ಒಕ್ಕೂಟ ರಚನೆಯನ್ನು ಹಾಳುಗೆಡವಲು ಪ್ರಯತ್ನಿಸುತ್ತಿರುವವರಿಗೆ ಒಂದು ಎಚ್ಚರಿಕೆ

ಸಂಪುಟ: 
10
ಸಂಚಿಕೆ: 
30
Wednesday, 13 July 2016

ಅರುಣಾಚಲ ಪ್ರದೇಶದಲ್ಲಿ ರಾಜ್ಯಪಾಲರ ಕ್ರಮಗಳು ಕಾನೂನು ಬಾಹಿರ-ಸುಪ್ರಿಂ ಕೋರ್ಟ್ ತೀರ್ಪು:

ರಾಜಭವನಗಳ ಮೂಲಕ ನಮ್ಮ ಒಕ್ಕೂಟ ರಚನೆಯನ್ನು ಹಾಳುಗೆಡವಲು ಪ್ರಯತ್ನಿಸುತ್ತಿರುವವರಿಗೆ ಒಂದು ಎಚ್ಚರಿಕೆ-ಸೀತಾರಾಮ್ ಯೆಚೂರಿ

ಕಳೆದ ಡಿಸೆಂಬರಿನಲ್ಲಿ ಅರುಣಾಚಲ ಪ್ರದೇಶದಲ್ಲಿ ರಾಜ್ಯಪಾಲರು ವಿಧಾನಸಭಾ ಅಧಿವೇಶನವನ್ನು ನಿಗದಿತ ದಿನಾಂಕದಿಂದ ಮೊದಲೇ ನಡೆಸಲು ಅದೇಶಿಸಿದ್ದು ಕಾನೂನು ಬಾಹಿರ ಹಾಗೂ ಸಂವಿಧಾನದ ಉಲ್ಲಂಘನೆ ಎಂದು ದೇಶದ ಸರ್ವೋಚ್ಚ ನ್ಯಾಯಾಲಯದ ಐವರು ನ್ಯಾಯಾಧೀಶರಿದ್ದ ಸಂವಿಧಾನ ಪೀಠ ಜುಲೈ 13ರಂದು ತೀರ್ಪು ನೀಡಿದೆ. ಅದಕ್ಕೆ ಅನುಗುಣವಾಗಿ ನಂತರದ ಕ್ರಮಗಳನ್ನೆಲ್ಲ, ಅಂದರೆ ಡಿಸೆಂಬರ್ 16ರಂದು ನಡೆದ ವಿಧಾನಸಭೆಯ ಕಲಾಪ, ರಾಷ್ಟ್ರಪತಿ ಆಳ್ವಿಕೆಯ ಹೇರಿಕೆ, ಅದನ್ನು ತೆಗೆದದ್ದು ಮತ್ತು ಭಿನ್ನಮತೀಯ ನಾಯಕ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು ಇವೆಲ್ಲವನ್ನೂ ಸುಪ್ರಿಂ ಕೋರ್ಟ್ ರದ್ದು ಮಾಡಿದೆ. ಈ ಮೂಲಕ  ಮೊತ್ತಮೊದಲ ಬಾರಿಗೆ ಅಧಿಕಾರ ನಡೆಸುತ್ತಿರುವ ಸರಕಾರ ತಂತಾನೇ ರದ್ದಾಗಿದೆ.

ಇದು ಮುಂದೆ ಈ ವಿಷಯದಲ್ಲಿ ಒಂದು ದೃಷ್ಟಾಂತವಾಗುವ ತೀರ್ಪು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಇದನ್ನು ಸ್ವಾಗತಿಸಿದೆ.

ಈ ಮೂಲಕ ಈ ಸಂವಿಧಾನ ಪೀಠದ ಈ ಅತ್ಯಂತ ಮಹತ್ವದ ತೀರ್ಪು ಅರುಣಾಚಲ ಪ್ರದೇಶದಲ್ಲಿ ಕೇಂದ್ರ ಸರಕಾರದ ಹಸ್ತಕ್ಷೇಪದ ಮೂಲಕ ಸರಕಾರದ ಬದಲಾವಣೆಯನ್ನು ತಲೆಕೆಳಗಾಗಿಸಿದೆ ಮತ್ತು ನಮ್ಮ ಸಂವಿಧಾನದ ಒಕ್ಕೂಟ ಸ್ವರೂಪವನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂಬುದನ್ನು ಎತ್ತಿ ಹಿಡಿದಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಉತ್ತರಾಖಂಡದ ಅನುಭವವನ್ನು ಅನುಸರಿಸಿ ಈ ಸುಪ್ರಿಂ ಕೋರ್ಟ್ ತೀರ್ಪು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ರಾಜಕೀಯ ನೈತಿಕತೆ ಮತ್ತು ಹೊಣೆಗಾರಿಕೆಯನ್ನು ಪ್ರಶ್ನಿಸುವಂತಾಗಿದೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.

ಈ ಸಂವಿಧಾನಬಾಹಿರ ನಿರ್ಧಾರ ಕೈಗೊಳ್ಳುವುದಕ್ಕೆ ಹೊಣೆÀಗಾರರು ಯಾರು  ಎಂಬುದನ್ನು ಕೇಂದ್ರ ಸರಕಾರ ನಿಗದಿ ಮಾಡಬೇಕಾಗಿದೆ  ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ  ಕೇಂದ್ರ ಸರಕಾರ ಈ ತೀರ್ಪಿಗೆ ಕಿವಿಗೊಟ್ಟು ಪ್ರತಿಪಕ್ಷಗಳ ಸರಕಾರಗಳಿರುವ ರಾಜ್ಯಗಳಲ್ಲಿ  ಕೇಂದ್ರೀಯ ಆಳ್ವಿಕೆಯನ್ನು ಹೇರುವ ಈ ಹೆಚ್ಚುತ್ತಿರುವ ಸರ್ವಾಧಿಕಾರಶಾಹಿ ಪ್ರವೃತ್ತಿಯನ್ನು ನಿಲ್ಲಿಸಬೇಕು ಎಂದು ಹೇಳಿದೆ.

ಇದು ಕೇಂದ್ರದ ವಿರುದ್ಧ ಬಂದಿರುವ ಒಂದು ಬಹುದೊಡ್ಡ  ಆಪಾದನೆ., ರಾಜಭವನಗಳ ಮೂಲಕ ನಮ್ಮ ಒಕ್ಕೂಟ ರಚನೆಯನ್ನು ಹಾಳುಗೆಡವಲು ಪ್ರಯತ್ನಿಸುತ್ತಿರುವವರಿಗೆ ಒಂದು ಎಚ್ಚರಿಕೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಟಿಪ್ಪಣಿ ಮಾಡಿದ್ದಾರೆ. ಈ ತೀರ್ಪು ಎತ್ತಿರುವ ರಾಜಕೀಯ ನೈತಿಕತೆ ಮತ್ತು ಉತ್ತರದಾಯಿತ್ವದ ಪ್ರಶ್ನೆಗೆ ಕೇಂದ್ರ ಸರಕಾರದಲ್ಲಿ ಯಾರಾದರೂ ಜವಾಬ್ದಾರಿ ತೆಗೊಳ್ಳುತ್ತಾರೆಯೇ ಎಂದು ಅವರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.