ಜಾಗತೀಕರಣದ ಮಾಯಾಬಜಾರಿನಲ್ಲಿ ಗುಲಾಮಗಿರಿ

ಸಂಪುಟ: 
10
ಸಂಚಿಕೆ: 
25
date: 
Sunday, 12 June 2016
Image: 

ಜಾಗತೀಕರಣದ ಬಗ್ಗೆ ಸುಳ್ಳು ಭ್ರಮೆಗಳನ್ನು ಇಟ್ಟುಕೊಳ್ಳುವ ಕಾಲವಿದಲ್ಲ. ಏಕೆಂದರೆ ಅದರ ಪರಿಣಾಮವನ್ನು ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ಅನೇಕ ಯೂರೋಪಿಯನ್ ದೇಶಗಳಲ್ಲಿ ಕಂಡಿದ್ದೇವೆ. ಎಲ್ಲಾ ವಿದ್ವಾಂಸರು ಗುರುತಿಸಿದಂತೆ ಜಾಗತೀಕರಣದ ಪರಿಣಾಮವೆಂದರೆ ಮೊದಲ ಹಂತದಲ್ಲಿ G.D.P ಯಲ್ಲಿ ಗಮನೀಯವಾದ ಹೆಚ್ಚಳ ಉಂಟಾಗುತ್ತದೆ. ಕೆಲವು ವರ್ಗಗಳ ಆದಾಯ ಕಲ್ಪನೆಯನ್ನು ಮೀರಿ ಬೆಳೆಯುತ್ತದೆ. ಐಷಾರಾಮೀ ಬದುಕಿನ ಥಳುಕು ಬಳಕುಗಳು ಕಣ್ಣು ಕೋರೈಸುತ್ತದೆ. ಈ ಭರಾಟೆಯಲ್ಲಿ ರೈತರು, ಕಾರ್ಮಿಕರು, ಬಡಜನರು ಅದೃಶ್ಯರಾದಂತೆ ಅನ್ನಿಸುತ್ತದೆ. ಆದರೆ ಜಾಗತೀಕರಣದ ಬಣ್ಣದ ಗುಳ್ಳೆ ಒಡೆದ ಕೂಡಲೇ ಕಾಣುವ ವಾಸ್ತವಗಳೆಂದರೆ ಅಪಾರವಾದ ಬಡತನ, ಹಸಿವು ಹಾಗೂ ಅಸಹಾಯಕತೆಗಳು. ಆದರೆ ಒಮ್ಮೆ ಅನುಷ್ಠಾನಕ್ಕೆ ಬಂದರೆ ಜಾಗತೀಕರಣದ ಹಿಂದಿನ ಬಂಡವಾಳ ಶಕ್ತಿಗಳು ತಮ್ಮ ಪ್ರಾಬಲ್ಯ ಬಿಟ್ಟುಕೊಡುವುದಿಲ್ಲ. ಆಗ ಬರ್ಬರವಾದ ಹಿಂಸೆಯ ಪರ್ವವು ಶುರುವಾಗುತ್ತದೆ.

ನೆನ್ನೆ ದಿನ ಪತ್ರಿಕೆಗಳಲ್ಲಿ ಆಸ್ಟ್ರೇಲಿಯಾದ ವಾಕ್ ಫ್ರೀ ಸಂಸ್ಥೆಯು ಬಿಡುಗಡೆ ಮಾಡಿದ ವರದಿಯೊಂದು ಪ್ರಕಟವಾಗಿದೆ. ಈ ಸಂಸ್ಥೆಯು ಹಲವಾರು ವರ್ಷಗಳಿಂದ ‘ಆಧುನಿಕ ಗುಲಾಮಗಿರಿ’ಯ ಬಗ್ಗೆ ವಿವಿಧ ದೇಶಗಳಿಂದ ಮಾಹಿತಿ ಸಂಗ್ರಹಿಸಿ ಅಂಕಿ ಸಂಖ್ಯೆಗಳನ್ನು ಬಿಡುಗಡೆ ಮಾಡುತ್ತ ಬಂದಿದೆ. ಆಧುನಿಕ ಜಗತ್ತಿಗೂ ಗುಲಾಮಗಿರಿಗೂ ಏನು ಸಂಬಂಧ ಎಂದು ಬಹುಪಾಲು ಜನ ಪ್ರತಿಕ್ರಿಯಿಸಬಹುದು. ಆದರೆ ಈ ಸಂಸ್ಥೆಯ ಪ್ರಕಾರ ಗುಲಾಮಗಿರಿಯ ಅನಂತ ಮುಖಗಳು ವಿಶ್ವದ ಎಲ್ಲಾ ದೇಶಗಳಲ್ಲಿವೆ. ಮಾನವ ಸಾಗಾಣಿಕೆ, ಸಾಲಗಳ ಹೊರೆ, ಲೈಂಗಿಕ ಕಾರ್ಯ ಇವೆಲ್ಲವೂ ಗುಲಾಮಗಿರಿಯ ಅಂಶಗಳೇ ಆಗಿವೆ. ಕನಿಷ್ಠ ಮಟ್ಟದ ಸ್ವಾತಂತ್ರ್ಯ ಹಾಗೂ ಘನತೆಯೂ ಇಲ್ಲದೇ, ಕೇವಲ ಬದುಕಿರುವುದಕ್ಕಾಗಿಯೇ ವಿಶ್ವದ ಜನಸಂಖ್ಯೆಯ ಬಹುಪಾಲು ಜನರು ಗುಲಾಮಗಿರಿಯನ್ನು ಮಾಡುತ್ತಿದ್ದಾರೆ. ಈ ಸಾಲಿನ ವರದಿಯ ಪ್ರಕಾರ ಗುಲಾಮಗಿರಿಯಲ್ಲಿ ಸಿಲುಕಿರುವ ಅತಿ ಹೆಚ್ಚು ಸಂಖ್ಯೆಯ ಜನರಿರುವುದು ಭಾರತದಲ್ಲಿ! ಅವರ ಒಟ್ಟು ಸಂಖ್ಯೆ ಅಂದಾಜು 1.8 ಕೋಟಿ.

ಈ ವರದಿಗೆ ಕೇಂದ್ರ ಸರಕಾರದ ಪ್ರತಿಕ್ರಿಯೆಯನ್ನು ಸುಲಭವಾಗಿ ಊಹಿಸಬಹುದು. “ಈ ಅಂಕಿಸಂಖ್ಯೆಗಳು ಕಾಲ್ಪನಿಕವಾಗಿವೆ. ಭಾರತವು ಈಗ ಒಳ್ಳೆಯ ದಿನಗಳನ್ನು ಕಾಣುತ್ತಿದೆ. ಒಂದಿಷ್ಟು ಸಂಖ್ಯೆಯ ಜನರು ಗುಲಾಮಗಿರಿಯಲ್ಲಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ಭಾರತದ ಆರ್ಥಿಕ ಪ್ರಗತಿಯನ್ನು ಸಹಿಸಲಾರದ ಪಶ್ಚಿಮದ ಸಂಸ್ಥೆಗಳು ಇಂಥ ಕೃತಕ ವರದಿಗಳನ್ನು ತಯಾರಿಸುತ್ತವೆ”; ಇತ್ಯಾದಿ. ಆದರೆ ಇದು ಒಂದು ಸಂಸ್ಥೆಯ ವರದಿಯ ಪ್ರಶ್ನೆಯಲ್ಲ. ಜಾಗತಿಕ ಹಸಿವಿನ ಸೂಚ್ಯಂಕ, ಆರೋಗ್ಯ ಸೂಚ್ಯಂಕ ಇವೆಲ್ಲವು ಇಂಥದೇ ಪರಿಸ್ಥಿತಿಯನ್ನು ಸೂಚಿಸುತ್ತದೆ.

ಅಂದ ಹಾಗೆ ಈ ವರದಿ ಪ್ರಕಟವಾದ ಪತ್ರಿಕೆಗಳಲ್ಲಿ ಇನ್ನೊಂದು ವರದಿಯೂ ಇದೆ. ಅದರ ಪ್ರಕಾರ ಭಾರತದ G.D.P (ರಾಷ್ಟ್ರೀಯ ಉತ್ಪನ್ನ) ಶೇ. 7.9ನ್ನು ತಲುಪಿದ್ದು ಭಾರತವು ವಿಶ್ವದ ಅತ್ಯಂತ ತ್ವರಿತ ಆರ್ಥಿಕತೆಯನ್ನು ಹೊಂದಿದೆ. (ಇದನ್ನು ಹಲವು ಅರ್ಥಶಾಶ್ತ್ರಜ್ಞರು ಪ್ರಶ್ನಿಸಿದ್ದಾರೆ. ಸರಕಾರದ ಅಂಕೆಸಂಖ್ಯೆಯೇ ಸರಿ ಎಂದಿಟ್ಟುಕೊಳ್ಳೋಣ) ಈ ಎರಡೂ ವಿರುದ್ಧ ವರದಿಗಳಲ್ಲಿ ಯಾವುದು ನಿಜ? ಇವೆರಡೂ ನಿಜ. ಏಕೆಂದರೆ ಇದು ಜಾಗತೀಕರಣವು ಸೃಷ್ಟಿಸುವ ಮಾಯಾ ಬಜಾರ್. ವಿಶ್ವದ ಯಾವ ರಾಷ್ಟ್ರಗಳು ಜಾಗತೀಕರಣವನ್ನು ಮುಕ್ತ ಮಾರುಕಟ್ಟೆಯ ಉದಾರ ಆರ್ಥಿಕತೆಯನ್ನು ಅಳವಡಿಸಿಕೊಂಡಿವೆಯೋ ಅಲ್ಲಿ ಇದೇ ವಿರೋಧಾಭಾಸವು ಕಾಣುತ್ತದೆ. ಅಂದರೆ ಜಾಗತೀಕರಣದಿಂದಾಗಿ ಬಂಡವಾಳಶಾಹಿ ವರ್ಗ ಹಾಗೂ ಅದಕ್ಕೆ ಬೆಂಬಲವಾಗಿ ದುಡಿಯುವ ಶಿಕ್ಷಿತ ಮುಂಚೂಣಿ ವರ್ಗಗಳಿಗೆ ಹಿಂದೆ ಎಂದೂ ಇಲ್ಲದ ಸಂಪತ್ತು, ಐಷಾರಾಮಿಗಳು ಲಭ್ಯವಾಗುತ್ತಿವೆ. ಇಂಗ್ಲಿಷ್ ಶಿಕ್ಷಣ, ತಂತ್ರಜ್ಞಾನದಲ್ಲಿ ಪದವಿಗಳನ್ನು ಪಡೆದ ಮಧ್ಯಮ ವರ್ಗವು ಇಂದು ವಿಶ್ವದ ಬಲಾಢ್ಯ ವರ್ಗವಾಗಿದೆ. ಭಾರತದ ಬಂಡವಾಳಶಾಹಿಗೆ ಜಾಗತೀಕರಣದ ಹೆಸರಿನಲ್ಲಿ ಇಲ್ಲಿಯ ಕಾನೂನುಗಳನ್ನು ತಿದ್ದಿ, ಇಲ್ಲಿಯ ನೆಲ, ಜನ ಹಾಗೂ ರೈತ ಕಾರ್ಮಿಕರನ್ನು ಮಾರುತ್ತಿರುವ ರಾಜಕೀಯ ವರ್ಗವು ಸಂಪಾದಿಸುತ್ತಿರುವ ಅಕ್ರಮ ಸಂಪತ್ತನ್ನು ಊಹಿಸಲೂ ಸಾಧ್ಯವಿಲ್ಲ. ಆದರೆ ಈ ಫಲಾನುಭವಿ ವರ್ಗಗಳನ್ನು ಹೊರತುಪಡಿಸಿದರೆ ಬಹುಸಂಖ್ಯಾತ ಭಾರತೀಯರಿಗೆ ಜೀವನವು ಕರಾಳವಾದ ಗುಲಾಮಗಿರಿಯಾಗಿದೆ. 

ಒಂದು ಕಡೆ ಜಾಗತೀಕರಣದ ಮೂಲ ಕರಾರಿಗೆ ತಕ್ಕಂತೆ ನಮ್ಮ ಪ್ರಭುತ್ವವು (state) ತನ್ನ ಸಾಮಾಜಿಕ ಹಾಗೂ ಸಮಾಜಕಲ್ಯಾಣದ ಜವಾಬ್ದಾರಿಯನ್ನು ಕಳಚಿಹಾಕಿದೆ. ಅಂದರೆ ಸಂಕಷ್ಟದಲ್ಲಿರುವ ರೈತರಿಗೆ ಕೃಷಿ ಸಬ್ಸಿಡಿಯನ್ನು ಕೊಡುವುದು, ಬೆಂಬಲ ಬೆಲೆಯನ್ನು ನಿಗದಿ ಮಾಡುವುದು, ಕಾರ್ಮಿಕರಿಗೆ   ಕನಿಷ್ಠ ವೇತನವನ್ನು ಕೊಡಿಸುವುದು, ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಮುಕ್ತ ಹಾಗೂ ಕಡಿಮೆ ಖರ್ಚಿನ ಸೌಲಭ್ಯಗಳನ್ನು ಒದಗಿಸುವುದು-ಇವೇ ಮುಂತಾದ ಜವಾಬ್ದಾರಿಗಳನ್ನು ಅದು ಬಿಟ್ಟುಕೊಟ್ಟಿದೆ. ಆದರೆ ನಮ್ಮ ರಾಜಕೀಯ ವರ್ಗಕ್ಕೆ ಜನರ ಬಹುಮತದಿಂದ ಅಧಿಕಾರದಲ್ಲಿರುವುದು ಅನಿವಾರ್ಯವಾಗಿರುವುದರಿಂದ ಇದನ್ನು ಸಂಪೂರ್ಣವಾಗಿ ಮಾಡಲು ಆಗಿಲ್ಲ. ಎರಡು ವರ್ಷಗಳಲ್ಲಿ ನೋಡಿರುವಂತೆ ಬಲಪಂಥೀಯ ಸರಕಾರವು ತನ್ನ ಬಹುಮತದ ಅಧಿಕಾರ ಬಳಸಿಕೊಂಡು ಹೊಸ ಕಾನೂನುಗಳನ್ನು ಪಾಸುಮಾಡುತ್ತಿದೆ. ಇವು ಬಂಡವಾಳಶಾಹಿಯ ಪರವಾಗಿದ್ದು ರೈತ, ಕಾರ್ಮಿಕರ ವಿರುದ್ಧವಾಗಿವೆ. ಇದು ಕೇವಲ ಬಿ.ಜೆ.ಪಿ.ಯ ಧೋರಣೆಯಲ್ಲ. 1990ರಿಂದ ಈಚೆಗೆ ಎಲ್ಲಾ ಸರಕಾರಗಳು ಜಾಗತೀಕರಣದ ಪರವಾಗಿಯೇ ಕೆಲಸ ಮಾಡುತ್ತಿವೆ. 

ವಿಶೇಷವೆಂದರೆ ಭಾರತದಲ್ಲಿ ಜಾಗತೀಕರಣವು ಇಲ್ಲಿಯ ಪ್ರಭುತ್ವ ಪೋಷಿತವಾದ, ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ನಡೆಯುತ್ತಿರುವ ಜಾಗತೀಕರಣವಾಗಿದೆ. ಇದನ್ನು ಅರ್ಥಮಾಡಿಕೊಳ್ಳಲು ಅಂಕಿಸಂಖ್ಯೆಗಳು ಬೇಕಾಗಿಲ್ಲ. ಬದುಕು ಎಷ್ಟು ದುಸ್ತರವಾಗಿದೆಯೆನ್ನುವುದು ಭಾರತದ ಬಹುಸಂಖ್ಯಾತ ಜನರಿಗೆ ದಿನನಿತ್ಯದ ನರಕದ ಅನುಭವವೇ ಆಗಿದೆ. ಮೊನ್ನೆ ಬೆಂಗಳೂರಿನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಗೆಳೆಯ ಚಂದ್ರಪೂಜಾರಿಯವರು ದಲಿತ ಅಭಿವೃದ್ಥಿ ಸೂಚ್ಯಂಕದ ಬಗ್ಗೆ ವಿವರವಾಗಿ ಮಾತನಾಡಿದರು. ಅಂದರೆ ಅಭಿವೃದ್ಧಿ ಸೂಚಕಗಳಲ್ಲಿ ಈ ವರೆಗೆ ಕೇವಲ ಆರ್ಥಿಕ ಅಂಶಗಳಿದ್ದರೆ ಈ ಸೂಚ್ಯಂಕದಲ್ಲಿ ಮನುಷ್ಯದ ಜೀವನಮಟ್ಟ ಸ್ವಾತಂತ್ರ್ಯ ಹಾಗೂ ಅನುಭವಗಳಿಗೂ ಸೇರಿದ ಅನೇಕ ಅಂಶಗಳಿವೆ. ಈ ಸೂಚ್ಯಂಕದ ಪ್ರಕಾರ ಕರ್ನಾಟಕದಂಥ ಅಭಿವೃದ್ಧಿ ಪರ ರಾಜ್ಯದ ಅನೇಕ ಪ್ರದೇಶಗಳಲ್ಲಿ ದಲಿತ ಸಮುದಾಯಗಳ ಅಭಿವೃದ್ಧಿ ಶೂನ್ಯವೆನ್ನಬಹುದಾಗಿದೆ. ನನ್ನ ದೃಷ್ಟಿಯಲ್ಲಿ ಇಂಥ ಪರಿಸ್ಥಿತಿಯು ಜಾಗತೀಕರಣದ ನೇರವಾದ ಪರಿಣಾಮವಾಗಿದೆ. 

ಶಿಕ್ಷಣದ ಖಾಸಗೀಕರಣದಿಂದಾಗಿ ಬಂಡವಾಳಶಾಹಿ ಜಗತ್ತಿಗೆ ಬೇಕಾದ ಬಗೆಯ ಶಿಕ್ಷಣವನ್ನು ಪಡೆಯಲು ದಲಿತ ಮಕ್ಕಳು ಅಸಹಾಯಕರಾಗಿದ್ದಾರೆ. ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣವು ಮಧ್ಯಮವರ್ಗಕ್ಕೆ ನಿಲುಕದಂತೆ ಹಣದ ಜಗತ್ತಿಗೆ ಸೇರಿಕೊಂಡಿದೆ. ಇನ್ನು ಹಳ್ಳಿಗಳಲ್ಲಿಯೇ ಇದ್ದು ನೆಮ್ಮದಿಯ ಜೀವನ ನಡೆಸುವುದು ಅಸಾಧ್ಯ. ಒಂದು ಕಡೆ ಭಾರತದ ಯಾವುದೇ ಪ್ರಭುತ್ವವು ಅಥವಾ ಆಡಳಿತವರ್ಗವು ದಲಿತರಿಗೆ ಭೂಮಿಯ ಒಡೆತನವನ್ನು ಕೊಡುವುದಿಲ್ಲ. ಈಗ ವಿದೇಶೀ ಕಂಪನಿಗಳಿಗಾಗಿ, ಆರ್ಥಿಕ ವಲಯಗಳಿಗಾಗಿ ಭೂಮಿಯನ್ನು ರೈತರಿಂದಲೂ ಕಬಳಿಸಲಾಗುತ್ತಿದೆ. ಹೀಗಾಗಿ ದಲಿತರಿಗಂತೂ ಭೂರಹಿತ ಕೃಷಿ ಕೂಲಿಕಾರರಾಗಿರುವುದೇ ಗತಿಯಾಗಿದೆ. ಕೂಲಿ ಮಾಡಿ ಬದುಕಬೇಕೆಂದರೂ ದಲಿತರ ಯಾವ ಏಳ್ಗೆಯನ್ನೂ ಸಹಿಸದ ಪ್ರಬಲ ಜಾತಿಗಳು ಅವರ ಮೇಲೆ ನಿರಂತರವಾದ ಹಿಂಸೆ ಹಾಗೂ ಅವಮಾನಗಳನ್ನು ಹೇರುತ್ತಲಿವೆ. ಶಿಕ್ಷಿತ ದಲಿತ ಯುವಕರಿಗೆ ನೌಕರಿಗಳೂ ಸಿಗುತ್ತಿಲ್ಲ. ಹೀಗಾಗಿ ಬೆಂಗಳೂರಿನಂಥ ಮಹಾನಗರಗಳಿಗೆ ವಲಸೆ ಹೋಗಿ ಅಲ್ಲಿಯ ಅಸಂಘಟಿತ ಕಾರ್ಮಿಕ ವಲಯವನ್ನು ಸೇರಿಕೊಳ್ಳುತ್ತಿದ್ದಾರೆ.  ಇದು ಇನ್ನೂ ಭೀಕರವಾದ ಶೋಷಣೆಯ ಜಗತ್ತು. ಜಾಗತೀಕರಣದ ಪ್ರಧಾನ ತಂತ್ರವೆಂದರೆ ಕಾರ್ಮಿಕರಲ್ಲಿ ಸಂಘಟನೆ ಹಾಗೂ ಹಕ್ಕುಗಳ ಬಗೆಗಿನ ಎಚ್ಚರ ಇರದಂತೆ ನೋಡಿಕೊಳ್ಳುವುದು. ವಾಸ್ತವವೆಂದರೆ ಅಸಂಘಟಿತ ಕಾರ್ಮಿಕರ ಬಹುದೊಡ್ಡ ವರ್ಗವೊಂದು ಇಂದು ಹುಟ್ಟಿಕೊಂಡಿದೆ. ಆದರೆ ಅಭದ್ರತೆ, ನಿರಾಸೆಯ ಒತ್ತಡದಲ್ಲಿ ಈ ವರ್ಗವು ಬಲಪಂಥೀಯರ ಹುಸಿ ಸಿದ್ಧಾಂತಗಳಿಗೆ ಬಲಿಯಾಗುತ್ತಿದೆ.  ಗುಜರಾತಿನ ಕೋಮು ಹಿಂಸೆಯಲ್ಲಿ ಹಾಗೂ ಬಲಪಂಥೀಯ ದೊಂಬಿಗಳಲ್ಲಿ ದಲಿತ ಯುವಕರು ಭಾಗಿಯಾಗಿದ್ದುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ.

ಜಾಗತೀಕರಣದ ಬಗ್ಗೆ ಸುಳ್ಳು ಭ್ರಮೆಗಳನ್ನು ಇಟ್ಟುಕೊಳ್ಳುವ ಕಾಲವಿದಲ್ಲ. ಏಕೆಂದರೆ ಅದರ ಪರಿಣಾಮವನ್ನು ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ಅನೇಕ ಯೂರೋಪಿಯನ್ ದೇಶಗಳಲ್ಲಿ ಕಂಡಿದ್ದೇವೆ.  ಎಲ್ಲಾ ವಿದ್ವಾಂಸರು ಗುರುತಿಸಿದಂತೆ ಜಾಗತೀಕರಣದ ಪರಿಣಾಮವೆಂದರೆ ಮೊದಲ ಹಂತದಲ್ಲಿ ಉ..ಆ.ಕ. ಯಲ್ಲಿ ಗಮನೀಯವಾದ ಹೆಚ್ಚಳ ಉಂಟಾಗುತ್ತದೆ. ಕೆಲವು ವರ್ಗಗಳ ಆದಾಯ ಕಲ್ಪನೆಯನ್ನು ಮೀರಿ ಬೆಳೆಯುತ್ತದೆ. ಐಷಾರಾಮೀ ಬದುಕಿನ ಥಳುಕು ಬಳಕುಗಳು ಕಣ್ಣು ಕೋರೈಸುತ್ತದೆ. ಈ ಭರಾಟೆಯಲ್ಲಿ ರೈತರು, ಕಾರ್ಮಿಕರು, ಬಡಜನರು ಅದೃಶ್ಯರಾದಂತೆ ಅನ್ನಿಸುತ್ತದೆ. ಆದರೆ ಜಾಗತೀಕರಣದ ಬಣ್ಣದ ಗುಳ್ಳೆ ಒಡೆದ ಕೂಡಲೇ ಕಾಣುವ ವಾಸ್ತವಗಳೆಂದರೆ ಅಪಾರವಾದ ಬಡತನ, ಹಸಿವು ಹಾಗೂ ಅಸಹಾಯಕತೆಗಳು. ಆದರೆ ಒಮ್ಮೆ ಅನುಷ್ಠಾನಕ್ಕೆ ಬಂದರೆ ಜಾಗತೀಕರಣದ ಹಿಂದಿನ ಬಂಡವಾಳ ಶಕ್ತಿಗಳು ತಮ್ಮ ಪ್ರಾಬಲ್ಯ ಬಿಟ್ಟುಕೊಡುವುದಿಲ್ಲ. ಆಗ ಬರ್ಬರವಾದ ಹಿಂಸೆಯ ಪರ್ವವು ಶುರುವಾಗುತ್ತದೆ. ಭಾರತದ ಸಂದರ್ಭದ ವಿಶೇಷತೆಯೆಂದರೆ ಈಗ ಜಾಗತೀಕರಣದ ಹಿಂದಿರುವ ಅಂತರ್ ರಾಷ್ಟ್ರೀಯ ಬಂಡವಾಳದ ಬೆಂಬಲಕ್ಕೆ ತನ್ನ ರಾಜಕೀಯ ಅಧಿಕಾರದ ಬೆಂಬಲ ನೀಡುತ್ತಿರುವುದು ಹುಸಿ ರಾಷ್ಟ್ರೀಯತೆಯನ್ನು ಬಳಸಿಕೊಳ್ಳುತ್ತಿರುವ ಫ್ಯಾಸಿಸ್ಟ್ ರಾಜಕೀಯವಾಗಿದೆ. ಇದೊಂದು ಅತ್ಯಂತ ಅಪಾಯಕಾರಿಯಾದ ಬೆಳವಣಿಗೆ. ಏಕೆಂದರೆ ಫ್ಯಾಸಿಸ್ಟ್ ರಾಜಕೀಯವು ಪ್ರಜೆಗಳ ಪ್ರತಿಭಟನೆಯನ್ನು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಬ್ಬಾಳಿಕೆಯ ಮೂಲಕ ನಾಶಮಾಡುತ್ತದೆ. ಈಗ ವಿಶ್ವವಿದ್ಯಾನಿಲಯಗಳ ಮೇಲೆ ಇಂಥ ಪ್ರಯೋಗಗಳು ನಡೆದಿವೆ. ಇದು ಒಂದು ವೇಳೆ ಸಾಧ್ಯವಾದರೆ ಜಾಗತೀಕರಣದ ವಿರುದ್ಧ ಪ್ರತಿಭಟನೆಯೂ ಮಂದವಾಗಿ ಬಿಡುತ್ತದೆ.

ಇದಕ್ಕೆ ಪರಿಹಾರವೊಂದೇ. ಈ ಹಂತದಲ್ಲಿಯೇ ಜಾಗತೀಕರಣದ ವಿರುದ್ಧ ಹಾಗೂ ಪ್ರಜಾಪ್ರಭುತ್ವದ ಸ್ವಾತಂತ್ರ್ಯಗಳು ಹಾಗೂ ಹಕ್ಕುಗಳ ಪರವಾಗಿ ಹೋರಾಟಗಳನ್ನು ಬಲಪಡಿಸಬೇಕಾಗಿದೆ. ಈ ಹೋರಾಟಗಳಿಗೆ ಅವಶ್ಯಕವಾದ ರಾಜಕೀಯ ಪ್ರಜ್ಞೆಯನ್ನು ಬೆಳಸಬೇಕಿದೆ. ನಮ್ಮಲ್ಲಿ ಯಾರೂ ಇಂದು Comfort Zone  ಒಂದರಲ್ಲಿ ನೆಮ್ಮದಿಯಿಂದ ಇರುವುದು ಸಾಧ್ಯವಿಲ್ಲ.

ಜಗತ್ತಿನಲ್ಲಿ ಗುಲಾಮಗಿರಿಯ ಪರಿಸ್ಥಿತಿಯಲ್ಲಿರುವ 4.6 ಕೋಟಿ ಜನರಲ್ಲಿ ಅತಿ ಹೆಚ್ಚು (1.8 ಕೋಟಿ) ಅಂದರೆ ಸುಮಾರು ಅರ್ಧದಷ್ಟು ಜನ ಭಾರತದಲ್ಲಿದ್ದಾರೆ. ಜನಸಂಖ್ಯೆಯ ಅತಿ ಹೆಚ್ಚು ಪ್ರಮಾಣದ (ಶೇ. 1.4) ಜನ ಗುಲಾಮಗಿರಿ ಪರಿಸ್ಥಿತಿಯಲ್ಲಿರುವ 5 ದೇಶಗಳಲ್ಲಿ ಭಾರತ ಇದ್ದು, 4ನೇ ಸ್ಥಾನ ಹೊಂದಿದೆ. ಗುಲಾಮಗಿರಿಗೆ ಜನ ಬಲಿಯಾಗುವ ಅಪಾಯದ ಬಗ್ಗೆ ಈ ಸಂಸ್ಥೆ ರೂಪಿಸಿದ ಸೂಚ್ಯಂಕದಲ್ಲಿ (ಇದು ಹೆಚ್ಚಿದ್ದಷ್ಟು ಅಪಾಯ ಹೆಚ್ಚು) 167 ದೇಶಗಳಲ್ಲಿ ಭಾರತ ಅತಿ ಹೆಚ್ಚು ಸೂಚ್ಯಂಕದಲ್ಲಿ 11ನೇ ಸ್ಥಾನ ಪಡೆದಿದೆ. ಹೊಲ ಗದ್ದೆಗಳಲ್ಲಿ, ತೋಟಗಳಲ್ಲಿ, ವೇಶ್ಯಾವಾಟಿಕೆಗಳಲ್ಲಿ, ಹೋಟೆಲುಗಳಲ್ಲಿ, ಇಟ್ಟಿಗೆ ಭಟ್ಟಿಗಳಲ್ಲಿ, ಕಲ್ಲು ಗಣಿಗಳಲ್ಲಿ, ಮನೆಗೆಲಸಗಳಲ್ಲಿ, ಬಲವಂತದ ಭಿಕ್ಷಾಟನೆಯಲ್ಲಿ ಪುಡಿಗಾಸು ಸಾಲ ತೀರಿಸಲು ಜನ ಭಾರತದಲ್ಲಿ ಜೀತದ ದುಡಿಮೆಗೆ, ಗುಲಾಮಗಿರಿಗೆ ಜನ ಬಲಿಯಾಗುತ್ತಿದ್ದಾರೆ ಎಂದು ವರದಿ ಹೇಳಿದೆ.

ಪ್ರೊ. ರಾಜೇಂದ್ರ ಚೆನ್ನಿ