ಬೆಂಗಳೂರು: 115 ಕಾರ್ಮಿಕರನ್ನು ಬೀದಿಗೆಸೆದ ದುಷ್ಕೃತ್ಯದ ವಿರುದ್ಧ ಪ್ರತಿಭಟನೆ

ಸಂಪುಟ: 
10
ಸಂಚಿಕೆ: 
29
date: 
Sunday, 10 July 2016
Image: 

ಬೆಂಗಳೂರಿನ ಪೀಣ್ಯ ಪ್ರದೇಶದಲ್ಲಿರುವ ಸ್ಟಾಂಜನ್‍ಲಿಂಕ್ಸ್ ಕಾರ್ಖಾನೆಯ ಕಾರ್ಮಿಕರು ಹಲವರು ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಕೈ ಕಳೆದು ಕೊಂಡಿದ್ದಾರೆ. ಹಲವು ಕಾರ್ಮಿಕರ ಕೈ ಬೆರಳುಗಳು ಮುರಿದುಹೋಗಿವೆ. ಇಂತಹ ಕಾರ್ಮಿಕರಿಗೆ ಪರಿಹಾರ ನೀಡುವ ಬದಲು ಇದ್ದಕ್ಕಿದ್ದ ಹಾಗೇ ಕಾರ್ಖಾನೆಗೆ ಬೀಗ ಹಾಕಿದೆ. ಇದರ  ವಿರುದ್ಧ ಅಲ್ಲಿನ ಕಾರ್ಮಿಕರ ಜತೆಗೆ ಟಯೋಟಾ ಸಂಸ್ಥೆ ಅಡಿಯ ಅಂಗಸಂಸ್ಥೆಯ ಕಾರ್ಮಿಕರು ಹಾಗೂ ತುಮಕೂರು ಕೈಗಾರಿಕಾ ಪ್ರದೇಶದ ವಿನಾಯಕ ಸಿ.ಎನ್.ಸಿ. ಸೆಂಟರ್ ಪ್ರೈವೇಟ್ ಲಿಮಿಟೆಡ್‍ನ ಕಾರ್ಮಿಕರು ಜುಲೈ 4 ಮತ್ತು 5ರಂದು ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾರ್ಮಿಕ ಆಯುಕ್ತರ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಬಿಡದಿ, ಪೀಣ್ಯ ಮತ್ತು ತುಮಕೂರಿನಲ್ಲಿನ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳು ಕಾನೂನುಗಳನ್ನು ಪಾಲಿಸುತ್ತಿಲ್ಲ, ಸಂಘಟನೆಯ ಹಕ್ಕುಗಳನ್ನು ನಿರಾಕರಿಸುವ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿವೆ. ಕಾರ್ಮಿಕರನ್ನು ಬೀದಿಗೆ ತಳ್ಳುತ್ತಿವೆ. ಖಾಯಂ ಕಾರ್ಮಿಕರನ್ನು ಕಡಿಮೆ ಮಾಡಿ ದೊಡ್ಡ ಪ್ರಮಾಣದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತಿದೆ. ಅಲ್ಲಿಯ ಕಾರ್ಮಿಕರ ಮುಂದೆ ಇನ್ನೂ ಹಲವು ಸಮಸ್ಯೆಗಳಿವೆ. ಅವನ್ನು  ಪರಿಹರಿಸಬೇಕೆಂದು ಆಗ್ರಹಿಸಿ ಈ ಪ್ರತಿಭಟನೆ ನಡೆದಿದೆ.

ಬಿಡದಿ ಕೈಗಾರಿಕಾ ಪ್ರದೇಶದಲ್ಲಿ 250ಕ್ಕೂ ಹೆಚ್ಚು ಕಾರ್ಖಾನೆಗಳು ಇದ್ದು, ಇದರಲ್ಲಿ ಲಕ್ಷಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಈ ಎಲ್ಲಾ ಸಂಸ್ಥೆಗಳಲ್ಲಿ ಕೇವಲ ಶೇಕಡ 25-30 ರಷ್ಟು ಮಾತ್ರ ಖಾಯಂ ನೌಕರÀರಿದ್ದಾರೆ, ಉಳಿದಂತೆ ಗುತ್ತಿಗೆ ಆಧಾರದಲ್ಲಿ ಅತೀವ ಶೋಷಣೆಯೊಂದಿಗೆ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದಾರೆ. ಇವರಿಗೆ ಕನಿಷ್ಠ ಕೂಲಿ, ಉದ್ಯೋಗದ ಭದ್ರತೆ ಹಾಗು ಕಾನೂನುಬದ್ದ ಸೌಲಭ್ಯಗಳನ್ನು ನೀಡುತ್ತಿಲ್ಲ. ಟಯೋಟಾ (ಟಿ.ಕೆ.ಎಂ.) ದ 9 ಅಂಗ ಸಂಸ್ಥೆಗಳು ಇವೆ. ಇವುಗಳಲ್ಲಿ ದುಡಿಯುವ ಸಾವಿರಾರು ಜನ ಕಾರ್ಮಿಕರು ಕಿರುಕುಳ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಈ ಕಾರ್ಮಿಕರು ಪ್ರತಿಭಟನೆಗೆ ಇಳಿಯಬೇಕಾಗಿ ಬಂದಿದೆ.

ಪೀಣ್ಯ ಪ್ರದೇಶದಲ್ಲಿರುವ ಸ್ಟಾಂಜನ್‍ಲಿಂಕ್ಸ್ ಕಾರ್ಖಾನೆಯು 32 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಈಗ 115 ಕಾರ್ಮಿಕರು ದುಡಿಯುತ್ತಿರುವ ಈ ಸಂಸ್ಥೆಯಲ್ಲಿ 20ರಿಂದ 32 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವರು ಇದ್ದಾರೆ. ಕಾರ್ಮಿಕರನ್ನು ಹೊರ ಹಾಕುವ ವ್ಯವಸ್ಥಿತವಾದ ಸಂಚು ನಡೆದಿದೆ ಎಂದು ಕಾರ್ಮಿಕರು ಆಪಾದಿಸುತ್ತಿದ್ದಾರೆ. ಉತ್ಪಾದನಾ ಚಟುವಟಿಕೆಯನ್ನು ಸ್ಟ್ಯಾಂಜೇನ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ (ಎಸ್.ಇ.ಪಿ.ಎಲ್.) ಎಂಬ ತನ್ನದೇ ಇನ್ನೊಂದು ಘಟಕಕ್ಕೆ ಸ್ಥಳಾಂತರ ಮಾಡಿ, ಜೂನ್ 27ರಿಂದ ಅಕ್ರಮವಾಗಿ ಉದ್ದಿಮೆ ಹಸ್ತಾಂತರದ ಹೆಸರಿನಲ್ಲಿ ಕಾರ್ಖಾನೆಯನ್ನು ಮುಚ್ಚಲಾಗಿದೆ.

ಕೆಲಸ ಕಳೆದುಕೊಂಡ 115 ಜನ ಕಾರ್ಮಿಕರು 2016ರ ಜೂನ್ 27ರಿಂದ ಬೀದಿಗೆ ಬಿದ್ದಿದ್ದಾರೆ. ಸ್ಟ್ಯಾಂಜೇನ್ ಇಂಜಿನಿಯರಿಂಗ್ ಕಾರ್ಖಾನೆಯಲ್ಲಿ ಕೇವಲ 25 ಜನ ಕಾರ್ಮಿಕರಿದ್ದು ಸುಮಾರು 200 ಜನ ಗುತ್ತಿಗೆ ಕಾರ್ಮಿಕರಿಂದ ಕೆಲಸ ನಿರ್ವಹಿಸಲಾಗುತ್ತಿದೆ. ಕಾರ್ಮಿಕರು ಸಂಘಟಿತರಾದಾಗ 70ಕ್ಕೂ ಹೆಚ್ಚು ಕಾರ್ಮಿಕರಿಗೆ ಕೆಲಸ ನಿರಾಕರಣೆ ಮಾಡಲಾಗಿತ್ತು.

ಕಾರ್ಮಿಕ ಆಯುಕ್ತರ ಕಛೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಸುಮಾರು 500ಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸಿದ್ದರು. ಈಗ ಕಾರ್ಮಿಕ ಇಲಾಖೆಯು ಸ್ಟ್ಯಾಂಜೇನ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್‍ನ ಕಾಂಟ್ರಾಕ್ಟ್ ಗುತ್ತಿಗೆಯನ್ನು ರದ್ದು ಮಾಡಿದೆ ಎಂದು ತಿಳಿದು ಬಂದಿದೆ.