ಕಾರ್ಮಿಕ ವರ್ಗಕ್ಕೆ ಅಂಬೇಡ್ಕರ್ ಕೊಡುಗೆ; ಅಧ್ಯಯನದ ಜರೂರಿದೆ - ನ್ಯಾ. ಎಚ್.ಎನ್.ನಾಗಮೋಹನ್ ದಾಸ್.

ಸಂಪುಟ: 
10
ಸಂಚಿಕೆ: 
24
Sunday, 5 June 2016

ಅಂಬೇಡ್ಕರ್‍ರನ್ನು ದಲಿತರಿಗೆ ಮಾತ್ರವೇ ಸೀಮಿತಗೊಳಿಸಿ, ಜನರನ್ನೂ ಹಾಗೆ ನಂಬಿಸಲಾಗಿದೆ. ದೇಶದ ಹಲವು ಕ್ಷೇತ್ರಗಳಿಗೆ, ಇತರೆ ಶೋಷಿತ ಸಮುದಾಯಗಳಿಗೆ ಅವರು ನೀಡಿದ ಕೊಡುಗೆಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ. ಅಂಬೇಡ್ಕರ್ ಒಬ್ಬ ವಿಶ್ವನಾಯಕ, ಕಾರ್ಮಿಕ ನಾಯಕ, ಅರ್ಥಶಾಸ್ತ್ರಜ್ಞ, ನ್ಯಾಯವಾದಿ, ಸಂವಿಧಾನ ಕರ್ತೃ, ಮಾನವತಾವಾದಿಯೂ ಹಾಗೂ ಸಮಾಜವಿಜ್ಞಾನಿಯೂ ಆಗಿದ್ದರು ಎಂಬುದನ್ನು ಅರಿಯಬೇಕಿದೆ. ಹೀಗಾಗಿಯೇ ಕೊಲಂಬಿಯಾ ವಿಶ್ವವಿದ್ಯಾನಿಲಯ ಅಂಬೇಡ್ಕರರನ್ನು ‘ಪ್ರತಿಭೆಯ ಚಿಲುಮೆ’ ಎಂದು ಕರೆದಿದೆ. ಆದ್ದರಿಂದ ಬಾಬಾ ಸಾಹೇಬರ ಕುರಿತು ಗಂಭೀರ ಅಧ್ಯಯನದ ಅಗತ್ಯವಿದೆ ಎಂದು ಕರ್ನಾಟಕ ಹೈಕೋರ್ಟ್‍ನ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಹೇಳಿದರು. ಅವರು ಸಿಐಟಿಯು ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು ‘ಸಿಐಟಿಯು ಸಂಸ್ಥಾಪನಾ ದಿನ’ದ ಅಂಗವಾಗಿ  ಮೇ 31 ರಂದು ಆಯೋಜಿಸಿದ್ದ ‘ಕಾರ್ಮಿಕ ಕಾನೂನುಗಳು ಮತ್ತು ಅಂಬೇಡ್ಕರ್’ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾತಿ ವ್ಯವಸ್ಥೆ ಭಾರತೀಯ ಸಮಾಜಕ್ಕಂಟಿದ ಮಹಾಶಾಪ, ಹುಟ್ಟಿನಿಂದ ಸಾಯುವವರೆಗೂ ಅದೇ ಜಾತಿ, ಕಸುಬಿನಲ್ಲಿ ಮುಂದುವರಿದು ಮಣ್ಣಾಗಬೇಕಾದ ಅಮಾನವೀಯ ವ್ಯವಸ್ಥೆಯಲ್ಲಿ ಮೊದಲಿಗೆ ಬಲಿಪಶುಗಳಾದವರು ದಲಿತರೇ ಆಗಿದ್ದಾರೆ. ಇಂದಿಗೂ ಶೋಷಣೆ, ದಬ್ಬಾಳಿಕೆ ಮುಂದುವರಿಯುತ್ತಿದೆ. ಇಂಥ ದನಿಯಿಲ್ಲದ ಅಸ್ಪøಶ್ಯ   ದಲಿತ ಸಮುದಾಯದ ಪಾಲಿಗೆ ದನಿಯಾದವರು ಅಂಬೇಡ್ಕರ್.

ವೈವಿಧ್ಯಮಯ ಸಂಸ್ಕøತಿ, ಧರ್ಮ, ಜಾತಿ, ಭಾಷೆಗಳ ಜತೆಯಲ್ಲಿ ರಾಜರು, ಪಾಳೆಗಾರರಿಗೆ ಹಂಚಿಹೋಗಿದ್ದ ಭಾರತೀಯ ಸಮಾಜವನ್ನು ಒಂದುಗೂಡಿಸಿದ್ದು ನಮ್ಮ ಸಂವಿಧಾನ. ಜಗತ್ತಿಗೆ ಇಂಥ ಮಾದರಿಯಾದ ಸಂವಿಧಾನವನ್ನು ಕೊಟ್ಟಿದ್ದು ಅಂಬೇಡ್ಕರ್. ವಿಶ್ವದ ಅನೇಕ ದೇಶಗಳ ಸಂವಿಧಾನಗಳ ಅಧ್ಯಯನ ನಡೆಸಿ, ಭಾರತೀಯ ಸಮಾಜಕ್ಕೊಪ್ಪುವ ದೇಸಿ ಸಂವಿಧಾನವನ್ನು ಕೊಡಲು ಅಂಬೇಡ್ಕರ್ ವಹಿಸಿದ ಪಾತ್ರ, ಅವರ ಪರಿಶ್ರಮ ಪ್ರಶ್ನಾತೀತ. ಸಂವಿಧಾನ ಕರಡು ರಚನಾ ಸಮಿತಿಯಲ್ಲಿದ್ದ ಬಹುತೇಕರು ನಾಮ ಮಾತ್ರಕ್ಕೆ ಎಂಬಂತಿದ್ದರು. ಹೀಗಿದ್ದಾಗ್ಯೂ ಅಂಬೇಡ್ಕರ್ ಒಬ್ಬರೇ ಆ ಮಹಾ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ನಿಭಾಯಿಸಿದ್ದರು. 

ನಮ್ಮ ಸಂವಿಧಾನವು ಪ್ರಜಾಪ್ರಭುತ್ವ ಸ್ಥಾಪನೆಯ ಉದ್ದೇಶ ಹೊಂದಿದೆ. ಚುನಾವಣೆಯಲ್ಲಿ ಮತ ಹಾಕುವುದಷ್ಟೇ ಪ್ರಜಾಪ್ರಭುತ್ವ ಅಲ್ಲ. ಪ್ರಜಾಪ್ರಭುತ್ವ ಎನ್ನುವುದು ವಿಶಾಲವಾದ ವಿವಿಧ ಆಯಾಮಗಳನ್ನು ಒಳಗೊಂಡಿದೆ. ಆದರೆ ಇಂದು ಇದಕ್ಕಿರುವ ವ್ಯಾಖ್ಯೆಯನ್ನು ಸೀಮಿತಗೊಳಿಸಲಾಗಿದೆ. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪ್ರಜಾಪ್ರಭುತ್ವ ದಕ್ಕಿದೆ ನಿಜ, ಆದರೆ ಆರ್ಥಿಕ ಪ್ರಜಾಪ್ರಭುತ್ವ ಎನ್ನುವುದು ಇನ್ನೂ ಮರೀಚಿಕೆಯಾಗಿದೆ, ಸಾಮಾಜಿಕ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬರಲೇ ಇಲ್ಲ. ಅದರ ಜಾಗದಲ್ಲಿ ಇಂದು ಸಾಮಾಜಿಕ ಸರ್ವಾಧಿಕಾರ ಅಸ್ತಿತ್ವದಲ್ಲಿದೆ, ಇದು ಭಾರತದ ಜನತೆಗೆ ಸಂವಿಧಾನ ಕೊಡಮಾಡಿದ ಮೂಲಭೂತ ಹಕ್ಕುಗಳನ್ನು ಕಸಿದು ಅದರ ಆಶಯಗಳನ್ನು ಬುಡಮೇಲು ಮಾಡುತ್ತಿದೆ. ಜನರ ಆಚಾರ, ವಿಚಾರ, ನಡೆ-ನುಡಿ, ಆಹಾರ, ಉಡುಪು ಹೀಗೆ ಎಲ್ಲವನ್ನು ನಿಯಂತ್ರಣದಲ್ಲಿಡುವ ಪ್ರಯತ್ನ ನಡೆಯುತ್ತಿದೆ. ಇಂಥ ಅಪಾಯದ ಸ್ಥಿತಿಯಲ್ಲಿರುವ ಸಾಮಾಜಿಕ ಪ್ರಜಾಪ್ರಭುತ್ವವನ್ನು ಕಾಪಾಡುವ ಜವಾಬ್ದಾರಿ ಕಾರ್ಮಿಕ ವರ್ಗದ ಮೇಲೂ ಇದೆ. ಹೀಗಾಗಿ ನಾವು ರಾಜಕೀಯ ಪ್ರಜಾಪ್ರಭುತ್ವ ಜತೆಯಲ್ಲಿ ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವನ್ನು ಬೆಸೆದು ನೋಡಲು ಪ್ರಯತ್ನಿಸಿಬೇಕು. ಆಗ ಮಾತ್ರವೇ ಪ್ರಜಾಪ್ರಭುತ್ವವನ್ನು ಇಡಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯ.

ಜಾತ್ಯಾತೀತತೆ ಎಂದರೆ ಕೇವಲ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವುದಲ್ಲ, ಬದಲಾಗಿ ರಾಜಕಾರಣದಲ್ಲಿ ಧರ್ಮ ಬೆರೆಸದಿರುವುದೇ ನಿಜವಾದ ಅರ್ಥದಲ್ಲಿ ಜಾತ್ಯಾತೀತತೆ. ಧರ್ಮ ಮತ್ತು ರಾಜಕಾರಣ ಬೆರೆತರೆ ಅದು ಕೋಮುವಾದವಾಗುತ್ತದೆ. ಇದು ಜನರ ಐಕ್ಯತೆಯನ್ನು ಒಡೆಯುತ್ತದೆ. ಹಾಗೆಯೇ ಯಾವುದೇ ಸರ್ಕಾರಕ್ಕೆ ಯಾವುದೇ ಧರ್ಮ ಇರಬಾರದು. ಜಗತ್ತಿನ ಎಲ್ಲ ಧರ್ಮಗಳು ಹುಟ್ಟಿದ್ದು ಸಾಮಾಜಿಕ ಸುಧಾರಣೆಯ ಸಲುವಾಗಿ. ತನ್ನದು ಮಾತ್ರವೇ ಶ್ರೇಷ್ಟ, ಆ ಶ್ರೇಷ್ಟತೆಗಾಗಿ ಕಟ್ಟುಪಾಡುಗಳನ್ನು ಬಲವಂತವಾಗಿ ಹೇರಿದ್ದಲ್ಲಿ ಅದು ಮೂಲಭೂತವಾದವಾಗುತ್ತದೆ. ಇದು ಧರ್ಮವನ್ನೂ ಅಪ್ರಜಾಪ್ರಭುತ್ವಗೊಳಿಸುತ್ತದೆ.

ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರನ್ನು ಇಂದಿಗೂ ಎರಡನೇ ದರ್ಜೆ ಪ್ರಜೆಗಳನ್ನಾಗಿ ನೋಡಲಾಗುತ್ತಿದೆ. ಅಂದು ಇದನ್ನರಿತ್ತಿದ್ದ ಅಂಬೇಡ್ಕರ್ ಮಹಿಳೆಯರಿಗೆ ಸ್ವಾತಂತ್ರ್ಯ ನೀಡುವ, ಆಸ್ತಿಯ ಹಕ್ಕನ್ನು ಪ್ರತಿಪಾದಿಸುವ ಹಿಂದು ಕೋಡ್ ಬಿಲ್‍ನ್ನು ಮಂಡಿಸಿದರಾದರೂ, ಅಗತ್ಯವಿದ್ದ ಬಹುಮತ ಸಿಗದೇ ಅದು ಬಿದ್ದುಹೋಗಿತ್ತು. ಇದರಿಂದ ತೀವ್ರವಾಗಿ ನೊಂದಿದ್ದ ಅಂಬೇಡ್ಕರ್ ಅಂದೇ ತಮ್ಮ ಕಾನೂನು ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಅಂಬೇಡ್ಕರ್ ಹೊರತುಪಡಿಸಿ ಒಂದು ಸೈದ್ಧಾಂತಿಕ ನೆಲೆಗಟ್ಟಿನ ವಿಚಾರದಲ್ಲಿನ ಭಿನ್ನತೆ ಕಾರಣದಿಂದ ರಾಜೀನಾಮೆ ನೀಡಿದ ಮತ್ತೊಬ್ಬರನ್ನು ಭಾರತದ ರಾಜಕಾರಣದಲ್ಲಿ ಕಾಣಲು ಸಾಧ್ಯವಿಲ್ಲ.

ಹದಿನೈದರಿಂದ ಅರವತೈದು ವಯಸ್ಸಿನ, ದುಡಿಯಲು ಸಾಮಥ್ರ್ಯ ಇರುವ ಜನ 60 ಶೇಕಡ ಇದ್ದಾರೆ. ಇಂಥ ಕಾರ್ಮಿಕ ವರ್ಗಕ್ಕೆ ಅಂಬೇಡ್ಕರ್ ಕೊಡುಗೆ ಅನನ್ಯವಾದುದು. ಸಾಮಾಜಿಕ ನ್ಯಾಯ ಎನ್ನುವುದು ಮೀಸಲಾತಿ ಮಾತ್ರವಲ್ಲ, ಬದಲಾಗಿ ದುಡಿಮೆಗೆ ತಕ್ಕ ಪ್ರತಿಫಲ ಒದಗಿಸುವುದು ಸಾಮಾಜಿಕ ನ್ಯಾಯ ಎಂದು ಅಂಬೇಡ್ಕರ್ ವಿಶ್ಲೇಷಿಸುತ್ತಾರೆ. ಹೀಗಾಗಿ ಮೀಸಲಾತಿಯು ಸಾಮಾಜಿಕ ನ್ಯಾಯದ ಒಂದು ಸಣ್ಣ ಭಾಗವಷ್ಟೆ. ಶೇ.90ರಷ್ಟಿರುವ ಅಸಂಘಟಿತ ಕಾರ್ಮಿಕರು ಯಾವುದೇ ಸೌಲಭ್ಯಗಳಿಲ್ಲದೇ ಕಡಿಮೆ ಕೂಲಿಗೆ ಹೆಚ್ಚು ದುಡಿಯುತ್ತಿದ್ದಾರೆ, ಇಂಥವರ ದುಡಿಮೆಗೆ ತಕ್ಕ ಪ್ರತಿಫಲ ದೊರಕುವಂತಾದಾಗ ಮಾತ್ರವೇ ಸಾಮಾಜಿಕ ನ್ಯಾಯ ದಕ್ಕಿದೆ ಎಂದು ಭಾವಿಸಬಹುದು.

ಕಾರ್ಮಿಕರ ಬರ್ಬರ ಶೋಷಣೆಯನ್ನು ಕಣ್ಣಾರೆ ಕಂಡಿದ್ದ ಬಾಬಾ ಸಾಹೇಬರು, ಅಂದು ವೈಸರಾಯ್ ಆಡಳಿತದಲ್ಲಿ ಕಾನೂನು ಮಂತ್ರಿ ಆಗಿದ್ದ ಸಂದರ್ಭದಲ್ಲಿ ಹದಿನಾಲ್ಕು ಗಂಟೆ ಇದ್ದ ಕೆಲಸದ ಅವಧಿಯನ್ನು ಎಂಟು ಗಂಟೆಗೆ ಇಳಿಸಿ, ಕಾನೂನು ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕಾರ್ಮಿಕ ವರ್ಗ ವಿಮೋಚನೆಯಾಗದೇ ಭಾರತ ವಿಮೋಚನೆ ಆಗದು. ಆದರೆ ಅದಕ್ಕಿಂತಲೂ ಮುಖ್ಯವಾಗಿ ದಲಿತ ಕಾರ್ಮಿಕ ವರ್ಗದ ವಿಮೋಚನೆ ಆಗದೆ ಕಾರ್ಮಿಕ ವರ್ಗದ ವಿಮೋಚನೆ ಪರಿಪೂರ್ಣಗೊಳ್ಳದು ಎಂದು ಅಂಬೇಡ್ಕರ್ ಹೇಳುತ್ತಾರೆ. ಅವರ ಈ ಮಾತು ಕಟು ವಾಸ್ತವ, ಹೀಗಾಗಿ ಇಂದಿನ ಕಾರ್ಮಿಕ ವರ್ಗದ ನಾಯಕತ್ವ ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಕಾರ್ಮಿಕ ವರ್ಗವು ಕೇವಲ ತಮ್ಮ ಬೇಡಿಕೆಗಳ ಹೋರಾಟಗಳಿಗೆ ಸೀಮಿತವಾಗದೇ, ಅದಕ್ಕೂ ಮಿಗಿಲಾದ ಚಾರಿತ್ರಿಕ ಕರ್ತವ್ಯವನ್ನು ನಿರ್ವಹಿಸಬೇಕಾದ ಹೊಣೆಗಾರಿಕೆ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹಾಗೆಯೇ ಭಾರತದ ಕಾರ್ಮಿಕ ವರ್ಗಕ್ಕೆ ಅಂಬೇಡ್ಕರ್ ನೀಡಿದ ಕೊಡುಗೆಗಳನ್ನು ಅಧ್ಯಯನ ನಡೆಸುವ ಜರೂರಿದೆ ಎಂದು ನ್ಯಾಯಮೂರ್ತಿ ಹೇಳಿದರು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಕೆ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ಎನ್.ಉಮೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿ.ರಾಜಶೇಖರಮೂರ್ತಿ ವಂದಿಸಿದರು. ಖಜಾಂಚಿ ಬಿ.ಎನ್.ಮಂಜುನಾಥ್ ವೇದಿಕೆಯಲ್ಲಿದ್ದರು.

ಇದೇ ಸಂದರ್ಭದಲ್ಲಿ ಸಿಐಟಿಯುನ ಬೆಂಗಳೂರು ದಕ್ಷಿಣ ಜಿಲ್ಲಾ 11ನೇ ಸಮ್ಮೇಳನದ ಲಾಂಛನವನ್ನು ಹಿರಿಯ ಕಾರ್ಮಿಕ ಮುಖಂಡ ಕೋದಂಡರಾಮ್ ಬಿಡುಗಡೆ ಮಾಡಿದರು. ಸಮ್ಮೇಳನವು ಜುಲೈ 24 ಮತ್ತು 25 ರಂದು ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ನಡೆಯಲಿದೆ.

-ಲಿಂಗರಾಜು