ಜಾಗತೀಕರಣದ ಬೆಳ್ಳಿಹಬ್ಬ

ಸಂಪುಟ: 
34
ಸಂಚಿಕೆ: 
10
date: 
Sunday, 14 August 2016
Image: 

ಜಾಗತೀಕರಣದ ಬೆಳ್ಳಿಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಬೆಳ್ಳಿ ವರ್ಷಗಳಲ್ಲಿ ಭಾರತದ ಬನಿಯಾ ಬಂಡವಾಳಶಾಹಿಯು ನಮ್ಮ ಕಲ್ಪನೆಗೂ ಸಿಕ್ಕದಂತೆ ಬೆಳೆದಿದೆ. ವಿಶ್ವದ ಅತೀ ಹೆಚ್ಚು ಸಂಖ್ಯೆಯ ಕಡುಬಡವರು, ಅತೀ ಹೆಚ್ಚು ಸಂಖ್ಯೆಯ ಅಪೌಷ್ಠಿಕತೆಯಿಂದ ನರಳುವ ಹೆಂಗಸರು ಹಾಗೂ ಕಂದಮ್ಮಗಳು, ಅತೀ ಹೆಚ್ಚು ಸಂಖ್ಯೆಯ ಹಸಿವಿನಿಂದ ಮುಕ್ತಿ ಕಾಣದ ಜನರು ಹೆಚ್ಚುತ್ತಲೇ ಇದ್ದಾರೆ. ಆದರೆ ಅವರಾರಿಗೂ ಈ ಬೆಳ್ಳಿಹಬ್ಬದ “ಪಾರ್ಟಿ”ಗೆ ಆಮಂತ್ರಣವಿಲ್ಲ. ಪಾರ್ಟಿ ಮುಗಿದ ಮೇಲೆ ಎಂಜಲೆಲೆಗಳಿಗೆ ಕಾಯಬೇಕಷ್ಟೆ.

ಇತ್ತೀಚಿನ ದಿನಗಳಲ್ಲಿ ವಿಶೇಷವಾದ ಬೆಳ್ಳಿಹಬ್ಬವೊಂದನ್ನು ಮಾಧ್ಯಮಗಳಲ್ಲಿ ಚರ್ಚೆಯ ಮೂಲಕ, ಪತ್ರಿಕೆಗಳಲ್ಲಿ ಲೇಖನ ಹಾಗೂ ಸಂದರ್ಶನಗಳ ಮೂಲಕ ಆಚರಿಸಲಾಗುತ್ತಿದೆ. ಇದು ಪ್ರಧಾನಮಂತ್ರಿಯಾಗಿದ್ದ ಪಿ.ವಿ. ನರಸಿಂಹರಾವ್ ಹಾಗೂ ಹಣಕಾಸು ಮಂತ್ರಿಗಳಾಗಿದ್ದ ಮನಮೋಹನ್‍ಸಿಂಗ್ ಅವರು ಅನುಷ್ಠಾನಕ್ಕೆ ತಂದ ಆರ್ಥಿಕ ಉದಾರೀಕರಣದ ಬೆಳ್ಳಿಹಬ್ಬವಾಗಿದೆ. ಅಲ್ಲಲ್ಲಿ ಭಿನ್ನವಾದ ವಿಮರ್ಶಾತ್ಮಕ ದನಿಗಳು ಕೇಳಿಬಂದಿವೆಯಾದರೂ ಬಹುಪಾಲು ಚರ್ಚೆಗಳ ಒಮ್ಮತದ ಅಭಿಪ್ರಾಯವೆಂದರೆ

ಅ) ಅದು ಅಂದಿನ ಸಂದರ್ಭದಲ್ಲಿ ಅನಿವಾರ್ಯವಾಗಿತ್ತು. ಏಕೆಂದರೆ ನಮ್ಮ ಮೇಲೆ ಇದ್ದ ಸಾಲದ ಭಾರವು ಮಿತಿಮೀರಿಬಿಟ್ಟಿತ್ತು. ನಮ್ಮ ಅರ್ಥವ್ಯವಸ್ಥೆಯು ಮುಳುಗಿ ಹೋಗುವ ಸ್ಥಿತಿಯಲ್ಲಿತ್ತು.

ಆ) ಈ ಆರ್ಥಿಕ ಉದಾರೀಕರಣವು ಚಾರಿತ್ರಿಕವಾಗಿಯೂ ಅನಿವಾರ್ಯವೇ ಆಗಿತ್ತು ಹಾಗೂ ಆಗಿದೆ. ಚರಿತ್ರೆಯ ಗತಿಯನ್ನು ಬದಲಾಯಿಸುವುದು ಸಾಧ್ಯವಿಲ್ಲದ್ದರಿಂದ ಅದನ್ನು ಒಪ್ಪಿಕೊಂಡಿದ್ದು ಸರಿಯಾಗಿಯೇ ಇದೆ.

ಇ) ಇದು ಅನಿವಾರ್ಯ ಮಾತ್ರವಲ್ಲ; ಅದರಿಂದ ಪ್ರಯೋಜನಗಳೂ ಆಗಿವೆ. ಈಗ ಭಾರತದ ಆರ್ಥಿಕ ಪ್ರಗತಿ ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯನ್ನು ಸೃಷ್ಟಿಸಿದೆ. ಒಟ್ಟು ರಾಷ್ಟೀಯ ಉತ್ಪನ್ನದ ಸೂಚಕವು ಉತ್ತೇಜನಕಾರಿಯಾಗಿದೆ.

ಹೀಗೆ ಜಾಗತೀಕರಣದ ಬೆಳ್ಳಿಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಯಾರೂ ಕೂಡ ಸಾಮಾಜಿಕ ನ್ಯಾಯದ ಬಗ್ಗೆ ಅಥವಾ ಆರ್ಥಿಕ ಉತ್ಪನ್ನದ ಫಲವನ್ನು ಸಮಾನವಾಗಿ ಹಂಚುವ ಬಗ್ಗೆ ಮಾತನಾಡುತ್ತಿಲ್ಲ. ಹೇಳದೇ ಇದ್ದರೂ ಗೃಹೀತವಾದ ನಂಬಿಕೆಯೆಂದರೆ ತನಗೇ ತಾನೇ, ಯಾವ ಪ್ರಯತ್ನವಿಲ್ಲದೆ ಆರ್ಥಿಕ ಪ್ರಗತಿಯ ಲಾಭಗಳು ಎಲ್ಲಾ ವರ್ಗಗಳಿಗೆ ತಲುಪುತ್ತದೆ ಎಂದು. ಇದು ಅತ್ಯಂತ ವಿಚಿತ್ರವಾದ ಸನ್ನಿವೇಶ. ಏಕೆಂದರೆ ಜಾಗತೀಕರಣವು ಹೇಗೆ ಹೊಸದಲ್ಲವೋ, ಅದರ ವಿಪರೀತ ಪರಿಣಾಮಗಳ ವಿಮರ್ಶೆಯೂ ಹೊಸದಲ್ಲ. ಜಗತ್ತಿನ ಅನೇಕ ದೇಶಗಳು ಜಾಗತೀಕರಣದ ಮೊದಲ ಹಂತದ ಸಂಭ್ರಮವನ್ನೂ, ಆನಂತರದ ದುರಂತಗಳನ್ನೂ ಅನುಭವಿಸಿದೆ. ನಾವೋಮಿ ಕ್ಲೀನ್ (Naomi Klein) ರ ಅದ್ಭುತ ಕೃತಿ The Shock Doctrine ಜಾಗತೀಕರಣದ ಕರಾಳ ಚರಿತ್ರೆಯ ಬೆಚ್ಚಿ ಬೀಳಿಸುವ ಕಥನವಾಗಿದೆ. ದಕ್ಷಿಣ ಅಮೇರಿಕಾ ಖಂಡದ ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ಜಾಗತೀಕರಣದ ಪ್ರಯೋಗಗಳು ನಡೆದವು. ಅಲ್ಲಿಯೂ ಕೂಡ “ಅನಿವಾರ್ಯತೆ” “ಚಾರಿತ್ರಿಕ ಅನಿವಾರ್ಯತೆ” ಇವುಗಳ ಆ ಧಾರದ ಮೇಲೆ ಅಮೇರಿಕನ್ ಅರ್ಥಶಾಸ್ತ್ರಜ್ಞ ಮಿಲ್ಟನ್ ಸಿಂಗರ್ ಮತ್ತು ಅವನ ಶಿಷ್ಯರ ಪಡೆ ಈ ದೇಶಗಳ ಸರಕಾರಗಳಿಗೆ ಸಲಹೆಗಾರರಾಗಿ ದುಡಿದರು. ಈ ದೇಶಗಳ ಸರ್ವಾಧಿಕಾರಿಗಳು, ಮಿಲಿಟರಿ ಧುರೀಣರು, ಬಂಡವಾಳಶಾಹಿಗಳು ಜಾಗತೀಕರಣವನ್ನು ಆರಾಧಿಸಿದ್ದು ಮಾತ್ರವಲ್ಲ, ಬಲವಂತ ಹಾಗೂ ಹಿಂಸೆಯ ಮೂಲಕ ಹೇರಿದರು. ಪರಿಣಾಮವೆಂದರೆ ಮೊದಲ ಕೆಲವು ವರ್ಷಗಳಲ್ಲಿ ಈಗ ಭಾರತದಲ್ಲಿ ಆದಂತೆ “ಆರ್ಥಿಕ ಪ್ರಗತಿಯ” ಭ್ರಮೆ ನಿಜವಾದಂತೆ ಕಂಡಿತು. ಅಲ್ಲಿಯ ಕೆಲವು ವರ್ಗಗಳಿಗೆ ಹಠಾತ್ತನೇ ಸವಲತ್ತುಗಳು, ಶ್ರೀಮಂತಿಕೆ, ಐಷಾರಾಮು... ಇವೆಲ್ಲ ಬಂದವು. ಹೀಗಾಗಿ ಜಾಗತೀಕರಣದ ವಿರೋಧಿಗಳನ್ನು, ವಿಮರ್ಶಕರನ್ನು ದ್ರೋಹಿಗಳಂತೆ ನೋಡಿ ಅವರನ್ನು ಶಿಕ್ಷಿಸಲಾಯಿತು. ಹಿಂಸೆಯ ಬೃಹತ್ ಪರ್ವವೇ ಆರಂಭವಾಯಿತು. ಈ ದೇಶಗಳ ಸ್ಥಿತಿ ಈಗ ಹೇಗಿದೆಯೆಂದು ಕಾಣುತ್ತಿದೆ. ಆದರೆ ಆ ಸ್ಥಿತಿಗಳಿಗೆ ಜಾಗತೀಕರಣವು ಕಾರಣವಲ್ಲ, ಬೇರೆ ಕಾರಣಗಳಿವೆ ಎನ್ನುವ ವಾದಗಳನ್ನು ಹರಿಬಿಡಲಾಗುತ್ತಿದೆ.

ಬೆಳ್ಳಿಹಬ್ಬವನ್ನು ಆಚರಿಸುತ್ತಿರುವವರು ಜಗತ್ತಿನ ಅನೇಕ ಶ್ರೇಷ್ಠ ಚಿಂತಕರು, ಅರ್ಥಶಾಸ್ತ್ರಜ್ಞರು ಹೇಳುತ್ತ ಬಂದಿರುವುದನ್ನು ಗಮನಿಸಬೇಕು. ಜಗದೀಶ್ ಭಗವತಿ, ಅವರ ಶಿಷ್ಯ ಪಾನೆಗಾರಿಯಾ, ಅಹ್ಲುವಾಲಿಯ ಹಾಗೂ ಅರುಣ್ ಜೈಟ್ಲಿ ಇವರುಗಳ ಜಾಗತೀಕರಣದ ಸಮರ್ಥನೆಯಲ್ಲಿ ಒಂದೇ ಒಂದು ಸ್ವಂತದ ವಿಚಾರವನ್ನು ಹೇಳಿಲ್ಲ. ಮನ್‍ಮೋಹನ್ ಸಿಂಗ್ ಕೂಡ. ಪಂಡಿತ ಗಿಳಿಗಳಂತೆ ಅಲ್ಲಿಯವರು ಹೇಳಿದ್ದನ್ನು ಇವರು ಪಾಠ ಒಪ್ಪಿಸುತ್ತಿದ್ದಾರೆ. ಸರಳವಾದ ಪ್ರಶ್ನೆಯೆಂದರೆ ಬಂಡವಾಳಶಾಹಿಯು ತನ್ನ ರಕ್ಷಣೆ ಹಾಗೂ ಬೆಳವಣಿಗೆಗಾಗಿ ಹುಟ್ಟುಹಾಕಿದ ಜಾಗತೀಕರಣವು ಅದು ಹೇಗೆ ಸಮಾನತೆಯನ್ನು ತರಬಲ್ಲದು? ಮತಕಟ್ಟೆಯು ಸಾಮಾಜಿಕ ನ್ಯಾಯವನ್ನು ತರಬಲ್ಲದು? ಅದರ ಆಂತರಿಕ ತರ್ಕವೆಂದರೆ (internal logic) ಬಂಡವಾಳದ ಬೆಳವಣಿಗೆಗಾಗಿ ಅತ್ಯಂತ ನಿರ್ದಯವಾಗಿ ಇನ್ನೆಲ್ಲವನ್ನೂ ಶೋಷನೆ ಮಾಡುವುದಾಗಿದೆ. ಆದ್ದರಿಂದಲೇ ಈ ಬೆಳ್ಳಿ ವರ್ಷಗಳಲ್ಲಿ ಭಾರತದ ಬನಿಯಾ ಬಂಡವಾಳಶಾಹಿಯು ನಮ್ಮ ಕಲ್ಪನೆಗೂ ಸಿಕ್ಕದಂತೆ ಬೆಳೆದಿದೆ. ವಿಶೇಷವೆಂದರೆ ಅದು ತನಗೆ ಬೇಕಾದ ಜಾಗತೀಕರಣವನ್ನು ಪ್ರಜಾಪ್ರಭುತ್ವದ ಮೂಲಕವೇ ಸಾಧಿಸುತ್ತಿದೆ. ಬಲಿಷ್ಠ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿ.ಜೆ.ಪಿ. ಜಾಗತೀಕರಣದ ವಿಷಯದಲ್ಲಿ ಯಾವ ಅಭಿಪ್ರಾಯ ಬೇಧವನ್ನೂ ಹೊಂದಿಲ್ಲ. ಜಾಗತೀಕರಣಕ್ಕೆ ಬೇಕಾಗಿರುವ ಭೂಮಿ, ಕಾರ್ಮಿಕ ವಿರೋಧಿ ಕಾನೂನುಗಳು, ಆದಾಯ ಹಾಗು ಇತರ ತೆರಿಗೆಗಳಿಂದ ರಿಯಾಯಿತಿ ಹಾಗೂ ವಿಶಾಲವಾದ ಕೊಳ್ಳುವ ವರ್ಗ ಇವುಗಳನ್ನು ಬೆಂಬಲಿಸುವ ಮಸೂದೆಗಳನ್ನು ನಮ್ಮ ಸಂಸತ್ತು ಸತತವಾಗಿ ಪಾಸುಮಾಡುತ್ತಿದೆ. ಜನಪರ ಹೋರಾಟಗಳನ್ನು ಹತ್ತಿಕ್ಕುವ ಕೆಲಸ ನಡೆದಿದೆ. ಅಗೋಚರವಾದ ಹಿಂಸೆಯ ಅಡಿಯಲ್ಲಿ ಜನಸಮುದಾಯಗಳು ನರಕವನ್ನೇ ಅನುಭವಿಸುತ್ತಿವೆ. ವಿಶ್ವದ ಅತೀ ಹೆಚ್ಚು ಸಂಖ್ಯೆಯ ಕಡುಬಡವರು, ಅತೀ ಹೆಚ್ಚು ಸಂಖ್ಯೆಯ ಅಪೌಷ್ಠಿಕತೆಯಿಂದ ನರಳುವ ಹೆಂಗಸರು ಹಾಗೂ ಕಂದಮ್ಮಗಳು, ಅತೀ ಹೆಚ್ಚು ಸಂಖ್ಯೆಯ ಹಸಿವಿನಿಂದ ಮುಕ್ತಿ ಕಾಣದ ಜನರು ಹೆಚ್ಚುತ್ತಲೇ ಇದ್ದಾರೆ.  ಆದರೆ ಅವರಾರಿಗೂ ಈ ಬೆಳ್ಳಿಹಬ್ಬದ “ಪಾರ್ಟಿ”ಗೆ ಆಮಂತ್ರಣವಿಲ್ಲ. ಪಾರ್ಟಿ ಮುಗಿದ ಮೇಲೆ ಎಂಜಲೆಲೆಗಳಿಗೆ ಕಾಯಬೇಕಷ್ಟೆ.

ಪ್ರೊ. ರಾಜೇಂದ್ರ ಚೆನ್ನಿ