ಚಮಚಾ ಬಂಡವಾಳಶಾಹಿಗೆ ಪ್ರೋತ್ಸಾಹ 8.5ಲಕ್ಷ ಕೋಟಿ ರೂ.ಗಳ ಮಹಾ ಹಗರಣ

ಸಂಪುಟ: 
30
ಸಂಚಿಕೆ: 
10
date: 
Saturday, 9 July 2016
Image: 

ಪ್ರಧಾನ ಮಂತ್ರಿಗಳಿಗೆ ಸೀತಾರಾಂ ಯೆಚೂರಿ ಪತ್ರ

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಮತ್ತು ಸಂಸತ್ ಸದಸ್ಯ ಸೀತಾರಾಮ್ ಯೆಚೂರಿಯವರು ಜುಲೈ 7, 2016ರಂದು ಪ್ರಧಾನ ಮಂತ್ರಿಗಳಿಗೆ ಕೆಲವು ದೊಡ್ಡ ಕಾರ್ಪೊರೇಟ್‍ಗಳು ಬ್ಯಾಂಕುಗಳು ಸಾಲವಾಗಿ ಕೊಟ್ಟ  ಹಣದ ದುರುಪಯೋಗ ಮಾಡಿರುವ ಬಗ್ಗೆ ಒಂದು ಪತ್ರವನ್ನು ಬರೆದಿದ್ದಾರೆ. ಇದನ್ನು ಜುಲೈ 8ರಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಿಡುಗಡೆ ಮಾಡಿದೆ.

ಅದರಲ್ಲಿ ಕೊನೆಗೆ ಈ ವಿಷಯವನ್ನು ಪ್ರಧಾನ ಮಂತ್ರಿಗಳು ಪೂರ್ಣ ಗಂಭೀರತೆಯಿಂದ ಪರಿಶೀಲಿಸಬೇಕು, ಎಲ್ಲ ಸುಸ್ತಿದಾರರ ಹೆಸರುಗಳನ್ನು ಮತ್ತು ಮೊತ್ತಗಳನ್ನು  ಸಾರ್ವಜನಿಕಗೊಳಿಸುವುದರಿಂದ ಆರಂಭಿಸಿ ಅವರ ಆಸ್ತಿಗಳನ್ನು ಹಣವಾಗಿಸುವ ಒಂದು ಕ್ರಿಯಾಯೋಜನೆಯನ್ನು ಆರಂಭಿಸಬೇಕು, ಅವರ ಬಾಕಿಗಳಿಂದಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳ ಬಂಡವಾಳಕ್ಕೆ ಆಗಿರುವ ನಷ್ಟಗಳನ್ನು ರಿಝರ್ವ್ ಬ್ಯಾಂಕಿನ ಬಂಡವಾಳ ಬಳಸಿ ತುಂಬುವ  ಯೋಜನೆಯನ್ನು ಕೈಬಿಡಬೇಕು,. ವಸೂಲಿ ಮೊದಲು, ನಂತರ ಮರುಬಂಡವಾಳೀಕರಣ ಎಂಬ ನೀತಿಯನ್ನು ವಾಚಾ, ಮನಸಾ ಅನುಸರಿಸಬೇಕು, ಹಾಗೆ ಮಾಡಲು ವಿಫಲವಾದರೆ, “ನಿಮ್ಮ ಸರಕಾರ ಕೆಟ್ಟಮಾರ್ಗದಿಂದ ಗಳಿಸಿದ ಹಣದ ಶಕ್ತಿಗೆ ಋಣಿಯಾಗಿಯೇ ಉಳಿಯುತ್ತದೆ, ಆಮೂಲಕ ಚಮಚಾ ಬಂಡವಾಳಶಾಹಿಯನ್ನು ಪೋಷಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ ಎಂಬುದನ್ನು ದೃಢಪಡಿಸಿದಂತಾಗುತ್ತದೆಯಷ್ಟೇ” ಎಂದು ಎಚ್ಚರಿಸಿದ್ದಾರೆ.

ಆ ಪತ್ರದ  ಪೂರ್ಣ ಪಾಠವನ್ನು ಮುಂದೆ ಕೊಡಲಾಗಿದೆ:

 

ಶ್ರೀ ನರೇಂದ್ರ ಮೋದಿ, ಪ್ರಧಾನ ಮಂತ್ರಿಗಳು

ಭಾರತ ಸರಕಾರ, ನವದೆಹಲಿ

ಪ್ರಿಯ ಪ್ರಧಾನ ಮಂತ್ರಿಯವರೇ,

ನಾನು ಒಂದು ಅತ್ಯಂತ ಮಹತ್ವದ ವಿಷಯದ ಬಗ್ಗೆ, ನಮ್ಮ ಬಹುಪಾಲು ಜನತೆಯ ಜೀವನ ಪರ್ಯಂತದ , ಮತ್ತು ಅದರಿಂದಾಗಿ ಭವಿಷ್ಯದ ಜೀವನೋಪಾಯದ ಭದ್ರತೆಯ ಉಳಿತಾಯಗಳಿಗೆ ಸಂಬಂಧಪಟ್ಟ ವಿಷಯದ ಬಗ್ಗೆ ಬರೆಯುತ್ತಿದ್ದೇನೆ. ಇದರತ್ತ ನಿಮ್ಮ ತುರ್ತು ಗಮನ ಮತ್ತು ಮಧ್ಯಪ್ರವೇಶದ ಅಗತ್ಯವಿದೆ.

ಇತ್ತೀಚಿನ ಆರ್‍ಬಿಐ ಹಣಕಾಸು ಸ್ಥಿರತೆ ವರದಿ ಮತ್ತೊಮ್ಮೆ ನಮ್ಮ ಬ್ಯಾಂಕಿಂಗ್ ವಲಯದ ಅಪಾಯಕಾರಿ ಸ್ಥಿತಿಯನ್ನು ಎತ್ತಿ ತೋರಿದೆ. ಮಾಚ್ರ್ï 2016ರ ಕೊನೆಯ ವೇಳೆಗೆÉಲ್ಲ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕು(ಎಸ್‍ಸಿಬಿ)ಗಳ ಒಟ್ಟು ಕಾರ್ಯಹೀನ ಆಸ್ತಿ(ಎನ್‍ಪಿಎ)ಗಳು ರೂ.5,60,822 ಕೋಟಿ, ಅವುಗಳ ಒಟ್ಟು ರೂ.72,73,927ಕೋಟಿ ಮುಂಗಡಗಳ 7.71%. ಇದಲ್ಲದೆ, ಪುನರ್ರಚಿತ ಸ್ಟಾಂಡರ್ಡ್ ಮುಂಗಡಗಳು ರೂ.2,94729 ಕೋಟಿ, ಒಟ್ಟು ಮುಂಗಡಗಳ 4.05%.

ಇದರ ಅರ್ಥ ನಮ್ಮ ಬ್ಯಾಂಕುಗಳು ಕೊಟ್ಟ ಎಂಟೂವರೆ ಲಕ್ಷ ಕೋಟಿ ರೂ.(ರೂ.8,55,551ಕೋಟಿ)ಗಳಿಗಿಂತಲೂ ಹೆಚ್ಚು ಸಾಲಗಳನ್ನು ಸಾಲ ಪಡೆದವರು ಹಿಂದಿರುಗಿಸಿಲ್ಲ. ಅವರ ಸ್ಪಂದನ ಮತ್ತು ಇದುವರೆಗೆ ನಿಮ್ಮ ಸರಕಾರದ ಕ್ರಿಯೆಯನ್ನು ನೋಡಿದರೆ, ಈ ಹಣ ಸದ್ಯಕ್ಕಂತೂ ಹಿಂದೆ ಬರುವ ಸಾಧ್ಯತೆಗಳು ಬಹಳ ಕಡಿಮೆ. ಈ ಸಾಲ ಪಡೆದವರು, ಪ್ರಧಾನವಾಗಿ ದೊಡ್ಡ ಕಾರ್ಪೊರೇಟ್‍ಗಳು ದುರುಪಯೋಗ ಪಡಿಸಿಕೊಂಡ ಈ ಹಣ ಪ್ರತಿಯೊಬ್ಬ ಭಾರತೀಯನ ಹಣ ಎಂದು ಬೇರೆ ಹೇಳಬೇಕಾಗಿಲ್ಲ.

ಜುಲೈ 01, 2016ರಂದು ಒಂದು ಸಾರ್ವಜನಿಕ ಸಮಾರಂಭದಲ್ಲಿ ಭಾರತದ ಮಹಾಲೆಕ್ಕ ಪರಿಶೋಧಕರು(ಸಿಎಜಿ), ಶಶಿಕಾಂತ ಶರ್ಮ “ಎನ್‍ಪಿಎಗಳಲ್ಲಿ ಒಂದು ಗಮನಾರ್ಹ ಭಾಗ ಬ್ಯಾಂಕಿಂಗ್ ವ್ಯವಸ್ಥೆಯಿಂದ ಮೋಸದಿಂದ ಪಡೆದ ಹಣವಾಗಿರಬಹುದು ಎಂಬ ಒಂದು ನಂಬಿಕೆಯಿದೆ. ಈ ಮೊತ್ತಗಳ ಒಂದು ದೊಡ್ಡ ಭಾಗ ವಿದೇಶಗಳಿಗೆ ವರ್ಗಾಯಿಸಲ್ಪಟ್ಟಿರಬಹುದು, ಅದು ಎಂದೂ ವಾಪಾಸಾಗುವುದಿಲ್ಲ ಎಂಬೊಂದು ನಂಬಿಕೆಯೂ ಇದೆ” ಎಂದು ಹೇಳಿರುವುದಾಗಿ ವರದಿಯಾಗಿದೆ.(ಬಿಸಿನೆಸ್ ಸ್ಟಾಂಡರ್ಡ್, 02 ಜುಲೈ).

ನಿಮ್ಮ ಚುನಾವಣಾ ಪ್ರಚಾರದ ವೇಳೆಯಲ್ಲಿ, ಪ್ರಧಾನ ಮಂತ್ರಿಯ ಅಧಿಕಾರ ಸ್ವೀಕರಿಸಿದ ಕೂಡಲೇ ವಿದೇಶಗಳಲ್ಲಿರುವ ಎಲ್ಲ ಕಪ್ಪು ಹಣವನ್ನು ಹಿಂದಕ್ಕೆ ತಂದು ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಯಲ್ಲಿ 15-20ಲಕ್ಷ ರೂ.ಗಳನ್ನು ಜಮಾ ಮಾಡುವುದಾಗಿ ಕೊಟ್ಟಿರುವ ನಿಮ್ಮ ಭರವಸೆ ಪ್ರಖ್ಯಾತವಾಗಿದೆ. ಆ ಹಣವನ್ನು ಹಿಂದಕ್ಕೆ ತರುವ ನಿಮ್ಮ ಭರವಸೆ ಅಂತಿರಲಿ, ಬ್ಯಾಂಕಿಂಗ್ ವ್ಯವಸ್ಥೆಯಿಂದ ಹಣವನ್ನು ನೀವು ನೋಡುತ್ತಿರುವಂತೆಯೇ, ದೇಶದ ಅತ್ಯುನ್ನತ ಲೆಕ್ಕ ಪರಿಶೋಧಕರನ್ನು ನಂಬುವುದಾದರೆ, “ವಿದೇಶಕ್ಕೆ ವರ್ಗಾಯಿಸಲಾಗಿದೆ ಮತ್ತು ಅದನ್ನೆಂದೂ ವಾಪಾಸು ಪಡೆಯಲಿಕ್ಕೆ ಆಗಲಿಕ್ಕಿಲ್ಲ.”

ನಮ್ಮ ಸಾರ್ವಜನಿಕ ವಲಯದ ಬ್ಯಾಂಕುಗಳ(ಪಿಎಸ್‍ಬಿ) ಆಸ್ತಿ ಗುಣಮಟ್ಟ ಇನ್ನೂ ಹೆಚ್ಚು ವಿಷಮಾವಸ್ಥೆಯಲ್ಲಿದೆ. ಪ್ರಯಾಸಕರ ಮುಂಗಡಗಳ ಅನುಪಾತ ಮಾರ್ಚ್ 2016ರ ವೇಳೆಗೆ 14.5% ಇದೆ. ಪಿಎಸ್‍ಬಿಗಳ ಸಂದೇಹಾಸ್ಪದ ಮತ್ತು ನಷ್ಟದ ಆಸ್ತಿಗಳಿಗೆ ಎತ್ತಿಟ್ಟ ಹಣ ಈಗ ರೂ.1,85,840 ಕೋಟಿ. ಫಲಿತಾಂಶವಾಗಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು ರೂ.20,950 ಕೋಟಿ ನಿವ್ವಳ ನಷ್ಟ ತೋರಿಸಿವೆ. ನಿಜ ಹೇಳಬೇಕೆಂದರೆ, ಪಿಎಸ್‍ಬಿಗಳ ಒಟ್ಟು ಮಾರುಕಟ್ಟೆ ಮೌಲ್ಯ, ಅವುಗಳಿಗೆ ಬರಬೇಕಾದ ಒಟ್ಟು ಜಿಎನ್‍ಪಿಎ ಗಳಿಗಿಂತ ಎಷ್ಟೋ ಕಡಿಮೆ. ಇದೊಂದು ಅತ್ಯಂತ ಗಾಬರಿಯ ಸನ್ನಿವೇಶ.

ನಿಮಗೆ ಚೆನ್ನಾಗಿ ತಿಳಿದಿದೆ, ಅತ್ಯಂತ ಮೇಲಿನ ಹತ್ತು ಕಾರ್ಪೊರೇಟ್ ಮನೆತನಗಳು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಮತ್ತು ಹಣಕಾಸು ಸಂಸ್ಥೆಗಳಿಗೆ ಪಾವತಿಮಾಡಬೇಕಾದ ಬಾಕಿ ಮೊತ್ತ ತತ್ತರಗೊಳಿಸುವಂತದ್ದು, 7ಲಕ್ಷ ಕೋಟಿ ರೂ.ಗಳು ಎಂದು. ಕಳೆದ ವರ್ಷದ ಒಂದು ವರದಿಯ ಪ್ರಕಾರ, ಅದಾಣಿ ಗುಂಪು ಒಟ್ಟು ರೂ.96,031 ಕೋಟಿ ಸಾಲ ಹೊಂದಿತ್ತು, ಎಸ್ಸಾರ್ ಗುಂಪು ರೂ.1.01 ಲಕ್ಷ ಕೋಟಿ, ಜಿಎಂಆರ್ ಗುಂಪು ರೂ.47,976 ಕೋಟಿ, ಜಿವಿಕೆ ಗುಂಪು ರೂ.33,933 ಕೋಟಿ, ಜೇಪೀ ಗುಂಪು ರೂ.75,163 ಕೋಟಿ, ಜೆಎಸ್‍ಡಬ್ಲ್ಯು ಗುಂಪು ರೂ. 58,171 ಕೋಟಿ, ಲಂಕೊ ಗುಂಪು ರೂ.47,102 ಕೋಟಿ, ರಿಲಯಂಸ್ ಗುಂಪು ರೂ.1.25 ಲಕ್ಷ ಕೋಟಿ, ವೆದಾಂತ ಗುಂಪು 1.03 ಲಕ್ಷ ಕೋ ಮತ್ತು ವಿಡಿಯೊಕೊನ್ ಗುಂಪು ರೂ.45,405 ಕೋಟಿ ರೂ. ಸಾಲಗಳನ್ನು ಹೊಂದಿವೆ.(ಕ್ರೆಡಿಟ್‍ಸ್ಯುಸ್ಸೆ ವರದಿ)

ರಿಝರ್ವ್ ಬ್ಯಾಂಕ್ ಆಫ್ ಇಂಡಿಯಾ ದ ಪ್ರಕಾರ, ಬ್ಯಾಂಕುಗಳ ಒಟ್ಟು ಎನ್‍ಪಿಎಗಳಲ್ಲಿ ಮೇಲಿನ 100 ಸಾಲಗಾರರ ಜಿಎನ್‍ಪಿಎ ಮಾರ್ಚ್ 2016ರ ವೇಳೆಗೆ 19.3% ಆಗಿತ್ತು, ಮಾರ್ಚ್ 2015ರಲ್ಲಿ ಇದ್ದದ್ದು 0.7%.

ಕಳೆದ ಒಂದು ವರ್ಷದಲ್ಲಿ ಎನ್‍ಪಿಎಗಳು ಸುಮಾರು 80%ದಷ್ಟು ಏರಿದರೂ, ಹೆಚ್ಚಿನ ಬಾಕಿ ವಸೂಲಿಗೆ ನಿಮ್ಮ ಸರಕಾರದ ಪ್ರಯತ್ನಗಳು ಅದಕ್ಕನುಗುಣವಾದ ಏರಿಕೆಯನ್ನು ಬಾಕಿ ವಸೂಲಿಯ ನಿರ್ಧಾರದಲ್ಲಿ ತೋರಿಸಿಲ್ಲ ಎಂಬುದನ್ನು ಗಮನಿಸಬೇಕಾಗಿರುವುದು ಬೇಸರದ ಸಂಗತಿ. ಹಣಕಾಸು ವರ್ಷ 2015-16ರಲ್ಲಿ ಎಲ್ಲ ಸಾರ್ವಜನಿಕ ವಲಯದಲ್ಲಿನ ಒಟ್ಟು ಸಾಲ ಬಾಕಿ ವಸೂಲಿ ರೂ.1.28ಲಕ್ಷ ಕೋಟಿ, ಇದರಲ್ಲಿ ಈ ಮೊತ್ತದ 46%ದಷ್ಟು ಮನ್ನಾ ಆದ ಮೊತ್ತವೂ ಸೇರಿದೆ. ಹಣಕಾಸು ವರ್ಷ 2014-15ರಲ್ಲಿ ಬಾಕಿ ವಸೂಲಿ ಅದಾಗಲೇ ರೂ.1.27ಲಕ್ಷ ಕೋಟಿ ರೂ. ಆಗಿತ್ತು. ಇದು ನಿಮ್ಮ ಸರಕಾರ ಈ ಸುಸ್ತಿದಾರರಿಂದ ಸಾರ್ವಜನಿಕ ಹಣವನ್ನು ವಸೂಲಿ ಮಾಡುವ ಬಗ್ಗೆ ಕಾಳಜಿ ಹೊಂದಿಲ್ಲ ಎಂಬ ಅಭಿಪ್ರಾಯಕ್ಕೆ ಎಡೆ ಮಾಡಿಕೊಡುತ್ತದೆ.

ಇವುಗಳಲ್ಲಿ ಬಹಳಷ್ಟು ತಥ್ಯಗಳು ನಮ್ಮ ಗಮನಕ್ಕೆ ಬಂದಿರುವುದು ರಘುರಾಮ ರಾಜನ್ ಅಡಿಯಲ್ಲಿ ರಿಝರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‍ಬಿಐ) ಕೈಗೊಂಡ ‘ಆಸ್ತಿ ಗುಣಮಟ್ಟ ಪರಾಮರ್ಶೆ’(ಏಕ್ಯುಆರ್)ಯಿಂದ. ನಿಮ್ಮ ಪಕ್ಷದ ಎಂಪಿಗಳು ಮತ್ತು ಮುಖಂಡರಿಂದ ಸತತವಾಗಿ ಟೀಕೆಗೊಳಗಾಗಿರುವ ಶ್ರೀಯುತ ರಾಜನ್ ಈಗ ಸಪ್ಟಂಬರ್‍ನಲ್ಲಿ ತಮ್ಮ ಹುದ್ದೆ ಬಿಡುತ್ತಿದ್ದಾರೆ, ಆದರೆ ಈ ಏಕ್ಯುಆರ್ ಪ್ರಕ್ರಿಯೆ ಮುಂದಿನ ಮಾರ್ಚ್‍ನಲ್ಲಿ ಕೊನೆಗೊಳ್ಳುತ್ತದೆ. ಒಬ್ಬ ಮಹತ್ವದ ಸಂವಿಧಾನಿಕ ಕಾರ್ಯನಿರ್ವಾಹಕನ ಮೇಲೆ ಕುತ್ಸಿತ ದಾಳಿಗಳು ನಡೆಯುತ್ತಿದ್ದಾಗ ನಿಮ್ಮ ಮೌನದಿಂದಾಗಿ ಕೆಟ್ಟಸಾಲಗಳನ್ನು ಸ್ವಚ್ಛಗೊಳಿಸುವ ಪ್ರಯೋಗವನ್ನು ಪೂರ್ಣಗೊಳಿಸುವಲ್ಲಿ ನಿಮಗೆ ಆಸಕ್ತಿಯಿಲ್ಲ ಎಂದು ಬಹಳ ಮಂದಿ ನಂಬುವಂತೆ ಮಾಡಿದೆ. ಇದು, ನಿಮ್ಮ ಸರಕಾರ ‘ಚಮಚಾ ಬಂಡವಾಳಶಾಹಿ’ಯನ್ನು ಸಕ್ರಿಯವಾಗಿ ಪೋಷಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ ಎಂಬ ತೀರ್ಮಾನಕ್ಕೆ ಬರುವುದಲ್ಲದೆ ಬೇರಾವ ವಿವರಣೆಯೂ ಇಲ್ಲದಂತೆ ಮಾಡಿದೆ.

ನಿಮ್ಮ ಕಚೇರಿ ಆರ್‍ಬಿಐನ ಬಂಡವಾಳ ನೆಲೆಯಿಂದ 3 ರಿಂದ 4ಲಕ್ಷ ಕೋಟಿ ರೂ.ಗಳನ್ನು ಬಳಸಿ ಪಿಎಸ್‍ಬಿಗಳ ಮರು ಬಂಡವಾಳೀಕರಣಕ್ಕೆ ಬಳಸುವ ಒಂದು ಯೋಜನೆಯನ್ನು ಸೂಚಿಸಿದೆ ಎಂದು ಇತ್ತೀಚಿನ ಮಾಧ್ಯಮ ವರದಿಗಳು ಸೂಚಿಸುತ್ತಿವೆ. ಇದೊಂದು ಅಪಾಯಕಾರಿ ವಿಚಾರ, ಏಕೆಂದರೆ ಇದು ಆಂತರಿಕ ಮತ್ತು ಬಾಹ್ಯ ಆರ್ಥಿಕ ಆಘಾತಗಳನ್ನು ಎದುರಿಸಿ ನಿಲ್ಲುವ ಆರ್‍ಬಿಐನ ಸಾಮಥ್ರ್ಯವನ್ನು ಕುಂಠಿತಗೊಳಿಸುತ್ತದೆ.

ಆರ್‍ಬಿಐ ಇದುವರೆಗೆ ಒಂದು ಉತ್ಕಟವಾಗಿ ಸ್ವತಂತ್ರವಾಗಿರುವ ಸಂಸ್ಥೆಯಾಗಿದೆ, ಈಗ ಇಂತಹ ಒಂದು ಆದೇಶವನ್ನು ಅನುಸರಿಸಿದರೆ, ಈ ಕೇಂದ್ರೀಯ ಬ್ಯಾಂಕ್ ಒಂದು ಸರಕಾರೀ ಉಪಕರಣವಾಗಿ ಕಾಣ ಬರುತ್ತದೆ. ಅಲ್ಲದೆ, ಈ ಬ್ಯಾಂಕುಗಳ ಮಾಲಕನಾದಾಗ, ಆರ್‍ಬಿಐಗೆ ಮಿಶ್ರ ಗುರಿಗಳು ಬರುತ್ತವೆ, ಏಕೆಂದರೆ ಇದು ಹಣಕಾಸು ಧೋರಣೆಯನ್ನು ನಡೆಸಬೇಕಾಗಿದೆ ಮತ್ತು ನಿಯಂತ್ರಿಸ ಬೇಕಾಗಿದೆ.

ಬೇರೆ ಯಾರೂ ಅಲ್ಲ, ಸ್ವತಃ ಆರ್‍ಬಿಐ ಗವರ್ನರ್ ಅವರೇ ಈ ವರ್ಷದ ವಾರ್ಷಿಕ ಆರ್ಥಿಕ ಸರ್ವೆಯಲ್ಲಿ ಮೊದಲ ಬಾರಿಗೆ ತೇಲಬಿಟ್ಟ ಈ ವಿಚಾರವನ್ನು ವಿರೋಧಿಸಿದ್ದಾರೆ. ಕಳೆದ ತಿಂಗಳು ಬೆಂಗಳೂರಿನಲ್ಲಿ ಒಂದು ಭಾಷಣದಲ್ಲಿ ಶ್ರೀಯುತ ರಾಜನ್ “ಆರ್ಥಿಕ ಸರ್ವೆ ಆರ್‍ಬಿಐ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಬಂಡವಾಳ ಒದಗಿಸಬೇಕೆಂದು ಸೂಚಿಸಿದೆ. ಇದು ಮುಂದುವರೆಯುವ ಒಂದು ಅಪಾರದರ್ಶಕ ದಾರಿಯಾಗಿ  ಕಾಣಿಸುತ್ತದೆ, ಬ್ಯಾಕಿಂಗ್ ನಿಯಂತ್ರಕ ಮತ್ತೊಮ್ಮೆ ಬ್ಯಾಂಕುಗಳ ಮಾಲಕತ್ವದ ವ್ಯವಹಾರಕ್ಕೆ ಬರುವಂತಾಗುತ್ತದೆ, ಅದರೊಂದಿಗೇ ಹಿತಾಸಕ್ತಿಗಳ ತಿಕ್ಕಾಟ ತರುತ್ತದೆ” ಎಂದಿದ್ದರು( ಆರ್‍ಬಿಐ ವೆಬ್‍ತಾಣ). ಇಂತಹ ಹಿತಾಸಕ್ತಿಗಳ ತಿಕ್ಕಾಟವನ್ನು ತಪ್ಪಿಸಲಿಕ್ಕೆಂದೇ ಮಲೆಗಾಮ್ ಸಮಿತಿಯ ಶಿಫಾರಸಿನಂತೆ 2007ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿದ್ದ ಆರ್‍ಬಿಐನ 59.7% ಪಾಲನ್ನು ಭಾರತ ಸರಕಾರ ರೂ.35,531 ಕೋಟಿಗೆ ಖರೀದಿಸಿತು ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದು ನಾನು ನಿಮ್ಮನ್ನು ಆಗ್ರಹಿಸುತ್ತೇನೆ.

ಅಲ್ಲದೆ, ಈ ವಿಚಾರವನ್ನು  ವಾರ್ಷಿಕ ಆರ್ಥಿಕ ಸರ್ವೆಯಲ್ಲಿ ಮುಂದಿಡುತ್ತ ಮುಖ್ಯ ಆರ್ಥಿಕ ಸಲಹೆಗಾರರು(ಸಿಇಎ) “ಬಹಳ ಮಹತ್ವದ್ದೆಂದರೆ, ಇಂತಹ ಯಾವುದೇ ನಡೆಯನ್ನು ಸರಕಾರ ಮತ್ತು ಆರ್‍ಬಿಐ ಜಂಟಿಯಾಗಿ ಮತ್ತು ಸಹಕಾರದಿಂದ ಆರಂಭಿಸಬೇಕಾಗುತ್ತದೆ. ಬಂಡವಾಳವನ್ನು ಯಾವುದೇ ರೀತಿಯಲ್ಲಿ ಮರುನೆಲೆಗೊಳಿಸುವುದರಿಂದ ಆರ್‍ಬಿಐನ ಸಮಗ್ರತೆ, ಮತ್ತು ಹಣಕಾಸು ಸ್ವಾಸ್ಥ್ಯವನ್ನು ಉಳಿಸಿಕೊಳ್ಳುವುದು- ಮತ್ತು ಅದು ಹಾಗೆ ಕಾಣುವುದು- ಕೂಡ ನಿರ್ಣಾಯಕವಾಗುತ್ತದೆ” ಎಂದು ಸ್ಪಷ್ಟವಾಗಿ ಎಚ್ಚರಿಸಿದ್ದರು(ಇಕನಾಮಿಕ್ ಸರ್ವೆ 2015-16).

ಸಿಇಎಯವರ ಎಚ್ಚರಿಕೆಯ ಪ್ರಕಾರ ಬ್ಯಾಂಕುಗಳ ಮರುಬಂಡವಾಳೀಕರಣವನ್ನು ಆರ್‍ಬಿಐನ ಬಂಡವಾಳ ನೆಲೆಯಿಂದ ಮಾಡುವ ನಡೆಯನ್ನು, ಸ್ವತಃ ಆರ್‍ಬಿಐ ಗವರ್ನರ್ ಅವರೇ ವಿರೋಧಿಸಿರುವುದರಿಂದ ಈಗಲೇ ಕೈಬಿಡಬೇಕು. ಸರಕಾರ ಆರ್‍ಬಿಐನ ಬಂಡವಾಳ ನೆಲೆಯನ್ನು ಕ್ಷಯಿಸಿ ತನ್ನ ಹಣಕಾಸು ಕೊರತೆ ಹೆಚ್ಚಾಗದಂತೆ ನೋಡಿಕೊಳ್ಳುವ ಗುಟ್ಟಿನ ಪ್ರಯತ್ನಗಳನ್ನು ನಡೆಸುವ ಬದಲು ಅದಕ್ಕೆ ಒಂದು ಪಾರದರ್ಶಕ ದಾರಿಯನ್ನು ಕಂಡುಕೊಳ್ಳಬೇಕು.

ಯಾವುದೇ ಸಂದರ್ಭದಲ್ಲಿ ಮರು ಪಾವತಿ ಮಾಡದ ಸಾಲಗಳ ವಸೂಲಿಗೆ ಒಂದು ಕ್ರಿಯಾ ಯೋಜನೆ ಇಲ್ಲದೆ ಬ್ಯಾಂಕುಗಳ ಮರುಬಂಡವಾಳಿಕರಣದ  ಯೋಜನೆಯನ್ನು ಕಾರ್ಯಗತ ಮಾಡಬಾರದು. ನಿಮ್ಮ ಸರಕಾರ ಸಾಲಗಳನ್ನು ಹಿಂದಿರುಗಿಸುವಂತೆ ದೊಡ್ಡ ವ್ಯಾಪಾರೀ ಮನೆತನಗಳ ಮೇಲೆ ಯಾವುದೇ ಒತ್ತಡವನ್ನು ಹಾಕಿಲ್ಲ. ಅವರು ತಮ್ಮ ವೈಭವೋಪೇತ ಜೀವನ ಶೈಲಿಯನ್ನು ಪ್ರದರ್ಶಿಸುತ್ತಲೇ ಇದ್ದಾರೆ, ಅವರ ವೈಯಕ್ತಿಕ ಸಂಪತ್ತು ಅಬಾಧಿತವಾಗಿಯೇ ಇದೆ. ಅತ್ತ ಚಮಚಾ ಬಂಡವಾಳಶಾಹಿಗಳು ಮಜಾ ಮಾಡುತ್ತಿದ್ದರೆ, ನಿಮ್ಮ ಸರಕಾರ ಬಡ ರೈತರೊಂದಿಗೆ ಕಠಿಣವಾಗಿ ವರ್ತಿಸುತ್ತಿದೆ, ಸತತ ಎರಡು ವರ್ಷಗಳ ಬರಗಾಲದ ದಾಳಿಯಿಂದ ವಿನಾಶ ಹೊಂದಿರುವ ಅವರಿಗೆ ಕೆಲವು ಸಾವಿರ ರೂಪಾಯಿಗಳ ಸಾಲ ತೀರಿಸಲಾಗದೆ ತಮ್ಮ ಮನೆಯ ಪಾತ್ರೆಪಗಡಗಳನ್ನು, ಜಾನುವಾರುಗಳನ್ನು ಕಿತ್ತು ಒಯ್ಯುವುದನ್ನು ನೋಡುವಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ! 

ನೀವು, ಪ್ರಧಾನ ಮಂತ್ರಿಯಾಗಿ,  ಅತ್ಯಂತ ಮೇಲಿನ 100 ಸಾಲಗಾರರಿಂದ ಬಾಕಿ ಬರಬೇಕಾದ ಸಾಲಗಳ ವಸೂಲಿ ಆರಂಭಿಸಲು ಒಂದು ತುರ್ತಾದ  ಕ್ರಿಯಾಯೋಜನೆಯನ್ನು ಆಚರಣೆಗೆ ತರಬೇಕು ಎಂದು ಆಗ್ರಹಿಸುತ್ತೇನೆ. ನೀವು ಅವರ ಹೆಸರುಗಳನ್ನು, ಅವರ  ಬಾಕಿ ಮೊತ್ತವನ್ನು ಸಾರ್ವಜನಿಕಗೊಳಿಸುವುದರೊಂದಿಗೆ ಆರಂಭಿಸಬೇಕು; ಆ ಪಟ್ಟಿ ಈಗಾಗಲೇ ಆರ್‍ಬಿಐ, ನಿಮ್ಮ ಸರಕಾರ ಮತ್ತು ಸುಪ್ರಿಂ ಕೋರ್ಟ್ ಬಳಿ ಲಭ್ಯವಿದೆ. ಸುಸ್ತಿದಾರರ ಎಲ್ಲ ಆಸ್ತಿಗಳನ್ನು ಹಣವಾಗಿ ಪರಿವರ್ತಿಸುವ ವರೆಗೆ  ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಇನ್ನು ಮುಂದೆ ಸಾರ್ವಜನಿಕರ ಹಣವನ್ನು ಕೊಡಬಾರದು. ಹೀಗೆ ಮಾಡಲು ವಿಫಲವಾದರೆ ನಿಮ್ಮ ಸರಕಾರ ಈ ಚಮಚಾ ಬಂಡವಾಳಶಾಹಿಗಳ ದುಂದುವೆಚ್ಚಕ್ಕೆ ಬಡ ಭಾರತೀಯರು ಬೆಲೆ ತೆರುವಂತೆ ಮಾಡುತ್ತಿದೆಯೆಂದೇ ಅರ್ಥವಾಗುತ್ತದೆ.

ಕೊನೆಯದಾಗಿ, ಈ ವಿಷಯವನ್ನು ನೀವು ಪೂರ್ಣ ಗಂಭೀರತೆಯಿಂದ ಪರಿಶೀಲಿಸಬೇಕು, ಎಲ್ಲ ಸುಸ್ತಿದಾರರ ಹೆಸರುಗಳನ್ನು ಮತ್ತು ಮೊತ್ತಗಳನ್ನು  ಸಾರ್ವಜನಿಕ ಗೊಳಿಸುವುದರಿಂದ ಆರಂಭಿಸಿ ಅವರ ಆಸ್ತಿಗಳನ್ನು ಹಣವಾಗಿಸುವ ಒಂದು ಕ್ರಿಯಾಯೋಜನೆಯನ್ನು ಆರಂಭಿಸಬೇಕು ಎಂದು ಮತ್ತೊಮ್ಮೆ ಬುದ್ಧಿವಾದ ಹೇಳಬಯಸುತ್ತೇನೆ. ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಮರುಬಂಡವಾಳ ಒದಗಿಸಲು ರಿಝರ್ವ್ ಬ್ಯಾಂಕಿನ ಬಂಡವಾಳ ನೆಲೆಯನ್ನು ಕ್ಷಯಿಸುವ ಯೋಜನೆಯನ್ನು ಕೈಬಿಡಬೇಕು. ನಿಮ್ಮ ಸರಕಾರ ವಸೂಲಿ ಮೊದಲು, ನಂತರ ಮರುಬಂಡವಾಳೀಕರಣ ಎಂಬ ನೀತಿಯನ್ನು ವಾಚಾ, ಮನಸಾ ಅನುಸರಿಸಬೇಕು. ಹಾಗೆ ಮಾಡಲು ವಿಫಲವಾದರೆ, ನಿಮ್ಮ ಸರಕಾರ ಕೆಟ್ಟಮಾರ್ಗದಿಂದ ಗಳಿಸಿದ ಹಣದ ಶಕ್ತಿಗೆ ಋಣಿಯಾಗಿಯೇ ಉಳಿಯುತ್ತದೆ, ಆಮೂಲಕ ಚಮಚಾ ಬಂಡವಾಳಶಾಹಿಯನ್ನು ಪೋಷಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ ಎಂಬುದನ್ನು ದೃಢಪಡಿಸಿದಂತಾಗುತ್ತದೆಯಷ್ಟೇ.

 

ನಿಮ್ಮ ವಿಶ್ವಾಸಿ,

ಸೀತಾರಾಮ್ ಯೆಚೂರಿ