ಬೀಡಿ ಕಾರ್ಮಿಕರ ತುಟ್ಟಿಭತ್ತೆ ನೀಡದಿದ್ದರೆ ಅನಿರ್ಧಿಷ್ಟ ಧರಣಿ-ಸಿಐಟಿಯು ನಿರ್ಧಾರ

Friday, 1 July 2016

ಬೆಳ್ತಂಗಡಿ, ಜುಲೈ 01: 2015-16 ನೇ ಸಾಲಿನ ತುಟ್ಟಿಭತ್ತೆಯನ್ನು ಬೀಡಿ ಕಾರ್ಮಿಕರಿಗೆ ನೀಡಲು ಒಂದು ವರ್ಷ ಮಾಲಕರಿಗೆ ವಿನಾಯಿತಿ ನೀಡಿದ ಸರಕಾರ, ಈ ವರ್ಷ ಕೂಡಾ ಬೀಡಿ ಮಾಲಕರು ತುಟ್ಟಿಭತ್ತೆ ಪಾವತಿ ಮಾಡದಿರುವುದನ್ನು ಪ್ರಶ್ನಿಸದೇ ಮೌನ ಬೆಂಬಲ ನೀಡುತ್ತಿದೆ ಎಂದು ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರ ಸಂಘದ ಪ್ರಧಾನ ಕಾರ್ಯದರ್ಶಿ ಈಶ್ವರಿ ಪದ್ಮುಂಜ ಆರೋಪಿಸಿದರು.

ಅವರು ಇಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ನಡೆದ ಬೀಡಿ ಕಾರ್ಮಿಕರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, 2015-16 ನೇ ಸಾಲಿನಲ್ಲಿ ಹೆಚ್ಚುವರಿ ಗ್ರಾಹಕ ಸೂಚ್ಯಾಂಕ 425 ಅಂಶಗಳಿಗೆ 3 ಪೈಸೆಯಂತೆ 1000 ಬೀಡಿಗೆ ರೂ. 12-75 ರಂತೆ ನೀಡಬೇಕಾದ  ತುಟ್ಟಿಭತ್ತೆಯನ್ನು 1 ವರ್ಷ ಪಾವತಿಸುವುದಕ್ಕೆ ವಿನಾಯಿತಿ ನೀಡಿ ಬೀಡಿ ಮಾಲಕರಿಗೆ ಸಹಾಯ ಮಾಡಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರವು ಕಳೆದ ವರ್ಷ ಆದೇಶ ನೀಡಿತ್ತು. ಇದು ಕಾರ್ಮಿಕರಿಗೆ ಕಾಂಗ್ರೆಸ್ ಮಾಡಿದ ಮಹಾ ದ್ರೋಹ ಎಂದ ಅವರು, ಸರಕಾರದ ಈ ಒಂದು ವರ್ಷದ ವಿನಾಯತಿಯ ದುರ್ಲಾಭ ಪಡೆದ, ಬೀಡಿ ಮಾಲಕರು ಈ ವರ್ಷವೂ ಸದ್ರೀ ತುಟ್ಟಿಭತ್ತೆಯನ್ನು ಪಾವತಿಸುತ್ತಿಲ್ಲ.

2016-17 ನೇ ಸಾಲಿನಲ್ಲಿ ಹೆಚ್ಚುವರಿ ಗ್ರಾಹಕ ಸೂಚ್ಯಾಂಕ 332 ಅಂಶಗಳಿಗೆ 1000 ಬೀಡಿಗೆ ರೂ. 9.96 ರಷ್ಟು ತುಟ್ಟಿಭತ್ತೆ ಏರಿಕೆಯಾಗಿದೆ ಒಟ್ಟು 1000 ಬೀಡಿಗೆ ರೂ.22-71 ರಂತೆ ಏರಿಕೆ ವೇತನ ಸಿಗಬೇಕಿದ್ದು ಅದರಂತೆ ಪ್ರಸ್ತುತ ಬೀಡಿ ಕಾರ್ಮಿಕರಿಗೆ 1000 ಬೀಡಿ ಸುತ್ತಿದರೆ ರೂ. 173-59 ವೇತನ ಪಾವತಿಸಬೇಕು. ಅದೇ ರೀತಿ ಕೇಂದ್ರದ ನರೇಂದ್ರಮೋದಿ ಸರಕಾರ ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗದ ವ್ಯವಸ್ಥೆ ಮಾಡದೆ ತಂಬಾಕು ನಿಷೇದ, ನಿಯಂತ್ರಣ ಎನ್ನುತ್ತಾ ಬೀಡಿ ಉದ್ಯಮವನ್ನೇ ನಾಶ ಮಾಡಲು ಹೊರಟಿದೆ.  ಇದು ಹಿಂದೂ ರಕ್ಷಕರೆಂದು ಬೊಗಳೇ ಬಿಡುವ ಬಿಜೆಪಿಯು ಕಾರ್ಮಿಕರಿಗೆ ಮಾಡುವ ದೊಡ್ಡ ದ್ರೋಹ ಎಂದರು. ಕೆಲವರ ಆರೋಗ್ಯ ರಕ್ಷಣೆ ಎಂದು ಕೋಟ್ಯಾಂತರ ಬೀಡಿ ಉದ್ದಿಮೆ ಕಾರ್ಮಿಕರ ಆರೋಗ್ಯ ಕೆಡಿಸುವುದು ಸರಿಯಲ್ಲ ಎಂದು ಅವರು ಹೇಳಿದರು. ಆಗೋಸ್ತು 10 ರ ಒಳಗೆ ತುಟ್ಟಿಭತ್ತೆ ಪಾವತಿ ಆಗದಿದ್ದರೆ ಹಾಗೂ ತಂಬಾಕು ನಿಯಂತ್ರಣ ಸದ್ಯಕ್ಕೆ ನಿಲ್ಲಿಸದಿದ್ದರೆ ಬೆಳ್ತಂಗಡಿ ತಾಲೂಕು ಕಚೇರಿ ಎದುರು 10-08-2016 ರಿಂದ ತಾಲೂಕಿನ ಬೀಡಿ ಕಾರ್ಮಿಕರು ಅನಿರ್ಧಿಷ್ಟ ಧರಣಿ ನಡೆಸಲಿದ್ದಾರೆ ಎಂದು ಅವರು ಎಚ್ಚರಿಸಿದರು.

ಹೋರಾಟದಲ್ಲಿ ಸಂಘದ ಅದ್ಯಕ್ಷರಾದ ಜಯರಾಮ ಮಯ್ಯ, ಉಪಾದ್ಯಕ್ಷರುಗಳಾದ ನೆಬಿಸಾ, ಪುಷ್ಪಾ ಸಹಕಾರ್ಯದರ್ಶಿಗಳಾದ ಮೀನಾಕ್ಷಿ, ಜಯಶ್ರೀ, ಸಿಐಟಿಯು ಜಿಲ್ಲಾ ಸಮಿತಿ ಸದಸ್ಯರಾದ ಲೋಕೇಶ್ ಕುದ್ಯಾಡಿ, ವೇಣೂರು ವಲಯ ಬೀಡಿ ಕೆಲಸಗಾರ ಸಂಘದ ಮುಖಂಡರಾದ ಜಯಂತಿ, ಸಿಐಟಿಯು ಕಾರ್ಯಕರ್ತರುಗಳಾದ ಇಂದಿರಾ, ಕುಸುಮಾವತಿ, ವೀಣಾ, ದಿನೇಶ್ ಮಾಚಾರು ಮೊದಲಾದವರು ಉಪಸ್ಥಿತರಿದ್ದರು. ಬೇಡಿಕೆಗಳ ಬಗ್ಗೆ ಸರಕಾರಕ್ಕೆ ಮನವಿ ನೀಡಲಾಯಿತು. ಕೊನೆಗೆ ವೇಣೂರು ಸಂಘದ ಪ್ರಧಾನ ಕಾರ್ಯದರ್ಶಿ ರೋಹಿಣಿ ವಂದಿಸಿದರು.