ಗೋರಕ್ಷಾ ಸಮಿತಿ”ಗಳ ಚಟುವಟಿಕೆಗಳನ್ನು ನಿಷೇಧಿಸಿ: ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹ

Wednesday, 20 July 2016

ಗುಜರಾತದಲ್ಲಿ ದಲಿತರ ಮೇಲೆ ಅತ್ಯಾಚಾರ:

ಗುಜರಾತಿನ ಗಿರ್ ಸೋಮನಾಥ ಜಿಲ್ಲೆಯ ಉನಾದಲ್ಲಿ ದಲಿತರ ಮೇಲೆ ನಡೆದಿರುವ ಅತ್ಯಾಚಾರವನ್ನು ಸಿಪಿಐ(ಎಂ) ಪಲೊಟ್‍ಬ್ಯುರೊ ಬಲವಾಗಿ ಖಂಡಿಸಿದೆ.  ‘ಜನಶಕ್ತಿ’ಯ ಕಳೆದ ಸಂಚಿಕೆಯಲ್ಲಿ ಪ್ರಕಟವಾದಂತೆ, ಜುಲೈ 11ರಂದು ಊನಾದಲ್ಲಿ ‘ಗೋರಕ್ಷಾ ಸಮಿತಿ’ಯವರು ಸತ್ತ ದನದ ಚರ್ಮ ಕೀಳುತ್ತಿದ್ದ ಏಳು ದಲಿತರನ್ನು ಕಬ್ಬಿಣದ ಸಲಾಕೆಗಳಿಂದ ಬಡಿದು ಅವರಲ್ಲಿ ನಾಲ್ವರನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡಿಸಿದರು. ಇವರೆಲ್ಲ ತೀವ್ರವಾಗಿ ಗಾಯಗೊಂಡು ಈಗ ಆಸ್ಪತ್ರೆಯಲ್ಲಿದ್ದಾರೆ.
ಈ ಅಮಾನುಷ ದಾಳಿಗೆ ಈಗ ದಲಿತರಿಂದ ಗುಜರಾತ್ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಪೋಲೀಸರು ಅದನ್ನು ದಮನ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಈ ಊನಾ ದಾಳಿ ಮತ್ತೊಮ್ಮೆ ಗೋರಕ್ಷಾ ಸಮಿತಿ ಎಂದು ಹೇಳಿಕೊಳ್ಳುವವರು ವಹಿಸುತ್ತಿರುವ ದುಷ್ಟ ಪಾತ್ರವನ್ನು ಎತ್ತಿ ತೋರಿದೆ ಎಂದಿರುವ ಸಿಪಿಐ(ಎಂ) ಈ ಸಮಿತಿಗಳು ರಾಸುಗಳ ವ್ಯಾಪಾರ ಮತ್ತು ಸತ್ತ ಪ್ರಾಣಿಗಳ ಚರ್ಮ ತೆಗೆಯುವ ಕೆಲಸ ಮಾಡುತ್ತಿರುವ ಮುಸ್ಲಿಮರು ಮತ್ತು ದಲಿತರ ಮೇಲೆ ಗುರಿಯಿಟ್ಟಿರುವ ಕೋಮುವಾದಿ ಸಂಘಟನೆಗಳಲ್ಲದೆ ಬೇರೇನೂ ಅಲ್ಲ ಎಂದು ಹೇಳಿದೆ.

ಗುಜರಾತ ಸರಕಾರ ಊನಾ ಪ್ರಕರಣದ ಅಪರಾಧಿಗಳ ಮೇಲೆ ಬಲವಾದ ಕ್ರಮಗಳನ್ನು ಕೈಗೊಳ್ಳುವುದಲ್ಲದೆ ಈ ಗೋರಕ್ಷಾ ಸಮಿತಿಗಳ ಚಟುವಟಿಕೆಗಳ ಮೇಲೆ ನಿಷೇಧ ಹೇರಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ. ದಲಿತರ ಮೇಲೆ ಅತ್ಯಾಚಾರವನ್ನು ವಿರೋಧಿಸುತ್ತಿರುವವರ ವಿರುದ್ಧ ದಮನ ಚಕ್ರ ನಡೆಸುವುದನ್ನು ನಿಲ್ಲಿಸಬೇಕು ಎಂದು ಆಡಳಿತ ಕೂಡಲೇ ಪೋಲೀಸರಿಗೆ ನಿರ್ದೇಶನ ನೀಡಬೇಕು ಎಂದು ಅದು ಆಗ್ರಹಿಸಿದೆ.