ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ರದ್ದುಮಾಡಿ-ಸಿಪಿಐ(ಎಂ)

Tuesday, 12 July 2016

ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯ್ದೆ(ಎಎಫ್‍ಎಸ್‍ಪಿಎ)ಯನ್ನು ಬಳಸುವುದರ ಬಗ್ಗೆ ಸುಪ್ರಿಂ ಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ಈ ಕಾಯ್ದೆಯನ್ನು ರದ್ದು ಮಾಡಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೋ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

ಸುಪ್ರಿಂ ಕೋರ್ಟ್ ಹೇಗೆ ಈ ಕರಾಳ ಕಾಯ್ದೆ ನಾಗರಿಕರ ಸುರಕ್ಷಿತತೆ ಮತ್ತು ಜೀವಗಳಿಗೆ ಒಂದು ಬೆದರಿಕೆಯಾಗಿದೆ ಎಂಬುದನ್ನು ಎತ್ತಿ ತೋರಿದೆ. ಈ ಕಾಯ್ದೆ ಭದ್ರತಾ ಪಡೆಗಳಿಗೆ ಯಾವುದೇ ಶಿಕ್ಷೆಯ ಭಯವಿಲ್ಲದೆ ಜನಗಳನ್ನು ಕೊಲ್ಲಲು ಅವಕಾಶ ಮಾಡಿಕೊಟ್ಟಿದೆ. ಇಂತಹ ಕೊಲೆಗಳು “ಕಾನೂನಿನ ಆಳ್ವಿಕೆಯನ್ನು ನಾಶ ಮಾಡುವಂತವು ಮತ್ತು ನೇರವಾಗಿ ಅಸಂವಿಧಾನಿಕ” ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಆದ್ದರಿಂದ ಸರಕಾರ ಈ ತೀರ್ಪಿಗೆ ಕಿವಿಗೊಟ್ಟು ಈ ಕಾಯ್ದೆಯನ್ನು ರದ್ದು ಮಾಡಲೇ ಬೇಕಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

ಮಣಿಪುರದಲ್ಲಿ ಹುಸಿ ಎನ್‍ಕೌಂಟರ್ ನಡೆಸಿ ಜನಗಳನ್ನು ಕೊಲ್ಲಲಾಗಿದೆ, ಆದ್ದರಿಂದ ಅದಕ್ಕೆ ಅವಕಾಶ ಮಾಡಿಕೊಟ್ಟಿರುವ ಸಶಸ್ತø ಪಡೆಗಳ ವಿಶೇಷ ಅಧಿಕಾರಗಳ ಕಾಯ್ದೆ (ಎಎಫ್‍ಎಸ್‍ಪಿಎ) ಯನ್ನು ರದ್ದು ಮಾಡಬೇಕು ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಇಬ್ಬರು ನ್ಯಾಯಾಧೀಶರ ಸುಪ್ರಿಂ ಕೋರ್ಟ್ ಪೀಠ ಜುಲೈ 8ರಂದು ಮಣಿಪುರ ಸರಕಾರ ಎನ್‍ಕೌಂಟರ್‍ಗಳಲ್ಲಿ ಸತ್ತವರ ಕುಟುಂಬಗಳಿಗೆ ಪರಿಹಾರ ಕೊಟ್ಟಿದೆ ಎಂಬುದೇ ಇಂತಹ ಎನ್‍ಕೌಂಟರ್‍ಗಳು ಹುಸಿ ಎಂಬುದನ್ನು ಸೂಚಿಸುತ್ತವೆ ಎಂದು ಆಭಿಪ್ರಾಯ ಪಡುತ್ತ  ಪರಿಹಾರ ನೀಡಿದ ನಂತರ ಮಣಿಪುರ ಸರಕಾರ ಏನು ಕ್ರಮಗಳನ್ನು ಕೈಗೊಂಡಿದೆ ಎಂದು ನ್ಯಾಯಾಲಯಕ್ಕೆ  ತಿಳಿಸಬೇಕು ಎಂದು ಹೇಳಿದೆ. ಹಾಗೆಯೇ ಕೇಂದ್ರ ಸರಕಾರ, ಮಣಿಪುರ ಸರಕಾರ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ ಇದುವರೆಗೂ ಎಫ್‍ಐಆರ್‍ನ್ನೇ ಸಲ್ಲಿಸದ 62 ಕೇಸುಗಳು ಸೇರಿದಂತೆ ಎಲ್ಲ ಎನ್‍ಕೌಂಟರ್‍ಗಳ ಕುರಿತು ಒಂದು ಸಮಗ್ರ ವರದಿಯನ್ನು ಸಲ್ಲಿಸಬೇಕು ಎಂದಿದೆ.