ಜೋಯಿಡಾದಲ್ಲಿ ಶಿಕ್ಷಕಿಯ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿಯ ಬಂಧನಕ್ಕೆ ಆಗ್ರಹ

Saturday, 11 June 2016

ಉತ್ತರ ಕನ್ನಡ, ಜೂನ್ 11: ಜೋಯಿಡಾದ ರಾಮನಗರ ಸಮೀಪದ ಬರಲಕೋಡ್ ಶಾಲಾ ಶಿಕ್ಷಕಿ ಆಗತಾನೇ ಕೆಲಸಕ್ಕೆ ಸೇರಿದ್ದರು. ಶಾಲಾ ಕರ್ತವ್ಯ ಮುಗಿಸಿ ಮನೆಗೆ ತೆರಳುವಾಗ ತನ್ನ ಅನಿವಾರ್ಯ ಕಾರಣಗಳಿಂದ ಖಾಸಗಿ ಬೈಕ್ ನಲ್ಲಿ ಬರುವಾಗ ಅದೇ ವ್ಯಕ್ತಿಯಿಂದ ಅಕ್ರಾಳಿ ಕಾಡಿನಲ್ಲಿ ತೀವ್ರ ದೌರ್ಜನ್ಯ ಮತ್ತು ಹಲ್ಲೆಗೆ ಒಳಗಾಗಿದ್ದಾರೆ. ಇದು ತಲೆ ತಗ್ಗಿಸುವ ನೋವಿನ ಘಟನೆ ಅಷ್ಟೆಅಲ್ಲ ಇಂಥ ಘಟನೆ ದುಡಿಯುವ ಮಹಿಳೆಯರ ಭದ್ರತೆಯ ಬಗ್ಗೆ ಆತಂಕ ಉಂಟು ಮಾಡಿದೆ. ಈ ಘಟನೆಯನ್ನು ದುಡಿಯುವ ಮಹಿಳೆಯರ ಸಮನ್ವಯ ಸಮಿತಿ(ಸಿಐಟಿಯು) ಉತ್ತರ ಕನ್ನಡ ಜಿಲ್ಲಾ ಸಮಿತಿಯು ಬಲವಾಗಿ ಖಂಡಿಸಿದೆ.

ತಕ್ಷಣ ಆರೋಪಿಯನ್ನು ಬಂಧಿಸಲು, ಕಠಿಣ ಕ್ರಮಕೈಗೊಳ್ಳಲು ಆಗ್ರಹಿಸಿದೆ. ಮಹಿಳೆಯರು ದುಡಿಯುವ ಸ್ಥಳಕ್ಕೆ ನಿರ್ಭಯದಿಂದ ತೆರಳಲು ನಿರ್ಭಯದಿಂದ ಕರ್ತವ್ಯ ನಿರ್ವಹಿಸಲು ಸೂಕ್ತವಾದ ವಾತಾವರಣ ಸೃಷ್ಟಿಸಲು ಜಿಲ್ಲಾಡಳಿತ ಮುಂದಾಗಬೇಕೆಂದು ಒತ್ತಾಯಿಸುದ್ದಾರೆ. 

ಜಿಲ್ಲೆಯ ಕೆಲವಡೆ ಈಗಾಗಲೇ ಇಂಥ ದುರ್ಘಟನೆಗಳು ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಮೇಲೆ ಆಗಾಗ ಜರುಗುತ್ತಿವೆ. ಕೆಲವು ಘಟನೆಗಳು ಹೆದರಿಕೆಯಿಂದ ಬೆಳಕಿಗೆ ಬರುತ್ತಿಲ್ಲ. ಕೆಲವು ಶಿಕ್ಷೆಯಾಗದೇ ತೆರೆಮರೆಗೆ ಸರಿಯುವಂತಾಗುತ್ತಿದೆ. ಇತ್ತೀಚೆಗೆ ಗುತ್ತಿಗೆ ಮಹಿಳಾ ಕಾರ್ಮಿಕರೋರ್ವಳ ಮೇಲೆ ಅತ್ಯಾಚಾರವಾಗಿದೆ. ಇನ್ನೂ ಕೆಲವೆಡೆ ಹಳ್ಳಿಗೆ ತೆರಳಲು ಸಾರಿಗೆ ವಾಹನ ಕೊರತೆ ಮತ್ತು ಶೌಚಾಲಯಗಳ ಕೊರತೆಯಿಂದಾಗಿ ಮತ್ತು ಕೆಲಸದ ಸ್ಥಳದಲ್ಲಿ ಸುರಕ್ಷೆ ಇಲ್ಲದೇ ಸಾಮಾನ್ಯ ಮಹಿಳೆಯರು ಮತ್ತು ದುಡಿಯುವ ಮಹಿಳೆಯರು ವಿವಿಧ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಇಂಥ ಘಟನೆಗಳು ಮರುಕಳಿಸದಂತೆ ಇನ್ನಷ್ಟು ಹೆಚ್ಚಿನ ಎಚ್ಚರ ಹಾಗೂ ಆರಕ್ಷಣಾ ಭದ್ರತಾ ವ್ಯವಸ್ಥೆ ನೀಡಬೇಕೆಂದು ಸಿಐಟಿಯು ಆಗ್ರಹಿಸುತ್ತದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕರಾದ ಯಮುನಾ ಗಾಂವ್ಕರ್ ಆಗ್ರಹಿಸಿದಿದ್ದಾರೆ.

ಏಕ ವ್ಯಕ್ತಿ ಶಾಲೆಗಳು ಇರುವಲ್ಲಿ ಮಹಿಳಾ ಶಿಕ್ಷಕರು ತೆರಳುವುದು ಕಷ್ಟಕರವಾಗಿದೆ. ಸರ್ಕಾರಿ ನೌಕರಿ ಮಾಡುತ್ತಿರುವ ಪತಿಪತ್ನಿ ಇಬ್ಬರನ್ನೂ ಒಂದೇ ಊರಿಗೆ/ತಾಲೂಕಿಗೆ ವರ್ಗಾಯಿಸುವ ಕ್ರಿಯೆಯೂ ಸಮರ್ಪಕವಾಗಿ ಆಗಿಲ್ಲದಿರುವುದು ವಿಷಾದನೀಯ ಎಂದರು.

ಅದರಲ್ಲಿಯೂ ಇನ್ನು ಮುಂದೆ ಪ್ರಯಾಣಿಕರ ಸಂಖ್ಯೆಯ ನೆಪ ಮುಂದಿಟ್ಟು ಸಮಯೋಚಿತ ಸರ್ಕಾರಿ ಬಸ್ ಸೌಲಭ್ಯಗಳನ್ನು ಕಡಿತಗೊಳಿಸಿದ್ದರಿಂದ ಮತ್ತು ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ವಿವಿಧ ಕಾಯ್ದೆಗಳನ್ನು ಮುಂದಿಟ್ಟು ಸಂಜೆಯ ನಂತರ ವಾಹನಗಳ ಪ್ರವೇಶವನ್ನು ನಿಷೇಧಿಸಿದ್ದರಿಂದ ಇಂಥ ಇನ್ನೂ ಹಲವು ಘಟನೆಗಳಿಗೆ ಕಾರಣವಾಗುತ್ತದೆಂಬ ಆತಂಕ ಇಮ್ಮಡಿಸಿದೆ. ಕೂಡಲೇ ಇಂಥ ಸೂಕ್ಷ್ಮ ವಿಚಾರಗಳನ್ನು ಆಡಳಿತ ಗಮನಕ್ಕೆ ತೆಗೆದುಕೊಂಡು ಮಹಿಳೆಯರ ಸುರಕ್ಷತೆಗೆ ದೌರ್ಜನ್ಯ ತಡೆಗಟ್ಟಲು ಮುಂದಾಗಬೇಕೆಂದರು.