Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಮುಂಬೈಯಲ್ಲಿ ಬೃಹತ್ ನೀಲಿ-ಕೆಂಪು ಬಾವುಟಗಳ ರ್ಯಾಲಿ

Wednesday, 20 July 2016

ಅಂಬೇಡ್ಕರ್ ಭವನ ಮತ್ತು ಮುದ್ರಣಾಲಯ ಧ್ವಂಸಕ್ಕೆ ಭಾರೀ ಪ್ರತಿಭಟನೆ

ಜುಲೈ 19ರಂದು ಮುಂಬೈಯ ಐತಿಹಾಸಿಕ ಸಿಎಸ್‍ಟಿ(ಹಿಂದೆ ಬೋರೀಬಂದರ್) ರೈಲ್ವೆ ನಿಲ್ದಾಣ ಮತ್ತು ಆಝಾದ್ ಮೈದಾನ್ ನಡುವಿನ ವಿಶಾಲ ಪ್ರದೇಶ ಕೆಂಬಾವುಟಗಳು ಮತ್ತು ನೀಲಿ ಬಾವುಟಗಳನ್ನು ಹಿಡಿದ ಸುಮಾರು 50 ಸಾವಿರ ಜನಗಳಿಂದ ತುಂಬಿ ತುಳುಕಿತು.

ಕೆಲವು ದಿನಗಳ ಹಿಂದೆ ಮುಂಬೈಯ ಕೇಂದ್ರ ಪ್ರದೇಶವಾದ ದಾದರ್‍ನ ರೈಲ್ವೆ ನಿಲ್ದಾಣದ ಬಳಿ ಅಂಬೇಡ್ಕರ್ ಸ್ವಂತ ಹಣದಿಂದ ಕಟ್ಟಿಸಿದ್ದ, ಮುಂದೆ ದಲಿತ ಆಂದೋಲನದ ಕೇಂದ್ರವಾಗಿ ಬಿಟ್ಟ ಭವನ ಮತ್ತು ಜಾತಿ-ವಿರೋಧಿ ಸಾಹಿತ್ಯವನ್ನು ಮುದ್ದಿಸುತ್ತಿದ್ದ ಪ್ರಬುದ್ಧ ಭಾರತ ಪ್ರೆಸ್‍ಗಳನ್ನು ರಾತ್ರೋರಾತ್ರಿ ಕಳ್ಳತನದಿಂದ ಧ್ವಂಸ ಮಾಡಿದ್ದನ್ನು ಮಹಾರಾಷ್ಟ್ರದ ವಿಧಾನ ಸಭೆ ಇರುವ ‘ವಿಧಾನ ಭವನ’ದ ಮುಂದೆ ಪ್ರತಿಭಟಿಸಲು ಅಂಬೇಡ್ಕರ್‍ವಾದಿಗಳು ಮತ್ತು ಎಡಪಕ್ಷಗಳು ಈ ರ್ಯಾಲಿಯನ್ನು ಸಂಘಟಿಸಿದ್ದರು.

ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರನ್ನು ಉದ್ದೇಶಿಸಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಭಾರತೀಯ ರಿಪಬ್ಲಿಕನ್ ಪಾರ್ಟಿಯ ಮುಖಂಡರೂ ಅಂಬೇಡ್ಕರ್ ಅವರ ಮೊಮ್ಮಗನೂ ಆದ ಪ್ರಕಾಶ ಅಂಬೇಡ್ಕರ್, ಸಿಪಿಐ(ಎಂ) ಕೇಂದ್ರ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ. ಅಶೋಕ ಧವಳೆ, ಸಿಪಿಯ ಮಹಾರಾಷ್ಟ್ರ ರಾಜ್ಯ ಕಾರ್ಯದರ್ಶಿ ಡಾ. ಭಾಲಚಂದ್ರ ಕಂಗೊ ಮತ್ತು ಜೆಎನ್‍ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹೈಯ ಕುಮಾರ್ ಮಾತನಾಡಿದರು.

ಈ ಧ್ವಂಸ ಕಾರ್ಯವನ್ನು ರಾಜ್ಯಸರಕಾರದ ಮಾಜಿ ಮುಖ್ಯ ಕಾರ್ಯದರ್ಶಿ ರತ್ನಾಕರ್ ಗಾಯಕವಾಡ್ ನಡೆಸಿದ್ದರೂ, ಇದರ ಹಿಂದಿರುವ ಮುಖ್ಯ ಶಕ್ತಿಯೆಂದರೆ ಮಹಾರಾಷ್ಟ್ರದಲ್ಲಿ ಸರಕಾರ ನಡೆಸುತ್ತಿರುವ ಬಿಜೆಪಿ-ಆರೆಸ್ಸೆಸ್. ಅಲ್ಲಿಯ ಮುಖ್ಯಮಂತ್ರಿಗಳು ಇಲ್ಲೊಂದು ‘ಭವ್ಯ’ ಕಮರ್ಶಿಯಲ್’ ಭವನಕ್ಕೆ ಶಿಳಾನ್ಯಾಸವನ್ನೂ ಮಾಡಿದ್ದಾರೆಂದು ವರದಿಯಾಗಿದೆ.

ಇದು ಎರಡು ಐತಿಹಾಸಿಕ ಸ್ಥಳಗಳನ್ನು ನೆನಪಿನಿಂದ ಅಳಿಸಿ ಹಾಕುವ ಪ್ರಯತ್ನ ಮಾತ್ರವಲ್ಲದೆ ಅವು ಪ್ರತಿನಿಧಿಸುತ್ತಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರಗತಿಪರ, ಸಮಾನತಾ-ಪರ ಸಿದ್ಧಾಂತವನ್ನು ಅಳಿಸಿ ಹಾಕುವ ಪ್ರಯತ್ನ ಕೂಡ ಆಗಿದೆ. ಈ ಧ್ವಂಸ ಕಾರ್ಯಕ್ಕೆ  ಹೊಣೆಗಾರರಾದವರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಈ ರ್ಯಾಲಿಯಲ್ಲಿ ಆಗ್ರಹಿಸಲಾಯಿತು. ಈ ಕಟ್ಟಡ ಜನಗಳ ಭಾಗವಹಿಸುವಿಕೆಯೊಂದಿಗೆ ಮರುನಿರ್ಮಾಣಗೊಳ್ಳುತ್ತದೆ,

ಜುಲೈ 30ರಂದು ದಾದರ್‍ನಲ್ಲಿ ಕಟ್ಟಡ ಇದ್ದ ಸ್ಥಳದಲ್ಲಿ ನೆರೆಯಿರಿ ಎಂದು ಪ್ರಕಾಶ ಅಂಬೇಡ್ಕರ್ ಕರೆ ನೀಡಿದರು. ಕಟ್ಟಡವನ್ನು ಧ್ವಂಸ ಮಾಡಿದ ಕೂಡಲೇ ಪ್ರತಿಭಟನೆ ವ್ಯಕ್ತಗೊಂಡರೂ ಮೂರು ವಾರಗಳ ನಂತೆರ, ಜುಲೈ 19ರಂದು ಜನಸಾಗರವನ್ನು ನೋಡಿ ತನಿಖೆಗೆ  ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ ಎಂದು ಗೇಲಿ ಮಾಡಿದರು.

ಹಳೆಯ ಕಟ್ಟಡ ಎಂದು ಸರಕಾರ ಬೋರೀಬಂದರ್ ರೈಲ್ವೆ ನಿಲ್ದಾಣ, ನಗರಪಾಲಿಕೆ ಕಟ್ಟಡವನ್ನು ನೆಲಸಮ ಮಾಡುತ್ತದೆಯೇ ಎಂದು ಪ್ರಶ್ನಿಸಿದ ಜೆಎನ್‍ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹೈಯ ಕುಮಾರ್ ನಾಮಮಾತ್ರಕ್ಕೆ 125ನೇ ಜನ್ಮ ದಿನಾಚರಣೆಯ ಪ್ರಚಾರ ಮಾಡುತ್ತಲೇ ಮತ್ತೊಂದೆಡೆಯಲ್ಲಿ ಇನ್ನಷ್ಟು ರೋಹಿತ್ ವೆಮುಲಗಳು ಅಂಬೇಡ್ಕರ್ ಚಿಂತನೆಗಳಿಂದ ಪ್ರೇರಣೆ ಪಡೆಯದಿರಲಿ ಎಂಬುದೇ ಈ ಸರಕಾರದ ಆಶಯ ಎಂದರು.

ಸೀತಾರಾಮ್ ಯೆಚೂರಿ ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿನ ಬಿಜೆಪಿ ನೇತೃತ್ವದ ಸರಕಾರಗಳ ದಲಿತ-ವಿರೋಧಿ, ಜನ-ವಿರೋಧಿ ಮತ್ತು ಕೋಮುವಾದಿ ಧೋರಣೆಗಳನ್ನು ಬಲವಾಗಿ ಟೀಕಿಸುತ್ತ ಬಿಜೆಪಿ-ಆರೆಸ್ಸೆಸ್‍ನ ಅಪಾಯಕಾರಿ ಕೂಟವನ್ನು ಸೋಲಿಸಲು, ಭಾರತದಲ್ಲಿ ತೀವ್ರಗಾಮಿ ಸಾಮಾಜಿಕ-ಆರ್ಥಿಕ-ರಾಜಕೀಯ ಪರಿವರ್ತನೆ ತರಲು ಕೆಂಪು ಮತ್ತು ನೀಲಿ ಬಾವುಟಗಳ ಮುರಿಯಲಾಗದ ಐಕ್ಯತೆಯನ್ನು ಬೆಸೆಯಬೇಕು ಎಂದು ಕರೆ ನೀಡಿದರು.

ರಾಜ್ಯಸಭೆಯಲ್ಲಿ ಪ್ರಸ್ತಾಪ

ಅವರು ಜುಲೈ 16ರಂದು ಈ ಧ್ವಂಸ ಕಾರ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದು, ಈ ರ್ಯಾಲಿಯ ಹಿಂದಿನ ದಿನ, ಅಂದರೆ  ಜುಲೈ 18ರಂದು ರಾಜ್ಯಸಭೆಯಲ್ಲಿ ಈ ಪ್ರಶ್ನೆಯನ್ನು ಎತ್ತಿದ್ದರು.

“ಮುಂಬೈಯ ಅಂಬೇಡ್ಕರ್ ಭವನ ನಮ್ಮ ಸ್ವಾತಂತ್ರ್ಯ ಹೋರಾಟದ ಮತ್ತು ದಲಿತ ಆಂದೋಲನದ ಪರಂಪರೆಯ ಪ್ರತಿನಿಧಿ.  ಅಂಬೇಡ್ಕರ್ ಅವರು ಮುಂಬೈಗೆ ಬರುತ್ತಿದ್ದ ದಲಿತರಿಗಾಗಿ ಇದನ್ನು ನಿರ್ಮಿಸಿದ್ದರು. ಅದು ನಮ್ಮ ದೇಶದ ದಲಿತ ಆಂದೋಲನದ ಕೇಂದ್ರವಾಯಿತು. ಅದು ಕೇವಲ ಒಂದು ಪರಂಪರೆಯ ಕಟ್ಟಡವಷ್ಟೇ ಅಲ್ಲ, ‘ಒಂದು ವ್ಯಕ್ತಿ, ಒಂದು ಮತ’ ಎಂಬ ಅಂಬೇಡ್ಕರ್ ಕನಸಿನ ಸಂಕೇತವದು” ಎಂದು ತುರ್ತಿನ ಮಹತ್ವದ ಪ್ರಶ್ನೆಗಳನ್ನು ಎತ್ತುವ ರಾಜ್ಯಸಭೆಯ ಶೂನ್ಯವೇಳೆಯಲ್ಲಿ ಈ ಪ್ರಶ್ನೆಯನ್ನೆತ್ತುತ್ತ ಅವರು ಹೇಳಿದರು.

ಬಿಜೆಪಿ ನೇತೃತ್ವದ ಸರಕಾರ ಸಾಮಾಜಿಕ ನ್ಯಾಯದ ಎಲ್ಲ ರಚನೆಗಳನ್ನು ಧ್ವಂಸ ಮಾಡುತ್ತಿದೆ, ಯೋಜನಾ ಆಯೋಗದ ಧ್ವಂಸದೊಂದಿಗೆ ದಲಿತ ಸಮುದಾಯದ ಉದ್ಧಾರಕ್ಕೆ ಈಗ ಉಪಯೋಜನೆಗಳೂ ಇಲ್ಲವಾಗಿವೆ, ಸಾಮಾಜಿಕ ನ್ಯಾಯದ ಭೌತಿಕ ಸಂಕೇತಗಳನ್ನುಮಾತ್ರವಲ್ಲ, ಸಾಮಾಜಿಕ ನ್ಯಾಯದ ಕಣ್ಣೋಟವನ್ನೇ ನೆಲಸಮ ಮಾಡಲಾಗುತ್ತಿದೆ ಎಂದು ಖಾರವಾಗಿ ನುಡಿದರು.

ಇದಕ್ಕೆ ಪ್ರತಿಪಕ್ಷಗಳ ಹಲವು ಮುಖಂಡರಿಂದ ಬೆಂಬಲ ವ್ಯಕ್ತವಾಯಿತು.

ಬಿಎಸ್‍ಪಿಯ ಮುಖ್ಯಸ್ಥರಾದ ಮಾಯಾವತಿ ಯವರು  ಮಾತಾಡುತ್ತ “ಒಂದೆಡೆಯಲ್ಲಿ ಅಂಬೇಡ್ಕರ್ ಲಂಡನ್‍ನಲ್ಲಿ ಬಳಸುತ್ತಿದ್ದ ಕೋಣೆಯನ್ನು ಖರೀದಿಸುವುದಾಗಿ ಹೇಳುವ ಸರಕಾರ ಇಲ್ಲಿ, ನಮ್ಮ  ನಾಡಿನಲ್ಲಿ ಅಂಬೇಡ್ಕರ್‍ರವರೇ ಕಟ್ಟಿಸಿದ್ದ ಒಂದು ಕಟ್ಟಡವನ್ನು ನೆಲಸಮ ಮಾಡಲು ಬಿಡುತ್ತದೆ” ಎಂದು ಟೀಕಿಸಿದರು.

ಕಾಂಗ್ರೆಸ್ ಮುಖಂಡ ಆನಂದ ಶರ್ಮ ಕೂಡ ಯೆಚೂರಿಯವರನ್ನು ಬೆಂಬಲಿಸುತ್ತ ಸರಕಾರ ಅವರು ಎತ್ತಿದ ಪ್ರಶ್ನೆಯ ಬಗ್ಗೆ ಮೌನವಾಗಿರಲು ಸಾಧ್ಯವಿಲ್ಲ ಎಂದರು.

ಚರ್ಚೆಗೆ ಉತ್ತರಿಸಿ ಮಾತನಾಡಿದ ಸಾಮಾಜಿಕ ನ್ಯಾಯದ ಮಂತ್ರಿ ಥಾವರ್‍ಚಂದ್ ಗೆಹ್ಲೊಟ್ ಈ ಕಟ್ಟಡವನ್ನು ನೆಲಸಮ ಮಾಡಬಾರದಾಗಿತ್ತು ಎಂದು ಒಪ್ಪಿಕೊಂಡರು, ಅಗತ್ಯವಿದ್ದರೆ ರಾಜ್ಯಸರಕಾರದೊಡನೆ ಮಾತಾಡಿ ಅಲ್ಲಿ ಸ್ಮಾರಕದ ಮರುನಿರ್ಮಾಣವನ್ನು ಕೈಗೆತ್ತಿಕೊಳ್ಳುತ್ತೇವೆ ಎಂದರು.