ನವ-ಉದಾರವಾದ, ಕೋಮುವಾದದ ವಿರುದ್ಧ ಹೋರಾಟದ ದೃಢನಿರ್ಧಾರವೇ ಈ ಸ್ವಾತಂತ್ರ್ಯ ದಿನದ ಪಣವಾಗಲಿ

ಸಂಪುಟ: 
10
ಸಂಚಿಕೆ: 
34
date: 
Sunday, 14 August 2016
Image: 
ಸ್ವಾತಂತ್ರ್ಯದ 70ನೇ ವರ್ಷದ ಆರಂಭವನ್ನು ಸೂಚಿಸುವ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸ್ವಲ್ಪವೇ ಮುನ್ನ ಆಳುವ ವರ್ಗಗಳು ದೇಶದ ಸಂಪತ್ತನ್ನು ಕೊಳ್ಳೆಹೊಡೆಯುವ, ಜನರಿಗೆ ಒದಗಿಸುವ ಮೂಲಭೂತ ಸೇವೆಗಳನ್ನು ಖಾಸಗೀಕರಿಸುವ ‘ಸ್ವಾತಂತ್ರ್ಯ’ದ ಬೆಳ್ಳಿಹಬ್ಬವನ್ನು ಆಚರಿಸಿದ್ದಾರೆ. ಇನ್ನೊಂದೆಡೆಯಲ್ಲಿ ರಾಷ್ಟ್ರೀಯ ಚಳವಳಿಯ ಮುಖ್ಯವಾಹಿನಿಯಿಂದ ಹೊರಗೇ ಇದ್ದ ಕೋಮುವಾದಿಗಳು ಅಧಿಕಾರ ಪಡೆದಿದ್ದಾರೆ. ಈ ಧ್ವಂಸಕಾರೀ ಬಲಪಂಥೀಯ ಶಕ್ತಿಗಳನ್ನು ಸೋಲಿಸಲು ಪಣ ತೊಡುವುದೇ  ಈ ಸ್ವಾತಂತ್ರ್ಯ ದಿನದಂದು ತೆಗೆದುಕೊಳ್ಳಬೇಕಾದ ಶಪಥವಾಗಿದೆ.
ಆಗಸ್ಟ್ 15ರ ಸ್ವಾತಂತ್ರ್ಯ ದಿನ ದೇಶದ ಉದ್ದಗಲದಲ್ಲಿ ಲಕ್ಷ-ಲಕ್ಷ ಜನರು ಬ್ರಿಟಿಷ್ ಆಡಳಿತದ ವಿರುದ್ಧ ನಡೆಸಿದ ಅಮೋಘ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸಿಕೊಳ್ಳುವ ಸಂದರ್ಭವಾಗಿದೆ. ದೇಶವನ್ನು ಸ್ವತಂತ್ರಗೊಳಿಸುವ ಉದ್ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ನೂರಾರು ಸಾವಿರಾರು ಜನರಿಗೆ ಗೌರವ ಸಲ್ಲಿಸುವ ಒಂದು ಸಂದರ್ಭವಾಗಿದೆ.
ಈ ವರ್ಷದ ಆಗಸ್ಟ್ 15 ಸ್ವಾತಂತ್ರ್ಯದ 70ನೇ ವರ್ಷದ ಆರಂಭವನ್ನು ಸೂಚಿಸುತ್ತದೆ. ಸ್ವತಂತ್ರ ಭಾರತ ಈ ಏಳು ದಶಕಗಳಲ್ಲಿ ಸವೆಸಿದ ಹಾದಿ ಭಾರತದ ಜನತೆ, ಬಡತನ, ಆರ್ಥಿಕ ಮತ್ತು ಸಾಮಾಜಿಕ ಶೋಷಣೆಯಿಂದ ಮುಕ್ತವಾದ ಒಂದು ಗೌರವಯುತ ಜೀವನಕ್ಕಾಗಿ ನಡೆಸಿದ ಅವಿಶ್ರಾಂತ ಅನ್ವೇಷಣೆಯ ಪಯಣವಾಗಿದೆ. ಇದು ಇನ್ನೂ ಪೂರ್ಣಗೊಳ್ಳಬೇಕಾದ ಅನ್ವೇಷಣೆ.
ಸ್ವಾತಂತ್ರ್ಯ ದಿನ ವರ್ಷಾಚರಣೆಗೂ ಮುನ್ನ ಇನ್ನೊಂದು ರೀತಿಯ ವರ್ಷಾಚರಣೆಯನ್ನು ಕಂಡಿದ್ದೇವೆ. ಇದು 1991ರಲ್ಲಿ ಆರಂಭವಾದ ಉದಾರೀಕರಣದ 25ನೇ ವರ್ಷ ಪೂರ್ಣಗೊಂಡ ಸಂದರ್ಭವಾಗಿದೆ. ಇದು ದೊಡ್ಡ ಉದ್ಯಮಗಳು, ಕಾರ್ಪೊರೇಟ್‍ಗಳು ಹಾಗೂ ಆಳುವ ವಲಯಗಳಿಗೆ ಇನೊಂದು ರೀತಿಯ ‘ಸ್ವಾತಂತ್ರ್ಯ’ದ ಅರುಣೋದಯ. ಉದಾರೀಕರಣ ಪ್ರಕ್ರಿಯೆ ಮತ್ತು ನವ-ಉದಾರವಾದಿ ಸುಧಾರಣೆಗಳು ದೇಶದ ಸಂಪತ್ತನ್ನು ಕೊಳ್ಳೆಹೊಡೆಯುವ, ಜನರಿಗೆ ಒದಗಿಸುವ ಮೂಲಭೂತ ಸೇವೆಗಳನ್ನು ಖಾಸಗೀಕರಿಸುವ ‘ಸ್ವಾತಂತ್ರ್ಯ’ದ ಯುಗವನ್ನು ಆರಂಭಿಸಿತು. ಜನತೆಯನ್ನು ಸಂಕಷ್ಟಕ್ಕೆ ತಳ್ಳಿ ಗರಿಷ್ಟ ಲಾಭ ಮಾಡಿಕೊಳ್ಳುವ ‘ಸ್ವಾತಂತ್ರ್ಯ’ದ ಯುಗವನ್ನು ತೆರೆಯಿತು.
ಈ 25 ವರ್ಷಗಳ ಬಲಪಂಥೀಯ ನವ-ಉದಾರವಾದಿ ಸುಧಾರಣೆಗಳು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ತೀವ್ರವಾಗಿ ಹೆಚ್ಚಿಸಿವೆ. ಸ್ವಾತಂತ್ರ್ಯದ ಜನಪ್ರಿಯ ಆಶೋತ್ತರಗಳನ್ನು ಹುಸಿಗೊಳಿಸಿವೆ. ನವ-ಉದಾರವಾದಿ ಸಿದ್ಧಾಂತವು ಸಾಮಾಜಿಕ ಬಂಧವನ್ನು ದುರ್ಬಲಗೊಳಿಸಿದೆ. ಜಾತಿ ಮತ್ತು ಕೋಮುವಾದಿ ಅಸ್ಮಿತೆಯನ್ನು ಇನ್ನಷ್ಟು ತೀವ್ರಗೊಳಿಸಿದೆ. ಹಿಂದುತ್ವವಾದಿ ಶಕ್ತಿಗಳು ಹೆಚ್ಚುವಂತೆ ಮಾಡಿವೆ. ಬೆಲೆಯೇರಿಕೆಯ ಭಾರ, ನಿರುದ್ಯೋಗ ಮತ್ತು ಕಾರ್ಮಿಕರು, ರೈತರು ಹಾಗೂ ದುಡಿಯುವ ಜನತೆಯ ಇತರ ವಿಭಾಗಗಳ ಜೀವನೋಪಾಯಕ್ಕೆ ಅಪಾಯ ಒದಗಿದ್ದು ಅದು ನವ-ಉದಾರವಾದಿ ನೀತಿಗಳನ್ನು ತೀಕ್ಷ್ಣವಾಗಿ ಅನುಸರಿಸಿರುವುದರ ಫಲವಾಗಿದೆ.  ಧಾರ್ಮಿಕ ಅಲ್ಪಸಂಖ್ಯಾತರು, ದಲಿತರು ಮತ್ತು ಆದಿವಾಸಿಗಳ ಮೇಲೆ ಹೆಚ್ಚುತ್ತಿರುವ ದಾಳಿಗಳು ಮತ್ತು ಸಮಾಜದಲ್ಲಿನ ವಿಚ್ಛಿದ್ರಕಾರಿ ಬೆಳವಣಿಗೆಗಳು ಹಿಂದುತ್ವವಾದಿ ಶಕ್ತಿಗಳ ಆಕ್ರಮಣದ ಫಲವಾಗಿದೆ.
ಭಾರತದ ಸ್ವಾತಂತ್ರ್ಯವು 20ನೇ ಶತಮಾನದಲ್ಲಿ ಉತ್ತುಂಗವನ್ನು ತಲುಪಿದ ಸಾಮ್ರಾಜ್ಯಶಾಹಿ-ವಿರೋಧಿ ರಾಷ್ಟ್ರೀಯವಾದದ ಒಂದು ಉತ್ಪನ್ನವಾಗಿದೆ. ಸಾಮ್ರಾಜ್ಯಶಾಹಿ-ವಿರೋಧಿ ಹೋರಾಟದಲ್ಲಿ ಹಿಂದುತ್ವ ಬ್ರಾಂಡ್‍ನ ರಾಷ್ಟ್ರೀಯವಾದದ ಯಾವುದೇ ಪಾತ್ರವಿಲ್ಲ, ಹಾಗೆ ನೋಡಿದರೆ ಅದು ಆ ಹೋರಾಟಕ್ಕೆ ವಿರುದ್ಧವಾಗಿತ್ತು. ಆರ್‍ಎಸ್‍ಎಸ್ ಮತ್ತು ಇತರ ಕೋಮುವಾದಿ ಸಂಘಟನೆಗಳು ಮುಖ್ಯವಾಹಿನಿ ರಾಷ್ಟ್ರೀಯ ಚಳವಳಿಯ ಮುಖ್ಯವಾಹಿನಿಯಿಂದ ಹೊರಗೇ ಇದ್ದವು. ಬಿಜೆಪಿ ನೇತೃತ್ವದ ಸರಕಾರ ಅಧಿಕಾರದಲ್ಲಿರುವ ಈ ಸಂದರ್ಭದಲ್ಲಿ ಆ ಪರಂಪರೆ ಕಣ್ಣಿಗೆ ರಾಚುವಂತೆ ಎದ್ದು ಕಾಣುತ್ತಿದೆ. ಮೋದಿ ಸರಕಾರದ ಎರಡು ವರ್ಷಗಳ ಆಳ್ವಿಕೆಯಲ್ಲಿ ರಾಷ್ಟ್ರೀಯ ಸಮಗ್ರತೆ ಮತ್ತು ವಿದೇಶಾಂಗ ನೀತಿಯ ಸ್ವತಂತ್ರ ನೆಲೆಗಟ್ಟು ಶಿಥಿಲಗೊಂಡಿದೆ. ಅಮೆರಿಕದೊಂದಿಗೆ ಲಾಜಿಸ್ಟಿಕ್ಸ್ ಎಕ್ಸ್‍ಚೇಂಜ್ ಮೆಮೊರಾಂಡಮ್ ಆಫ್ ಅಗ್ರಿಮೆಂಟ್ (ಎಲ್‍ಇಎಂಓಎ-ಮಿಲಿಟರಿ ಸಾಗಣೆ ವಿನಿಮಯೊಪ್ಪಂದ ಪತ್ರ)ಗೆ ಸಹಿ  ಹಾಕಲು ಮೋದಿ ಸರಕಾರ ತುದಿಗಾಲ ಮೇಲೆ ನಿಂತಿದೆ. ಈ ಒಪ್ಪಂದ ಅಮೆರಿಕದ ಸಶಸ್ತ್ರ ಪಡೆಗಳು ಭಾರತೀಯ ಮಿಲಿಟರಿ ವ್ಯವಸ್ಥೆಯೊಳಗೆ ಬರಲು ಹಾಗೂ ಅದನ್ನು ಬಳಸಿಕೊಳ್ಳಲು ಕಾಯಂ ಅವಕಾಶ ಕಲ್ಪಿಸುತ್ತದೆ. ಇದು ದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಒಂದು ಸಾಮ್ರಾಜ್ಯಶಾಹಿ ಶಕ್ತಿಗೆ ಒತ್ತೆಯಿಡುವುದಲ್ಲದೆ ಬೇರೇನೂ ಅಲ್ಲ. 
ಸ್ವಾತಂತ್ರ್ಯ ದಿನವನ್ನು ಆಚರಿಸುವಾಗ, ದೇಶದ ಜನತೆಯ ಮುಖ್ಯ ವಿಭಾಗಗಳು ಬರ್ಬರ ದಬ್ಬಾಳಿಕೆಯನ್ನು ಎದುರಿಸುತ್ತಿದ್ದಾರೆ ಅಥವ ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕಾಗಿದೆ ಎಂಬುದು ವಿಷಣ್ಣಗೊಳಿಸುವ ವಿಚಾರ. ಕಾಶ್ಮೀರಿ ಜನತೆ ಭಾರತೀಯ ಪ್ರಭುತ್ವದ ವಿರುದ್ಧ ಸಾಮೂಹಿಕವಾಗಿ ಬಂಡೆದ್ದಿದೆ.  ದೇಶಾದ್ಯಂತ ದಲಿತರು ಪವಿತ್ರ ಗೋವಿನ ಹೆಸರಿನಲ್ಲಿ ತಮ್ಮ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನು  ಪ್ರತಿಭಟಿಸುತ್ತಿದ್ದಾರೆ. ಒಡಿಶಾದ ಕಂದಮಲ್ ಜಿಲ್ಲೆಯಲ್ಲಿ ಮಾವೋವಾದಿಗಳು ಎಂದು ಹಣೆಪಟ್ಟಿ ಕಟ್ಟಿ ಒಂದು ತಿಂಗಳ ಹಿಂದೆ ಮೂವರು ಮಹಿಳೆಯರು ಹಾಗೂ ಎರಡು ವರ್ಷದ ಒಂದು ಮಗು ಸೇರಿದಂತೆ ಐದು ಆದಿವಾಸಿಗಳನ್ನು ಗುಂಡಿಟ್ಟು ಕೊಂದಿದ್ದು ಪ್ರಭುತ್ವವು ಆದಿವಾಸಿ ಜನರ ಮೇಲೆ ಯುದ್ಧವನ್ನು ಸಾರಿರುವುದನ್ನು ಘೋರವಾಗಿ ನೆನಪಿಸುವಂತಿದೆ. ಅವರ ಭೂಮಿ ಮತ್ತು ಅರಣ್ಯಗಳನ್ನು ಕಿತ್ತುಕೊಳ್ಳಲು ಅದು ಪಣತೊಟ್ಟಂತಿದೆ.
ಈ ರೀತಿಯಾಗಿ ಸ್ವಾತಂತ್ರ್ಯವು ಧ್ವಂಸಕಾರೀ ನವ-ಉದಾರವಾದಿ ಮತ್ತು ಕೋಮುವಾದಿ ಶಕ್ತಿಗಳಿಂದ ಅಪಾಯಕ್ಕೆ ಒಳಗಾಗಿದೆ. ಈ ಬಲಪಂಥೀಯ ಶಕ್ತಿಗಳನ್ನು ಸೋಲಿಸಲು ಪಣ ತೊಡುವುದೇ ಈ ಸ್ವಾತಂತ್ರ್ಯ ದಿನದಂದು ತೆಗೆದುಕೊಳ್ಳಬೇಕಾದ ಶಪಥವಾಗಿದೆ. ಒಂದು ಸ್ವತಂತ್ರ, ಪ್ರಜಾಸತ್ತಾತ್ಮಕ, ಜಾತ್ಯತೀತ ಮತ್ತು ಶೋಷಣೆ-ಮುಕ್ತ ಸಮಾಜದ ಸ್ವಾತಂತ್ರ್ಯ ಹೋರಾಟದ ನೈಜ ಗುರಿಯನ್ನು ಸಾಕಾರಗೊಳಿಸಲು ಇದು ಹಾದಿ ಮಾಡಿಕೊಡಬೇಕು.
ಪ್ರಕಾಶ್ ಕಾರಟ್