ಎಡಪಕ್ಷಗಳು ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊಮ್ಮಬೇಕು: ಶ್ರೀರಾಮರೆಡ್ಡಿ

ಸಂಪುಟ: 
10
ಸಂಚಿಕೆ: 
23
Sunday, 29 May 2016

ರೈತರು ಕಾರ್ಮಿಕರು, ಜನಸಾಮಾನ್ಯರ ಬದುಕನ್ನು ಬೀದಿಪಾಲು ಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಗಳನ್ನು ಹಿಮ್ಮೆಟ್ಟಿಸಲು ಹಾಗೂ ಜನಸಾಮಾನ್ಯರ ನೀತಿಗಳಿಗಾಗಿ ಪ್ರಬಲ ರಾಜಕೀಯ ಶಕ್ತಿಯನ್ನು ರಾಜ್ಯದಲ್ಲಿ ಬಲಗೊಳಿಸಲು ಪರ್ಯಾಯ ರಾಜಕೀಯ ಶಕ್ತಿಯಾಗಿ ಎಡಪಕ್ಷಗಳು ಮುಂದಾಗಬೇಕಾಗಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಕರೆ ನೀಡಿದರು.

ಅವರು ತುಮಕೂರು ನಗರದ ರಂಗತಾಲೀಮು ಕೇಂದ್ರದಲ್ಲಿ ಮೇ 21ರಂದು ಹಮ್ಮಿಕೊಂಡಿದ್ದ ಎಡಪಕ್ಷಗಳ ರಾಜಕೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ದೇಶದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರಮೋದಿ ಸರ್ಕಾರ ಜನತೆಯಲ್ಲಿ ಸಾಕಷ್ಟು ಭರವಸೆಗಳನ್ನು ನೀಡಿ ಕುರ್ಚಿಗಿಟ್ಟಿಸಿಕೊಂಡು ಬಿಜೆಪಿಯು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅನುಸರಿಸಿದ ನೀತಿಗಳನ್ನು ಬಲು ವೇಗವಾಗಿ ಜಾರಿಗೆ ತರುತ್ತಿದೆ, ನವಉದಾರವಾದಿ ಆರ್ಥಿಕ ನೀತಿಗಳು ಮತ್ತು ದೇಶದ ಐಕ್ಯತೆಯನ್ನು ಒಡೆಯುತ್ತಿರುವ ಕೋಮುವಾದಿ ಶಕ್ತಿಗಳ ಆಕ್ರಮಣದಿಂದ ದೇಶದ ಜನತೆಯ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ ಎಂದು ಹೇಳಿದರು.

ಸಂವಿಧಾನದ ಆಶಗಳ ಮೇಲೆ ದಾಳಿ ನಡೆಯುತ್ತಿದ್ದು ಜನರು ತಿನ್ನುವ ಆಹಾರ ಪದ್ದತಿ ಹೇಗಿರಬೇಕು, ಉಡುವ ಬಟ್ಟೆ ಯಾವುದು, ಪಡೆಯಬೇಕಾದ ಶಿಕ್ಷಣ ಯಾವುದು, ಯಾವ ರೀತಿಯಾಗಿ ಮಾತನಾಡಬೇಕು ಎನ್ನುವ ಎಲ್ಲ ಅಂಶಗಳ ಮೇಲೂ ದಾಳಿಗಳು ನಡೆಯುತ್ತಿದೆ. ಅನಾರೋಗ್ಯ ಪೀಡಿತ ಜನರು ಔಷಧಿಗಳನ್ನು ಕೊಂಡುಕೊಳ್ಳಲಾರದ ಸ್ಥಿತಿ ನಿರ್ಮಾಣವಾಗುತ್ತಿದೆ ಇದು ನರೇಂದ್ರಮೋದಿಯವರ ಆಡಳಿತ ವೈಖರಿಯಾಗಿದೆ.

ಅಹಿಂದಪರ ಎಂದು ಹೇಳಿಕೊಳ್ಳುವ ರಾಜ್ಯದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ರೈತ ವಿರೋಧಿ ನೀತಿಗಳನ್ನು ಜಾರಿಗೆತರುತ್ತಿದೆ. ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿದ್ದು ಇದನ್ನು ತಡೆಯುವಲ್ಲಿ ಸಿದ್ದರಾಮಯ್ಯ ಸರ್ಕಾರ ಮತ್ತು ಗೃಹಮಂತ್ರಿ ಪರಮೇಶ್ವರ್ ವಿಫಲರಾಗಿದ್ದಾರೆ ಎಂದು ಸರ್ಕಾರಗಳ ಜನವಿರೋಧಿ ನೀತಿಗಳನ್ನು ಜನತೆಯ ಮುಂದೆ ತಿಳಿಸಲು ಎಡಪಕ್ಷಗಳು ರಾಜಕೀಯ ಪ್ರಚಾರಾಂದೋಲನವನ್ನು ಹಮ್ಮಿಕೊಂಡಿದ್ದು ಜೂನ್‍ನಲ್ಲಿ ರಾಜ್ಯಮಟ್ಟದ ರ್ಯಾಲಿ ನಡೆಸಲಾಗುವುದು ಎಂದರು.

ಸಿಪಿಐ ರಾಜ್ಯ ಕಾರ್ಯದರ್ಶೀ ಮಂಡಳಿ ಸದಸ್ಯ ಎನ್. ಶಿವಣ್ಣ ಮಾತನಾಡಿ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಸರ್ಕಾರದ ನೀತಿಗಳ ವಿರುದ್ದ ಮಾತನಾಡುವವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದ್ದು ಎಂದರು.

ಎಸ್‍ಯುಸಿಐ(ಸಿ)ನ ರಾಜ್ಯ ಸಮಿತಿ ಸದಸ್ಯ ಕೆ. ಸೋಮಶೇಖರ್, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಂಬೇಗೌಡ, ಎಸ್‍ಯುಸಿಐ(ಸಿ) ನಗರ ಕಾರ್ಯದರ್ಶಿ ಎಸ್.ಎನ್.ಸ್ವಾಮಿ, ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಸೈಯದ್‍ಮುಜೀಬ್ ಸಿಪಿಐ ಗಿರೀಶ್ ಉಪಸ್ಥಿತರಿದ್ದರು.

ವರದಿ : ಎಸ್. ರಾಘವೇಂದ್ರ