ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು

ಸಂಪುಟ: 
10
ಸಂಚಿಕೆ: 
28
Tuesday, 28 June 2016

ಬಳ್ಳಾರಿ, ಜೂನ್ 28: ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇವಲ ಖಾತೆಗಳ ಹಂಚಿಕೆಯಲ್ಲೇ ಅಧಿಕಾರ ನಡೆಸುತ್ತಿದ್ದಾರೆ. ಗಣಿ ಮಾಲಿಕರಾದ ಸಂತೋಷ್‍ಲಾಡ್‍ರವರಿಗೆ ಸರ್ಕಾರ ಕಾರ್ಮಿಕ ಸಚಿವರನ್ನಾಗಿ ಮಾಡಿರುವುದು ದುರಂತದ ಸಂಗತಿಯೆಂದು ರಾಜ್ಯ ಸರ್ಕಾರದ ವಿರುದ್ಧ ಸಿಐಟಿಯು ರಾಜ್ಯ ಪ್ರಧಾನ ಕಾರ್ಯರ್ಶಿ ಕಾಂ.ಎಸ್.ವರಲಕ್ಷ್ಮೀರವರು ತರಾಟೆ ತೆಗೆದುಕೊಂಡರು.

ಮುಂದುವರೆದು ಮಾತನಾಡಿದ ಕಾಂ.ಎಸ್.ವರಲಕ್ಷ್ಮೀರವರು "ಎರಡು ದಶಕಗಳಿಂದ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಾ ಬರುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರ ನೀತಿಗಳನ್ನು ಮತ್ತಷ್ಟು ತೀವ್ರಗೊಂಡಿದೆ. ಕಾರ್ಮಿಕ ಖಾತೆಯನ್ನು ಬಂಡವಾಳಶಾಯಿಗೆ ಒಪ್ಪಿಸಿ ಕಾರ್ಮಿಕರನ್ನು ಜೀತದಾಳಾಗಿ ಮಾಡಿದ್ದಾರೆ. ಜನ ಸಾಮಾನ್ಯರ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರೀಯ ಸಂಪತ್ತನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಒಪ್ಪಿಸಲು ಮುಂದಾಗಿವೆ. ಕಾರ್ಮಿಕ ಪರವಾದ ಕಾನೂನುಗಳನ್ನು ತಿದ್ದುಪಡಿ ಮಾಡಲು ಹೊರಟಿದ್ದು ಇದು ಕಾರ್ಪೊರೇಟ್ ವಲಯದ ಹಿತ ಕಾಯುವುದಾಗಿದೆ ಎಂದು ಗುಡುಗಿದರು.

ಬಳ್ಳಾರಿ ಜೂನ್ 26-27ರಂದು ಹಗರಿಬೋಮ್ಮನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸಿ.ಐ.ಟಿ.ಯು 8ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಮೊದಲನೇ ದಿನ ಬಳ್ಳಾರಿ ಜಿಲ್ಲಾದ್ಯಾಂತ ಇರುವ ಸಿ.ಐ.ಟಿ.ಯು ಕಾರ್ಯಕರ್ತರು ಹಗರಿಬೋಮ್ಮನಹಳ್ಳಿ ಬಸವೇಶ್ವರ ವೃತ್ತದಲ್ಲಿ ಸೇರಿ ಮುಖ್ಯ ಬೀದಿಗಳಲ್ಲಿ ಸಾಗಿದ ಮೆರವಣಿಗೆ ಬಹಿರಂಗ ಸಭೆಯಲ್ಲಿ ಸಮಾವೇಶಗೊಂಡಿತು.

ಕರ್ನಾಟಕ ಪ್ರಾಂತ ರೈತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ||ಯು.ಬಸವರಾಜ್‍ರವರು ಮಾತನಾಡಿ "ಬಗರ್ ಹುಕುಂ ಸಾಗುವಳಿದಾರರನ್ನು ರಾಜ್ಯ ಸರ್ಕಾರ ಒಕ್ಕಲೆಬ್ಬಿಸಲು ಹೊರಟಿದೆ, ಅದಕ್ಕಾಗಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿದೆ. ಮುಂಗಾರಿನಲ್ಲಿ ರೈತರಿಗೆ ಸರಿಯಾದ ಸಮಯಕ್ಕೆ ಸಮರ್ಪಕವಾದ ಬೀಜ, ಗೊಬ್ಬರ ವಿತರಣೆ ಮಾಡಿಲ್ಲ, ರೈತ ಮತ್ತು ಕಾರ್ಮಿಕ ವಿರೋಧಿ ಸರ್ಕಾರವೆಂದು" ಅವರು ವಿಮರ್ಷಿಸಿದರು.

ಸಿ.ಐ.ಟಿ.ಯು. ಜಿಲ್ಲಾ ಕಾರ್ಯದರ್ಶಿಗಳಾದ ಕಾಂ||ಜೆ.ಸತ್ಯಬಾಬು ರವರು "ಬಳ್ಳಾರಿ ಜಿಲ್ಲೆಯ ಕಾರ್ಮಿಕರ ಸಮಸ್ಯೆಗಳಿಗೆ ಕಾರ್ಮಿಕ ಮಂತ್ರಿ ಗಮನ ನೀಡಬೇಕಾಗಿದೆ. ಸಂಡೂರಿನಲ್ಲಿರುವ ಅವರ ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರಿಯಾದಂತಹ ನ್ಯಾಯವನ್ನು ಒದಗಿಸಿಲ್ಲ. ಜಿಲ್ಲೆಯ ಮತ್ತು ರಾಜ್ಯದ ಕಾರ್ಮಿಕರ ಹಿತಕಾಯುವಲ್ಲಿ ವಿಫಲರಾದರೆ ಮುಂದಿನ ದಿನಗಳಲ್ಲಿ ಕಾರ್ಮಿಕರ ಸರಿಯಾದಂತಹ ಗುಣಪಾಠವನ್ನು ಕೊಡುತ್ತಾರೆ" ಎಂದು ಎಚ್ಚರಿಕೆ ನೀಡಿದರು.

ಬಹಿರಂಗ ಸಭೆಯ ಅಧ್ಯಕ್ಷತೆಯನ್ನು ಸಿ.ಐ.ಟಿ.ಯು ಜಿಲ್ಲಾಧ್ಯಕ್ಷರಾದ ಕಾಂ||ಆರ್.ಎಸ್.ಬಸವರಾಜ ವಹಿಸಿದ್ದು, ಮತ್ತು ಜಿಲ್ಲಾ ಸಮಿತಿಯ ಇನ್ನಿತರ ಪದಾಧಿಕಾರಿಗಳು ಮಾತನಾಡಿದರು.

ಸ್ವಾಗತ ಸಮಿತಿ ಗೌರವ ಅಧ್ಯಕ್ಷರಾದ ಹುರುಕಡ್ಲೆ ಶಿವಕುಮಾರ ಮತ್ತು ಅಧ್ಯಕ್ಷರಾದ ಬಿ. ಮಾಳಮ್ಮ (ರಾಜ್ಯ ಅಧ್ಯಕ್ಷರು ದೇವದಾಸಿ ಮಹಿಳಾ ಸಂಘಟನೆ), ಕೆ.ಪಿ.ಆರ್.ಎಸ್. ಜಿಲ್ಲಾಧ್ಯಕ್ಷರಾದ ವಿ.ಎಸ್.ಶಿವಶಂಕರ್, ಜೆ.ಎಂ.ಎಸ್. ಅಧ್ಯಕ್ಷರಾದ ಮಂಜುಳ ಹವಾಲ್ದಾರ್, ಮುಖಂಡರಾದ ಸರೋಜ, ಸರ್ಕಾರಿ ನೌಕರರ ಒಕ್ಕೂಟದ ಮುಖಂಡರಾದ ಎಂ. ಜಂಬಯ್ಯನಾಯ್ಕ, ಕೊಡಗಿ ಮಲ್ಲಿಕಾರ್ಜುನ ಮುಂತಾದವರು ಭಾಗವಹಿಸಿದ್ದರು. ಬಹಿರಂಗ ಸಭೆಯ ಸ್ವಾಗತವನ್ನು ಸ್ವಾಗತ ಸಮಿತಿ ಕಾರ್ಯದರ್ಶಿ ಕಾಂ||ಎಸ್. ಜಗನ್ನಾಥ ನೆರವೇರಿಸಿದರು.

ಬಹಿರಂಗ ಸಭೆಯ ನಂತರ ಪ್ರತಿನಿಧಿಗಳ ಸಮಾವೇಶವನ್ನು ಆಯೋಜಿಸಲಾಗಿತ್ತು. ಸಮಾವೇಶದ ಮುಂಚೆ ಸಿ.ಐ.ಟಿ.ಯು. ದ್ವಜಾರೋಹಣವನ್ನು ಜಿಲ್ಲಾಧ್ಯಕ್ಷರಾದ ಆರ್.ಎಸ್. ಬಸವರಾಜ್‍ರವರು ನೆರವೇರಿಸಿದರು.

ಸುಮಾರು 150 ಜನ ಪ್ರತಿನಿಧಿಸಂಗಾತಿಗಳು ಭಾಗವಹಿಸಿದ್ದರು, ಕರಡು ವರದಿ 17 ಜನ ಸಂಗಾತಿಗಳು ಚರ್ಚಿಸಿದ್ದರು, ಜಿಲ್ಲೆಯ ಕಾರ್ಮಿಕರ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಕಾರ್ಮಿಕ ಚಳುವಳಿಗಳನ್ನು ವಿಸ್ತಾರ ಮಾಡುವುದು ಮತ್ತು ಸಂಘಟನೆಯನ್ನು ಬಲಿಷ್ಠಗೊಳಿಸುವ ಕುರಿತು ಚರ್ಚೆಗಳು ನಡೆದಿದೆ.

ಸಿಐಟಿಯು ಸಮ್ಮೇಳನದಲ್ಲಿ ನೂತನ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಿತು. 21 ಪದಾದಿಕಾರಿಗಳು ಹಾಗೂ 52 ಜನ ಜಿಲ್ಲಾ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾದ್ಯಕ್ಷರಾಗಿ ಆರ್.ಭಾಸ್ಕರ್‍ರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾಗಿ ಜೆ.ಸತ್ಯಬಾಬು(ಮರು ಆಯ್ಕೆ), ಖಜಾಂಚಿಯಾಗಿ ಕೆ.ನಾಗರತ್ನಮ್ಮ ಆಯ್ಕೆಯಾಗಿದ್ದು ಸಮ್ಮೇಳನ ಯಶಸ್ವಿಯಾಗಿ ನಡೆಸಲಾಯಿತು. ಸಮ್ಮೇಳನದ ಕೊನೆ ಭಾಗದಲ್ಲಿ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಎಲ್ಲಾ ಸಂಗಾತಿಗಳಿಗೆ ಅಭಿನಂದಿಸಲಾಯಿತು.

 

 

ರದಿ: ಜೆ. ಸತ್ಯಬಾಬು