Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಹಿರಿಯ ರೈತ ಹೋರಾಟಗಾರ ಕಮ್ಯುನಿಸ್ಟ್ ಮುಂದಾಳು ಬಂಗಾರೇಶ್ವರ ಗೌಡ ನಿಧನ

ಸಂಪುಟ: 
10
ಸಂಚಿಕೆ: 
28
Sunday, 3 July 2016

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರೈತ ಹೋರಾಟಗಾರ ಕಮ್ಯುನಿಸ್ಟ್ ಮುಂದಾಳು ಬಂಗಾರೇಶ್ವರ ಗೌಡ ಜೂನ್ 27ರಂದು ನಮ್ಮನ್ನಗಲಿದರು. ಅವರಿಗೆ 76 ವರ್ಷವಾಗಿತ್ತು. ಇವರು ಅವಿಭಜಿತ ಕಮ್ಯುನಿಷ್ಟ ಪಕ್ಷದ ಸಾಮಾನ್ಯ ಸದಸ್ಯರಾಗಿ 1964 ರ ನಂತರ ಭಾರತ ಕಮ್ಯುನಿಸ್ಟ್ ಪಕ್ಷ(ಮಾಕ್ರ್ಸ್ ವಾದಿ) ಸದಸ್ಯರಾಗಿ ಜೀವನದ ಕೊನೆಯ ತನಕವೂ ಅದೇ ಸಿದ್ಧಾಂತದಲ್ಲಿ ಮುಂದುವರೆದವರು.

ಅಪ್ಪಟ ಸಿದ್ಧಾಂತಬದ್ಧ ವ್ಯಕ್ತಿತ್ವದ ಇವರು ಭೂಮಿ ಹೋರಾಟದ ಮುಂಚೂಣಿ ನಾಯಕರು. ಪ್ರಾರಂಭದಲ್ಲಿ ಅಖಿಲ ಭಾರತ ಕಿಸಾನ್ ಸಭಾ ಮತ್ತು ನಂತರ ಕರ್ಣಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಮತ್ತು ಜಿಲ್ಲಾ ಮುಂದಾಳುವಾಗಿ ಅಧ್ಯಯನಶೀಲರೂ ಆದ ಇವರು ಹೋರಾಟದ ಜೊತೆಗೆ ಜನಜೀವನದಲ್ಲಿ ಹಾಸುಹೊಕ್ಕಾದ ಮೌಢ್ಯತೆಯ ವಿರುದ್ಧ ಸಾಂಸ್ಕೃತಿಕ ಜಾಗೃತಿಗೂ ತೊಡಗಿಸಿಕೊಂಡಿದ್ದರು. ಜಿಲ್ಲೆ ಮತ್ತು ರಾಜ್ಯ-ರಾಷ್ಟ್ರ ಮಟ್ಟದ ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು.

ಇವರ ತಂದೆ ಕೆರಿಯಾ ಗೌಡರು ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ರೈತ ಕಾರ್ಮಿಕರ ಆಂದೋಲನದ ಭಾಗವಾಗಿ ಧಾರೇಶ್ವರ ವಕೀಲರ ಜೊತೆಗಿದ್ದರು. ಬಂಗಾರೇಶ್ವರರೂ ಕೂಡ ಎಂ.ಎಸ್.ಧಾರೇಶ್ವರ, ಪಿಕಳೆ ಮಾಸ್ತರ್, ಈರಾ ಮಾರ್ಯಾ ಮತ್ತು ಪಿ.ಜಿ.ಮಶಾಲ್ದಿಯವರ ಜೊತೆಗಾರರಾಗಿ ಶಿರಸಿ ಕೇಂದ್ರಿತವಾಗಿ ಸುತ್ತಲಿನ ಹಲವು ತಾಲೂಕುಗಳಲ್ಲಿ ಮನೆ, ನಿವೇಶನ ರಹಿತರ ಬೇಡಿಕೆಗಳಿಗಾಗಿ ಮತ್ತು ಅತಿಕ್ರಮಣ ಭೂಮಿ ಗಾಂವ್ ಠಾಣಾ ಭೂಮಿ ಸಕ್ರಮಾತಿಗೆ ಆಂದೋಲನ ಕಟ್ಟಿದರು.

ಅಂದಿನ ದಿನಗಳಲ್ಲಿ ಜಿಲ್ಲೆಗೆ ರಾಜ್ಯ ರಾಷ್ಟ್ರ ಮಟ್ಟದ ನಾಯಕರನ್ನು ಹೋರಾಟಕ್ಕೆ ಕರೆಸಿ ಮಾರ್ಗದರ್ಶನ ಪಡೆಯುತ್ತಿದ್ದರು. ಶಿರಸಿಯ ಕಾರ್ಮಿಕ ಚಳುವಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಅನಾರೋಗ್ಯದ ಕಾರಣ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ವೈದ್ಯರ ನಿರ್ಲಕ್ಷ್ಯದಿಂದ ಅವರು ಕಾಲಿನ ಸ್ವಾಧೀನತೆಯನ್ನು ಕಳಕೊಂಡು ಒಂದು ವರ್ಷದಿಂದ ಹಾಸಿಗೆ ಹಿಡಿದಿದ್ದರು. ಇದರಿಂದ ತನ್ನ ರೈತ ಕಾರ್ಮಿಕರ ಚಳುವಳಿಯ ಸಂಘಟನೆಯ ಕೆಲಸದಿಂದ ಬೇಗನೇ ನಿರ್ಗಮಿಸುತ್ತಿರುವ ಬಗ್ಗೆ ತೀವ್ರ ನೋವನ್ನು ತೋಡಿಕೊಂಡಿದ್ದರು. ಅನಾರೋಗ್ಯದ ಮಧ್ಯೆಯೂ ಇತ್ತೀಚೆಗೆ ತನ್ನೂರಿನಲ್ಲಿ ತಾನೇ ನೇತೃತ್ವ ವಹಿಸಿದ ನಿವೇಶನ ರಹಿತರ ಹೋರಾಟ ಹಾಗೂ ಅತಿಕ್ರಮಣ ಭೂಮಿ ಸಕ್ರಮಾತಿಯ ಆಂದೋಲನವನ್ನು ತೀವ್ರಗೊಳಿಸಲು ಕೂಡ ಸಂಗಾತಿಗಳಿಗೆ ಮಾರ್ಗದರ್ಶನ ಮಾಡಿದ್ದರು.

ಇಷ್ಟು ಬದ್ಧತೆಯ ಬಂಗಾರೇಶ್ವರರು ಅಗಲಿದಾಗ ನೂರಾರು ರೈತರು, ಹೋರಾಟದ ಸಂಗಾತಿಗಳು, ಕರ್ನಾಟಕ ಪ್ರಾಂತ ರೈತ ಸಂಘದ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರಾದ ಒಡನಾಡಿ ಮಂಜುನಾಥ ಪುಲ್ಕರ್, ಕಾರ್ಯದರ್ಶಿ ಶಾಂತಾರಾಮ ನಾಯಕ, ಸಿಐಟಿಯು ಜಿಲ್ಲಾ ಪದಾಧಿಕಾರಿಗಳಾದ ಸಿ.ಆರ್.ಶಾನಭಾಗ, ನಾಗಪ್ಪ ನಾಯ್ಕ್ಕ, ಚಿಂತನ ಉತ್ತರಕನ್ನಡದ ಸಂಚಾಲಕರಾದ ವಿಠ್ಠಲ ಭಂಡಾರಿ ಮುಂತಾದವರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

ಸಿಪಿಐಎಂ ನಿಂದ ಅಂತಿಮ ನಮನ:

ಸದಾ ಜನ ಹಿತಕ್ಕೆ ತುಡಿಯುತ್ತಿದ್ದ, ರೈತ ಕಾರ್ಮಿಕರ, ಯುವಜನರ ಕುರಿತು ಕೆಲಸ ಮಾಡುತ್ತಿದ್ದ ಕಮ್ಯುನಿಷ್ಟ ಸಿದ್ಧಾಂತಕ್ಕೆ ಬದ್ಧತೆಯ ಮತ್ತು ಸಮರ್ಪಣಾ ಮನೋಭಾವದ ಬಂಗಾರೇಶ್ವರ ಗೌಡರ ನಿಧನದಿಂದ ಜಿಲ್ಲೆಯ ಕಮ್ಯುನಿಷ್ಟ ಆಂದೋಲನದ ಹಿರಿಯ ಕೊಂಡಿ ಕಳೆದು ಹೋದದಂತಾಗಿದೆ ಎಂದು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸ್ ವಾದಿ) ಉತ್ತರ ಕನ್ನಡ ಜಿಲ್ಲಾ ಸಮಿತಿ ಅವರಿಗೆ ಮನತುಂಬಿದ ಗೌರವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದೆ.

ತನ್ನ ಸ್ವಾರ್ಥ ಬಿಟ್ಟು ಅರವತ್ತರ ದಶಕದಿಂದಲೇ ಅವಿರತವಾಗಿ ಐವತ್ತೈದಕ್ಕೂ ಹೆಚ್ಚು ವರ್ಷ ಜಿಲ್ಲೆಯ ದುಡಿಯುವ ವರ್ಗಕ್ಕೆ ಸಮರ್ಪಿಸಿಕೊಂಡು, ಸಮಾಜ ಬದಲಾವಣೆಗೆ ಶೋಷಣೆಯಿಲ್ಲದ ಸಮಸಮಾಜದ ಕನಸು ನನಸಾಗಲು ತನ್ನಿಂದಾದಷ್ಟು ಕೆಲಸ ಮಾಡಿದ ಬಂಗಾರೇಶ್ವರರ ಆದರ್ಶವನ್ನು ಇಂದಿನ ಚಳುವಳಿಗಾರರು ಮುಂದುವರೆಸಿಕೊಂಡು ಹೋಗುವ ಪಣವನ್ನು ತೊಡುವುದಾಗಿ ಸಿಪಿಐ(ಎಂ) ಉತ್ತರ ಕನ್ನಡ ಜಿಲ್ಲಾ ಸಮಿತಿ ತನ್ನ ಶ್ರದ್ಧಾಂಜಲಿ ಹೇಳಿಕೆಯಲ್ಲಿ ತಿಳಿಸಿದೆ.