ಅಂದು ಮೌನಿ ಪಿಎಂ, ಇಂದು ವಾಚಾಳಿ ಪಿಎಂ : ಕಾಂ|| ಕೆ ಮಹಾಂತೇಶ

Tuesday, 21 June 2016

ಸಿಐಟಿಯು ರಾಜ್ಯ ಕಾರ್ಯದರ್ಶಿ ಕಾಂ|| ಕೆ. ಮಹಾಂತೇಶರವರು "ಹಿಂದಿನ ಯುಪಿಎ ಸರಕಾರದಲ್ಲಿ ಮೌನ ಪ್ರಧಾನಿಯನ್ನು ನೋಡಿದ್ದಾಯಿತು, ಈಗ ಯಾವಾಗಲೂ ಮಾತನಾಡುವ ಪ್ರಧಾನಿಯನ್ನು ನೋಡುವಂತಾಗಿದೆ. ಪ್ರಧಾನಿ ಮೋದಿ ಅವರ ವಿದೇಶಗಳಲ್ಲಿನ 149 ಭಾಷಣಗಳಿಂದ ಏನೂ ಪ್ರಯೋಜನವಾಗಿಲ್ಲ ಎಂದು ಅವರು ಅಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಅವರು ಎರಡು ವರ್ಷಗಳಲ್ಲಿ 42 ವಿದೇಶ ಪ್ರವಾಸ ಮಾಡಿದ್ದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ ಅವರನ್ನು ಅಪ್ಪಿತಪ್ಪಿಯೂ ವಿದೇಶಕ್ಕೆ ಕರೆದುಕೊಂಡು ಹೋಗಿಲ್ಲ. ವಿದೇಶಾಂಗ ಸಚಿವರದ್ದು ಕೇವಲ ಪ್ರಧಾನಿಯವರನ್ನು ಹೂಗುಚ್ಚ ನೀಡಿ ಸ್ವಾಗತಿಸುವ ಮತ್ತು ಬಿಳ್ಕೋಡುವುದು ಮಾತ್ರ ಕೆಲಸವಾಗಿದೆ ಎಂದು ವ್ಯಂಗವಾಡಿದರು.

ಅವರು ಜೂನ್-19ರಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿತಯನ್ಸ್(ಸಿಐಟಿಯು), 3ನೇ ಧಾರವಾಡ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಕಾಂ|| ಎಸ್. ಪ್ರಸನ್ನಕುಮಾರ ವೇದಿಕೆ ಹಾಗೂ ಕಾಂ|| ಸಾಯಿಕುಮಾರ ಅರ್ಕಸಾಲಿ ಸಭಾಂಗಣದಲ್ಲಿ (ಹುಬ್ಬಳ್ಳಿಯ ಮುನ್ಸಿಫಲ್ ಎಂಪ್ಲಾಯೀಸ್ ಹಾಲ್‍ನಲ್ಲಿ) ಯಶಸ್ವಿಯಾಗಿ ಸಿಐಟಿಯು 3ನೇ ಧಾರವಾಡ ಜಿಲ್ಲಾ ಸಮ್ಮೇಳನ ನಡೆಯಿತು. ಜಿಲ್ಲಾ ಗೌರವಾಧ್ಯಕ್ಷ ಕಾಂ|| ಆರ್.ಎಚ್.ಆಯಿ ಅವರು ಸಿಐಟಿಯು ಧ್ವಜಾರೋಹಣ ಮಾಡುವುದರೊಂದಿಗೆ ಸಮ್ಮೇಳನ ಪ್ರಾರಂಭವಾಗಿ, ಹುತಾತ್ಮ ಸಂಗಾತಿಗಳಿಗೆ ಗೌರವಾವಂದನೆ ಸಲ್ಲಿಸಿದರು.

ಕೆ.ಮಹಾಂತೇಶ್ ರವರು ಮಾತನಾಡುತ್ತಾ, "ದೇಶದಲ್ಲಿ ಉದ್ಯೋಗ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ವರ್ಷಕ್ಕೆ ಒಂದು ಕೋಟಿ ಉದ್ಯೋಗ ಬೇಡಿಕೆ ಇದೆ. 2014ರಲ್ಲಿ ಕೇವಲ 8 ಲಕ್ಷ ಉದ್ಯೋಗ ಸೃಷ್ಠಿಮಾಡಲಾಗಿದೆ. ಸೃಷ್ಠಿಯಾದ ಅಲ್ಪಪ್ರಮಾಣದ ಈ ಉದ್ಯೋಗಗಳು ಅಭದ್ರತೆಯಿಂದ ಕೂಡಿವೆ. ಕಾರ್ಪೋರೇಟ್ ಪರ ಕಾರ್ಮಿಕ ಕಾನೂನುಗಳ ತಿದ್ದುಪಡಡಿಗಳಿಂದ ಮತ್ತು ಬೆಲೆ ಏರಿಕೆಯಿಂದ ಕಾರ್ಮಿಕರು ಇನ್ನಷ್ಟು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಇನ್ನೊಂದಡೆ ಬೆಳೆಕಾಳುಗಳ ಬೆಲೆ ರೂ. 200ಕ್ಕೇರಿದೆ. ಬೆಳೆಕಾಳು ಬೆಳೆಯುವ ರೈತರನ್ನು ಉತ್ತೇಜಿಸಬೇಕಾದ ಕೇಂದ್ರ ಸರಕಾರ ಆಫ್ರಿಕಾದಲ್ಲಿ ಜಮೀನು ಗುತ್ತಿಗೆ ಪಡೆದು ಅಲ್ಲಿ ಬೆಳೆದ ಬೆಳೆಕಾಳುಗಳನ್ನು ದೇಶಕ್ಕೆ ರಪ್ತು ಮಾಡಿಕೊಳ್ಳಲು ಕೇಂದ್ರ ಸಂಪುಟ ನಿರ್ಧರಿಸಿರುವುದು ಹಾಸ್ಯಾಸ್ಪದ ಎಂದರು.

ಪ್ರಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ|| ಮಹೇಶ ಪತ್ತಾರ ಕಾರ್ಮಿಕರ 12 ಅಂಶದ ಬೇಡಿಕೆಗಳು ಹಾಗೂ ರಾಜ್ಯ ಸರಕಾರದ ಕಾರ್ಮಿಕರ ಕುರಿತು ವಹಿಸಿರುವ ನಿಷ್ಕಾಳಜಿ ವಿರುದ್ದ ಸೆಪ್ಟೆಂಬರ್-02 ರಂದು ನಡೆಯುವ ದೇಶದ ಕಾರ್ಮಿಕ ವರ್ಗದ ಮತ್ತೊಂದು ಮಹಾಮುಷ್ಕರವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಜಿಲ್ಲೆಯ ದುಡಿಯುವ ಜನರನ್ನು ಸನ್ನದ್ದರನ್ನಾಗಿಸುವ ಜವಾಬ್ದಾರಿ ನಮ್ಮ ಮುಂದಿದೆ ಎಂದರು.

ರಾಜ್ಯ ಉಪಾಧ್ಯಕ್ಷ ಕಾಂ||ಹರೀಶ ನಾಯ್ಕ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಜಿಲ್ಲಾಧ್ಯಕ್ಷ ಕಾಂ|| ಬಿ.ಐ.ಈಳಿಗೇರ ಅಧ್ಯಕ್ಷತೆ ವಹಿಸಿದ್ದರು. ನಾಗರಾಜ ನೆರೆಗಲ್ ಸ್ವಾಗತಿಸಿದರು. ಪ್ರವೀಣ ಶಿವಶಿಂಪರ ವಂದಿಸಿದರು. ಎಐಟಿಯುಸಿ ಜಿಲ್ಲಾಧ್ಯಕ್ಷ ಕಾಂ||ಎನ್.ಎ,ಖಾಜಿ, ಬಿಎಸ್‍ಎನ್‍ಎಲ್‍ಇಯುನ ಹರೀಶ ದೊಡ್ಡಮನಿ, ಪೌರಕಾರ್ಮಿಕರ ಸಂಘದ ವಿಜಯ ಗುಂಟ್ರಾಳ, ಕೆಪಿಆರ್‍ಎಸ್‍ನ ಕಾಂ|| ಕೆ.ಎಚ್.ಪಾಟೀಲ ಶುಭಕೋರಿ ಮಾತನಾಡಿದರು. ಗದಗ ಜಿಲ್ಲಾ ಸಿಐಟಿಯು ಪ್ರಧಾನ ಕಾರ್ಯದರ್ಶಿ ಕಾಂ|| ಮಾರುತಿ ಚಿಟಗಿ, ವಕೀಲರ ಸಂಘದ ಕಾಂ||ಬಸವರಾಜ ಕೋರಿಮಠ, ಹಾವೇರಿ ಜಿಲ್ಲಾ ಸಂಚಾಲಕ ಕಾಂ||ವಿನಾಯಕ ಕುರಬರ ಉಪಸ್ಥಿತರಿದ್ದರು.

ಪ್ರತಿನಿಧಿ ಅಧಿವೇಶನ: ಪ್ರಧಾನ ಕಾರ್ಯದರ್ಶಿ ಕಾಂ||ಮಹೇಶ ಪತ್ತಾರ ಮಂಡಿಸಿದ ವರದಿ ಆಧಾರದಲ್ಲಿ ಗ್ರಾಮ ಪಂಚಾಯತ್, ಹಮಾಲಿ, ಔಷಧಿ ಪ್ರತಿನಿಧಿಗಳ, ಬಿಎಸ್‍ಎನ್‍ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಪ್ರತಿನಿಧಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು. ನಂತರ ಸರ್ವಾನುಮತದಿಂದ ವರದಿಯನ್ನು ಅಂಗೀಕರಿಸಲಾಯಿತು.

ಸಮ್ಮೇಳನ ಅಂಗೀಕರಿಸಿದ ನಿರ್ಣಯಗಳು:

1.    ಮಹದಾಯಿ ಕಳಸಾ-ಬಂಡೂರಿ ನೀರಿಗಾಗಿ ಕಳೆದ ಒಂದು ವರ್ಷದಿಂದ ಈ ಭಾಗದಲ್ಲಿ ನಡೆಯುತ್ತಿರುವ ಜನಚಳುವಳಿಗೆ ಬೆಂಬಲ. ಸಮಸ್ಯೆಯನ್ನು ಇತ್ಯರ್ಥಪಡಿಸಲು ಪ್ರಧಾನ ಮಂತ್ರಿಗಳು ಮಧ್ಯಸ್ಥಿಕೆ ವಹಿಸಲು ಆಗ್ರಹ.

2.    12 ಅಂಶದ ಬೇಡಿಕೆಗಳಿಗಾಗಿ ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಸೆಪ್ಟೆಂಬರ್-02 ರಾಷ್ಟ್ರವ್ಯಾಪಿ ಕಾರ್ಮಿಕರ ಮಹಾಮುಷ್ಕರವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸುವುದು. ಕೈಗಾರಿಕಾ ಪ್ರದೇಶಗಳಲ್ಲಿ ಮತ್ತು ಗ್ರಾಮೀಣ ಅಸಂಘಟಿತ ಕಾರ್ಮಿಕರ ಮಧ್ಯೆ ವ್ಯಾಪಕ ಪ್ರಚಾರ ನಡೆಸುವುದು.

3.    7ನೇ ವೇತನ ಆಯೋಗದ ಶಿಪಾರಸ್ಸಿನಂತೆ ರಾಷ್ಟ್ರವ್ಯಾಪಿ ಸಮಾನ ಕನಿಷ್ಟ ವೇತನ ರೂ. 18 ಸಾವಿರ ನಿಗದಿ ಮಾಡಬೇಕು.

4.    ತೀವ್ರ ಕೃಷಿ ಬಿಕ್ಕಟ್ಟಿನಿಂದಾಗಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳನ್ನು ತಡೆಯಲು ಸೂಕ್ತ ಕ್ರಮವಹಿಸಲು ಆಗ್ರಹ.

5.    ರಾಜ್ಯದ ಅಸಂಘಟಿತ ಕಾರ್ಮಿಕರಿಗೆ ಸರಕಾರವೇ ಭವಿಷ್ಯ ನಿಧಿ ಜಾರಿಮಾಡಿ ಆ ಮುಖಾಂತರ ಪಿಂಚಣಿ ನೀಡಲು ಆಗ್ರಹ.

6.    ಕಾರ್ಪೋರೇಟ್ ಪರ ಕಾರ್ಮಿಕ ಕಾನೂನುಗಳ ತಿದ್ದುಪಡಿಗಳನ್ನು ಕೈಬಿಡಲು ಹಾಗೂ ಈಗಿರುವ ಕಾರ್ಮಿಕ ಕಾನೂನುಗಳನ್ನು ಕಟ್ಟು ನಿಟ್ಟಾಗಿ ಜಾರಿಮಾಡಲು ಒತ್ತಾಯ.

7.    ಹುಬ್ಬಳ್ಳಿ ಎಪಿಎಂಸಿಯಲ್ಲಿ ಹಮಾಲರಿಗಾಗಿ ಕಾಯ್ದಿರಿಸಿದ ನಿವೇಶನಗಳಲ್ಲಿ ವಸತಿ ಯೋಜನೆ ಜಾರಿಮಾಡಲು ಒತ್ತಾಯ.

ವಿಕಾಸ ಪರ್ವ ಅಲ್ಲ ವಿನಾಶ ಪರ್ವ: ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಷಣ ಮಾಡಿದ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದಸ್ವಾಮಿರವರು “ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಜನತೆಯ ಮೇಲೆ ತಡೆಯೇ ಇಲ್ಲದೇ ನಿರಂತರವಾದ ಆರ್ಥಿಕ ಹೊರೆ, ಅಭದ್ರತೆಯ ಉದ್ಯೋಗಗಳ ಸೃಷ್ಠಿ, ಗೌರವದಿಂದ ಬದುಕಲು ಬೇಕಾದ ವೇತನ ಸಿಗದೇ ಇರುವುದು, ಆಳಗೊಳ್ಳುತ್ತಿರುವ ತೀವ್ರ ಕೃಷಿ ಬಿಕ್ಕಟ್ಟು ಹಾಗೂ ಕಲ್ಯಾಣ ಕಾರ್ಯಕ್ರಮಗಳ ಅನುದಾನ ಕಡಿತದಿಂದಾಗಿ ರೈತ ಕಾರ್ಮಿಕರು ಹಾಗೂ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೀಡಾಗಿದ್ದು ಈ ವಿಶಾಲ ಜನತೆಗೆ ಕಿಂಚಿತ್ತಾದರೂ ಪರಿಹಾರ ಒದಗಿಸಲು ಕೇಂದ್ರದ ನರೇಂದ್ರ ಮೋದಿ ಸರಕಾರದ ನೀತಿಗಳು ವಿಫಲವಾಗಿದ್ದು ಖಂಡಿತ ಇದು ವಿಕಾಸ ಪರ್ವ ಅಲ್ಲ ಇದು ವಿನಾಶ ಪರ್ವ ಎಂದು ಹೇಳಿದರು.  

ಕೇಂದ್ರದ ನರೇಂದ್ರ ಮೋದಿ ಸರಕಾರ ಭಾಜಾಭಜಂತ್ರಿಯೊಂದಿಗೆ ಘೋಷಿಸಲಾದ ಆರ್ಥಿಕ ನೀತಿಗಳು ಮತ್ತು ಘೋಷಣೆಗಳು ಕಾರ್ಪೋರೇಟ್ ತಿಮಿಂಗಲುಗಳಿಗೆ ದೇಶವನ್ನು ಲೂಟಿಮಾಡಲು ಅವಕಾಶ ಮಾಡಿಕೊಟ್ಟಿವೇ ಹೊರತು ದೇಶದ ಕಾರ್ಮಿಕರಿಗೆ ಯಾವುದೇ ನ್ಯಾಯ ನೀಡಿಲ್ಲ. ಇದರಿಂದ “ಅಚ್ಚಾದಿನ್” ಅಸಲಿ ಮುಖವಾಡ ಬಯಲಾಗಿದೆ. ಸ್ವದೇಶಿ ಹಾಗೂ ದೇಶಪ್ರೇಮದ ವಾರಸುದಾರರಂತೆ ವರ್ತಿಸುವ ಹಾಗೂ ಬಿಜೆಪಿ ಸರಕಾರಕ್ಕೆ ಮಾರ್ಗದರ್ಶಕವಾಗಿರುವ ಆರ್‍ಎಸ್‍ಎಸ್ ಬಾಯಿ ಮುಚ್ಚಿಕೊಂಡಿರುವುದು ಏಕೆ ? ಎಂದು ಪ್ರಶ್ನಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಗೌರವಾಧ್ಯಕ್ಷ ಬಿ.ಎನ್.ಪೂಜಾರಿ ರಾಜ್ಯದ ಸಿದ್ದರಾಮಯ್ಯ ಸರಕಾರ ಆಂತರಿಕ ರಾಜಕೀಯ ಕಟ್ಟಾಟದಲ್ಲಿ ಜನತೆಯ ಪ್ರಶ್ನೆಗಳ ಬಗ್ಗೆ ಕಾಳಜಿ ವಹಿಸಲು ಆಶಕ್ತಿಯನ್ನು ಕಳೆದುಕೊಂಡು ರಾಜ್ಯದ ದುಡಿಯುವ ಜನತೆಗೆ ದ್ರೋಹ ಬಗೆದಿದೆ ಎಂದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ಜಿಲ್ಲಾಧ್ಯಕ್ಷರಾದ ಬಿ.ಐ.ಈಳಿಗೇರ, ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ, ನಾಗರಾಜ ನೆರೆಗಲ್, ಹನಮಂತ ಜಾಲಗಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗುರುಸಿದ್ದಪ್ಪ ಅಂಬಿಗೇರ ವಂದಿಸಿದರು.

ಹೋರಾಟದ ಹೆಜ್ಜೆಗಳು ಚಿತ್ರ ಪ್ರದರ್ಶನ: ಕಳೆದ ಅವದಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ನಡೆಸಿದ ಹೋರಾಟ ಕಾರ್ಯಕ್ರಮಗಳ ಚಿತ್ರ ಪ್ರದರ್ಶನವನ್ನು ಸಮ್ಮೇಳನ ಸಂದರ್ಭದಲ್ಲಿ ಏರ್ಪಡಿಸಲಾಗಿತ್ತು.

ಸಿಐಟಿಯು ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ: ಸಿಐಟಿಯು 3ನೇ ಧಾರವಾಡ ಜಿಲ್ಲಾ ಸಮ್ಮೇಳನವು ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆಮಾಡಿತು. ಗೌರವಾಧ್ಯಕ್ಷರಾಗಿ ಬಿ.ಎನ್.ಪೂಜಾರಿ ಅಧ್ಯಕ್ಷರಾಗಿ ಬಿ.ಐ.ಈಳಿಗೇರ, ಉಪಾಧ್ಯಕ್ಷರುಗಳಾಗಿ ಆರ್.ಎಚ್.ಆಯಿ, ಹನಮಂತ ಜಾಲಗಾರ, ಮನೋಜ ತೋರಣಗಲ್, ರಮೇಶ ಲಮಾಣಿ, ಬಸವಣ್ಣೇಪ್ಪ ನೀರಲಗಿ, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ ಪತ್ತಾರ, ಕಾರ್ಯದರ್ಶಿಗಳಾಗಿ ಪ್ರವೀಣಕುಮಾರ ಶಿವಶಿಂಪಗೇರ, ನಾಗರಾಜ ನರೇಗಲ್, ಕಲ್ಲನಗೌಡ ಮಣ್ಣೂರ, ಹುಸೇನಸಾಬ ನದಾಪ್, ಸಹ ಕಾರ್ಯದರ್ಶಿಗಳಾಗಿ ಮಂಜುನಾಥ ಹುಜರಾತಿ, ಪುಷ್ಟಾ ಗಾರಗೆ, ರಾಜು ಕೊಟಗಿ, ರವಿ ಚೆನ್ನಾಪೂರ ಹಾಗೂ ಖಜಾಂಚಿಯಾಗಿ ಗುರುಸಿದ್ದಪ್ಪ ಅಂಬಿಗೇರ ಆಯ್ಕೆಯಾದರು

 

 

- ಮಹೇಶ ಪತ್ತಾರ