ಸಿನಿಮೀಯ ಡೈಲಾಗ್‍ಗಳಿಂದ, ಒಣ ಮಂತ್ರಗಳಿಂದ ಪರಿಹಾರ ಸಾಧ್ಯವಿಲ್ಲ

ಸಂಪುಟ: 
10
ಸಂಚಿಕೆ: 
34
date: 
Sunday, 14 August 2016
Image: 

ಸೀತಾರಾಮ್ ಯೆಚೂರಿ ರಾಜ್ಯಸಭೆಯಲ್ಲಿ, ಆಗಸ್ಟ್ 10

“ಪ್ರತಿದಿನ 370ನೇ ಕಲಮನ್ನು ರದ್ದು ಮಾಡುತ್ತೇವೆ ಎನ್ನುತ್ತಿದ್ದರೆ ಕಾಶ್ಮೀರಿಗಳಲ್ಲಿ ವಿಶ್ವಾಸ ಮೂಡಿಸಬಲ್ಲಿರಾ? ಗೋರಕ್ಷಣೆಯ ಹೆಸರಿನಲ್ಲಿ ನಾನು ಕೊಲ್ಲುತ್ತೇನೆ  ಎಂದು ಪ್ರತಿನಿತ್ಯ ಹೇಳುತ್ತಿದ್ದರೆ, ಸುಳ್ಳು ಆಪಾದನೆಯ ಮೇಲೆ ಝಾರ್ಖಂಡ್‍ನ ಲತೇಹಾರ್‍ನಲ್ಲಿ ಇಬ್ಬರು ಮುಸ್ಲಿಮರನ್ನು ನೇಣು ಹಾಕಿದರೆ, ದಾದ್ರಿಯಲ್ಲಿ ಅಖ್ಲಾಕ್‍ನನ್ನು ಸಾಯಿಸಿದರೆ ವಿಶ್ವಾಸ ಮೂಡುತ್ತದೆಯೇ? ಘರ್‍ವಾಪಸಿ, ಲವ್‍ಜಿಹಾದ್ ಇವೆಲ್ಲ ವಿಶ್ವಾಸವನ್ನು ಕೆಡಿಸುವಂತ ಕ್ರಮಗಳು. ಸರಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು. ವಿಶ್ವಾಸ ಮೂಡಿಸಲು ನೀವು ವಿಶ್ವಾಸಾರ್ಹರಾಗಿರಬೇಕಾಗುತ್ತದೆ, ಕೇವಲ ವಾಜಪೇಯಿಯವರು ಹೇಳಿದ್ದನ್ನು ಪುನರುಚ್ಚರಿಸುವುದರಿಂದ ಅದು ಸಾಧ್ಯವಿಲ್ಲ.”

ಕಳೆದ ಒಂದು ತಿಂಗಳಿಂದ ಪ್ರಜಾಪ್ರಭುತ್ವವಾದಿ ಗಳಲ್ಲಿ ತೀವ್ರ ಆತಂಕ ಮೂಡಿಸಿದ್ದ  ಸ್ವಯಂನೇಮಿತ ‘ಗೋರಕ್ಷಕ’ರ ಮತ್ತು ಕಾಶ್ಮೀರದಲ್ಲಿ ಪೆಲೆಟ್‍ಗನ್‍ಗಳ ಅವಾಂತರಗಳ ಬಗ್ಗೆ ಕೊನೆಗೂ ಪ್ರಧಾನ ಮಂತ್ರಿಗಳು ತಮ್ಮ ದಿವ್ಯಮೌನ ಮುರಿದಿದ್ದಾರೆ. ಇದರಿಂದ ಅವರ ಬೆಂಬಲಿಗರಿಗೂ ತುಸು ಹಾಯೆನಿಸಿದೆ. ಆದರೆ ಇಷ್ಟರಿಂದಲೇ ಸಮಸ್ಯೆಗಳಿಗೆ ಪರಿಹಾರ ಸಾಧ್ಯವೇ?

‘ಗೋರಕ್ಷಕ’ರ ಬಗ್ಗೆ ಅವರು ಹೇಳಿದ್ದೇನು? 

ಆಗಸ್ಟ್ 6ರಂದು  ತನ್ನ ಸರಕಾರ ಎರಡು ವರ್ಷಗಳನ್ನು ಪೂರೈಸಿದ ಸಂದರ್ಭದ ಒಬಾಮರ ‘ಟೌನ್‍ಹಾಲ್’ ಮಾದರಿ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ‘ಗೋರಕ್ಷಣೆಯ ಹೆಸರಲ್ಲಿ ಅಂಗಡಿ ತೆರೆದಿರುವವರ ಬಗ್ಗೆ ನನಗೆ ಬಹಳ ಸಿಟ್ಟು ಬರುತ್ತದೆ’ ಎಂದರು. ಈ ಗೋರಕ್ಷಕರು ಎಂದು ಹೇಳಿಕೊಳ್ಳುವವರಲ್ಲಿ 70-80 ಶೇಕಡಾ ರಾತ್ರಿ ಸಮಾಜ ಘಾತುಕ ಕೆಲಸಗಳನ್ನು ಮಾಡಿ ಹಗಲಲ್ಲಿ ಗೋರಕ್ಷಣೆಯ ನಟನೆ ಮಾಡಿ ತಮ್ಮ ಪಾಪವನ್ನು ಮುಚ್ಚಿಕೊಳ್ಳುವವರು ಎಂದರಂತೆ. ಹೆಚ್ಚಿನ ಹಸುಗಳು ಪ್ಲಾಸ್ಟಿಕ್, ಕಾಗದ ಇತ್ಯಾದಿ ತಿಂದು ಸಾಯುತ್ತಿವೆ, ಅದನ್ನು ತಪ್ಪಿಸಿದರೆ ಅಷ್ಟೇ ಸಾಕು ಅದೇ ದೊಡ್ಡ ಗೋಸೇವೆ ಆಗುತ್ತದೆ ಎಂದು ಸಂಘ ಪರಿವಾರ ಲೇವಡಿ ಮಾಡುವ  ‘ಖೋಟಾ ಜಾತ್ಯಾತೀತವಾದಿಗಳ’ ಶೈಲಿಯಲ್ಲಿ ಮಾತಾಡಿದ್ದು ಆತಂಕಿತರಾಗಿದ್ದ ಪ್ರಧಾನಿಗಳ ಕಾರ್ಪೊರೇಟ್-ಬೌದ್ಧಿಕ ಅಭಿಮಾನಿಗಳಿಗೆ ತುಸು ಸಮಾಧಾನ ತಂದರೂ ಸಂಘ ಪರಿವಾರದ ವಿಶ್ವ ಹಿಂದೂ ಪರಿಷತ್, ಗೋರಕ್ಷಾ ದಳ ಮುಂತಾದವರಲ್ಲಿ ಆಕ್ರೋಶ ಉಂಟು ಮಾಡಿರುವುದೂ ಕಂಡು ಬಂದಿದೆ. 

ವಿಶೇಷವೆಂದರೆ ಪ್ರಧಾನಿಗಳು ಇಲ್ಲಿಗೇ ನಿಲ್ಲಲಿಲ್ಲ. ಮರುದಿನ ಹೈದರಾಬಾದಿನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತ ‘ನಿಮಗೆ ಕೊಲ್ಲಬೇಕೆಂದಿದ್ದರೆ ನನ್ನನ್ನು ಕೊಲ್ಲಿ’ ಎಂದು ಭಾವಾವೇಶದಿಂದ ಹೇಳಿರುವುದಾಗಿ ವರದಿಯಾಗಿದೆ. ಆದರೆ ಅದೇಕೋ ಇದನ್ನು ಹೆಚ್ಚಿನವರು ಸಿನಿಕತನದಿಂದಲೇ ಸ್ವೀಕರಿಸಿರುವಂತೆ ಕಾಣುತ್ತದೆ. ಏಕೆಂದರೆ ದೇಶದ ಜನತೆ ಕಳೆದ ಎರಡು ವರ್ಷಗಳಲ್ಲಿ ಇಂತಹ ಭಾವಾವೇಶದ ಮಾತುಗಳನ್ನು ಬಹಳಷ್ಟು ಕೇಳಿದ್ದಾರೆ.

ಬಾಲಿವುಡ್ ಡೈಲಾಗ್ 

ರಾಜ್ಯಸಭೆಯಲ್ಲಿ ಹಸುವಿನ ಹೆಸರಲ್ಲಿ ಜನರನ್ನು ಸಾಯಿಸುವ ಗೋರಕ್ಷಕರು ನಿರ್ಮಿಸಿರುವ ಗಂಭೀರ ಪರಿಸ್ಥಿತಿಯ ಬಗ್ಗೆ ನಡೆದ ವಿಶೇಷ ಚರ್ಚೆಯಲ್ಲಿ ಮಾತಾಡುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿಯವರು “ಅಂತೂ ಕೊನೆಗೂ ಪ್ರಧಾನ ಮಂತ್ರಿಗಳು ಏನೋ ಹೇಳಿದರು, ತಡವಾಗಿ ಹೇಳಿದರು, ಅವರು ಹೇಳಿದ್ದಾದರೂ ಏನು? ‘ಸಾಯಿಸುವುದಿದ್ದರೆ ದಲಿತರನ್ನು ಸಾಯಿಸಬೇಡಿ, ನಮ್ಮನ್ನು ಸಾಯಿಸಿ’. ಇದು  ಸುಮಾರಾಗಿ ಪ್ರತಿಯೊಂದು ಹಿಂದಿ ಸಿನೇಮಾದಲ್ಲಿ ಕೇಳುವ ಡೈಲಾಗ್. ತಾಯಿ ಹೇಳುತ್ತಾಳೆ-ಮಕ್ಕಳನ್ನು ಬಿಟ್ಟು ಬಿಡಿ, ನನ್ನನ್ನು ಸಾಯಿಸಿ. ಇಲ್ಲಿ  ತಾಯಿ ಯಾರು, ಅಂದರೆ ನಟರು ಯಾರು, ನಮಗೆಲ್ಲರಿಗೂ ಗೊತ್ತು” ಎಂದು ಮಾರ್ಮಿಕವಾಗಿ ಹೇಳಿದರು.

ಮುಂದುವರೆಯುತ್ತ, ದಲಿತರನ್ನು ಕೊಲ್ಲಬೇಡಿ ಅಂದರೆ ದಲಿತೇತರರನ್ನು ಕೊಲ್ಲುವ ಲೈಸೆನ್ಸ್ ಇದೆ ಎಂದು ಅರ್ಥವೇ, ಅದು ನಮ್ಮ ಧಾರ್ಮಿಕ ಅಲ್ಪಸಂಖ್ಯಾತರನ್ನು ಕೊಲ್ಲುವ ಪರವಾನಿಗೆಯೇ ಎಂದು ಪ್ರಶ್ನಿಸಿದರು. ಇದು ಟೊಳ್ಳು ಪ್ರಶ್ನೆಯಲ್ಲ. ಏಕೆಂದರೆ ಈ ಗೋರಕ್ಷಣೆಯ ‘ವ್ಯವಹಾರ’ದಲ್ಲಿ ಮೊದಲು ಸಾಯಿಸಿದ್ದು ಅಖ್ಲಾಕ್‍ನನ್ನು ಎಂದು ಅವರು ನೆನಪಿಸಿದರು. 

ಸಂಸತ್ತಿನಲ್ಲಿ ಭರವಸೆ ನೀಡಿ

ಈಗೇನೋ ರಾಜ್ಯ ಸರಕಾರಗಳು ಹುಸಿ ಗೋರಕ್ಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಪ್ರಧಾನಿಗಳು ಪಕ್ಷದ ಕಾರ್ಯಕರ್ತರ ಮುಂದೆ ತಾಕೀತು ಮಾಡಿದ್ದಾರೆ. ಆದರೆ ಸೀತಾರಾಮ್ ಯೆಚೂರಿಯವರು ಎರಡು ವರ್ಷಗಳ ಹಿಂದಿನಿಂದಲೇ ಕೇಂದ್ರ ಸಂಪುಟದ ಮಂತ್ರಿಗಳು, ಆಳುವ ಪಕ್ಷದ ಸಂಸದರು, ಶಾಸಕರೂ ಸೇರಿದಂತೆ ಸಂಘ ಪರಿವಾರದವರು ದೇಶದ ಕಾನೂನುಗಳನ್ನು ಉಲ್ಲಂಘಿಸಿ ಹೇಳಿಕೆಗಳನ್ನು ನೀಡಲಾರಂಭಿಸಿದಾಗಲೇ, ಇಂತವರ ವಿರುದ್ಧ ದೇಶದ ಕಾನೂನಿನ ಪ್ರಕಾರ ಶಿಕ್ಷಿಸುವ ಭರವಸೆಯನ್ನು ಸಂಸತ್ತಿನಲ್ಲಿ  ನೀಡಿ ಎಂದು ಪ್ರಧಾನ ಮಂತ್ರಿಗಳನ್ನು ಆಗ್ರಹಿಸುತ್ತ ಬಂದಿದ್ದಾರೆ. ಆದರೆ ಇದುವರೆಗೂ ಪ್ರಧಾನಿಗಳಿಂದ ಅಂತಹ ಹೇಳಿಕೆ ಬಂದಿಲ್ಲ ಎಂಬುದನ್ನು ಸೀತಾರಾಮ್ ಯೆಚೂರಿಯವರು ರಾಜ್ಯಸಭೆಯಲ್ಲಿ ಆಗಸ್ಟ್ 9ರಂದು ಮತ್ತೊಮ್ಮೆ ನೆನಪಿಸಿದರು. 

ಚಾಣಕ್ಯ ತಂತ್ರ?

ಭಾರತದ ಚಾಣಕ್ಯನಂತಹ ಪಾಶ್ಚಿಮಾತ್ಯ ರಾಜತಂತ್ರಜ್ಞ  ಮೆಕಿಯವೆಲಿ ತನ್ನ ಧಣಿ ರಾಜಕುಮಾರನಿಗೆ ನೀಡಿದ ಎನ್ನಲಾದ ಒಂದು ಸಲಹೆಯನ್ನು ಈ ಸಂದರ್ಭದಲ್ಲಿ ಸೀತಾರಾಮ್ ಯೆಚೂರಿ ನೆನಪಿಸಿದÀರು. “ಜನರ ಹೃದಯ ಗೆಲ್ಲುವುದು ಹೇಗೆ? ಮೊದಲು ನಿನ್ನ ಆಳ್ವಿಕೆಯಲ್ಲಿ ಎಷ್ಟೊಂದು ಘೋರವಾದ ಅನಿಷ್ಟ ಸಾಧ್ಯ ಎಂಬುದನ್ನು ತೋರಿಸು. ನಂತರ ಹಾಗೆ ಮಾಡಬಾರದೆಂದು ಸಹನೆ ಪ್ರದರ್ಶಿಸು. ಆಗ ಜನ ನಿಟ್ಟುಸಿರು ಬಿಡುತ್ತಾರೆ, ಎಂತಹ ಪ್ರಜಾಪೋಷಕ ಎಂದು ಜನ ನಿನ್ನನ್ನು ಹಾಡಿ ಹೊಗಳುತ್ತಾರೆ”!

ದೇಶದಲ್ಲಿ ನಡೆಯುತ್ತಿರುವುದಕ್ಕೂ ಪ್ರಧಾನ ಮಂತ್ರಿಗಳು ಹೇಳುತ್ತಿರುವುದಕ್ಕೂ ಸಂಬಂಧವೇ ಇಲ್ಲದಂತಾಗಿದೆ. ನಮಗೆ ಬೇಕಾಗಿರುವುದು ದೇಶದ ಕಾನೂನನ್ನು ಉಲ್ಲಂಘಿಸುವವರ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂಬ ಸ್ಪಷ್ಟ ಭರವಸೆ. ಆ ಭರವಸೆ ಇನ್ನೂ ಸಿಕ್ಕಿಲ್ಲ. ಒಮ್ಮೆ ಪ್ರಧಾನ ಮಂತ್ರಿಗಳು ಸಂಸತ್ತಿಗೆ ಬಂದು ಈ ಭರವಸೆಯನ್ನು ಕೊಡಲಿ ಎಂದು ಸೀತಾರಾಮ್ ಯೆಚೂರಿಯವರು ಮತ್ತೊಮ್ಮೆ ಆಗ್ರಹಿಸಿದ್ದಾರೆ. 

ಕಾಶ್ಮೀರದ ಬಗ್ಗೆ ಹೇಳಿದ್ದೇನು? 

30 ದಿನಗಳ ಕಫ್ರ್ಯೂ, ಸುಮಾರು 60 ಜನರ ಸಾವು, ನೂರಕ್ಕೂ ಹೆಚ್ಚು ಮಂದಿ ಕಣ್ಣು ಕಳಕೊಂಡ, ಮತ್ತು ಸಾವಿರಾರು ಮಂದಿ  ಗಾಯಗೊಂಡ ನಂತರ ಪ್ರಧಾನ ಮಂತ್ರಿಗಳು ಈ ಬಗ್ಗೆ ಮೊದಲ ಬಾರಿಗೆ ಪ್ರಸ್ತಾಪಿಸಿದರು- ಕಾಶ್ಮೀರದಲ್ಲಲ್ಲ, ಸಂಸತ್ತಿನಲ್ಲಲ್ಲ, ಮಧ್ಯಪ್ರದೇಶದ ಒಂದು ಸಾರ್ವಜನಿಕ ಸಭೆಯಲ್ಲಿ. ಜಿಎಸ್‍ಟಿ ಬಗ್ಗೆ ಮಾತಾಡಲೆಂದೇ ಲೋಕಸಭೆಗೆ ಹೋದ ಪ್ರಧಾನಿಗಳು ‘ಹುಸಿ ಗೋರಕ್ಷಕ’ರ ಬಗ್ಗೆಯಾಗಲೀ, ಕಾಶ್ಮೀರದ ಬಗ್ಗೆಯಾಗಲೀ ದೇಶದ ಸಂಸತ್ತಿನಲ್ಲಿ ಏನೂ ಹೇಳುವ ಗೋಜಿಗೆ ಹೋಗಿಲ್ಲ. 

“ಪ್ರತಿಯೊಬ್ಬ ಭಾರತೀಯ ಕಾಶ್ಮೀರವನ್ನು ಪ್ರೀತಿಸುತ್ತಾನೆ. ಪ್ರತಿಯೊಬ್ಬ ಭಾರತೀಯನಿಗೆ ಇರುವ ಸ್ವಾತಂತ್ರ್ಯ ಪ್ರತಿಯೊಬ್ಬ ಕಾಶ್ಮೀರಿಗೂ ಇದೆ. ಕಾಶ್ಮೀರದ ಪ್ರತಿ ಯುವಜನಕ್ಕೆ ಅದೇ ಉಜ್ವಲ ಭವಿಷ್ಯವನ್ನು ನಾವು ಆಶಿಸುತ್ತೇವೆ.”

ಆದರೆ ಪೆಲೆಟ್ ಗನ್‍ಗಳ ಪ್ರಯೋಗದಿಂದ ನೂರಕ್ಕೂ ಹೆಚ್ಚು ಮಂದಿ ಕಣ್ಣು ಕಳಕೊಂಡ ಬಗ್ಗೆ, ಗೃಹಮಂತ್ರಿಗಳು ಅದರ ಪ್ರಯೋಗವನ್ನು ನಿಲ್ಲಿಸುವ ಬಗ್ಗೆ ಯೋಚಿಸಲಾಗುವುದು ಎಂದ ಮೇಲೂ ಅದು ನಿಲ್ಲದ ಬಗ್ಗೆ  ಚಕಾರವಿಲ್ಲ. ದೇಶದ ಬೇರಾವ ರಾಜ್ಯದಲ್ಲೂ ಪ್ರತಿಭಟನಾಕಾರರ ಮೇಲೆ ಬಳಸದ ಪೆಲೆಟ್ ಗನ್‍ಗಳನ್ನು  ಇಲ್ಲಿ ಮಾತ್ರ ಯುವಜನರ ಮೇಲೆ ಬಳಸುತ್ತಿರುವುದೇಕೆ ಎಂಬ  ಕಾಶ್ಮೀರಿಗಳ ಪ್ರಶ್ನೆಗೆ ಉತ್ತರ ನೀಡಬೇಕೆಂದು ಅವರಿಗೆ ಅನಿಸಿದಂತಿಲ್ಲ. ಎಲ್ಲ ಪ್ರತಿಪಕ್ಷಗಳು ಮತ್ತೆ-ಮತ್ತೆ ಕೇಳಿಕೊಂಡರೂ ಈ ಬಗ್ಗೆ ರಾಜಕೀಯ ಸಮಾಲೋಚನೆ-ಸಂವಾದವನ್ನು ಆರಂಭಿಸಿಲ್ಲ ಏಕೆ ಎಂಬ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದೂ ಅವರಿಗೆ ಅನ್ನಿಸಿದಂತಿಲ್ಲ.

ತಮ್ಮ ಸರಕಾರ ಅಟಲ್ ಬಿಹಾರಿ ವಾಜಪೇಯಿಯವರ ‘ಇನ್ಸಾನಿಯತ್, ಜಮ್ಹೂರಿಯತ್ ಔರ್ ಕಶ್ಮೀರಿಯತ್’(ಮಾನವೀಯತೆ, ಪ್ರಜಾಪ್ರಭುತ್ವ ಮತ್ತು ಕಾಶ್ಮೀರಿತನ) ಮಂತ್ರದಲ್ಲಿ ನಂಬಿಕೆಯಿಟ್ಟಿದೆ ಎಂದು ಅವರು ಹೇಳಿದ್ದಾರಷ್ಟೇ. 

ರಕ್ತ ಹರಿಸಿ ಹದ್ದುಗಳು ಎರಗುವಂತೆ ಮಾಡುತ್ತಿರುವುದೇಕೆ?

ಆದರೆ ಇಂತಹ ಮಂತ್ರಗಳ ಉಚ್ಚಾರಣೆ ಮಾಡಿದರಷ್ಟೇ ಸಾಕೇ ಎಂದು ಮರುದಿನ ರಾಜ್ಯಸಭೆಯಲ್ಲಿ ಈ ಅಧಿವೇಶನದಲ್ಲಿ ಮೂರನೇ ಬಾರಿ ಕಾಶ್ಮೀರದ ಪರಿಸ್ಥಿತಿಯ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡುತ್ತ ಕೇಳಿದ ಸೀತಾರಾಮ್ ಯೆಚೂರಿ ಅಲ್ಲಿ ಭಾರತದ ಬಗ್ಗೆ ವಿಶ್ವಾಸದ ಕೊರತೆ ಉಂಟಾಗಿದೆ, ಅದನ್ನು ನಿವಾರಿಸದೆ ಕಾಸ್ಮೀರಿ ಜನತೆಯ ನೋವನ್ನು ಅರಿಯದೆ  ಪರಿಹಾರ ಸಾಧ್ಯವಿಲ್ಲ ಎಂದರು.

ನಿಜ, ಪಾಕಿಸ್ತಾನ ಹಿಂಸಾಚಾರವನ್ನು ಪ್ರಚೋದಿಸುತ್ತಿದೆ. ಈ ಬಗ್ಗೆ ಯಾರಿಗೂ ಭಿನ್ನಾಭಿಪ್ರಾಯ ಗಳಿಲ್ಲ. ಆದರೆ ಹದ್ದು ಕೂಡ ನೆಲದಲ್ಲಿ ಬಿದ್ದಿರುವ ಹೆಣವನ್ನು ಮುಕ್ಕಲು ಆಕಾಶದಿಂದ ಎರಗುವುದು ರಕ್ತದ ವಾಸನೆಯಿಂದ. ಕಳೆದ 32 ದಿನಗಳಿಂದ ರಕ್ತ ಸುರಿಯುವಂತೆ ಮಾಡಿ ಗಡಿಗಳಾಚೆಗಿನ ಹದ್ದುಗಳು ಎರಗುವಂತೆ ಮಾಡುತ್ತಿರುವುದೇಕೆ ಎಂದು ಅವರು ಈ ಬಗ್ಗೆ ನೋವು ವ್ಯಕ್ತಪಡಿಸಿದರು.

69 ವರ್ಷಗಳ ಹಿಂದೆ ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ ಬಂಗಾಳದಲ್ಲಿ, ಪಂಜಾಬಿನಲ್ಲಿ ಕೋಮು ದಂಗೆಗಳು ನಡೆಯುತ್ತಿದ್ದಾಗ ಮುಸ್ಲಿಮರೇ ಹೆಚ್ಚಾಗಿರುವ ಕಾಶ್ಮೀರದಲ್ಲಿ ಒಂದೇ ಒಂದು ಕೋಮು ಗಲಭೆ ನಡೆದಿರಲಿಲ್ಲ. ಬದಲಾಗಿ ಕಾಶ್ಮೀರದ ಜನತೆ ತಮ್ಮದೇ ಧರ್ಮಕ್ಕೆ ಸೇರಿದ ಪಾಕಿಸ್ತಾನದ ಆಕ್ರಮಣಕಾರರನ್ನು ಹಿಮ್ಮೆಟ್ಟಿಸಿ ಭಾರತವನ್ನು ಸೇರಲು ನಿರ್ಧರಿಸಿದರು, ಜನಗಳ ಅಭಿವೃದ್ಧಿಗಾಗಿ ಭೂಸುಧಾರಣೆಗೆ ಮುಂದಾದ ಮೊದಲ ರಾಜ್ಯ ಅದು. ಅಂತಹ ಅಭಿವೃದ್ಧಿಯ ಕನಸಿನೊಂದಿಗೆ ಭಾರತವನ್ನು ಸೇರಿದ ಅವರಿಗಾಗಿ 370ನೇ ಕಲಮನ್ನು ಸಂವಿಧಾನದಲ್ಲಿ ಸೇರಿಸಲಾಯಿತು, ಸ್ವಾಯತ್ತತೆಯ ಭರವಸೆ ಕೊಡಲಾಯಿತು. ಒಬ್ಬ ಪ್ರಧಾನ ಮಂತ್ರಿಗಳು ಸ್ವಾಯತ್ತತೆಗೆ ಆಕಾಶವೇ ಮಿತಿ ಎಂದರು. ಆದರೆ ಆ ಭರವಸೆ ಈಡೇರಿಸಲಿಲ್ಲ, ಈಗಂತೂ 370ನೇ ಕಲಮನ್ನೇ ಪ್ರಶ್ನಿಸಲಾಗುತ್ತಿದೆ. ಜತೆಗೆ ಗೋರಕ್ಷಣೆಯ ಹೆಸರಲ್ಲಿ ಸುಳ್ಳು ಆಪಾದನೆಗಳ ಮೇಲೆ ದಾದ್ರಿಯಲ್ಲಿ ಮಹಮ್ಮದ್ ಅಖ್ಲಾಕ್‍ನನ್ನು ಕೊಚ್ಚಿ ಹಾಕಲಾಗಿದೆ, ಲತೇಹಾರ್‍ನಲ್ಲಿ ಇಬ್ಬರು ಮುಸ್ಲಿಮರನ್ನು ಸಾರ್ವಜನಿಕವಾಗಿ ನೇಣು ಹಾಕಲಾಗಿದೆ, ಈಗ ದಲಿತರ ಮೇಲೆ ಹಲ್ಲೆ ನಡೆಯುತ್ತಿದೆ, ಲವ್ ಜಿಹಾದ್, ಘರ್ ವಾಪಸೀ ಇತ್ಯಾದಿ ಹೆಸರಲ್ಲಿ ಕೋಮು ಧ್ರುವೀಕರಣ ನಡೆಸಲಾಗುತ್ತಿದೆ. ಇಂತಹ ವಾತಾವರಣದಲ್ಲಿ ಅಲ್ಲಿ ಪೆಲಟ್ ಗನ್‍ಗಳನ್ನು ಇನ್ನೂ ಪ್ರತಿದಿನ ಪ್ರಯೋಗಿಸುತ್ತಿದ್ದರೆ ಅಲ್ಲಿಯ ಜನರಿಗೆ ನಮ್ಮ ಬಗ್ಗೆ ವಿಶ್ವಾಸ ಮೂಡುವುದಾದರೂ ಹೇಗೆ ಎಂದು ಯೆಚೂರಿ ಪ್ರಶ್ನಿಸಿದರು.

ಇನ್ಸಾನಿಯತ್, ಜಮ್ಹೂರಿಯತ್ ಔರ್ ಕಶ್ಮೀರಿಯತ್ ಮಂತ್ರ ನೀಡಿದ ವಾಜಪೇಯಿಯವರು ಮತ್ತು ಅವರ ಗೃಹಮಂತ್ರಿ ಅಡ್ವಾಣಿಯವರು ಪ್ರತ್ಯೇಕತಾವಾದಿಗಳೊಂದಿಗೂ ಮಾತುಕತೆ ನಡೆಸಲು ಹಿಂಜರಿಯಲಿಲ್ಲ. ಆದರೆ ಪ್ರತಿಪಕ್ಷಗಳು ಮತ್ತೆ-ಮತ್ತೆ ವಿನಂತಿಸಿಕೊಂಡರೂ ರಾಜಕೀಯ ಸಮಾಲೋಚನೆ ಯನ್ನು, ಸಂವಾದವನ್ನು ನಡೆಸುವ ಪ್ರಯತ್ನವನ್ನೂ ಮೋದಿ ಸರಕಾರ ಮಾಡದ ಬಗ್ಗೆ ಅವರು ಖೇದ ವ್ಯಕ್ತಪಡಿಸಿದರು. ಈಗಲಾದರೂ ಪೆಲಟ್ ಗನ್‍ಗಳ ಬಳಕೆಯನ್ನು ನಿಲ್ಲಿಸಿ, ಸರ್ವಪಕ್ಷ ಸಭೆ ಕರೆಯಿರಿ, ಮುಕ್ತ ಮನಸ್ಸಿನಿಂದ ರಾಜಕೀಯ ಸಂವಾದ ಆರಂಭಿಸಿ ಕಾಶ್ಮೀರಿಯ ಜನತೆಯ ವಿಶ್ವಾಸವನ್ನು ಮರಳಿ ಪಡೆಯಿರಿ ಎಂದು ಯೆಚೂರಿ ಮತ್ತೊಮ್ಮೆ ಕಳಕಳಿಯಿಂದ ಆಗ್ರಹಿಸಿದರು.