ಮೂರು ತಿಂಗಳ ಸಂಬಳ ಬಾಕಿ ಇರಿಸಿಕೊಂಡಿರುವ ಬಿಬಿಎಂಪಿ

ಸಂಪುಟ: 
10
ಸಂಚಿಕೆ: 
27
Sunday, 26 June 2016

ಏಪ್ರಿಲ್ ತಿಂಗಳಿನಿಂದ ವೇತನ ಬಾಕಿ, ವೇತನ ಹೆಚ್ಚಳ, ಪ್ರತಿ ಮಾಹೆ ದಿನಾಂಕ 5ರೊಳಗೆ ತಿಂಗಳ ವೇತನ ನೀಡಬೇಕೆಂದು ಸೇರಿದಂತೆ ಕಾರ್ಮಿಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಹಿತಿ ತಂತ್ರಜ್ಞಾನ ಇಲಾಖೆ ನೌಕರರು ಮತ್ತು ವಿವಿಧ ಕಛೇರಿಗಳಲ್ಲಿ ಕಂಪ್ಯೂಟರ್ಸ್ ಆಪರೇಟರ್ಸ್‍ಗಳಾಗಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರು ಸಿಐಟಿಯು ಸಂಘಟನೆ ನೇತೃತ್ವದಲ್ಲಿ ಜೂನ್ 17ರಂದು ಬಿಬಿಎಂಪಿ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಬಿಬಿಎಂಪಿ ಕಂಪ್ಯೂಟರ್ ಆಪರೇಟರ್ಸ್ ಯೂನಿಯನ್‍ನ ಅಧ್ಯಕ್ಷರಾದ ಕೆ.ಎಂ.ತನುಜಾಕ್ಷಿರವರು ಮಾತನಾಡಿ “ಕಂಪ್ಯೂಟರ್ ಆಪರೇಟರ್ಸ್‍ಗಳನ್ನು ನೇಮಿಸಿಕೊಂಡಿರುವ ಏಜೆನ್ಸಿಯ ಅವಧಿಯು ಮಾರ್ಚ್ ತಿಂಗಳಿಗೆ ಕೊನೆಗೊಂಡಿದ್ದು ಆಗಿನಿಂದಲೂ ಸಿಬ್ಬಂದಿಗಳಿಗೆ ವೇತನ ನೀಡಿಲ್ಲ, ಏಜೆನ್ಸಿಯ ಗುತ್ತಿಗೆ ಅವಧಿಯನ್ನು ನವೀಕರಿಸಿಲ್ಲ, ಹೊಸದಾಗಿ ಟೆಂಡರ್ ಕೂಡ ಕರೆಯಲಿಲ್ಲ ಹೀಗಾಗಿ ಕಾರ್ಮಿಕರು ವೇತನವಿಲ್ಲದೆ ದುಡಿಯುವಂತಾಗಿದೆ ಎಂದು ತಿಳಿಸಿದರು.

ತಿಂಗಳ ಭತ್ಯೆ 7,400 ರೂ.ನಲ್ಲಿ ಜೀವನ ನಿರ್ವಹಣೆ ಕಷ್ಟಕರವಾಗಿದ್ದು ಶೇಕಡ 50 ರಷ್ಟು ವೇತನ ಹೆಚ್ಚಿಸಬೇಕೆಂದು, ನೌಕರರಿಗೆ ವೇತನ ಹೆಚ್ಚಿಸುವ ಬಗ್ಗೆ 2014 ರಿಂದ 2015ರ ತುಟ್ಟಿಭತ್ಯೆ ಬಾಕಿ ಮತ್ತು ಬೋನಸ್ ಮತ್ತು ಮಾಹೆ ಏಪ್ರಿಲ್-2016 ರಿಂದ ದುಡಿದ ವೇತನ ಹಾಗೂ ತಂತ್ರಜ್ಞಾನ ಇಲಾಖೆಯ ನೌಕರರಿಗೆ ಸಾರಿಗೆ ಭತ್ಯೆಗೆ ನೀಡಬೇಕೆಂದು ಆಗ್ರಹಿಸಲಾಯಿತು.

ಇನ್ನಿತರೆ ಪ್ರಮುಖ ಬೇಡಿಕೆಗಳಾದ 2015 ರಿಂದ 2016 ಸಾಲಿಗೆ ಬೋನಸ್ ಹಣವನ್ನು ಶೇಕಡ 20ರಷ್ಟು ಮತ್ತು ಎಕ್ಸ್‍ಗ್ರೇಸಿಯಾ ಶೇಕಡಾ 5 ರಷ್ಟು ಒಟ್ಟು ಶೇಕಡ 25 ರಷ್ಟು ಈ ಕೂಡಲೇ ನೀಡಬೇಕು, ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಈಗಾಗಲೇ ನೀಡಲಾಗುತ್ತಿದ್ದ ಸಾರಿಗೆ ಭತ್ಯೆಯನ್ನು ನಿಲ್ಲಿಸಲ್ಪಟ್ಟ ದಿನಾಂಕದಿಂದ ಮತ್ತೆ ಈ ಕೂಡಲೇ ನೀಡಬೇಕು, ನೌಕರರಿಗೆ ಇ.ಎಸ್.ಐ ಮತ್ತು ಇ.ಪಿ.ಎಫ್ ಕಡಿತ ಮಾಡಿದ ಹಣವನ್ನು ನೌಕರರ ಖಾತೆಗೆ ಈ ಕೂಡಲೇ ಜಮಾ ಮಾಡಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಿಐಟಿಯು ಬೆಂಗಳೂರು ದಕ್ಷಿಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎನ್.ಉಮೇಶ್, ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪಳನಿಸ್ವಾಮಿ ಜಿ.ಕೆ. ಸಿಐಟಿಯು ಮುಖಂಡರಾದ ಜೋಮಿ ಜಾರ್ಜ್ ಮತ್ತಿತರ ಮುಖಂಡರು ಮಾತನಾಡಿದರು.