ವಿದೇಶದಲ್ಲಿ ಅಧ್ಯಯನ ನಡೆಸುತ್ತಿರುವ ರಾಜ್ಯದ 8 ವಿದ್ಯಾರ್ಥಿಗಳ ಶಿಷ್ಯವೇತನ ಮುಂದುವರೆಸಲು ಎಸ್.ಎಫ್.ಐ ಆಗ್ರಹ

Monday, 13 June 2016

ಬೆಂಗಳೂರು, ಜೂನ್ 13: ವಿದೇಶದಲ್ಲಿ ಅಧ್ಯಯನ ನಡೆಸುತ್ತಿರುವ ಸಂಶೋಧನಾ ಮತ್ತು ಸ್ನಾತಕ್ಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮುಂದುವೆರೆಸುವಂತೆ ಒತ್ತಾಯಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ರಾಜ್ಯ ನಿಯೋಗ ಮನವಿ ಸಲ್ಲಿಸಿದೆ. ಮನವಿ ಸ್ವೀಕರಿಸಿ ಮಾತನಾಡಿದ ಪ್ರಧಾನ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿಗಳಾದ ಅಶೋಕ ರವರು ಕಾರ್ಯದರ್ಶಿಗಳ ಮತ್ತು ಅಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ.

2014-15ರಲ್ಲಿ ವಿದೇಶದಲ್ಲಿ ಉನ್ನತ ವ್ಯಾಸಾಂಗಕ್ಕೆ ಎಂದು ಕರ್ನಾಟಕದಿಂದ 8 ವಿದ್ಯಾರ್ಥಿಗಳು ಅಧ್ಯಯನ ನಡೆಸಲು ಹೋಗಿರುತ್ತಾರೆ. 2015-16ನೇ ಸಾಲಿನಲ್ಲಿ ರಾಜ್ಯ ಸರಕಾರ “ಡಿ.ದೇವರಾಜ್ ಅರಸುರವರ ಜನ್ಮಶತಮಾನೋತ್ಸವದ ಭಾಗವಾಗಿ ಜಾರಿಗೆ ತಂದ ವಿದೇಶಿ ವ್ಯಾಸಂಗ ವೇತನ ನೀಡುವ ಯೋಜನೆಗೆ ಈ ಎಂಟು ಜನ ಅರ್ಜಿ ಹಾಕಿರುತ್ತಾರೆ. ಲಿಂಗರಾಜ ಎಂಬ ವಿದ್ಯಾರ್ಥಿಗೆ 48 ತಿಂಗಳುಗಳ ಕಾಲ, ಉಳಿದ 7 ವಿದ್ಯಾರ್ಥಿಗಳಿಗೆ 24 ತಿಂಗಳುಗಳ ಕಾಲ ವ್ಯಾಸಾಂಗ ವೇತನ ನೀಡುವುದಾಗಿ ಹೇಳಿದ್ದ ಸರಕಾರ ಈಗ 2014-15 ರಲ್ಲಿ ಆಯ್ಕೆಯಾದವರಿಗೆ ಒಂದು ವರ್ಷಕ್ಕೆ ಮಾತ್ರ ವ್ಯಾಸಂಗ ವೇತನ ನೀಡುವುದಾಗಿ ಹೇಳಿದ್ದರಿಂದ ಉಳಿದ ವರ್ಷದ ವ್ಯಾಸಾಂಗಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಆ ವಿದ್ಯಾರ್ಥಿಗಳು ಆತಂಕ್ಕಿಡಾಗಿದ್ದು ಶಿಕ್ಷಣವನ್ನು ಕಡಿತಗೊಳಿಸುವುದಾಗಿ ಹೇಳುತ್ತಿದ್ದಾರೆ.

ಅವರು ಅರ್ಜಿ ಹಾಕುವಾಗ ಯಾವುದೇ ಮಾನದಂಡಗಳನ್ನು ತಿಳಿಸದೆ ಈಗ ಏಕಾ-ಏಕಿ ಶಿಷ್ಯವೇತನ ನಿಲ್ಲಿಸಿರುವುದು ಶಿಕ್ಷಣ ವಿರೋಧಿಯಾಗಿದೆ. ಆ 8 ಜನ ವಿದ್ಯಾರ್ಥಿಗಳು ಇಲಾಖೆಯ ವೆಬ್ ಸೈಟ್ ಹಾಗೂ ಮೇಲ್ ಮೂಲಕ ದೂರು ಸಲ್ಲಿಸಿದರು ಸಹ ಇಲಾಖೆಯಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಇದು ಇಲಾಖೆ ಮತ್ತು ಸರಕಾರದ ನಿರ್ಲಕ್ಷ್ಯ ಹಾಗೂ ವಿದ್ಯಾರ್ಥಿ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ. ಎಂದು ಸಂಘಟನೆ ಆರೋಪಿಸಿದೆ.

ಆ ವಿದ್ಯಾರ್ಥಿಗಳು ಎಸ್.ಎಫ್.ಐ. ಸಂಘಟನೆಗೆ ಪತ್ರ ಬರೆದಿದ್ದು, ಸಂಘಟನೆಯ ರಾಜ್ಯ ನಿಯೋಗ ಸರಕಾರಿ ಇಲಾಖೆಯನ್ನು ಭೇಟಿ ಮಾಡಿ ಉನ್ನತ ಶಿಕ್ಷಣದ ಹಿತದೃಷ್ಟಿಯಿಂದ ವಿದೇಶದಲ್ಲಿರುವ 8 ಜನ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ಮುಂದುವರೆಸಬೇಕು ಎಂದು ಎಸ್.ಎಫ್.ಐ ಮನವಿ ಸಲ್ಲಿಸಿದೆ. ಇದಕ್ಕೆ ಸ್ಪಂದಿಸದೆ ಇದ್ದಲ್ಲಿ ವಿದ್ಯಾರ್ಥಿಗಳ ಕುಟುಂಬದ ಜೋತೆ ಸೇರಿ ಸಂಘಟನೆಯು ಇಲಾಖೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಸ್.ಎಫ್.ಐ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ತಿಳಿಸಿದ್ದಾರೆ. ನಿಯೋಗದಲ್ಲಿ ಬೆಂಗಳೂರು ಜಿಲ್ಲಾಧ್ಯಕ್ಷ ವೆಂಕಟೇಶ್ ಮುಖಂಡರಾದ ಸಾಗರ್, ರಾಜುಗೌಡ, ವಿಜಯ್ ಉಪಸ್ಥಿತರಿದ್ದರು.