ವಿದೇಶಗಳಲ್ಲಿ ಗಾಂಧಿ ಸ್ಮರಣೆ ಮತ್ತು ಸ್ವದೇಶದಲ್ಲಿ??

ಸಂಪುಟ: 
10
ಸಂಚಿಕೆ: 
33
date: 
Sunday, 7 August 2016

ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಎಲ್ಲ್ಲಿ ಅವಮಾನ ಅನುಭವಿಸಿದ್ದರೋ ಅಲ್ಲಿಗೆ ಭೇಟಿ ನೀಡುವ ನಮ್ಮ ಪ್ರಧಾನಮಂತ್ರಿಯವರು, ಕುಡಿಯುವ ನೀರಿನ ಮೇಲೆ ದಲಿತರಿಗೆ ವಿಧಿಸಿದ್ದ ನಿಷೇಧದ ವಿರುದ್ಧ ಭಾರತರತ್ನ ಬಿ. ಆರ್.ಅಂಬೇಡ್ಕರ್ 1927ರಲ್ಲಿ ಮಹಾ ಚಳುವಳಿ ನಡೆಸಿದ್ದ ಮಹಾಡ್‍ಗೆ ಮಾತ್ರ ಭೇಟಿ ನೀಡುವುದಿಲ್ಲ. ಜಾನುವಾರು ಮಾಂಸದ ಹೆಸರಿನಲ್ಲಿ ದಲಿತರ ಮೇಲೆ ಇಂದು ನಡೆಯುತ್ತಿರುವ ದೌರ್ಜನ್ಯ, ಹಿಂಸೆ, ಆಕ್ರಮಣಗಳ ಬಗ್ಗೆ ಚಕಾರವೆತ್ತುತ್ತಿಲ್ಲ.

ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಅವರನ್ನು ರೈಲಿನ ಮೊದಲ ದರ್ಜೆ ಬೋಗಿಯಿಂದ ಮೊದಲ ದರ್ಜೆ ಟಿಕೆಟ್ ಇದ್ದರೂ ಕಪ್ಪು ವರ್ಣೀಯ ಅನ್ನುವ ಕಾರಣಕ್ಕೆ ಹೊರಗೆ ದೂಡಲಾಗಿತ್ತು. ಬಿಳಿಯರ ಕೈಯಲ್ಲಿ ಅವರು ಅವಮಾನ ಅನುಭವಿಸಿದ್ದರು. ಇದನ್ನು ತಾನೆ ವರ್ಣಭೇದ ನೀತಿ ಎಂದು ಕರೆಯುವುದು! ಈ ಕರಾಳ ಶಾಸನದ ವಿರುದ್ಧ ಹೋರಾಟ ಮಾಡಿದ ಅಲ್ಲಿನ ನೆಲ್ಸನ್ ಮಂಡೆಲಾ 25 ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸ ಬೇಕಾಯಿತು. ಅಲ್ಲಿನ ವರ್ಣಭೇದ ನೀತಿ ಮತ್ತು ನಮ್ಮ ಸಮಾಜದಲ್ಲಿನ ಅಸ್ಪೃಶ್ಯತೆಗಳ ನಡುವೆ ಗುಣಾತ್ಮಕ ಭಿನ್ನತೆಯೇನಿಲ್ಲ. ದಕ್ಷಿಣ ಆಫ್ರಿಕಾದ ಪ್ರಥಮ ದರ್ಜೆ ಬೋಗಿಯಿಂದ ಹೊರ ದೂಡಲ್ಪಟ್ಟ ಮೇಲೆ ರೈಲು ನಿಲ್ದಾಣದಲ್ಲಿ ಮೈ ನಡುಗಿಸುವ ಚಳಿಯನ್ನು ಗಾಂಧೀಜಿ ಸಹಿಸಿಕೊಳ್ಳಬೇಕಾಯಿತು. ಅಂತಹ ಉಗ್ರ ಪ್ರಭುತ್ವದ ವಿರುದ್ಧ ಅವರು ಹೋರಾಟ ನಡೆಸಿದರು. ಇದೆಲ್ಲ ಇಂದು ಇತಿಹಾಸ. ವರ್ಣಭೇದ ನೀತಿಯೂ ಇತಿಹಾಸವೇ: ಆದರೆ ಅಸ್ಪೃಶ್ಯತೆ ?!

ಇತ್ತೀಚಿಗೆ ನಮ್ಮ ಪ್ರಧಾನಮಂತ್ರಿ ದಕ್ಷಿಣ ಆಫ್ರಿಕಾ ದೇಶಕ್ಕೆ ಭೇಟಿ ನೀಡಿದ್ದಾಗ ಮರೆಯದೆ ಗಾಂಧಿಜಿಯವರನ್ನು ಯಾವ ರೈಲು ನಿಲ್ದಾಣದಲ್ಲಿ ಪ್ರಥಮ ದರ್ಜೆ ಬೋಗಿಯಿಂದ ಹೊರಹಾಕಲಾಗಿತ್ತೋ ಅಲ್ಲಿಗೆ ತೀರ್ಥಯಾತ್ರೆಯೋಪಾದಿಯಲ್ಲಿ ಭೇಟಿ ನೀಡಿದ್ದರು. ಅಲ್ಲಿ ಗಾಂಧೀಜಿಗೆ ಅವರು ಶ್ರದ್ಧಾಂಜಲಿ ಅರ್ಪಿಸಿದ್ದರು. ಅದೊಂದು ಭಾವನಾತ್ಮಕ ಸಂಗತಿಯಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾಂಧೀಜಿ ಮತ್ತು ಅವರ ಜೀವನದ ಘಟನೆಗಳು ಜನಜನಿತವಾಗಿರುವುದು ಸರಿಯಷ್ಟೆ! ಗಾಂಧೀಜಿ ದಕ್ಷಿಣ ಆಫ್ರಿಕದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಟ ನಡೆಸಿದರು ಮತ್ತು ಭಾರತದಲ್ಲಿ ಅಸ್ಪೃಶ್ಯತೆಯ ವಿರುದ್ಧ ಹೋರಾಟ ನಡೆಸಿದ್ದರು. ಅವರದ್ದು ಪ್ರಧಾನವಾಗಿ ಅಸಮಾನತೆಯ ವಿರುದ್ಧದ ಚಳುವಳಿಯಾಗಿತ್ತು. ಈ ಬಗೆಯಲ್ಲಿ  ಗಾಂಧೀಜಿಗೆ ಸಂಬಂಧಿಸಿದ ವಿದೇಶಗಳಲ್ಲಿನ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಜಾಗತಿಕ ಮಟ್ಟದಲ್ಲಿ ಜನರ ಮೆಚ್ಚುಗೆಯನ್ನು ಪಡೆದುಕೊಳ್ಳಬಹುದು.

ಆದರೆ ಇಂದು ಗಾಂಧೀಜಿ ಅವರನ್ನು ನಮ್ಮ ರಾಜಕೀಯ ನೇತಾರರು ವಿದೇಶಗಳಲ್ಲಿ ಹೇಗೆ ಗೌರವಿಸುತ್ತಾರೋ, ಅವರಿಗೆ ಹೇಗೆ ಶ್ರದ್ಧಾಂಜಲಿ ಅರ್ಪಿಸುತ್ತಾರೋ ಅದೇ ರೀತಿಯಲ್ಲಿ ಭಾರತದಲ್ಲಿ ಅವರಿಗೆ ಗೌರವ ಸಲ್ಲಿಸುತ್ತಿಲ್ಲ. ಅವರನ್ನು ಕೊಂದವರ ಹೆಸರಿನಲ್ಲಿ ಗುಡಿಗಳನ್ನು ಕಟ್ಟುವ ಪ್ರಯತ್ನ ನಡೆಯುತ್ತಿದೆ. ಗಾಂಧೀಜಿ ಬಗ್ಗೆ ನಮ್ಮದು ಯಾಂತ್ರಿಕ ಅಭಿಮಾನವಾಗಿದೆಯೆ? ಏಕೆಂದರೆ ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿ ಇಂದು ಇತಿಹಾಸದ ಭಾಗವಾಗಿ ಬಿಟ್ಟಿದೆ. ಅದರ ಆಚರಣೆ ಇಂದು ಅಲ್ಲಿ ಕಂಡು ಬರುವುದಿಲ್ಲ. ಅದನ್ನು ತೊಡೆದು ಹಾಕುವುದು ಆಫ್ರಿಕನ್ನರಿಗೆ ಸಾಧ್ಯವಾಗಿದೆ. ಆದರೆ ನಮ್ಮ ಸಮಾಜವನ್ನು ಶತ-ಶತಮಾನಗಳಿಂದ ಕಾಡುತ್ತಿರುವ ಅಸ್ಪೃಶ್ಯತೆಯನ್ನು ತೊಡೆದು ಹಾಕುವುದು ನಮಗೆ ಸಾಧ್ಯವಾಗಿಲ್ಲ. ಅಸ್ಪೃಶ್ಯತೆ ಅನ್ನುವುದು ದಲಿತರ ಬಾಳನ್ನು ಮೂರಾಬಟ್ಟೆ ಮಾಡಿದೆ. ಆದರೆ ನಮ್ಮ ಸನಾತನಿಗಳು ‘ದಲಿತ’ ಅನ್ನುವ ಪದದ ಬಳಕೆಯನ್ನು ವಿರೋಧಿಸುತ್ತಿದ್ದಾರೆ. ಅಮೆರಿಕೆಯ ಶಾಲಾ ಪಠ್ಯಗಳಲ್ಲಿ ಭಾರತ ಕುರಿತ ಪಾಠಗಳಲ್ಲಿ ಬಳಸಿರುವ ದಲಿತ ಪದವನ್ನು ತೆಗೆದು ಹಾಕಬೇಕೆಂದು ಅಲ್ಲಿನ ಸನಾತನಿಗಳ ಗುಂಪು ಪ್ರಯತ್ನ ನಡೆಸುತ್ತಿದೆ. ಅಲ್ಲಿ ಪ್ರಗತಿಪರ ಭಾರತೀಯರ ಗುಂಪು ಅದನ್ನು ವಿಫಲಗೊಳಿಸಿದೆ ಅನ್ನುವುದು ಸಮಾಧಾನದ ಸಂಗತಿಯಾಗಿದೆ.

ಮೋದಿ ಮಹಾಡ್ ಗೆ ಭೇಟಿ ನೀಡುವರೇ?

ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಯಾವ ಬಗೆಯ ಅವಮಾನವನ್ನು ಅನುಭವಿಸಿದ್ದರೋ ಆ ಸ್ಥಳಕ್ಕೆ ನಮ್ಮ ಪ್ರಧಾನಮಂತ್ರಿಯವರು ಭೇಟಿ ನೀಡಿ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಯನ್ನು ಗಳಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಗಾಂಧೀಜಿ ಬಗ್ಗೆ ತಮಗೆ ಇರುವ ಅಭಿಮಾನವನ್ನು ಪ್ರದರ್ಶಿಸುತ್ತಿದ್ದಾರೆ. ಇದೆಲ್ಲ ಅತ್ಯಂತ ಸ್ವಾಗತಾರ್ಹವಾದ ಸಂಗತಿಗಳಾಗಿವೆ. ಇದು ಒಂದು ರೀತಿಯಲ್ಲಿ ಸಾಮಾಜಿಕ ಅವಮಾನದ ವಿರುದ್ಧ ನಮ್ಮ ಪ್ರತಿಭಟನೆಯನ್ನು ತೋರಿಸುವ ಕ್ರಮದಂತೆ ಕಾಣುತ್ತದೆ. ಇದೆಲ್ಲ ಸರಿ. ಆದರೆ ಪ್ರಶ್ನೆ ಇದಲ್ಲ.

ವಿದೇಶಗಳಲ್ಲಿ ಸಮಾನತೆಯ ಬಗ್ಗೆ, ಸಾಮಾಜಿಕ ಅವಮಾನದ ವಿರುದ್ಧ, ಗಾಂಧೀಜಿ ಬಗ್ಗೆ ಅಭಿನಂದನೀಯ ರೀತಿಯಲ್ಲಿ ಪ್ರತಿಕ್ರಿಯಿಸುವ ನಾವು ನಮ್ಮದೇ ಸಮಾಜದಲ್ಲಿ ನಡೆಯುತ್ತಿರುವ ದಲಿತರ ಅವಮಾನದ ಬಗ್ಗೆ, ಅವರ ಮೇಲೆ ಸನಾತನವಾದಿಗಳಿಂದ ನಡೆಯುತ್ತಿರುವ ಹಿಂಸೆ, ದೌರ್ಜನ್ಯದ ಬಗ್ಗೆ, ಅಸಮಾನತೆಯ ಬಗ್ಗೆ, ದೈಹಿಕ ಆಕ್ರಮಣದ ಬಗ್ಗೆ ಮಾತ್ರ ಮೌನವಾಗಿದ್ದೇವೆ, ಏಕೆ? ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಎಲ್ಲಿ ಅವಮಾನ ಅನುಭವಿಸಿದ್ದರೋ ಅಲ್ಲಿಗೆ ಭೇಟಿ ನೀಡುವ ನಮ್ಮ ಪ್ರಧಾನಮಂತ್ರಿಯವರು, ಕುಡಿಯುವ ನೀರಿನ ಮೇಲೆ ದಲಿತರಿಗೆ ವಿಧಿಸಿದ್ದ ನಿಷೇಧದ ವಿರುದ್ಧ ಭಾರತರತ್ನ ಬಿ. ಆರ್.ಅಂಬೇಡ್ಕರ್ 1927ರಲ್ಲಿ ಮಹಾ ಚಳುವಳಿ ನಡೆಸಿದ್ದ ಮಹಾಡ್‍ಗೆ ಮಾತ್ರ ಭೇಟಿ ನೀಡುವುದಿಲ್ಲ. ಜಾನುವಾರು ಮಾಂಸದ ಹೆಸರಿನಲ್ಲಿ ದಲಿತರ ಮೇಲೆ ಇಂದು ನಡೆಯುತ್ತಿರುವ ದೌರ್ಜನ್ಯ, ಹಿಂಸೆ, ಆಕ್ರಮಣಗಳ ಬಗ್ಗೆ ಚಕಾರವೆತ್ತುತ್ತಿಲ್ಲ. ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿ ರೋಹಿತ್ ವೆಮುಲನ ಅತ್ಮಹತ್ಯೆ ಇರಬಹುದು, ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಯ್ಯನ ಪ್ರಕರಣ ಇರಬಹುದು, ಗುಜರಾತಿನಲ್ಲಿ ದಲಿತ ಯುವಕರ ಮೇಲೆ ಗೋರಕ್ಷಣಾ ಪಡೆ ನಡೆಸಿದ ಪೈಶಾಚಿಕ ಕೃತ್ಯವಿರಬಹುದು--- ಇವೆಲ್ಲ ಏನನ್ನು ತೋರಿಸುತ್ತವೆ?

ಈಗಾಗಲೆ ಹೇಳಿದಂತೆ ಗಾಂಧೀಜಿ ಅವರ ಬದುಕು, ಬರಹ, ಸಂದೇಶ ಜಾಗತಿಕ ಸಂಗತಿಗಳಾಗಿವೆ. ಅವರ ಹೆಸರನ್ನು ಹೇಳಿದರೆ ಜಗತ್ತಿನಲ್ಲಿ ಎಲ್ಲರಿಗೂ ಅರ್ಥವಾಗುತ್ತದೆ. ಅದಕ್ಕಾಗಿ ನಮ್ಮ ರಾಜಕೀಯ ಧುರೀಣರು ವಿದೇಶಗಳಲ್ಲಿ ಗಾಂಧೀಜಿ ಹೆಸರನ್ನು ಪಠಿಸುತ್ತಾರೆ. ಆದರೆ ಇಂದಿನ ಭಾರತದಲ್ಲಿ ಆಳುವ ವರ್ಗವೇನಿದೆ ಅದು ಯಾರನ್ನು ತಮ್ಮ ಗುರುಗಳೆಂದು ಗುರುತಿಸಿಕೊಳ್ಳುತ್ತಿದೆಯೋ, ಯಾವ ಸಂಘಟನೆಯ ಜೊತೆಯಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತದೆಯೋ ಅದರ ಲೀಡರುಗಳು ವಿದೇಶಗಳಲ್ಲಿ ಅಪರಿಚಿತರು. ಅವರುಗಳ ಹೆಸರನ್ನು ವಿದೇಶಗಳಲ್ಲಿ ನಮ್ಮ ಸನಾತನಿಗಳೂ ಹೇಳುವುದು ಸಾಧ್ಯವಿಲ್ಲ. ಅನಿವಾರ್ಯವಾಗಿ ಅವರು ಗಾಂಧೀಜಿ ಹೆಸರನ್ನು ಬಳಸಿಕೊಳ್ಳುತ್ತಾರೆ. ಅವರಿಗೆ ಗಾಂಧೀಜಿ ಅವರ ಹೆಸರನ್ನು ಹೇಳದೆ ಅನ್ಯ ಮಾರ್ಗವಿಲ್ಲ. ಆದರೆ ವಿದೇಶಗಳಲ್ಲಿ ಅವರ ಹೆಸರನ್ನು ಜಪ ಮಾಡುವ, ಅವರ ಅವಮಾನ ಅನುಭವಿಸಿದ್ದ ಸ್ಥಳಗಳಿಗೆ ಭೇಟಿ ನೀಡುವ ಜನರು ದೇಶದಲ್ಲಿ ಗಾಂಧೀಜಿ ಮೌಲ್ಯಗಳ ಬಗ್ಗೆ ಮಾತನಾಡುವುದಿಲ್ಲ. ಇಂದು ಆಳುವ ವರ್ಗಕ್ಕೆ ಗಾಂಧೀಜಿ ಹೆಸರು ಮುಖ್ಯವೇ ವಿನಾ ಅವರು ಬಿತ್ತಿ ಹೋಗಿರುವ ಮೌಲ್ಯಗಳಲ್ಲ. ಅದರಲ್ಲೂ ಇವರಿಗೆ ಗಾಂಧೀಜಿ ಸ್ವದೇಶಕ್ಕಿಂತ ವಿದೇಶಗಳಲ್ಲಿ ಮಾತ್ರ ಮುಖ್ಯರಾಗಿರುವಂತೆ ಕಾಣುತ್ತಿದೆ. ಇಂದು ನಮ್ಮ ಸಮಾಜದಲ್ಲಿ ಅಸಮಾನತೆಗೆ ಪೋಷಣೆ ದೊರೆಯುತ್ತಿದೆಯೇ ವಿನಾ ಸಮಾನತೆಗಲ್ಲ. ಮಾನವೀಯತೆಯು ಕೂಡ ಸನಾತನತೆಯ ಮುಂದೆ ಅರ್ಥರಹಿತ ಸಂಗತಿಯಾಗಿ ಬಿಟ್ಟಿದೆ.

ದಲಿತರ ರಕ್ಷಣೆಗೆ ಮ್ಯಾಕ್ಸಿಮಮ್ ಗೌವರ್ನಮೆಂಟಿನ ಅಗತ್ಯವಿದೆ 

ಗಾಂಧೀಜಿಗೆ ಯಾವುದು ಅತ್ಯಂತ ಅಭಿಮಾನದ ಸಂಗತಿಯಾಗಿತ್ತೋ ಆ ದಲಿತರ ಮೇಲೆ ನಮ್ಮ ಸಮಾಜದಲ್ಲಿ ಇಂದು ಅವ್ಯಾಹತವಾಗಿ ದೌರ್ಜನ್ಯ ಏನು ನಡೆಯುತ್ತಿದೆ ಅವುಗಳ ಬಗ್ಗೆ ಆಳುವ ವರ್ಗ ಚರ್ಚೆ ಮಾಡಲು ಸಿದ್ಧವಿಲ್ಲ ಮತ್ತು ಅಂತಹ ದೌರ್ಜನ್ಯವೆಸಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದರಲ್ಲೂ ಮೀನಮೇಷ ಎಣಿಸಲಾಗುತ್ತಿದೆ. ಜಾನುವಾರುಗಳ ಪ್ರಾಣದ ಮುಂದೆ ದಲಿತರ ಜೀವಕ್ಕೆ ಯಾವುದೇ ಬೆಲೆಯಿಲ್ಲದಂತಾಗಿದೆ. ಮಹಾರಾಷ್ಟ್ರದಲ್ಲಿ ವಾಶಿಮ್ ಜಿಲ್ಲೆಯ ಕೂಲಂಬೇಶ್ವರ ಎಂಬ ಹಳ್ಳಿಯಲ್ಲಿ ದಲಿತ ಹೆಣ್ಣು ಮಗಳು ಅನುಭವಿಸಿದ್ದೇನು? ಆಕೆಗೆ ಊರಿನ ಬಾವಿಯಲ್ಲಿ ಕುಡಿಯುವ ನೀರನ್ನು ಸೇದಲು ಬಿಡಲಿಲ್ಲ. ಈ ಅವಮಾನವನ್ನು ಸಹಿಸಲಾಗದೆ ಆಕೆಯ ಗಂಡ ಏಕಾಂಗಿಯಾಗಿ ಬಾವಿಯನ್ನು ತೋಡಿ ದಲಿತರಿಗೆಲ್ಲ ನೀರನ್ನು ಒದಗಿಸುವ ಕೆಲಸ ಮಾಡಿದ. ಈ ಬಗೆಯಲ್ಲಿ ದಲಿತ ಹೆಣ್ಣು ಮಗಳಿಗೆ ನೀರನ್ನು ನಿಷೇಧಿಸಿದ ಗ್ರಾಮದ ಉನ್ನತ ವರ್ಗದ ಜನರ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಪ್ರತಿಯಾಗಿ ಜಿಲ್ಲಾಡಳಿತವು ಏಕಾಂಗಿಯಾಗಿ ಬಾವಿ ತೋಡಿದ ದಲಿತ ಯುವಕನಿಗೆ ಗೌರವ ಸಲ್ಲಿಸುವ ಕೆಲಸ ಮಾಡಿದೆ. ಇದರ ಒಳಾರ್ಥವೇನು? ಇದರ ಒಳಾರ್ಥವೆಂದರೆ ದಲಿತರು ತಮ್ಮ ಸಮಸ್ಯೆಗಳನ್ನು ಇನ್ನು ಮೇಲೆ ತಾವೇ ಬಗೆಹರಿಸಿಕೊಳ್ಳಬೇಕು ಎಂಬುದಾಗಿದೆ. ಅಸ್ಪೃಶ್ಯತೆಯು ಇಂದು ಶಿಕ್ಷಾರ್ಹವಾಗಿ ಉಳಿದಿಲ್ಲ. ಅದು ಶಾಸನದಲ್ಲಿ ಶಿಕ್ಷಾರ್ಹ. ಆದರೆ ಆಚರಣೆಯಲ್ಲಿ ಅದರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಆಳುವ ವರ್ಗ ಸಿದ್ಧವಿಲ್ಲ. ಈ ರೀತಿಯಲ್ಲಿ ಅಮಾನವೀಯ ಆಚರಣೆಯಾದ ಅಸ್ಪೃಶ್ಯತೆಗೆ ಒಂದು ರೀತಿಯಲ್ಲಿ ಕುಮ್ಮಕ್ಕು ಇಂದು ದೊರೆಯುತ್ತಿದೆ.

ಗೋವುಗಳ ರಕ್ಷಣೆಯು ಮುಖ್ಯ. ಆದರೆ ಇಂದು ನಾವು ಒಪ್ಪಿಕೊಂಡಿರುವ ಅಭಿವೃದ್ಧಿ ಮಾದರಿಯಲ್ಲಿ ಗೋವುಗಳಿಗೆ ಎಲ್ಲಿದೆ ಸ್ಥಾನ! ನಮ್ಮ ಸರ್ಕಾರ ಇಂದು ಬೃಹತ್ ಪ್ರಮಾಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯನ್ನು ಜಾರಿಗೊಳಿಸಿದೆ. ಗಾಂಧೀಜಿ ‘ಹಳ್ಳಿಗಳಿಗೆ ಹೋಗೋಣ’ ಎಂದು ಕರೆ ನೀಡಿದ್ದರೆ ಇಂದು ನಮ್ಮ ಸರ್ಕಾರ ‘ನಗರಗಳಿಗೆ ನಡೆಯಿರಿ’ ಎಂದು ಕರೆ ಕೊಡುತ್ತಿರುವಂತೆ ಕಾಣುತ್ತದೆ. ನಮ್ಮ ಕೇಂದ್ರ ಸರ್ಕಾರವು ಅನುಸರಿಸುತ್ತಿರುವ ‘ಮಿನಿಮಮ್ ಗೌರ್ವನಮೆಂಟ್: ಮ್ಯಾಕ್ಸಿಮಮ್ ಗೌರ್ವನೆನ್ಸ್' ನೀತಿಯಲ್ಲಿ ದಲಿತರ ರಕ್ಷಣೆ ಹೇಗೆ ಸಾಧ್ಯ? ಇಂದು ಸರ್ಕಾರವಿರುವುದು ಡಿಜಿಟಲ್ ಇಂಡಿಯಾಕ್ಕೆ, ಸ್ಟ್ರಾಟ್ ಅಫ್‍ಗಳಿಗೆ, ಸ್ಟಾಂಡ್ ಅಪ್‍ಗಳಿಗೆ ಎಂಬುದು ರಹಸ್ಯವಾಗೇನು ಉಳಿದಿಲ್ಲ. ಇಂದು ನಾವು ಅತ್ಯಂತ ಹೆಮ್ಮೆಯಿಂದ ಕಟ್ಟುತ್ತಿರುವ ಸ್ಮಾರ್ಟ್ ಸಿಟಿಗಳಲ್ಲಿ ಗೋವುಗಳಿಗೆ ಎಲ್ಲಿದೆ ಸ್ಥಾನ? ಸದರಿ ಯೋಜನೆಯಲ್ಲಿ ಗೋವುಗಳ ಸಾಕಣಿಕೆಗೆ ಅವಕಾಶ ನೀಡಿದಂತೆ ಕಾಣುವುದಿಲ್ಲ. ಗೋರಕ್ಷಣೆ ಅನ್ನುವುದು ದಲಿತರನ್ನು, ಅಲ್ಪಸಂಖ್ಯಾತರನ್ನು ದಮನ ಮಾಡಲು ಇರುವ ಆಯುದದಂತೆ ಮಾತ್ರ ಕಾಣುತ್ತಿದೆ. ಈ ಬಗೆಯ ದ್ವಂದವನ್ನು ನಾವು ತೊರೆಯಬೇಕಾಗಿದೆ. ವಿದೇಶಗಳಲ್ಲಿ ಒಂದು ಬಗೆಯ ಮಾತು, ಸ್ವದೇಶದಲ್ಲಿ ಮತ್ತೊಂದು ಬಗೆಯ ನಡೆ ಸರಿಯಲ್ಲ. ಈ ದೇಶದ ಸರಿಸುಮಾರು 25 ಕೋಟಿ ದಲಿತರನ್ನು ಕಡೆಗಣಿಸಿ, ಅವರನ್ನು ದಮನ ಮಾಡಿ ದೇಶವನ್ನು ಕಟ್ಟುವುದು ಸಾಧ್ಯವಿಲ್ಲ.

‘ಸಬ್ ಕಾ ಸಾತ್: ಸಬ್ ಕಾ ವಿಕಾಸ್’ ಅನ್ನುವುದು ಬರಿ ಘೋಷಣೆಯಾಗಬಾರದು. ಈ ಹಿಂದೆ ಇಂತಹ ಅದೆಷ್ಟೋ ಘೋಷಣೆಗಳನ್ನು ನಾವು ಕೇಳಿದ್ದೇವೆ. ಉದಾಹರಣೆಗೆ ಗರೀಬಿ ಹಟಾವೋ ಘೋಷಣೆ ಕೂಗಿ ನಲವತೈದು ವರ್ಷಗಳಾದವು. ಆದರೆ ಗರೀಬಿಯನ್ನು ಅಳಿಸಿ ಹಾಕುವುದು ನಮಗೆ ಸಾಧ್ಯವಾಗಿಲ್ಲ. ಘೋಷಣೆಗಳಿಂದ, ಉದ್ವೇಗದ-ಉನ್ಮಾದದ ಭಾಷಣಗಳಿಂದ, ಪಾರ್ಲಿಮೆಂಟಿನ ದ್ವಾರದ ಬಳಿ ಸಾಷ್ಟಾಂಗ ನಮಸ್ಕಾರ ಮಾಡುವುದರಿಂದ ಬಡತನದ ನಿವಾರಣೆ, ಅಸ್ಪೃಶ್ಯತೆಯ ನಿವಾರಣೆ, ದಲಿತರ ರಕ್ಷಣೆ ಸಾಧ್ಯವಿಲ್ಲ. ನಮ್ಮ ಸಮಾಜವು ‘ಮಿನಿಮಮ್ ಗೌವರ್ನಮೆಂಟ್, ಮ್ಯಾಕ್ಸಿಮಮ್ ಗೌವರ್ನೆನ್ಸ್’ ನೀತಿಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಹಂತಕ್ಕೆ ಬಂದಿಲ್ಲ. ನಮ್ಮಲ್ಲಿ ದಲಿತರ ರಕ್ಷಣೆಗೆ ಮ್ಯಾಕ್ಸಿಮಮ್ ಗೌವರ್ನಮೆಂಟಿನ ಅಗತ್ಯವಿದೆ. ಸಾಮಾಜಿಕ ನ್ಯಾಯವು ನಮ್ಮ ಅಭಿವೃದ್ಧಿ ಮಾದರಿಯ ಮೂಲಾಧಾರವಾಗ ಬೇಕಾಗಿದೆ.

ಪ್ರೊ. ಟಿ.ಆರ್.ಚಂದ್ರಶೇಖರ