ಕಾಶ್ಮೀರದಲ್ಲಿ ಭುಗಿಲೆದ್ದಿರುವ ಜನತೆಯ ಅಸಂತುಷ್ಟಿ - ಸರ್ವಪಕ್ಷ ಸಭೆ ಕರೆಯಲು ಸಿಪಿಐ(ಎಂ) ಆಗ್ರಹ

Tuesday, 12 July 2016

ಕಾಶ್ಮೀರದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಸಿಪಿಐ(ಎಂ) ಪೊಲಿಟ್‍ಬ್ಯುರೊ ಗಂಭೀರ ಆತಂಕ ವ್ಯಕ್ತಪಡಿಸಿದೆ. ಇದುವರೆಗೆ 25 ಮಂದಿ ಸತ್ತಿದ್ದಾರೆ, ಅವರಲ್ಲಿ ಹೆಚ್ಚಿನವರು ಯುವಜನರು, ನೂರಾರು ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಎನ್‍ಕೌಂಟರ್‍ನಲ್ಲಿ ಬುರ್ಹಾನ್ ವಾನಿ ಮತ್ತು ಆತನ ಸಹಚರರ ಸಾವಿನ ನಂತರ ದೊಡ್ಡಪ್ರಮಾಣದಲ್ಲಿ ಜನತೆಯ ಅಸಂತುಷ್ಟಿ ಭುಗಿಲೆದ್ದಿದೆ. ಪ್ರತಿಭಟನಾಕಾರರ ಮೇಲೆ ಪೋಲೀಸರು ಮತ್ತು ಸಶಸ್ತ್ರ ಪಡೆಗಳು  ಅಮಾನುಷ ಬಲಪ್ರಯೋಗ ನಡೆಸಿರುವುದರಿಂದ ಸಾವುಗಳಾಗಿವೆ ಎನ್ನುತ್ತ ಪೊಲಿಟ್‍ಬ್ಯುರೊ ಇದನ್ನು ಖಂಡಿಸಿದೆ. ಆಡಳಿತ ಪ್ರತಿಭಟನಾಕಾರರ ಮೇಲೆ ವಿಪರೀತ ಬಲಪ್ರಯೋಗ ನಡೆಸಬಾರದು, ಅಮಾಯಕ, ಅನಾಮಧೆಯ ಪ್ರತಿಭಟನಾಕಾರರ ಸಾವಿಗೆ ಕಾರಣರಾದವರನ್ನು ಗುರುತಿಸಿ ಶಿಕ್ಷಿüಸಬೇಕು ಸಿಪಿಐ(ಎಂ) ಆಗ್ರಹಿಸಿದೆ.

ಈಗ ಹೆಚ್ಚುತ್ತಿರುವ ಅಸಂತುಷ್ಟಿ ಜನತೆಯಲ್ಲಿ ಉಂಟಾಗಿರುವ ತೀವ್ರ ಪರಕೀಯ ಭಾವದ,ದಮನಕಾರಿ ಧೋರಣೆಗಳು ಮತ್ತು ನಿಶ್ಶಸ್ತ್ರ ನಾಗರಿಕರನ್ನು ಭದ್ರತಾ ಪಡೆಗಳು ಕೊಲ್ಲುತ್ತಿರುವುದರ ಮೇಲಿನ ಸಿಟ್ಟಿನ ಒಂದು ಅಭಿವ್ಯಕ್ತಿ ಕೂಡ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ. ಕಾನೂನು ವ್ಯವಸ್ಥೆ ಕಾಪಾಡಲು ಮತ್ತು ನಾಗರಿಕ ಆಡಳಿತ ನಡೆಸಲು ಉಗ್ರಗಾಮಿಗಳ ಚಟುವಟಕೆಗಳನ್ನು ತಡೆಯಬೇಕು ಎಂಬುದೇನೋ ನಿಜವಾದರೂ, ಕಲ್ಲೆಸೆಯುವ ಪ್ರತಿಭಟನಾಕಾರರ ಮೇಲೆ ಇಂತಹ ಬಲಪ್ರಯೋಗಕ್ಕೆ ಅದು ಒಂದು ನೆವವಾಗಬಾರದು.

ಕೇಂದ್ರ ಸರಕಾರ ಮತ್ತು ಸ್ವತಃ ಬಿಜೆಪಿ ಸಮ್ಮಿಶ್ರ ಸರಕಾರದ ಭಾಗವಾಗಿರುವ ರಾಜ್ಯಸರಕಾರ ರಾಜ್ಯದಲ್ಲಿ ಈ ಹೆಚ್ಚುತಿರುವ ಅಸಂತೋಷವನ್ನು ಕೊನೆಗೊಳಿಸಲು ಮತ್ತು ರಾಜ್ಯದಲ್ಲಿ ಶಾಂತಿ ಮತ್ತು ಸಾಮಾನ್ಯ ಪರಿಸ್ಥಿತಿಯನ್ನು ನೆಲೆಗೊಳಿಸಲು ಎಲ್ಲ ರಾಜಕೀಯ ಶಕ್ತಿಗಳು ಮತ್ತು ಗುಂಪುಗಳೊಂದಿಗೆ ಸಂವಾದದ ರಾಜಕೀಯ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಕೇಂದ್ರೀಯ ಮಟ್ಟದಲ್ಲಿ  ತಕ್ಷಣವೇ ಕೇಂದ್ರ ಗೃಹಮಂತ್ರಿಗಳು ಒಂದು ಸರ್ವಪಕ್ಷ ಸಭೆಯನ್ನು ಕರೆಯಬೇಕು ಎಂದು ಆಗ್ರಹಿಸಿದೆ.