೆ.ಟಿ.ಹೊನ್ನೇಗೌಡ, ಪ್ರಕಾಶ್, ಕರಿಯಪ್ಪ, ಬೋಜ ಪೂಜಾರಿ.
ಪ್ರಧಾನ ಕಾರ್ಯದರ್ಶಿ : ಡಿ.ಎಲ್.ರಾಘವೇಂದ್ರ.

ಕಾರ್ಯದರ್ಶಿಗಳು    :
ಕೆ.ಎಸ್.ಮಂಜುನಾಥ್, ಎ.ಹರೀಶ್, ಅರವಿಂದ್, ಸೌಮ್ಯ, ವಿ.ಲತಾ, ಕುಮಾರಸ್ವಾಮಿ, ಅಶೋಕ. ಇವರೊಂದಿಗೆ 50 ಸದಸ್ಯರನ್ನೊಳಗೊಂಡ ಜಿಲ್ಲಾ ಸಮಿತಿ ಆಯ್ಕೆಯಾಗಿದೆ.
ಸಿಐಟಿಯು ಜಿಲ್ಲಾ ಸಮಿತಿ ಅಡಿಯಲ್ಲಿ 6 ತಾಲ್ಲೂಕು ಸಮಿತಿಗಳು, 2 ತಾಲ್ಲೂಕು ಸಂಚಾಲನ ಸಮಿತಿಗಳು ಹಾಗೂ 26 ಹೋಬಳಿ ಸಮಿತಿಗಳು ಕೆಲಸ ಮಾಡುತ್ತಿವೆ. ಸಿಐಟಿಯುವಿನ ಅಡಿಯಲ್ಲಿ ತೋಟ ಕಾರ್ಮಿಕರು, ಅಂಗನವಾಡಿ ನೌಕರರು, ಗ್ರಾಮ ಪಂಚಾಯತಿ ನೌಕರರು, ಮುನಿಸಿಪಲ್ ಕಾರ್ಮಿಕರು, ಅಕ್ಷರ ದಾಸೋಹ ನೌಕರರು, ಕಾಫಿó ಕ್ಯೂರಿಂಗ್ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಮಿಕರು, ಕೆಎಂಎಫ್ ಗುತ್ತಿಗೆ ಕಾರ್ಮಿಕರು, ಆಸ್ಪತ್ರೆ ಕಾರ್ಮಿಕರು, ಹಾಸ್ಟೆಲ್ ಹಾಗೂ ವಸತಿ ಶಾಲೆ ನೌಕರರು, ಘನ ಕೈಗಾರಿಕೆಗಳ ಕಾರ್ಮಿಕರು ಹಾಗೂ ಇತ್ಯಾದಿ ವಿಭಾಗದ ಕಾರ್ಮಿಕರು ಸಂಘಟಿತರಾಗಿದ್ದಾರೆ.

ಸಮ್ಮೇಳನವು ಕೈಗೊಂಡ ಪ್ರಮುಖ ನಿರ್ಣಯಗಳು

 1. ಸೆಪ್ಟೆಂಬರ್ 2ರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಜಿಲ್ಲೆಯಾದ್ಯಂತ ವ್ಯಾಪಕ ಪ್ರಚಾರದ ಮೂಲಕ ಯಶಸ್ವಿಗೊಳಿಸಲು
   
 2. ಗ್ರಾ.ಪಂ.ನೌಕರರ ವೇತನ ಮತ್ತು ವೇತನ ಹೆಚ್ಚಳ ಬಾಕಿ ಪಾವತಿ ಹಾಗೂ ಅನುಮೋದನೆ ಮುಂತಾದ ಸೇವಾ ಸೌಲಭ್ಯಗಳಿಗಾಗಿ ಸೆಪ್ಟಂಬರ್ ತಿಂಗಳಿನಲ್ಲಿ ಗ್ರಾ.ಪಂ., ತಾ.ಪಂ. ಮತ್ತು ಜಿ.ಪಂ. ಮುತ್ತಿಗೆ
   
 3. ಮುನಿಸಿಪಲ್ ಕಾರ್ಮಿಕರ ಕನಿಷ್ಟ ವೇತನ, ಸೇವಾ ಸೌಲಭ್ಯ ಸಮಪರ್ಪಕ ಜಾರಿ ಹಾಗೂ ಖಾಯಂಗಾಗಿ ಸೆಪ್ಟಂಬರ್ ತಿಂಗಳಿನಲ್ಲಿ ಮುಷ್ಕರ ಮುಷ್ಕರ
   
 4. ಗುತ್ತಿಗೆ / ಹೊರಗುತ್ತಿಗೆ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಪ್ರಬಲ ಹೋರಾಟ ರೂಪಿಸಲು
   
 5. ಅಸ್ಪೃಶ್ಯತೆ, ಜಾತಿ ತಾರತಮ್ಯದ ವಿರುದ್ಧ ಹೋರಾಟಕ್ಕೆ
   
 6. ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಪ್ರಬಲ ಹೋರಾಟ ರೂಪಿಸಲು

ಹೆಚ್.ಆರ್.ನವೀನ್ ಕುಮಾರ್