ಬೇಲಿಗಳನ್ನು ಮುರಿದ ಮಹಿಳಾ ಶಕ್ತಿ

ಸಂಪುಟ: 
10
ಸಂಚಿಕೆ: 
27
Sunday, 26 June 2016

ಜೂನ್ 18ರಂದು ಮಧ್ಯಪ್ರದೇಶದ ಅವನಿ ಚತರ್ವೇದಿ, ರಾಜಸ್ತಾನದ ಮೋಹನಾ ಸಿಂಗ್ ಮತ್ತು ಬಿಹಾರದ ಭಾವನಾ ಕಾಂತ್ ಈ ಮೂವರನ್ನು ಹೈದರಾಬಾದ್‍ನ್ ಏರ್‍ಫೋರ್ಸ್ ಅಕಾಡೆಮಿಯಲ್ಲಿ ಭಾರತೀಯ ವಿಮಾನ ಪಡೆಯಲ್ಲಿ ಮಹಿಳಾ ಫೈಟರ್ ಪೈಲಟ್‍ಗಳಾಗಿ ಅಧಿಕೃತವಾಗಿ ಸೇರಿಸಿಕೊಳ್ಳಲಾಗಿದೆ. ಈ ಮೂಲಕ ಇವರು ಭಾರತದ ಮೊದಲ ಮಹಿಳಾ ಫೈಟರ್ ಪೈಲಟ್‍ಗಳಾಗಿ ಇತಿಹಾಸ ನಿರ್ಮಿಸಿದ್ದಾರೆ.

ಈ ಮೂವರೂ 150 ಗಂಟೆಗಳ ಹಾರಾಟದ ಮೂಲಕ ತರಬೇತಿಯ ಮೊದಲ ಹಂತವನ್ನು ಪೂರೈಸಿದ್ದಾರೆ. ಈಗ ಅವರನ್ನು ಹಾಕ್ ಯುದ್ಧವಿಮಾನದಲ್ಲಿ ಆರು ತಿಂಗಳ ಉನ್ನತ  ತರಬೇತಿಗೆ ಕಳುಹಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಸಮಾಜ ಹಾಕಿದ ಬೇಲಿಗಳನ್ನು ಮುರಿದು ಬಂದ ಮಹಿಳಾ ಶಕ್ತಿಯಿದು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ತನ್ನ ಟ್ವೀಟ್‍ನಲ್ಲಿ ಇವರನ್ನು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.

ಇಸ್ರೋದ ಇನ್ನೊಂದು ಮಹತ್ಸಾಧನೆ

ಜೂನ್ 22ರಂದು ಭಾರತೀಯ ಬಾಹ್ಯಾಕಾಶ ಸಂಘಟನೆ(ಇಸ್ರೋ) ಹೊಸದೊಂದು ದಾಖಲೆ ನಿರ್ಮಿಸಿದೆ. ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್  ಬಾಹ್ಯಾಕಾಶ ಕೇಂದ್ರದಿಂದ 20 ಉಪಗ್ರಹಗಳನ್ನು ಹೊತ್ತ ರಾಕೆಟನ್ನು ಯಶಸ್ವಿಯಾಗಿ ಹಾರಿಸದೆ. ಇವುಗಳಲ್ಲಿ ಎರಡು ಶೈಕ್ಷಣಿಕ ಉಪಗ್ರಹಗಳು ಮತ್ತು ಉಳಿದವು ಅಮೆರಿಕ, ಜರ್ಮನಿ, ಕೆನಡಾ ಮತ್ತು ಇಂಡೋನೇಸ್ಯಾದ ಉಪಗ್ರಹಗಳು.

ಈ ಸಾಧನೆಯನ್ನು ಮಾಡಿದ ಇಸ್ರೋದ ವಿಜ್ಞಾನಿಗಳನ್ನು ಅಭಿನಂದಿಸುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ‘ಮಾನವ ಕುಲದ ಸೇವೆಯಲ್ಲಿ ಅಂತರಿಕ್ಷ ತಂತ್ರಜ್ಞಾನ’ ಎಂಬ ತನ್ನ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ಇಸ್ರೋ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸ್ವತಂತ್ರ ಭಾರತದ ಹೆಮ್ಮೆಯ ಪರಂಪರೆಯನ್ನು ಜೀವಂತವಾಗಿಟ್ಟಿದೆ ಎಂದು ಹೇಳಿದ್ದಾರೆ.

ಈ ಹಿಂದೆ 2008ರಲ್ಲಿ ಮೊದಲ ಬಾರಿಗೆ 10 ಉಪಗ್ರಹಗಳನ್ನು ಹೊತ್ತ ರಾಕೆಟನ್ನು ಉಡಾಯಿಸಿ ಇಸ್ರೊ ವಿಶ್ವ ದಾಖಲೆ ರಚಿಸಿತ್ತು. ನಂತರ ಅಮೆರಿಕಾ ಮತ್ತು ರಶ್ಯ ಈ ದಾಖಲೆಗಳನ್ನು ಮುರಿದವು.

1988ರಿಂದ ಇಸ್ರೊ ನಮ್ಮ ದೇಶದ ಮತ್ತು ಇತರ ಹಲವು ದೇಶಗಳ ಹಲವಾರು ದೂರ ಸಂವೇದಿ ಉಪಗ್ರಹಗಳನ್ನು ಹಾರಿಸಿದೆ. ಇವೆಲ್ಲ ಕೃಷಿ, ನೀರು ಮತ್ತು ಸಾಗರ ಸಂಪನ್ಮೂಲಗಳು ಮಾತ್ರವಲ್ಲ, ನೈಸರ್ಗಿಕ ಅನಾಹುತಗಳ ಬಗ್ಗೆ ಮಾಹಿತಿಗಳನ್ನು ಒದಗಿಸುವಂತವುಗಳು.