ಸಮಾನತೆಯ ಮೌಲ್ಯದಿಂದ ದೂರಸರಿಯುತ್ತಿರುವ ಸಮಾಜ!

ಸಂಪುಟ: 
10
ಸಂಚಿಕೆ: 
27
date: 
Sunday, 26 June 2016

ಅಸಮ ಸಮಾಜದಲ್ಲಿ, ಜಾತಿ ತಾರತಮ್ಯಗಳಿರುವ ಸ್ಥಿತಿಯಲ್ಲಿ ‘ಸಬ್ ಕ ಸಾತ್, ಸಬ್ ಕ ವಿಕಾಸ್’ ಅನ್ನುವುದು ಕೇವಲ ಉಳ್ಳವರನ್ನು ಮಾತ್ರ ಒಳಗೊಳ್ಳಬಹುದು. ಅಸಮಾನತೆಯ ಸಮಾಜದಲ್ಲಿ ಸಮಾನಾವಕಾಶಗಳು ಅನ್ನುವುದು ಕೇವಲ ಒಂದು ಭ್ರಮೆ. ಸಮಾನತೆ ಅನ್ನುವುದು ಕೇವಲ ಮಾನಸಿಕವಾದ ಅಥವಾ ಮಾನವೀಯತೆಯ ಸಂಗತಿ ಮಾತ್ರವಲ್ಲ. ಅದು ಆರ್ಥಿಕ ಸಂಗತಿ. ಇದು ಅಭಿವೃದ್ಧಿಯ ಸಂಗತಿ. ಇದು ಜನರ ಬದುಕಿನ ಸಂಗತಿ.

ಇಂದು ವಿದೇಶಿ ಬಂಡವಾಳ, ಸ್ಟ್ರಾಟ್ ಅಪ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾ, ಅಖಂಡತೆ, ದೇಶಪ್ರೇಮ, ಸಬ್ ಕಾ ಸಾತ್-ಸಬ್ ಕಾ ವಿಕಾಸ್, ಪೈಪೋಟಿ, ಶ್ರೇಷ್ಠತೆ, ಪವಿತ್ರ ಮುಂತಾದ ಘೋಷಣೆಗಳ ಜಗತ್ತಿನಲ್ಲ್ಲಿ ನಾಡು ಬದುಕುತ್ತಿದೆ. ಜನರ ಬದುಕಿನ ಸಮೃದ್ಧತೆಗೆ ಪ್ರತಿಯಾಗಿ ಆರ್ಥಿಕತೆಯ ಸಮೃದ್ಧತೆಯ ಬಗ್ಗೆ ನಾಡು ತಹತಹಿಸುತ್ತಿದೆ. ‘ದೇಶ ಮೊದಲು’ ಎಂಬುದು ಇಂದು ಮಂತ್ರದ ಸ್ವರೂಪ ಪಡೆಯುತ್ತಿದೆ. ರೈತರು ಮೊದಲು, ಬಡವರು ಮೊದಲು, ಪರಿಶಿಷ್ಟರು ಮೊದಲು, ಮಹಿಳೆಯರು ಮೊದಲು ಮುಂತಾದ ಸಂಗತಿಗಳಿಗೆ ಇಂದು ಅವಕಾಶವಿಲ್ಲದಾಗಿದೆ. ಆಹಾರ ಭದ್ರತೆ ಅನ್ನುವುದನ್ನು ಉಚ್ಚರಿಸಲು ಆಳುವ ಪಕ್ಷಗಳು ಸಿದ್ಧವಿಲ್ಲ.

ಅಸಮ ಸಮಾಜದಲ್ಲಿ, ಜಾತಿ ತಾರತಮ್ಯಗಳಿರುವ ಸ್ಥಿತಿಯಲ್ಲಿ ‘ಸಬ್ ಕ ಸಾತ್, ಸಬ್ ಕ ವಿಕಾಸ್’ ಅನ್ನುವುದು ಕೇವಲ ಉಳ್ಳವರನ್ನು ಮಾತ್ರ ಒಳಗೊಳ್ಳಬಹುದೇ ವಿನಾ ಉಳಿದವರನ್ನು, ವಂಚಿತರನ್ನು, ಅಂಚಿನಲ್ಲಿರುವವರನ್ನು, ಮಹಿಳೆಯರನ್ನು ಒಳಗೊಳ್ಳುವುದು ಕಷ್ಟಸಾಧ್ಯ. ವಿಶ್ವಾದ್ಯಂತ ಒಪ್ಪಿಕೊಂಡಿರುವ ನಿಯಮವೆಂದರೆ ಸಮಾಜದಲ್ಲಿ ಲಾಗಾಯ್ತಿನಿಂದ ಅಸಮಾನತೆಯು ಹರಿದುಕೊಂಡು ಬರುತ್ತಿದ್ದರೆ ಅಲ್ಲಿ ಅಭಿವೃದ್ಧಿ ನೀತಿಗಳು ಸಮಾನತೆಯನ್ನು ಆಧರಿಸಿದ್ದರೆ ಅಲ್ಲಿ ಅಸಮಾನತೆಯು ಉಲ್ಭಣಗೊಳ್ಳುತ್ತದೆ ವಿನಾ ಅದು ಕಡಿಮೆಯಾಗುವುದಿಲ್ಲ. ಅಸಮಾನತೆಯ ಸಮಾಜದಲ್ಲಿ ಸಮಾನಾವಕಾಶಗಳು ಅನ್ನುವುದು ಕೇವಲ ಒಂದು ಭ್ರಮೆ.

ಇಂದಿನ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಮಹಿಳಾ ದೃಷ್ಟ್ಟಿಕೋನ ಕಂಡು ಬರುವುದಿಲ್ಲ. ಸಂಪ್ರದಾಯದ ಮುಂದೆ ಮತ್ತೆಲ್ಲವೂ ಎರಡನೆಯ ಸಂಗತಿಯಾಗಿ ಬಿಟ್ಟಿದೆ. ಸಂವಿಧಾನವೂ ಇಂದು ಮುಖ್ಯವಾಗುತ್ತಿಲ್ಲ. ಮಹಿಳೆಯರಿಗೆ ದೇವಾಲಯ ಪ್ರವೇಶವನ್ನು ನಿಷೇಧಿಸುವ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ. ಇಂದಿಗೂ ದಲಿತ ಮಹಿಳೆಯರಿಗೆ ಊರೊಳಗಿನ ಬಾವಿಯಲ್ಲಿ ನೀರನ್ನು ಸೇದಲು ಉನ್ನತ ವರ್ಗದ ಜನರು ಕೆಲವು ಗ್ರಾಮಗಳಲ್ಲಿ ಬಿಡುತ್ತಿಲ್ಲ. ಈ ವಿಷಯವನ್ನು ಕುರಿತಂತೆ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರು 1927ರಲ್ಲಿ ನಡೆಸಿದ ಮಹಾಡ್ ಚಳುವಳಿಯ ನೆನಪು ಮಾಡಿಕೊಳ್ಳಬಹುದು. ಅವರು ನಡೆಸಿದ ಚಳುವಳಿಯ ನಂತರ ಆ ಊರಿನ ಉನ್ನತ ವರ್ಗದ ಜನರು ಕೆರೆಗೆ ಮೈಲಿಗೆಯಾಗಿದೆ ಎಂದು ಅದನ್ನು ಶುದ್ಧೀಕರಿಸಲಾಯಿತು. ಈಗಲೂ ಶುದ್ಧೀಕರಣದ ಮಾತು ಕೇಳಿ ಬರುತ್ತಿದೆ. ಕೆಲವು ನದಿಗಳ ನೀರು ಪವಿತ್ರ ಎಂದು ಅದರ ನೀರನ್ನು ಮಾರಾಟ ಮಾಡಲಾಗುತ್ತಿದೆ.

ಬಡವರಿಗೆ ಕೆಲವು ಹೋಟೇಲುಗಳಲ್ಲಿ ತಿನಿಸುಗಳನ್ನು ನೀಡಲು ನಿರಾಕರಿಸಲಾಗುತ್ತಿದೆ. ಬಡವರು ಇಂದು ನ್ಯೂಯಿಸೆನ್ಸ್ ಆಗುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಬಡವರು, ಸಮಾಜದ ಅಂಚಿನಲ್ಲಿರುವವರು ಹೆಚ್ಚಾಗಿ ಹೋಗುವ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮಕ್ಕಳ ಸಂಖ್ಯೆಯ ಕೊರತೆ ಹೆಸರಿನಲ್ಲಿ ಮುಚ್ಚಲಾಗುತ್ತಿದೆ. ಖಾಸಗಿ ಶಾಲೆಗಳ ಸಂಖ್ಯೆಯ ಜೊತೆಯಲ್ಲಿ ಉನ್ನತ ಶಿಕ್ಷಣದ ಸಂಸ್ಥೆಗಳು, ಖಾಸಗಿ ವಿಶ್ವವಿದ್ಯಾಲಯಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಖಾಸಗಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವು ಉತ್ತಮವಾಗಿದೆ ಎಂದು ಸುಳ್ಳು ಸುಳ್ಳೇ ಸುದ್ದಿ ಹಬ್ಬಿಸಿ ಸರ್ಕಾರವೇ ಕಾನೂನಿನ ಮೂಲಕ ಬಡವರ ಮಕ್ಕಳು ಅಲ್ಲಿಗೆ ಸೇರುವಂತೆÉ ಕುಮ್ಮಕ್ಕು ನೀಡಲಾಗುತ್ತಿದೆ. ಈ ನೀತಿಯನ್ನು ವೃತ್ತಿಪರ ಶಿಕ್ಷಣಕ್ಕೂ ಅನ್ವಯಿಸುವಂತೆ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಒತ್ತಾಯ ಮಾಡುತ್ತಿವೆ. ಶಿಕ್ಞಣದ ಹಕ್ಕಿನ ಶಾಸನವನ್ನು ಖಾಸಗಿ ವಲಯವು ತನ್ನ ಹಣಮಾಡುದ ದಂದೆಗೆ ಬಳಸಿಕೊಳ್ಳುವ ಬಗ್ಗೆ ತಂತ್ರವನ್ನು ರೂಪಿಸುತ್ತಿದೆ.

ನಕಾರಾತ್ಮಕ ಮಾತುಗಳು

ಅಸಮಾನತೆಯು ಕೆಟ್ಟದ್ದು. ಆದರೆ ಅದನ್ನು ಸಮರ್ಥಿಸುವುದು ಇದೆಯಲ್ಲ ಅದು ಅತ್ಯಂತ ಕೆಟ್ಟದ್ದು. ಸಮಾನತೆಯಿಂದ ದೂರ ಸರಿಯುವುದು ಎಂದರೆ ಪರಿಶಿಷ್ಟರಿಗೆ ದೊರೆಯುತ್ತಿರುವ, ಅದೆಷ್ಟೇ ಕನಿಷ್ಟ ಮಟ್ಟದಲ್ಲಿರಲಿ, ಸಹಾಯಧನದ ಬಗ್ಗೆ, ಮೀಸಲಾತಿಯ ಬಗ್ಗೆ, ಸಂವಿಧಾನಾತ್ಮಕ ಅನುಕೂಲಗಳ ಬಗ್ಗೆ, ಸಾಮಾಜಿಕ ನ್ಯಾಯದ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದು ಎಂದೇ ಅರ್ಥ. ದಲಿತರಿಗೆ ನೀಡುತ್ತಿರುವ ಮೀಸಲಾತಿಯಿಂದ ಉಳ್ಳವರು ಅಭಿವೃದ್ಧಿ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಆಧಾರರಹಿತವಾಗಿ ಆರೋಪಿಸಲಾಗುತ್ತಿದೆ. ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಪ್ರಕಾರ ಮೀಸಲಾತಿಯು ಶೇ.50 ಮೀರಬಾರದು. ಅಂದರೆ ಉಳ್ಳವರಿಗೆ ಉಳಿದ ಶೇ50ರಷ್ಟು ತೆರೆದಿದೆ. ಶತಮಾನ, ಶತಮಾನಗಳ ಕಾಲ ಉಳ್ಳವರು ಶೇ.100ರಷ್ಟು ಅವಕಾಶಗಳನ್ನು ಗುತ್ತಿಗೆ ಹಿಡಿದುಕೊಂಡಿದ್ದರು. ಈಗ ಕೇವಲ 67 ವರ್ಷಗಳ ಕಾಲ ಆಚರಣೆಯಲ್ಲಿರುವ ಮೀಸಲಾತಿಯ ಬಗ್ಗೆ, ಅದರ ಇತಿಮಿತಿಗಳ ಬಗ್ಗೆ ಚಿಂತಿಸದೆ ಅದರ ವಿರುದ್ಧ ತಂತ್ರಗಳನ್ನು ಹೂಡಲಾಗುತ್ತಿದೆ. 

ಅಸ್ಪೃಶ್ಯತೆ, ತಾರತಮ್ಯ, ಅಸಮಾನತೆ, ಶ್ರೇಷ್ಠ-ಕನಿಷ್ಠ ಎಂಬ ನಂಬಿಕೆ ಮುಂತಾದ ನಕಾರಾತ್ಮಕ ನಡವಳಿಕೆಯಿಂದ ದಲಿತರಿಗೆ ಅಪಾರ ನಷ್ಟವಾಗಿದೆ. ಉದಾಹರಣೆಗೆ ನಮ್ಮ ರಾಜ್ಯದಲ್ಲಿ(ಸಮಾಜದಲ್ಲಿ) ಅಸ್ಪೃಶ್ಯತೆ ಇಲ್ಲದಿದ್ದಿದ್ದರೆ ಪ.ಜಾ. ಸಾಕ್ಷರತೆ ಪ್ರಮಾಣ ಉನ್ನತ ವರ್ಗದ ಸಾಕ್ಷರತೆಗೆ ಸಮನಾಗಿರಬೇಕಾಗಿತ್ತು. ಕರ್ನಾಟಕದಲ್ಲಿ ಪ.ಜಾ. ಸಾಕ್ಷರತೆಯ ಪ್ರಮಾಣ 2011ರಲ್ಲಿ ಶೇ.65.32. ದಲಿತೇತರರ, ಅಂದರೆ ಶಿಷ್ಠರ(ಉಳ್ಳವರ) ಸಾಕ್ಷರತಾ ಪ್ರಮಾಣ ಶೇ.78.56. ಇಲ್ಲಿ ದಲಿತರು ಮತ್ತು ದಲಿತೇತರರ ನಡುವಿನ ಸಾಕ್ಷರತಾ ಅಂತರ ಶೇ. 13.24. ಅಂಶಗಳು. ಇದು ಅಸ್ಪøಶ್ಯತೆಯಿಂದ ಉಂಟಾಗಿರುವ ಅಸಮಾನತೆ. ಇದು ಕೇವಲ ದಲಿತರಿಗೆ ಉಂಟಾಗಿರುವ ನಷ್ಟ ಮಾತ್ರವಲ್ಲ. ಇದು ರಾಷ್ಟ್ರೀಯ ನಷ್ಟ. ಅಸ್ಪøಶ್ಯತೆ ಅನ್ನುವುದು ಇಲ್ಲದಿದ್ದಿದ್ದರೆ ದಲಿತರ(ಪ.ಜಾ)  ಸಾಕ್ಷರತಾ ಪ್ರಮಾಣ ದಲಿತೇತರರ ಸಾಕ್ಷರತಾ ಪ್ರಮಾಣದಷ್ಟೇ ಇರಬೇಕಾಗಿತ್ತು.

ನಮ್ಮ ರಾಜ್ಯದಲ್ಲಿ ಉಳ್ಳವರಿಗೆ ಸಂಬಂಧಿಸಿದಂತೆ ಭೂರಹಿತ ದಿನಗೂಲಿ ದುಡಿಮೆಗಾರರ ಪ್ರಮಾಣ 2011ರಲ್ಲಿ ಶೇ 20.16. ಆದರೆ ಪ.ಜಾ ಮತ್ತು ಪ.ಪಂ.ಗಳಲ್ಲಿನ ದುಡಿಮೆಗಾರರಲ್ಲಿ ಭೂರಹಿತ ದಿನಗೂಲಿ ದುಡಿಮೆಗಾರರ ಪ್ರಮಾಣ ಶೇ.41.50. ಇಲ್ಲಿನ ಅಸಮಾನತೆಯ ಪ್ರಮಾಣ ಶೇ. 21.34 ಅಂಶಗಳು. ಒಂದು ವೇಳೆ ನಮ್ಮ ಸಮಾಜದಲ್ಲಿ ಅಸ್ಪøಶ್ಯತೆ-ಜಾತಿ ತಾರತಮ್ಯಗಳಿಲ್ಲದಿದ್ದರೆ ಪ.ಜಾ ಮತ್ತು ಪ.ಪಂ.ಗಳಲ್ಲಿನ ದಿನಗೂಲಿ ದುಡಿಮೆಗಾರರ ಪ್ರಮಾಣ ಶೇ20.16 ರಷ್ಟಿರಬೇಕಾಗಿತ್ತು. ಸಮಾಜವು ದಲಿತರ ಮೇಲೆ ಹೆಚ್ಚಿನ ದುಡಿಮೆಯ ಬಾರವನ್ನು ಹೇರಿದೆ.

ಆಸ್ತಿ ಮಾಲಿಕತ್ವದಲ್ಲಿ ದಲಿತರಿಗೆ ಅನ್ಯಾಯ

ಅನಾದಿ ಕಾಲದಿಂದ ಅಕ್ಷರ ಮತ್ತು ಆಸ್ತಿಗಳನ್ನು ದಲಿತರಿಗೆ ನಿಷೇಧಿಸಲಾಗಿತ್ತು. ಅಕ್ಷರವೂ ಸಂಪತ್ತೇ ಆಗಿದೆ. ಹೀಗೆ ಅಕ್ಷರ ಮತ್ತು ಆಸ್ತಿಯಿಂದ ವಂಚಿತರಾದ ದಲಿತರಿಗೆ ಅವುಗಳನ್ನು ಪಡೆಯುವ ಹಕ್ಕು ಬ್ರಿಟಿಷರ ವಸಾಹತುಶಾಹಿ ಕಾಲದಲ್ಲಿ ಪ್ರಾಪ್ತವಾಯಿತು. ಇದರಿಂದ ದಲಿತರಿಗೆ ಆಸ್ತಿ ದೊರೆಯಿತೆ, ದಲಿತರೆಲ್ಲರೂ ಅರಸ್ಥರಾಗಿ ಬಿಟ್ಟರೆ ಅಂದರೆ ಉತ್ತರ ಖಚಿತವಾಗಿ ಇಲ್ಲ. ಆದರೆ ಅವುಗಳನ್ನು ಹೊಂದುವ ಹಕ್ಕು ಅವರಿಗೆ ಪ್ರಾಪ್ತವಾಯಿತು. ಸ್ವಾತಂತ್ರ್ಯಾ ನಂತರ ಶಿಕ್ಷಣ, ವಿದ್ತಾರ್ಥಿ ವೇತನಗಳು, ವಿದ್ಯಾರ್ಥಿ ನಿಲಯಗಳು, ಪ್ರವೇಶದಲ್ಲಿ ಮೀಸಲಾತಿ -- ಹೀಗೆ ಅನೇಕ ಅವಕಾಶಗಳನ್ನು ಸಾಮಾಜಿಕ ನ್ಯಾಯದ ಆಧಾರದಲ್ಲಿ ದಲಿತರಿಗೆ ಒದಗಿಸಲಾಯಿತು. ಇಷ್ಟಾದರೂ 2011ರಲ್ಲಿ ಕರ್ನಾಟಕದಲ್ಲಿ ಉಳ್ಳವರಿಗೆ(ಶಿಷ್ಠ) ಸಂಬಂಧಿಸಿದಂತೆ ಆಸ್ತಿಯನ್ನು ಹೊಂದಿರುವ ಪ್ರಮಾಣ ಶೇ 23.60. ಆದರೆ ಪರಿಶಿಷ್ಟರಲ್ಲಿ ಆಸ್ತಿ ಹೊಂದಿರುವವರ ಪ್ರಮಾಣ ಶೇ 18.69. ಇಲ್ಲಿ ಅಂತರ ಶೇ.4.91. ಇಲ್ಲಿನ ಆಸ್ತಿ ಅಸಮಾನತೆಯ ಮೂಲ ಸಮಾಜದಲ್ಲಿ ಆಚರಣೆಯಲ್ಲಿರುವ ತಾರತಮ್ಯದಲ್ಲಿದೆ.=

ಲಿಂಗ ತಾರತಮ್ಯದಿಂದ ಮಹಿಳೆಯರಿಗೆ ಉಂಟಾಗಿರುವ ಹಾನಿ

ನಮ್ಮ ಸಮಾಜದ ಸಂದರ್ಭದಲ್ಲಿ ಲಿಂಗ ತಾರತಮ್ಯ ಅನ್ನುವುದು ಒಂದು ಶ್ರೇಣೀಕೃತ ವ್ಯವಸ್ಥೆಯಾಗಿದೆ. ಅದಕ್ಕೆ ಅನೇಕ ಸಾಮಾಜಿಕ ಮುಖಗಳಿವೆ. ನಮ್ಮ ಸಮಾಜದಲ್ಲಿ ಎಲ್ಲ ಮಹಿಳೆಯರು ಲಿಂಗ ತಾರತಮ್ಯವನ್ನು ಎದುರಿಸುತ್ತಿದ್ದಾರೆ. ಇದು ರಾಜ್ಯವಾಗಿ ಕರ್ನಾಟಕಕ್ಕೆ, ರಾಷ್ಟ್ರವಾಗಿ ಭಾರತಕ್ಕೆ ಮೀಸಲಾದ ಸಂಗತಿಯೇನಲ್ಲ. ಇದೊಂದು ಸಾರ್ವತ್ರಿಕ ಸಮಸ್ಯೆ. ಆದರೆ ನಮ್ಮ ಸಮಾಜದ ಸಂದರ್ಭದಲ್ಲಿ ಅದು ಬಹುಮುಖಿ ಸಮಸ್ಯೆಯಾಗಿ ಮಹಿಳೆಯರನ್ನು ಕಾಡುತ್ತಿದೆ. ತಾರತಮ್ಯದ ಪ್ರಮಾಣ ಸಮಾಜದ ಎಲ್ಲ ವರ್ಗದ ಮಹಿಳೆಯರಿಗೂ ಸಮಾನವಾಗಿಲ್ಲ. ಉದಾಹರಣೆಗೆ ಸಮಾಜದಲ್ಲಿ ಉನ್ನತ ವರ್ಗದ ಮಹಿಳೆಯರು ಮಹಿಳೆಯರು ಅನ್ನುವ ಕಾರಣಕ್ಕೆ ಲಿಂಗ ತಾರತಮ್ಯ ಎದುರಿಸುತ್ತಿದ್ದಾರೆ. ಕೆಳವರ್ಗದ ಮಹಿಳೆಯರು ಮಹಿಳೆಯರು ಅನ್ನುವ ಕಾರಣಕ್ಕೆ ಲಿಂಗ ತಾರತಮ್ಯ ಮತ್ತು ಬಡವರು, ದುಡಿಮೆಗಾರರು, ಅನಕ್ಷರಸ್ಥರು ಅನ್ನುವ ಕಾರಣಕ್ಕೆ ಆರ್ಥಿಕ ಶೋಷಣೆಯನ್ನು ಎದುರಿಸುತ್ತಿದ್ದಾರೆ. ದಲಿತ ಮಹಿಳೆಯರು ಮಹಿಳೆಯರು ಅನ್ನುವ ಕಾರಣಕ್ಕೆ ಲಿಂಗ ತಾರತಮ್ಯವನ್ನು, ಬಡವರು-ದುಡಿಮೆಗಾರರು ಅನ್ನುವ ಕಾರಣಕ್ಕೆ ಆರ್ಥಿಕ ಶೋಷಣೆಯನ್ನು ಮತ್ತು ದಲಿತರು ಅನ್ನುವ ಕಾರಣಕ್ಕೆ ಸಾಮಾಜಿಕ ಪ್ರತ್ಯೇಕೀಕರಣವನ್ನು ಅನುಭವಿಸಬೇಕಾಗಿದೆ. 

ಇಂತಹ ಸಾಮಾಜಿಕ ಸನ್ನಿವೇಶದಲ್ಲಿ ನೀತಿಗಳು ಸಮಾನಾವಕಾಶವನ್ನು ಒದಗಿಸುವ ಸ್ವರೂಪದಲ್ಲಿದ್ದರೆ ಅದರಿಂದ ತಾರತಮ್ಯ ಒಂದು ಮಟ್ಟದವರೆಗೆ ಕಡಿಮೆಯಾಗಬಹುದು. ಆದರೆ ಲಿಂಗ ತಾರತಮ್ಯದಲ್ಲಿರುವ ಶ್ರೇಣೀಕರಣವನ್ನು ಅದರಿಂದ ತೊಡೆದು ಹಾಕುವುದು ಸಾಧ್ಯವಿಲ್ಲ.

ಅಭಿವೃದ್ಧಿ ವಿರೋಧಿ ಸಂಗತಿಗಳು

ವಿಶ್ವಾದ್ಯಂತ ಅಧ್ಯಯನಗಳು, ಸಿದ್ಧಾಂತಗಳು ತಾರತಮ್ಯವನ್ನು ಅಭಿವೃದ್ಧಿ-ವಿರೋಧಿ ಸಂಗತಿಯನ್ನಾಗಿ ಪರಿಗಣಿಸಿದ್ದಾರೆ. ಅಭಿವೃದ್ಧಿ ವಿರೋಧಿ ಸಂಗತಿಗಳಲ್ಲಿ ಅಸ್ಪೃಶ್ಯತೆಯು ಪರಮೋಚ್ಛ ಸೂಚಿಯಾಗಿದೆ. ಈ ಎಲ್ಲ ಅಭಿವೃದ್ಧಿ-ವಿರೋಧಿ ಸಂಗತಿಗಳನ್ನು ತಡೆಯ ಬಲ್ಲ ಅಥವಾ ಮೀರಬಲ್ಲ ಸಾಮಥ್ರ್ಯ ಮೀಸಲಾತಿಗಿಲ್ಲ. ಮೀಸಲಾತಿ ಮೂಲಕ ದಲಿತರ ಅಭಿವೃದ್ಧಿಯನ್ನು ಸಾಧಿಸಿಕೊಳ್ಳುವುದು ಅಸಾಧ್ಯ. ಏಕೆಂದರೆ ಇಲ್ಲಿ ಎರಡು ಬಗೆಯ ಸಂಗತಿಗಳಿವೆ. ಮೊದಲನೆಯದು ಅಭಿವೃದ್ಧಿಗೆ ಬೆಂಬಲವಾಗಿ ಅನೇಕ ಅನುಕೂಲಗಳನ್ನು ನೀಡುವುದು. ಎರಡನೆಯದಾಗಿ ಅಭಿವೃದ್ಧಿ-ವಿರೋಧಿ ಸಂಗತಿಗಳನ್ನು ತೊಡೆದು ಹಾಕಲು ಪ್ರಯತ್ನಿಸುವುದು. ಉಳ್ಳವರ ಅಭಿವೃದ್ಧಿಗೆ ಬಂಡವಾಳ, ಸಂಪನ್ಮೂಲ, ಭೂಮಿ, ನೀರು, ವಿದ್ಯುತ್ ಮುಂತಾದ ಸಂಗತಿಗಳನ್ನು ಒದಗಿಸಿದರೆ ಸಾಕು. ಏಕೆಂದರೆ ಅವರಿಗೆ ಸ್ವಂತದ್ದು ಅನ್ನುವ ಅನೇಕ ಸಾಮಾಜಿಕ ಅನುಕೂಲಗಳಿರುತ್ತವೆ. ಆದರೆ ದಲಿತರ/ಪರಿಶಿಷ್ಟರ ಅಭಿವೃದ್ಧಿಗೆ ಕೇವಲ ಬೆಂಬಲ ಸಾಕಾಗುವುದಿಲ್ಲ.

ಹಿಂಸೆ-ಕ್ರೌರ್ಯಗಳಿಗೂ ಪರಿಹಾರ ಸಮಾನತೆ

ಯಾವ ಸಮಾಜವು ಸಮಾನತೆ ಮೌಲ್ಯದಿಂದ ದೂರ ಸರಿಯುತ್ತದೆಯೋ ಅಲ್ಲಿ ಕ್ರೌರ್ಯ ಅಧಿಕವಾಗುತ್ತದೆ. ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ, ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯಗಳಲ್ಲಿ ನಡೆದ ಹಿಂಸೆ, ಅಸಹಿಷ್ಣುತೆ, ಆಕ್ರಮಣಶೀಲತೆ ಮುಂತಾದವು ಅಸಮಾನತೆಯು ಉಲ್ಭಣಗೊಳ್ಳುತ್ತಿರುವುದರ ಸೂಚಿಯಾಗಿವೆ. ಇಂದು ನಮ್ಮ ಸಮಾಜ ಇದನ್ನು ಎದುರಿಸುತ್ತಿದೆ. ಸಮಾನತೆ ಅನ್ನುವುದು ಕೇವಲ ಮಾನಸಿಕವಾದ ಅಥವಾ ಮಾನವೀಯತೆಯ ಸಂಗತಿ ಮಾತ್ರವಲ್ಲ. ಅದು ಆರ್ಥಿಕ ಸಂಗತಿ. ಇದು ಅಭಿವೃದ್ಧಿಯ ಸಂಗತಿ. ಇದು ಜನರ ಬದುಕಿನ ಸಂಗತಿ. ಇಂದು ಜಿಡಿಪಿಯ ಬೆಳವಣಿಗೆಯ ಬಗ್ಗೆ ವ್ಯಸನದಂತೆ ಆಳುವ ವರ್ಗ ಮಾತನಾಡುತ್ತಿದೆ. ಅದಕ್ಕೆ ನೀಡಿದಷ್ಟೇ ಒತ್ತನ್ನು ತಾರತಮ್ಯಗಳ ನಿವಾರಣೆಗೆ ನೀಡುವುದು ಅಗತ್ಯ. ಉತ್ಪಾದನೆ ಎಷ್ಟು ಮುಖ್ಯವೋ ವಿತರಣೆಯೂ ಅಷ್ಟೇ ಮುಖ್ಯ. ಒಂದಾದ ನಂತರ ಒಂದು ಬರುವುದು ಸಲ್ಲ. ಇವೆರಡೂ ಏಕಕಾಲದಲ್ಲಿ ಸಂಭವಿಸಬೇಕು. ಈ ಕಾರಣಕ್ಕೆ ಬಾಬಾ ಸಾಹೇಬ್ ಬಿ. ಆರ್.ಅಂಬೇಡ್ಕರ್ ಅವರು ರಾಜಕೀಯ ಸ್ವಾತಂತ್ರ್ಯ-ಪ್ರಜಾಪ್ರಭುತ್ವಕ್ಕಿಂತ ಸಾಮಾಜಿಕ ಸ್ವಾತಂತ್ರ್ಯ-ಪ್ರಜಾಪ್ರಭುತ್ವದ ಬಗ್ಗೆ ಒತ್ತು ನೀಡುವ ಬಗ್ಗೆ ಪ್ರತಿಪಾದಿಸಿದ್ದರು. ಇಂದು ಇದು ತಲೆಕೆಳಗಾಗಿದೆ. ಮತ್ತೆ ಅದನ್ನು ಸರಿಪಡಿಸುವ ಅಗತ್ಯವಿದೆ. ಸಾಮಾಜಿಕ ಸಮಾನತೆ ಅನ್ನುವುದು ಆರ್ಥಿಕ ಮತ್ತು ರಾಜಕೀಯ ಸಂಗತಿಗಳನ್ನು ಒಳಗೊಂಡಿರುತ್ತದೆ. ಈ ಬಗ್ಗೆ ನಾವು ತೀವ್ರವಾಗಿ ಚಿಂತಿಸುವ ಅಗತ್ಯವಿದೆ.

ಪ್ರೊ. ಟಿ.ಆರ್. ಚಂದ್ರಶೇಖರ್