ಭೀಕರ ಬರದಲ್ಲೂ ಸಿಗದ ಉದ್ಯೋಗ ಖಾತ್ರಿ ಕೆಲಸ

Friday, 3 June 2016

ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತಿ ಕಛೇರಿಗಳಿಗೆ –ಕೃಷಿ ಕೂಲಿಕಾರರ ಮುತ್ತಿಗೆ

ಮಂಡ್ಯ, ಜೂನ್ 03: ರಾಜ್ಯದಲ್ಲಿ ಮಳೆ ಇಲ್ಲದೆ ಭೀಕರ ಬರಗಾಲವಿದ್ದು ರಾಜ್ಯ ಸರ್ಕಾರವೂ ರಾಜ್ಯದ 173 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಭೂ ಮಾಲಕರು ಕೂಡ ಕೂಲಿ ಕೆಲಸಕ್ಕೆ ಕೃಷಿ ಕೂಲಿಕಾರರನ್ನು ಕರೆಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವೂ 173 ತಾಲೂಕುಗಳ ಗ್ರಾಮೀಣ ಕೃಷಿ ಕೂಲಿಕಾರರಿಗೆ ತಕ್ಷಣ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ನೀಡಬೇಕು ಎಂದು ಆದೇಶ ನೀಡಿದರು ಕೂಡ, ರಾಜ್ಯದ ಯಾವ ಜಿಲ್ಲೆಯಲ್ಲೂ, ತಾಲೂಕಿನಲ್ಲೂ ಮತ್ತು ಗ್ರಾಮ ಪಂಚಾಯತಿಯಲ್ಲೂ ಕೃಷಿ ಕೂಲಿಕಾರರಿಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸವನ್ನು ನೀಡಿರುವುದಿಲ್ಲ. 

ಇದರ ಬಗ್ಗೆ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಸಮಿತಿಯೂ ಚರ್ಚಿಸಿ 1 ಜೂನ್ 2016 ರಂದು ಜಿಲ್ಲಾ ಪಂಚಾಯತಿ ಕಛೇರಿ, ತಾಲೂಕು ಪಂಚಾಯತಿ ಕಛೇರಿಗಳಿಗೆ ಮುತ್ತಿಗೆ ಹಾಕುವುದರ ಮೂಲಕ ಕೃಷಿ ಕೂಲಿಕಾರರಿಗೆ ಕೆಲಸ ನೀಡುವಂತೆ ಒತ್ತಾಯಿಸಲು ತೀರ್ಮಾನಿಸಿತು. ಇದರ ಭಾಗವಾಗಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮಂಡ್ಯ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕೃಷಿ ಕೂಲಿಕಾರರು ಸಿಲ್ವರ ಜ್ಯೂಬಿಲಿ ಪಾರ್ಕಿನಿಂದ ಬೆಂಗಳೂರು-ಮೈಸೂರು ಹೆದ್ದಾರಿಯ ಮೂಲಕ ಹಾದು  ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾ ಪಂಚಾಯತಿ ಕಛೇರಿಗೆ ಮುತ್ತಿಗೆ ಹಾಕಿ ಸಿ.ಇ.ಓ ರವರಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿ ಮಾತನಾಡಿದ ಸಿಇಓ ಶರತ ಐಎಎಸ್ ರವರು ತಕ್ಷಣ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಆದೇಶ ಹೊರಡಿಸಿ ಕೃಷಿ ಕೂಲಿಕಾರರಿಗೆ ಕೆಲಸ ನೀಡುವಂತೆ ಆದೇಶಿಸುತ್ತೇವೆ ಎಂದು ಹೇಳಿದರು. 15 ದಿನಗಳ ನಂತರ ಸಂಘದ ಮುಖಂಡರು ಮತ್ತು ತಾಲೂಕು ಅಧಿಕಾರಿಗಳ ಜೊತೆ ಸಭೆ ನಡೆಸುವುದಾಗಿ ತಿಳಿಸಿದರು. ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಅಧ್ಯಕ್ಷರಾದ ಎಂ. ಪುಟ್ಟಮಾದು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಬಸವರಾಜು, ಜಿಲ್ಲಾ ಉಪಾಧ್ಯಕ್ಷರಾದ ಕೆ. ಹನುಮೇಗೌಡ, ಸುರೇಂದ್ರ, ಅಬ್ದುಲ್, ಸರೋಜಮ್ಮ, ಸಹಕಾರ್ಯದರ್ಶಿಗಳಾದ ಬಿ. ಹನುಮೇಶ, ವೈ.ಕೆ. ಪ್ರದೀಪಕುಮಾರ, ಶಂಕರಪ್ಪ, ಡಿ.ಸಿ.ಚೌಡೇಗೌಡ, ಶಿವಬೋರಯ್ಯ, ಯಶೋದಮ್ಮ, ಶುಭಾವತಿ, ಬಸವಣ್ಣ, ರಾಜಮ್ಮ, ಮಂಚೇಗೌಡ, ನೂರ್‍ಜಾನ್, ನಗೀನಾ ವಹಿಸಿದ್ದರು.

ಉಳಿದಂತೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಯಾದಗಿರಿ, ಕಲ್ಬುರ್ಗಿ ಜಿಲ್ಲೆಯ ಆಳಂದ, ಸೇಡಂ, ರಾಯಚೂರು ಜಿಲ್ಲೆಯ ಸಿಂಧನೂರು, ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ, ಉಡುಪಿ ಜಿಲ್ಲೆ ಕುಂದಾಪುರ, ಕೊಪ್ಪಳ ಜಿಲ್ಲೆ ಗಂಗಾವತಿ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕುಗಳಲ್ಲಿ ಕೃಷಿ ಕೂಲಿಕಾರರು ಪ್ರತಿಭಟನೆ ನಡೆಸಿ ಸಿಇಓ ಗಳಿಗೆ ಮನವಿ ಸಲ್ಲಿಸಲಾಗಿದೆ. ವರ್ಷದಲ್ಲಿ 100 ದಿನಗಳ ಬದಲಾಗಿ ಕನಿಷ್ಠ 250 ದಿನ ಕೆಲಸ ಕೊಡಬೇಕು, ದಿನಗೂಲಿಯನ್ನು ರೂ.300ಕ್ಕೆ ಹೆಚ್ಚಿಸಬೇಕು, ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ವಿಶ್ರಾಂತಿಗೆ ನೆರಳು ಇತ್ಯಾದಿ ಸೌಕರ್ಯ ಕಲ್ಪಿಸಬೇಕು, ಕೆರೆ ಹೂಳೆತ್ತುವ ಕೆಲಸಕ್ಕೆ ಯಂತ್ರಗಳನ್ನು ಬಳಕೆ ಮಾಡದೆ ಕೂಲಿಕಾರರಿಂದಲೇ ಕೆಲಸ ಮಾಡಿಸಬೇಕು, ಬಾಕಿ ವೇತನ ಕೂಡಲೇ ಸಂದಾಯ ಮಾಡಬೇಕು, ವಾರಕ್ಕೊಮ್ಮೆ ಕೂಲಿ ಹಣ ಪಾವತಿ ಮಾಡಬೇಕು, ಕೂಲಿಕಾರರಿಗೆ ಉಚಿತವಾಗಿ 3 ಕೆ.ಜಿ. ಅಕ್ಕಿ, 2 ಕೆ.ಜಿ. ಗೋದಿಯನ್ನು ರೇಷನ್‍ನಲ್ಲಿ ಕೊಡುವುದನ್ನು ನಿಲ್ಲಿಸಿ ಮೊದಲಿನಂತೆ 2 ರೂ. ದರದಲ್ಲಿ ತಿಂಗಳಿಗೆ 30 ಕೆ.ಜಿ. ಅಕ್ಕಿ ನೀಡಬೇಕು, ಎಲ್ಲಾ ಕೂಲಿಕಾರ ಕುಟುಂಬಗಳಿಗೂ ಉಚಿತವಾಗಿ ಅಡುಗೆ ಅನಿಲ ಸಂಪರ್ಕವನ್ನು ಒದಗಿಸಬೇಕು ಮೊದಲಾದ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಲಾಯಿತು.

 

 

ವರದಿ - ಕೆ. ಹನುಮೇಗೌಡ