ಬರಹಗಾರನ ಪುನರ್ಜನ್ಮ

ಸಂಪುಟ: 
10
ಸಂಚಿಕೆ: 
30
date: 
Sunday, 17 July 2016
Image: 

“ಈ ಬರಹಗಾರನಿಗೆ ಪುನರ್ಜನ್ಮ ನೀಡಿ ಅವನು ತಾನು ಯಾವುದನ್ನು ಸಮರ್ಥವಾಗಿ ಮಾಡಬಲ್ಲನೋ, ಅಂದರೆ ಬರೆಯುವುದನ್ನು, ಅವನು ಮಾಡುವಂತಾಗಲಿ” ಎಂದು ಮದ್ರಾಸ್ ಹೈಕೋರ್ಟ್ ತೀರ್ಪಿತ್ತಿದೆ. ಈ ತೀರ್ಪನ್ನು ಓದಿದ ಪೆರುಮಾಳ್ ‘ನಾನು ಮತ್ತೆ ಬರೆಯುತ್ತೇನೆ’ ಎಂದು ಹೇಳಿದರೆಂದು ಸುದ್ದಿ ಬಂದಿದೆ. ಆದರೆ ಅವರು ಬರೆಯುವುದರಿಂದ Law and Order ಸಮಸ್ಯೆ ಉಂಟಾಗಬಹುದೆಂದು ಸರಕಾರವು ಮತ್ತೆ “ಶಾಂತಿ ಸಂಧಾನ”ದಲ್ಲಿ ತೊಡಗಬಹುದೇ?

ಇತ್ತೀಚೆಗೆ ಒಂದು ಅಪರೂಪದ ತೀರ್ಪು ಭಾರತದ ಸಾಹಿತ್ಯವಲಯದಲ್ಲಿ ನಾಗರೀಕ ಸಮುದಾಯದಲ್ಲಿ ಸಂಚಲನವನ್ನು ಉಂಟು ಮಾಡಿದೆ. ಜೊತೆಗೆ ಒಂದಿಷ್ಟು ಭರವಸೆಯನ್ನು ಹುಟ್ಟಿಸಿದೆ- ಅದೂ ಈ ನಿರಾಸೆಯ ಕಾಲದಲ್ಲಿ.

ತಮಿಳು ಬರಹಗಾರ ಪೆರುಮಾಳ್ ಅವರು ತಮ್ಮ ಒಂದು ಕಾದಂಬರಿಯಲ್ಲಿ ಅವರ ಪ್ರಾಂತ ಹಾಗೂ ಊರಿನಲ್ಲಿ ನಡೆಯುವ ಒಂದು ಆಚರಣೆಯನ್ನು ವರ್ಣಿಸಿದ್ದರು. ಇದು ಪ್ರಕಟವಾಗಿ ಆನಂತರ ಇಂಗ್ಲಿಷ್ಗೆ ಅನುವಾದಗೊಂಡು ವರ್ಷಗಳ ನಂತರ ಈ ವರ್ಣನೆಯು ಸ್ಥಳೀಯ ಸಂಸ್ಕೃತಿ ಹಾಗೂ ಮಹಿಳೆಯರಿಗೆ ಅವಮಾನಕರವಾಗಿದೆಯೆಂದು ವಿವಾದವನ್ನು ಸೃಷ್ಠಿಸಿ ಅದು ಇತ್ತೀಚಿನ ವರ್ಷಗಳಲ್ಲಿ ತಪ್ಪದೇ ಆಗುತ್ತಿರುವಂತೆ ಹಿಂಸಾಪರವಾದ ಸ್ವರೂಪವನ್ನು ಪಡೆದುಕೊಂಡಿತು. ಇದು ನಮ್ಮ ದೇಶದಲ್ಲಿ ಮತ್ತೆ ಮತ್ತೆ ಅಭಿನಯಿಸಲಾಗುತ್ತಿರುವ ಒಂದು ಅಸಂಗತ ದೃಶ್ಯ- ಫರಕು ಇಷ್ಟೆ. ಅದರ ಪರಿಣಾಮಗಳು ಮಾತ್ರ ಅಸಂಗತವಾಗಿರುವುದಿಲ್ಲ.  ಅಪಾರ ನೋವು ಹಾಗೂ ವೈಯಕ್ತಿಕ ಸಂಕಷ್ಟಗಳನ್ನು ಅವು ತರುತ್ತವೆ.

ಈ ಅಸಂಗತ ದೃಶ್ಯವೆಂದರೆ ವಿವಾದಿತ ಕೃತಿ ಹೊಸದಾದ ಕೃತಿ ಆಗಿರುವುದಿಲ್ಲ. ಅನೇಕ ಸಾರಿ ಅನೇಕ ವರ್ಷಗಳವರೆಗೆ ಓದುಗರಿಂದ ಓದಿಸಿಕೊಂಡು ಮನ್ನಣೆ ಪಡೆದಿರುತ್ತವೆ. ವಿಶೇಷವೆಂದರೆ ಈ ನೂರಾರು ಓದುಗರಿಗೆ ಈ ಕೃತಿಯಿಂದ ಯಾವುದೇ “ಧಾರ್ಮಿಕ ಭಾವನೆಗಳಿಗೆ ನೋವು” ಆಗಿರುವುದಿಲ್ಲ. ಅದು ಯಾವುದೋ ಸಮಾಜ ಅಥವಾ ಸಂಸ್ಕøತಿಗೆ ಅವಮಾನಕರವೆಂದು ಕಂಡು ಬಂದಿರುವುದಿಲ್ಲ. ವರ್ಷಗಳ ನಂತರ ಹೀಗೆ ಹಠಾತ್ತನೆ ಯಾವುದೋ ಒಂದು ಸಂಘಟನೆಯು ತನ್ನನ್ನು ಧರ್ಮ ಅಥವಾ ಸಂಸ್ಕೃತಿಯ ಪ್ರತಿನಿಧಿಯೆಂದು ತಾನೇ ಘೋಷಿಸಿಕೊಂಡು, ತಕರಾರು ಮಾಡತೊಡಗುತ್ತದೆ. ಅದು ಹಿಂಸೆಯ ಮೂಲಕ, ಅಂದರೆ ಮೊದಲು ಶಾಬ್ದಿಕ ಹಿಂಸೆಯ ಮೂಲಕ, ಅಂದರೆ ಬೈಗುಳ, ಬೆದರಿಕೆ, ಅಶ್ಲೀಲ ಮಾತುಗಳ ಮೂಲಕ ತನ್ನ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತದೆ. ಇದರ ಮುಂದುವರಿಕೆಯಾಗಿ ದೈಹಿಕ ಹಿಂಸೆಯಲ್ಲೂ ತೊಡಗುತ್ತದೆ. ನಮ್ಮ ರಾಜಕೀಯ ಸಂದರ್ಭದ ವಿಶೇಷತೆಯೆಂದರೆ ನಮ್ಮ ಸರಕಾರಗಳು ಇದನ್ನು ತಕ್ಷಣವೇ ಗಂಭೀರವಾಗಿ ಪರಿಗಣಿಸತೊಡಗುತ್ತವೆ.  ಇದು ನಮ್ಮ ಕಾನೂನು ಹಾಗೂ ಸಂವಿಧಾನದ ಅನುಗುಣವಾಗಿದೆಯೆ ಎನ್ನುವುದನ್ನು ಪ್ರಶ್ನಿಸುವುದೇ ಇಲ್ಲ. ಉದಾಹರಣೆಗೆ ನಾನು ಲಿಂಗಾಯತ ಜಾತಿಯಲ್ಲಿ ಹುಟ್ಟಿದ್ದರೆ, ಯಾವುದೋ ಒಂದು ಸಂಘಟನೆಯು, ಒಂದು ಕೃತಿಯು ಲಿಂಗಾಯತ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುತ್ತವೆಯೆಂದರೆ ಮತ್ತು ನಾನು ಅದು ಸತ್ಯವಲ್ಲವೆಂದರೆ ಆ ಸಂಘಟನೆಯ ಅಭಿಪ್ರಾಯವನ್ನು ಸರಕಾರವು ಏಕೆ ನ್ಯಾಯಬದ್ಧವೆಂದು ಪರಿಗಣಿಸುತ್ತದೆ? ನನ್ನ ಮಾತನ್ನೇಕಲ್ಲ? ಆ ಸಂಘಟನೆಯು ಯಾವ ಆಧಾರದ ಮೇಲೆ ಒಂದು ಸಮುದಾಯದ ಅಭಿಪ್ರಾಯವನ್ನು ಪ್ರತಿನಿಧಿಸುವ ಅಧಿಕಾರವನ್ನು ಪಡೆದಿರುತ್ತದೆ? ಸಂವಿಧಾನದ ಈ ಪ್ರಶ್ನೆಗಳನ್ನು ಕೇಳುವ ಮೊದಲೇ ಸರಕಾರವು ಇಡೀ ಪ್ರಸಂಗವನ್ನು Law and Order ಸಮಸ್ಯೆಯಾಗಿ ಪರಿವರ್ತಿಸಿಕೊಂಡು ಬಿಡುತ್ತದೆ. ಭಾರತದ ಅತ್ಯಂತ ಸಂವಿಧಾನ ವಿರೋಧೀ ಕೆಲಸಗಳನ್ನು ಸರಕಾರಗಳು Law and Order ನೆಪದಲ್ಲಿ ನೆರವೇರಿಸುತ್ತವೆ. ಉದಾಹರಣೆಗೆ ಇತ್ತೀಚೆಗೆ ಕರ್ನಾಟಕದ ಅನೇಕ ಊರುಗಳಲ್ಲಿ ದಲಿತರ ದೇವಾಲಯ ಪ್ರವೇಶ ನಿಷೇಧಿಸುವ, ಅವರ ಮೇಲೆ ಸಾಮಾಜಿಕ ಬಹಿಷ್ಕಾರ ಹೇರುವ ಕೆಲಸಗಳು ನಡೆದವು. ಈ ಕೆಲಸಗಳು ನಮ್ಮ ಸಂವಿಧಾನ ಹಾಗೂ ಕಾನೂನಿನ ವಿರುದ್ಧವಾಗಿದ್ದರಿಂದ ಸರಕಾರ ಮಾಡಬೇಕಾದ ಏಕ ಮಾತ್ರ ಕೆÀಲಸವೆಂದರೆ ಹೀಗೆ ಮಾಡಿದವರನ್ನು ನೇರವಾಗಿ ಬಂಧಿಸಿ ಕಾನೂನಿಗೆ ಒಪ್ಪಿಸುವುದು. ಬದಲಾಗಿ ಅದು ಮಾಡುವ ಕೆಲಸವೆಂದರೆ “ಶಾಂತಿ ಹಾಗೂ ಕಾನೂನಿನ ರಕ್ಷಣೆಗಾಗಿ” ತನ್ನ ಅಧಿಕಾರಿಗಳನ್ನು ಕಳಿಸಿ ಮಾತುಕತೆಗೆ ತೊಡಗಿಸುತ್ತದೆ. ನನಗೆ ಆಶ್ಚರ್ಯವೆಂದರೆ ಕ್ರಿಮಿನಲ್ಗಳ ಜೊತೆಗೆ ಮಾತುಕತೆಯೆಂದರೆ ಏನು? ವಾಸ್ತವವೆಂದರೆ ಇಂಥ ಬಹಿಷ್ಕಾರವನ್ನು ಹಳ್ಳಿಗಳಲ್ಲಿ ಹೇರುವವರು ನಮ್ಮ ಪ್ರಬಲ ಹಿಂದುಳಿದ ಶೂದ್ರ ಜಾತಿಗಳವರೇ ಆಗಿರುತ್ತಾರೆ. ಇವು ರಾಜಕೀಯವಾಗಿ ಪ್ರಬಲವಾಗಿರುವುದರಿಂದ ಸರಕಾರವು ಅವರ ಮೇಲೆ ಕಾನೂನ್ನು ಪ್ರಯೋಗಿಸುವುದಿಲ್ಲ. ಅಂತಿಮವಾಗಿ ದಲಿತರಿಗೆ ಆದ ಅನ್ಯಾಯಕ್ಕೆ ಪರಿಹಾರ ದೊರೆಯುವುದಿಲ್ಲ. ಇನ್ನು ಬಲಪಂಥೀಯ ಸಂಘಟನೆಗಳು ತಮ್ಮ ಸಿದ್ಧಾಂತಗಳಿಗೆ ವಿರುದ್ಧವಾಗಿರುವ ಬರಹಗಾರರು ಹಾಗೂ ಕೃತಿಗಳ ಮೇಲೆ ಬಹಿಷ್ಕಾರ ತರುವ ತಂತ್ರವನ್ನು ಬಳಸುತ್ತಲೇ ಇರುತ್ತವೆ. ಉದಾಹರಣೆಗೆ ಆಯೋಜಿಸಲಾದ ಭಾಷಣವೊಂದನ್ನು ರದ್ದುಪಡಿಸಬೇಕು, ಇಲ್ಲದಿದ್ದರೆ “ಉಗ್ರ ಪ್ರತಿಭಟನೆ” ಮಾಡುತ್ತೇವೆಂದು ಎಚ್ಚರಿಕೆ ಕೊಡುತ್ತವೆ. ಕಾರ್ಯಕ್ರಮವನ್ನು ನಿಲ್ಲಿಸುವುದಿಲ್ಲವೆಂದು ಮೊದಲು ಹೇಳುವ ಸರಕಾರಗಳು Law and Orderನ ಸಮಸ್ಯೆಯ ಹೆಸರಿನಲ್ಲಿ ಒತ್ತಡ ತಂದು ಕಾರ್ಯಕ್ರಮವನ್ನು ಆಯೋಜಿಸು ವವರೇ ಅದನ್ನು ರದ್ದುಪಡಿಸುವಂತೆ ಮಾಡುತ್ತವೆ. ಸರಕಾರಗಳು ಅಭಿ ವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ಬದಲಾಗಿ ಅದನ್ನು ದಮನಿಸ ಬಯಸುವ ಶಕ್ತಿಗಳ ಜೊತೆಗೆ ಶಾಮೀಲಾ ಗಿರುವುದರಿಂದಾಗಿ ಇಂದು ಭಾರತದಲ್ಲಿ ಒಂದು ಸಣ್ಣ ಗುಂಪು ಸಂವಿಧಾನಾತ್ಮಕವಾದ ಸ್ವಾತಂತ್ರ್ಯವನ್ನು ಹತ್ತಿಕ್ಕಬಹುದಾಗಿದೆ.

ಇದು ತಮಿಳು ಲೇಖಕ ಪೆರುಮಾಳ್ ಅವರ ಸಂದರ್ಭದಲ್ಲಿಯೂ ಆಯಿತು. ಜಾತಿ, ಧರ್ಮ ಹಾಗೂ ಸಂಸ್ಕೃತಿಯ ಹೆಸರಿನಲ್ಲಿ ಅವರ ಕೃತಿಯನ್ನು ಮುಟ್ಟುಗೋಲು ಹಾಕಲು ಪ್ರಯತ್ನ ನಡೆಯಿತು. ಅಷ್ಟು ಮಾತ್ರವಲ್ಲ ಅವರ ಮೇಲೆ ವೈಯಕ್ತಿಕವಾಗಿ ಅಮಾನುಷವಾದ ಮಾನಸಿಕ ಒತ್ತಡವನ್ನು ಹೇರಲಾಯಿತು. ಪೆರುಮಾಳ್ ತಮ್ಮ ಬ್ಲಾಗ್ನಲ್ಲಿ “ಪೆರುಮಾಳ್ ಸತ್ತಿದ್ದಾರೆ” ಎಂದು ಬರೆದುಕೊಂಡು, ಇನ್ನು ತಾವು ಬರೆಯುವುದಿಲ್ಲವೆಂದು ನಿರ್ಧರಿಸುವುದಾಗಿ ತಿಳಿಸಿದರು. ಇದಕ್ಕೆ ಕೇಂದ್ರ ಸರಕಾರದ ಪ್ರತಿಕ್ರಿಯೆಯೆಂದರೆ ಮಾನ್ಯ ಸಂಸ್ಕೃತಿ ಸಚಿವರು “ಬರೆಯಲಾಗದಿದ್ದರೆ ಬರೆಯುವುದು ಬೇಡ” ಎಂದು ಹೇಳಿದರು. ರಾಜ್ಯ ಸರಕಾರವು ಮಾತುಕತೆಯ ಮೂಲಕ ಪೆರುಮಾಳ್ರ ಮನ ಒಲಿಸಲು ಪ್ರಯತ್ನಿಸಿತು. ಅಂದರೆ ಅವರು ಕ್ಷಮೆ ಕೋರಿ, ತಮ್ಮ ಕಾದಂಬರಿಯ ಹಲವು ಭಾಗಗಳನ್ನು ಹಿಂದಕ್ಕೆ ಪಡೆಯುವಂತೆ ಮಾಡಲು ಪ್ರಯತ್ನಿಸಿತು. ಬರಹಗಾರರಾಗಿ ಅವರಿಗಿದ್ದ ಸ್ವಾತಂತ್ರ್ಯದ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಏನನ್ನೂ ಮಾಡಲಿಲ್ಲ. ಏಕೆಂದರೆ Law and Order ಸಮಸ್ಯೆ ಆಗಬಾರದಲ್ಲ!

ಈ ಘಟನೆಗಳನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟಿಗೆ ಸಲ್ಲಿಸಲಾದ ಅರ್ಜಿಯ ಮೇಲೆ ಇತ್ತೀಚೆಗೆ ಕೋರ್ಟು ನೀಡಿದ ತೀರ್ಪಿನ ಆಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿರುವ ಮಹತ್ವಪೂರ್ಣ ದಾಖಲೆಯಾಗಿದೆ. ದೀರ್ಘವಾದ ಈ ತೀರ್ಪಿನ ಭಾಗಗಳನ್ನು ಪತ್ರಿಕೆಗಳಲ್ಲಿ ಓದಿದಾಗ ಈ ತೀರ್ಪಿನ ಪಠ್ಯದ್ದೇ ಒಂದು ಶ್ರೇಷ್ಠ ಸಾಹಿತ್ಯಿಕ ಬರಹವಾಗಿದೆ ಎನ್ನಿಸಿತು. ಸಾಹಿತ್ಯ ಕೃತಿಯನ್ನು ಹೇಗೆ ಓದಬೇಕು ಎನ್ನುವುದನ್ನು ಅದು ಹೇಳಿಕೊಡುತ್ತದೆ. ಮುಖ್ಯವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲಾಗದ ಸರಕಾರದ ಕ್ರಮಗಳನ್ನು ಬಲವಾಗಿ ಟೀಕಿಸುತ್ತದೆ. ತೀರ್ಪಿನ ಕೊನೆಯ ಸಾಲುಗಳು ಅದ್ಭುತವಾಗಿವೆ. ತನ್ನ ಸಾವನ್ನು ಪೆರುಮಾಳ್ ತಾವೇ ಘೋಷಿಸಿಕೊಂಡಿದ್ದನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಪು ಹೇಳುತ್ತದೆ:

“ಈ ಬರಹಗಾರನಿಗೆ ಪುನರ್ಜನ್ಮ ನೀಡಿ ಅವನು ತಾನು ಯಾವುದನ್ನು ಸಮರ್ಥವಾಗಿ ಮಾಡಬಲ್ಲನೋ, ಅಂದರೆ ಬರೆಯುವುದನ್ನು, ಅವನು ಮಾಡುವಂತಾಗಲಿ”. ಈ ತೀರ್ಪನ್ನು ಓದಿದ ಪೆರುಮಾಳ್ ‘ನಾನು ಮತ್ತೆ ಬರೆಯುತ್ತೇನೆ’ ಎಂದು ಹೇಳಿದರೆಂದು ಸುದ್ದಿ ಬಂದಿದೆ. ಆದರೆ ಅವರು ಬರೆಯುವುದರಿಂದ Law and Order ಸಮಸ್ಯೆ ಉಂಟಾಗಬಹುದೆಂದು ಸರಕಾರವು ಮತ್ತೆ “ಶಾಂತಿ ಸಂಧಾನ”ದಲ್ಲಿ ತೊಡಬಹುದೆಂಬ ಅನುಮಾನ ನನಗಿದೆ.

- ರಾಜೇಂದ್ರ ಚೆನ್ನಿ