‘ರಂಗಪ್ಪನ ಹೆಂಡತಿ’ ಮತ್ತು ಮಾರ್ಕ್ಸ್ ವಾದ

ಸಂಪುಟ: 
10
ಸಂಚಿಕೆ: 
35
date: 
Sunday, 21 August 2016

ಮಾಸ್ತಿ ಕತೆಯ ‘ರಂಗಪ್ಪನ ಹೆಂಡತಿ’ಯ ಮುಗ್ಧ ಸರಳ ಮಾತುಗಳಲ್ಲಿ ಈ ಬಿಡಿ ಬಿಡಿ ಆಶಯಗಳನ್ನು, ನಿರೀಕ್ಷೆಗಳನ್ನು ಒಟ್ಟಗೂಡಿಸಿ ಹೇಳಬಹುದಾದರೆ ‘ನಾವೆಲ್ಲರೂ ಕ್ಷೇಮ. ನೀವೂ ಕ್ಷೇಮವೆಂದು ನಂಬುತ್ತೇನೆ’ ಎಂದು ಹೇಳಬಹುದಾದ ಸಮಾಜಕ್ಕಾಗಿ ನಮ್ಮ ಎಲ್ಲ ಹೋರಾಟ. ಅಥವಾ ರಂಗಪ್ಪನ ನಿರೀಕ್ಷೆಯನುಸಾರ ಇವನ್ನೇ ಬಿಡಿ ಬಿಡಿಯಾಗಿ, ದೊಡ್ಡ ದೊಡ್ಡ ಅಕ್ಷರಗಳಲ್ಲಿ ಹೇಳಿದರೂ ಅದು ಈಗಿರುವ ಹುಸಿ ಆಶಯಗಳ ಸಮಾಜದಿಂದ ಬಿಡುಗಡೆ ಪಡೆಯುವುದಕ್ಕಾಗಿ ಮಾಡುವ ಬಿಡಿ ಬಿಡಿ ಹೋರಾಟಗಳಾಗುವುದರ ಬದಲು ಆಮೂಲಾಗ್ರ ಬದಲಾವಣೆಗಾಗಿ ಎಲ್ಲರೂ ಕೂಡಿ ಮಾಡುವ ಸಮಗ್ರ ಹೋರಾಟವಾಗುವುದಾದರೆ ಏನೂ ತೊಂದರೆಯಿಲ್ಲ.

ಮಾಸ್ತಿಯವರು ಬರೆದ ರಂಗಪ್ಪನ ದೀಪಾವಳಿ ಎಂಬ ಕತೆಯಲ್ಲಿನ ಒಂದು ಪ್ರಸಂಗ. ಹೊಸದಾಗಿ ಮದುವೆಯಾದ ರಂಗಪ್ಪನಿಗೂ ಆತನ ಹೆಂಡತಿಗೂ ನಡುವೆ ವಯಸ್ಸು, ವಿದ್ಯಾರ್ಹತೆ, ಪ್ರಬುದ್ಧತೆ ಮತ್ತು ರಸಿಕತೆಗಳ ವಿಷಯದಲ್ಲಿ ಅಗಾ ಧ ಅಂತರವಿದೆ. ಮದುವೆಯಾದ ಹೊಸದರಲ್ಲಿ ದೂರದ ಊರೊಂದರಲ್ಲಿ ಕೆಲಸ ಮಾಡುವ ರಂಗಪ್ಪ, ಅನಿವಾರ್ಯ ಕಾರಣಗಳಿಂದಾಗಿ ತನ್ನ ಚಿಕ್ಕಪ್ಪ-ಚಿಕ್ಕಮ್ಮರ ಮನೆಯಲ್ಲೇ ಉಳಿಯುವ ತನ್ನ ಹೆಂಡತಿಗೆ ಕಾಗದ ಬರೆಯಲು ಹೇಳುತ್ತಾನೆ. ಹೆಂಡತಿಯ ಕಾಗದವೆಂದರೆ ರಮ್ಯವಾದ ವಿರಹ-ಶೃಂಗಾರಗಳ ಒಕ್ಕಣೆ ಇರುತ್ತದೆಂದು ರಂಗಪ್ಪನ ನಿರೀಕ್ಷೆ. ಆದರೆ ಅವನ ಮುಗ್ಧ ಹೆಂಡತಿಯಿಂದ ‘ಇಲ್ಲಿ ನಾವೆಲ್ಲರೂ ಕ್ಷೇಮವಾಗಿದ್ದೇವೆ. ನೀವೂ ಕ್ಷೇಮವಾಗಿದ್ದೀರೆಂದು ನಂಬುತ್ತೇನೆ’ ಎಂಬ ಒಂದು ಸಾಲಿನ ಕಾಗದ ಬರುತ್ತದೆ. ರಂಗಪ್ಪನಿಗೆ ನಿರಾಶೆ. ಆದರೂ ಬೇಸರಿಸಿಕೊಳ್ಳದೆ ಹೆಂಡತಿಗೆ ಕಾಗದವನ್ನು ವಿವರವಾಗಿ ಬರೆಯುವಂತೆ, ದೊಡ್ಡದಾಗಿ ಬರೆಯುವಂತೆ ಹೇಳುತ್ತಾನೆ. ಹೆಂಡತಿಯಿಂದ ಬರುವ ಮುಂದಿನ ಕಾಗದ ವಿವರವಾಗಿ, ದೊಡ್ಡದಾಗಿ ಇರುತ್ತದೆ. ರಂಗಪ್ಪನಿಗೆ ಸಂತೋಷ. ಆದರೆ ಆ ವಿವರವಾದ, ದೊಡ್ಡದಾದ ಕಾಗದದಲ್ಲಿ, ‘ಇಲ್ಲಿ ನಮ್ಮ ಚಿಕ್ಕಪ್ಪನವರು ಕ್ಷೇಮವಾಗಿದ್ದಾರೆ. ನಮ್ಮ ಚಿಕ್ಕಮ್ಮನವರು ಕ್ಷೇಮವಾಗಿದ್ದಾರೆ. ಅವರ ಕೂಸೂ ಕ್ಷೇಮವಾಗಿದೆ’ ಎಂಬ ಒಕ್ಕಣೆ ಇರುತ್ತದೆ. ಅಕ್ಷರಗಳು ದೊಡ್ಡ ದೊಡ್ಡದಾಗಿ ಇಡೀ ಕಾಗದವನ್ನು ತುಂಬುವಂತೆ ಇರುತ್ತವೆ. ರಂಗಪ್ಪನ ನಿರೀಕ್ಷೆ, ಅವನ ಹೆಂಡತಿಯ ಮುಗ್ಧತೆಗಳ ಅಂತರದಿಂದಾಗಿ ಉಂಟಾಗುವ ಕಂದಕ ಓದುಗರಲ್ಲಿ ವಿನೋದ-ವಿಷಾದ-ಮರುಕಗಳನ್ನು ಉಂಟುಮಾಡುತ್ತವೆ.

ಬಿಡಿ ಬಿಡಿ ಆಶಯಗಳೂ ಹೋರಾಟಗಳೂ

ಭಾರತದ 70ನೆಯ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಎಡಪಂಥೀಯ ಧೋರಣೆಯ ಸಂಪಾದಕರು ಸಂಪಾದಿಸುವ ನಾಡಿನ ಪ್ರತಿಷ್ಠಿತ ಪತ್ರಿಕೆಯೊಂದರ ಆಗಸ್ಟ್ 15 ರ ಸಂಚಿಕೆಯಲ್ಲಿ ಕನ್ನಡದ 30 ಜನ ಪ್ರಗತಿಪರ ಚಿಂತಕರು, ಹೋರಾಟಗಾರರು ಮತ್ತು ಬುದ್ಧಿಜೀವಿಗಳನ್ನು ಫೋಟೋ ಸಹಿತ ಪಟ್ಟಿಮಾಡಿ ಅವರು ಭಾರತದ ಜನರ ಒಳಿತಿಗಾಗಿ ಏನೇನು ಆಗಬೇಕೆಂದು ಯಾವುದ್ಯಾವುದರಿಂದ ಬಿಡುಗಡೆಯನ್ನು ಈ ಜನ ಬಯಸುತ್ತಾರೆ ಅಥವಾ ನಿರೀಕ್ಷಿಸುತ್ತಾರೆ ಎಂದು ಪ್ರತಿಯೊಂದು ಫೋಟೋದ ಕೆಳಗೆ ಟಿಪ್ಪಣಿ ಬರೆದಿದ್ದರು. ಪ್ರಗತಿಪರರ ಆ ಪಟ್ಟಿಯಲ್ಲಿ ಎಡಪಂಥೀಯ, ಗಾಂಧಿವಾದಿ, ಲೋಹಿಯಾವಾದಿ, ಪರಿಸರ, ಮೌಢ್ಯವಿರೋಧಿ, ಯಂತ್ರವಿರೋಧಿ, ಜಾತಿವಿರೋಧಿ, ಅಸ್ಪøಶ್ಯತೆಯ ವಿರೋದಿ, ಲಂಚವಿರೋಧಿ, ಕಾರ್ಮಿಕ ನಾಯಕ, ಸಂಸ್ಕøತಿ ಚಿಂತಕ, ಮೌಲ್ಯನಿಷ್ಠ ರಾಜಕಾರಣದ ಪ್ರತಿಪಾದಕ, ನೈತಿಕ ನಿಲುವಿನ ಬರಹಗಾರ, ಶತಾಯುಷ್ಯದ ಆಸುಪಾಸಿನ ಹೋರಾಟಗಾರ, ಹೀಗೆ ನಾಡಿನ ರಾಜಕೀಯ-ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳ ನಿಸ್ಪೃಹ, ಪ್ರಾಮಾಣಿಕ, ನಿಸ್ವಾರ್ಥ ಜನರ ಹೆಸರು ಪ್ರಾತಿನಿಧಿಕವಾಗಿ ಪ್ರಸ್ತಾಪವಾಗಿತ್ತು. ಒಟ್ಟಿನಲ್ಲಿ ದೇಶದ ರಾಜಕಾರಣದಲ್ಲಿ ಅಗತ್ಯವಾಗಿ ಆಗಬೇಕಾದ ಆಮೂಲಾಗ್ರವಾದ ಬದಲಾವಣೆಯನ್ನು ಈ ಜನರ ಬಿಡಿ ಬಿಡಿ ಆಶಯಗಳು-ನಿರೀಕ್ಷೆಗಳು ಪ್ರತಿನಿಧಿಸುತ್ತಿದ್ದವು.

ದೆಹಲಿ ವಿಶ್ವವಿದ್ಯಾನಿಲಯದ ಕನ್ಹಯ್ಯ ಕುಮಾರ್, ದೇಶದ್ರೋಹದ ಆಪಾದನೆಯಮೇಲೆ ಬಂಧಿತನಾಗಿ, ನಂತರ ಜಾಮೀನಿನಮೇಲೆ ಬಿಡುಗಡೆಯಾದಮೇಲೆ ಜೆಎನ್‍ಯು ಕ್ಯಾಂಪಸ್ಸಿನಲ್ಲಿ ಮಾಡಿದ ಚರಿತ್ರಾರ್ಹ ಭಾಷಣದ ಸಂದರ್ಭದಲ್ಲಿ ಎಡಪಂಥೀಯನಾಗಿ ಆತ ಘೋಷಿಸಿದ ಬಿಡುಗಡೆಯ ಘೋಷಣೆಗಳ ಹಿನ್ನೆಲೆಯಲ್ಲಿ, ಮೇಲೆ ಹೇಳಿದ ಪತ್ರಿಕೆಯಲ್ಲಿ ಪಟ್ಟಿಮಾಡಿದ ವಿವಿಧ ಬಗೆಯ ದೃಷ್ಟಿಕೋನದ, ರಾಜಕೀಯ ಪ್ರಜ್ಞೆಯ, ಸೈದ್ಧಾಂತಿಕ ತಿಳುವಳಿಕೆಯ, ನೈತಿಕ ಆಶಯದ ಬಿಡಿ ಬಿಡಿ ಜನರ ಬಿಡಿ ಬಿಡಿ ಘೋಷಣೆಗಳಾಗಿ ಪ್ರಕಟಗೊಂಡಿವೆಯೆಂಬ ಸತ್ಯ ಯಾವುದೇ ಮಾಕ್ರ್ಸ್‍ವಾದಿಗೆ ಸುಲಭವಾಗಿ ವೇದ್ಯವಾಗುತ್ತದೆ. ಮಾರ್ಕ್ಸ್ ವಾದೀ ಸಿದ್ಧಾಂತದ ಸಮಗ್ರತೆಯ ದೃಷ್ಟಿಕೋನವನ್ನೂ ಅದು ಎತ್ತಿತೋರಿಸುತ್ತದೆ.

ಬಿಡಿ ಬಿಡಿಯಾಗಿ ಸಾಧಿಸಲಾಗದ್ದು

ಅಂದಮೇಲೆ, ಪತ್ರಿಕೆ ಗುರುತಿಸುವಂತೆ, ನಾಡಿನ ನಿಸ್ಪøಹ, ಪ್ರಾಮಾಣಿಕ, ನಿಸ್ವಾರ್ಥ, ಪ್ರಗತಿಪರ ಹೋರಾಟಗಾರ-ಚಿಂತಕ-ಬರಹಗಾರರ ಬಿಡಿ ಬಿಡಿ ಆಶಯಗಳ ಹಿಂದಿರುವ ಬಿಡುಗಡೆಯ ಅಭೀಪ್ಸೆಗೂ, ಕನ್ಹಯ್ಯಕುಮಾರ ಏಕವ್ಯಕ್ತಿಯಾಗಿ ಕೈಎತ್ತಿ ಘೋಷಿಸುವ ವಿವಿಧ ಘೋಷಣೆಗಳ ಹಿಂದಿರುವ ಬಿಡುಗಡೆಯ ಅಭೀಪ್ಸೆಗೂ ಏನಾದರೂ ವ್ಯತ್ಯಾಸವಿದೆಯೆ?

ಇದೆ. ಗಾಂಧಿವಾದದ ನೈತಿಕಪ್ರಜ್ಞೆ-ನಿಷ್ಠೆಯ ಅಧಿಕಾರ, ಲೋಹಿಯಾವಾದದ ಜಾತಿರಹಿತ ಸಮಾಜ, ಅಂಬೇಡ್ಕರ್ ಪ್ರತಿಪಾದಿಸಿದ ಸಾಮಾಜಿಕ ಘನತೆಯುಳ್ಳ ಸಮಾನತೆ, ಭ್ರಷ್ಠಾಚಾರದಿಂದ ಮುಕ್ತವಾದ ಅಧಿಕಾರಶಾಹಿ, ಮಾನವತಾವಾದ, ಮೌಢ್ಯಗಳಿಗೆ ಆಸ್ಪದಕೊಡದ ವೈಚಾರಿಕ ನಿಲುವು, ಶ್ರಮಿಕರ ಪರವಾದ ರಾಜ್ಯಾಡಳಿತ, ಜನರ ಕಲ್ಯಾಣವನ್ನು ಆಧರಿಸಿದ ಯಂತ್ರಾಧಾರಿತ ಉತ್ಪಾದನೆ, ಪರಿಸರ ಸಮತೋಲನೆಯ ಅಭಿವೃದ್ಧಿ, ಇವೆಲ್ಲವೂ ಪರಸ್ಪರ ಸಂಬಂಧಿಸಿದ, ಒಂದನ್ನೊಂದು ಆಧರಿಸಿದ, ಬಿಡಿ ಬಿಡಿಯಾಗಿ ಪ್ರತ್ಯೇಕಿಸಲಾಗದ, ಆದ್ದರಿಂದ ಬಿಡಿಬಿಡಿಯಾಗಿ ಸಾಧಿಸಲಾಗದ ಸಾಮಾಜಿಕ ಮತ್ತು ರಾಜಕೀಯ ಗುರಿಗಳು. ಇವನ್ನು ಬಿಡಿ ಬಿಡಿಯಾಗಿ, ಬಿಡಿ ಬಿಡಿಯಾದ ಆಂದೋಲನ, ಚಳುವಳಿಗಳ ಮೂಲಕ ಸಾಧಿಸಲಾಗುವುದಿಲ್ಲ. ಇದು ಸಿದ್ಧಾಂತಗಳ ನಡುವಿನ ಪೈಪೋಟಿಯಲ್ಲ. ಮಾಕ್ರ್ಸ್‍ವಾದದ ತಿಳಿವಿನ ಬೆಳಕಿನಲ್ಲಿ ಉಳಿದ ಸಿದ್ಧಾಂತಗಳ ಇತಿ-ಮಿತಿಗಳನ್ನು ಅರ್ಥಮಾಡಿಕೊಳ್ಳವ ದೃಷ್ಟಿ.  

ಸಮಾಜವಾದ ಆಶಯದಲ್ಲಿ ಒಳ್ಳೆಯದಿದ್ದರೂ ‘ಅನುಷ್ಠಾನದಲ್ಲಿ ಅದು ಪ್ರಾಯೋಗಿಕವಲ್ಲದ’, ‘ಮನುಷ್ಯರ ಮೂಲ ಸ್ವಭಾವಕ್ಕೆ ವಿರುದ್ಧವಾದ’, ‘ಬಲಪ್ರಯೋಗವಿಲ್ಲದೆ ಅನುಷ್ಠಾನಗೊಳಿಸಲಾಗದ’, ‘ಹಿಂಸೆಗೆ ಎಡೆಮಾಡಿಕೊಡುವ’, ‘ಧಾರ್ಮಿಕತೆಗೆ ವಿರುದ್ಧವಾದ’ ಮತ್ತು ‘ಅಮಾನವೀಯವಾದ’ ಸಿದ್ಧಾಂತವಾದ್ದರಿಂದ ಸಮಾಜವಾದವನ್ನು ಹೊರತು ಪಡಿಸಿ ಬೇರೆ ಯಾವ ವ್ಯವಸ್ಥೆಯನ್ನು ಬೇಕಾದರೂ ಒಪ್ಪಬಹುದೆಂಬ ಅಭಿಪ್ರಾಯ ಅನೇಕರಿಗಿದೆ. ಅದರ ಅರ್ಥ ಅಂಥವರು ಸಜ್ಜನ, ನಿಸ್ಪøಹ, ನಿಸ್ವಾರ್ಥ ವ್ಯಕ್ತಿಗಳು ಅಲ್ಲ ಎಂದಲ್ಲ. ಅವರೆಲ್ಲಾ ದಡ್ಡರೆಂದಲ್ಲ. ಅಥವಾ ಹಾಗೆ ಹೇಳುವ ಎಲ್ಲರಿಗೂ ಒಂದಲ್ಲ ಒಂದು ಸ್ವಹಿತಾಸಕ್ತಿ ಇರಲೇಬೇಕೆಂದಿಲ್ಲ. ಎಡಪಂಥೀಯರಲ್ಲದ ಬಹುಪಾಲು ಹೋರಾಟಗಾರರ ಮುಖ್ಯ ಕೊರತೆ ಅವರಿಗೆ ಯಾವುದೇ ಕಾಲದ ಯಾವುದೇ ಸಮಾಜ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹೇಗೆ ಸಂಘಟಿತವಾಗಿರುತ್ತವೆ ಮತ್ತು ಅವನ್ನು ಬದಲಿಸುವ ಶಕ್ತಿಗಳು ಎಂಬ ಸ್ಪಷ್ಟ ತಿಳುವಳಿಕೆಯ ಅಭಾವ.

ಬಂಡವಾಳವಾದದ ಅಸಮಾನತೆ-ವಿರೋಧಾಭಾಸ ಕಾಣದ ಬಿಡಿ ಬಿಡಿ ದೃಷ್ಟಿಕೋಣ

ಜೊತೆಗೆ, ಹೇಗಾದರೂ ಸರಿ ತಮ್ಮ ಹಿತಾಸಕ್ತಿಗಳನ್ನು ಸದ್ಯಕ್ಕೆ ಕಾಪಾಡಿಕೊಂಡರೆ ಸಾಕು, ಯಾರು ಬೇಕಾದರೂ ಸಾಯಲಿ, ಮುಂದೆ ಈ ಭೂಮಂಡಲವೇ ಬೇಕಾದರೂ ನಾಶವಾಗಲಿ ಎಂದು ಬಯಸಲು ಹಿಂದೆಗೆಯದ ಬಂಡವಳಿಗರು ಸಂಘಟಿಸುವ ರಾಜ್ಯಾಧಿಕಾರ, ಆರ್ಥಿಕ ಮತ್ತು ಸಾಮಾಜಿಕ ಸಂರಚನೆ, ರೂಪಿಸುವ ನ್ಯಾಯ ಮತ್ತು ಸ್ವಾತಂತ್ರ್ಯದ ಪರಿಕಲ್ಪನೆಗಳು, ಪೋಷಿಸುವ ಸಾಂಸ್ಕೃತಿಕ ಮತ್ತು ನೈತಿಕ ಮೌಲ್ಯಗಳು ವ್ಯಕ್ತಿಗಳ ಮಟ್ಟದಲ್ಲಿ ಪ್ರಜ್ಞೆಯ ಚೌಕಟ್ಟನ್ನು ನಿರ್ಮಿಸುತ್ತವೆ. ಇವುಗಳ ಆವರಣದಲ್ಲೇ ಹುಟ್ಟಿ, ಬೆಳೆದು, ಹೇಗೇ ಆದರೂ ಇವನ್ನು ಛೇದಿಸಿ ನೋಡಲಾಗದ, ಒಂದಲ್ಲ ಒಂದು ರೀತಿಯಲ್ಲಿ ಫಲಾನುಭವಿಯಾಗಿರುವ ಯಾವುದೇ ವ್ಯಕ್ತಿಯನ್ನು, ಬಂಡವಾಳವಾದ, ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಸಮಾನತೆ ಮತ್ತು ಮುಕ್ತ ಸಮಾಜದ ಆದರ್ಶ ವ್ಯವಸ್ಥೆಯಾಗಿ ಆಕರ್ಷಿಸುತ್ತದೆ. ಕಾಲಕಾಲಕ್ಕೆ ತನ್ನ ಒಡಲಲ್ಲೇ ಅನಿವಾರ್ಯವಾಗಿ ಹುಟ್ಟುವ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ವಿಷಮತೆ-ವಿರೋಧಾಭಾಸಗಳನ್ನು ತಳಮಟ್ಟದಲ್ಲಿ ಸಮಗ್ರವಾಗಿ ನೋಡದಂತೆ ಬಿಡಿ ಬಿಡಿಯಾಗಿಸುತ್ತದೆ. ಇವುಗಳ ವಿರುದ್ಧ ಹೋರಾಡುವವರನ್ನು ಅಸ್ಮಿತೆ, ಜಾತಿ, ಲಿಂಗ, ನೈತಿಕತೆ ಮತ್ತು ಅಹಿಂಸೆಯ ಹೆಸರಿನಲ್ಲಿ ಬಿಡಿ ಬಿಡಿಯಾಗಿ, ಸಂಘಟಿಸಿಕೊಳ್ಳಲು, ಬಿಡಿ ಬಿಡಿ ಘೋಷಣೆಗಳೊಂದಿಗೆ ಹೋರಾಡಲು ಉತ್ತೇಜಿಸುತ್ತದೆ. ಆಮೂಲಾಗ್ರ ಬದಲಾವಣೆಯ ಸಮಗ್ರ ಗುರಿಯ ಬದಲು ಸೀಮಿತ ಬದಲಾವಣೆ ಮತ್ತು ಸುಧಾರಣೆಗಳ ಬಿಡಿ ಬಿಡಿ ಗುರಿಗಳಿಗಾಗಿ ಹೋರಾಡುವಂತೆ ನಾನಾ ರೀತಿಯಲ್ಲಿ ನಿರ್ದೇಶಿಸುತ್ತದೆ. ಹೋರಾಟಗಾರರಿಗೆ  ತನ್ನ ಅಂಗವೇ ಆದ ಸಮಾಜಸೇವೆ-ಸುಧಾರಣಾ ಸಂಸ್ಥೆಗಳ ಮೂಲಕ ಧನಸಹಾಯ, ಅನುದಾನ ಮತ್ತು ಭಾರಿ ಮೊತ್ತದ ಪ್ರಶಸ್ತಿಗಳನ್ನೂ ಕೊಡಮಾಡುತ್ತದೆ.

ಕನ್ಹಯ್ಯಕುಮಾರ್ ಯಾವುದೇ ಸಮಸ್ಯೆ - ವಿವಾದವನ್ನು ಮಾರ್ಕ್ಸ ವಾದಿ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಳ್ಳುವುದರಿಂದ ಅವನು ಕೂಗುವ ಬಿಡಿ ಬಿಡಿ ಘೋಷಣೆಗಳು ಸಮಗ್ರ ಬಿಡುಗಡೆಯ, ಆಮೂಲಾಗ್ರ ಬದಲಾವಣೆಯ ವಿವಿಧ ಮಗ್ಗಲುಗಳನ್ನು ಪ್ರತಿನಿಧಿಸುತ್ತವೆ. ಪತ್ರಿಕೆಯ ಎಡಪಂಥೀಯ ಸಂಪಾದಕರು ಗುರುತಿಸುವ ಹೋರಾಟಗಾರರ, ಚಿಂತಕರ ಮತ್ತು ಸಮಾಜ ಸುಧಾರಕರ ಸದಾಶಯಗಳ ಬಿಡಿ ಬಿಡಿ ಘೋಷಣೆಗಳು ಸಮಗ್ರ ಬಿಡುಗಡೆಯ, ಆಮೂಲಾಗ್ರ ಬದಲಾವಣೆಯ ಮಹದಾಶಯವನ್ನು ಬಿಡಿಬಿಡಿಯಾಗಿ ಒಡೆದು ಬಂಡವಳಿಗರಿಗೆ ಅನುಕೂಲಕರವಾದ ಹುಸಿ ಹೋರಾಟದ, ಹುಸಿ ಬಿಡುಗಡೆಯ ಆಶಯಗಳನ್ನಾಗಿಸುತ್ತವೆ.

ಮಾಸ್ತಿಕತೆಯ ರಂಗಪ್ಪನ ಹೆಂಡತಿಯ ಮುಗ್ಧ ಸರಳ ಮಾತುಗಳಲ್ಲಿ ಈ ಬಿಡಿ ಬಿಡಿ ಆಶಯಗಳನ್ನು, ನಿರೀಕ್ಷೆಗಳನ್ನು ಒಟ್ಟಗೂಡಿಸಿ ಹೇಳಬಹುದಾದರೆ ‘ನಾವೆಲ್ಲರೂ ಕ್ಷೇಮ. ನೀವೂ ಕ್ಷೇಮವೆಂದು ನಂಬುತ್ತೇನೆ’ ಎಂದು ಹೇಳಬಹುದಾದ ಸಮಾಜಕ್ಕಾಗಿ ನಮ್ಮ ಎಲ್ಲ ಹೋರಾಟ. ಅಥವಾ ರಂಗಪ್ಪನ ನಿರೀಕ್ಷೆಯನುಸಾರ ಇವನ್ನೇ ಬಿಡಿ ಬಿಡಿಯಾಗಿ, ದೊಡ್ಡ ದೊಡ್ಡ ಅಕ್ಷರಗಳಲ್ಲಿ ಹೇಳಿದರೂ ಅದು ಈಗಿರುವ ಹುಸಿ ಆಶಯಗಳ ಸಮಾಜದಿಂದ ಬಿಡುಗಡೆ ಪಡೆಯುವುದಕ್ಕಾಗಿ ಮಾಡುವ ಬಿಡಿ ಬಿಡಿ ಹೋರಾಟಗಳಾಗುವುದರ ಬದಲು ಆಮೂಲಾಗ್ರ ಬದಲಾವಣೆಗಾಗಿ ಎಲ್ಲರೂ ಕೂಡಿ ಮಾಡುವ ಸಮಗ್ರ ಹೋರಾಟವಾಗುವುದಾದರೆ ಏನೂ ತೊಂದರೆಯಿಲ್ಲ.

ಎಲ್ಲ ಹೋರಾಟಗಾರರೆ ಒಂದಾಗಿ!

ಪ್ರೊ. ವಿ.ಎನ್. ಲಕ್ಷ್ಮಿನಾರಾಯಣ