ದೃಡೀಕೃತ ಆಲೂಗೆಡ್ಡೆ ಬಿತ್ತನೆ ಬೀಜವನ್ನೇ ವಿತರಿಸಿ: ಹಾಸನ ರೈತಸಂಘ ಒತ್ತಾಯ

ಸಂಪುಟ: 
10
ಸಂಚಿಕೆ: 
22
Sunday, 22 May 2016

ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆ ಕಳೆದ 10 ವರ್ಷಗಳಲ್ಲಿ ಸುಮಾರು ಅರ್ಧದಷ್ಟು ಇಳಿದಿದ್ದು ಇದಕ್ಕೆ ದೃಡೀಕೃತ ಬಿತ್ತನೇ ಬೀಜವನ್ನು ಬಳಕೆ ಮಾಡದೆ ಅಂಗಮಾರಿ ರೋಗ ಕಾರಣ. ಆದ್ದರಿಂದ ದೃಡೀಕೃತ ಬಿತ್ತನೇ ಬೀಜವನ್ನು ವಿತರಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಜಂಟಿಯಾಗಿ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾಡಳಿತವನ್ನು ಒತ್ತಾಯಿಸಿವೆ. 

ಆಲೂಗೆಡ್ಡೆ ಹಾಸನ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ. ಸಕಲೇಶಪುರ ತಾಲ್ಲೂಕನ್ನು ಹೊರತುಪಡಿಸಿದರೆ ಜಿಲ್ಲೆಯ ಉಳಿದ ಎಲ್ಲಾ ತಾಲೂಕುಗಳಲ್ಲೂ ಆಲೂಗೆಡ್ಡೆಯನ್ನು ರೈತರು ಬೆಳೆಯುತ್ತಾರೆ. ಕೃಷಿ ಇಲಾಖೆಯ ಮಾಹಿತಿ ಪ್ರಕಾರವೇ ಕಳೆದ ವರ್ಷ (2014-15) ಜಿಲ್ಲೆಯಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗೆಡ್ಡೆಯನ್ನು ಬಿತ್ತನೆ ಮಾಡಲಾಗಿತ್ತು. ಸುಮಾರು ಹತ್ತು ವರ್ಷಗಳ ಹಿಂದೆ (2004-05) ಹಾಸನ ಜಿಲ್ಲೆಯಾಧ್ಯಂತ ಸುಮಾರು 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗೆಡ್ಡೆಯನ್ನು ಬೆಳೆಯಲಾಗುತ್ತಿತ್ತು. ಆದರೆ ಇಷ್ಟು ಪ್ರಮಾಣದಲ್ಲಿ ಇಳಿಕೆ ಕಂಡುಬರಲು ಪ್ರಮುಖ ಕಾರಣ ಬೆಳೆಗೆ ಬರುವ ಅಂಗಮಾರಿ ರೋಗ. ಮತ್ತು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗದಿರುವುದು. ಕೃಷಿ ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ಅಂಗಮಾರಿ ರೋಗಕ್ಕೆ ದೃಡೀಕೃತ ಬಿತ್ತನೇ ಬೀಜವನ್ನು ಬಳಕೆ ಮಾಡದಿರುವುದೆ ಕಾರಣ ಎನ್ನುತ್ತಾರೆ. 

ಆದರೆ ದೃಡೀಕೃತ ಬಿತ್ತನೆ ಆಲೂಗೆಡ್ಡೆ ಬೀಜವನ್ನು ರೈತರಿಗೆ ವಿತರಿಸುವಲ್ಲಿ ಜಿಲ್ಲಾಡಳಿತ ಸರಿಯಾದ ಕ್ರಮಗಳನ್ನು ಅನುಸರಿಸದೆ ಕೇವಲ ವರ್ತಕರ ಅನುಕೂಲಕ್ಕೆ ತಕ್ಕಂತೆ ತೀರ್ಮಾನಗಳನ್ನು ತೆಗೆದುಕೊಂಡು ದೊಡ್ಡ ವಿಭಾಗದ ರೈತ ಸಮುದಾಯವನ್ನು ಕತ್ತಲೆಯಲ್ಲಿಟ್ಟಿದೆ.

ಕಳೆದ ಮೂರು ದಿನಗಳ ಹಿಂದೆ ಜಿಲ್ಲಾಡಳಿತ ಆಲೂಗೆಡ್ಡೆ ಬಿತ್ತನೆ ಬೀಜದ ಮಾರಾಟದ ಕುರಿತು ನಡೆಸಿದ ಸಭೆಗೆ ರೈತರನ್ನು ಮತ್ತು ರೈತ ಸಂಘದ ಪ್ರತಿನಿಧಿಗಳನ್ನು ಆಹ್ವಾನಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರೇ ಘೋಷಿಸಿದಂತೆ ಬಿತ್ತನೆ ಆಲೂಗಡ್ಡೆ ಖರೀದಿಸುವ ಪ್ರತಿಯೊಬ್ಬ ರೈತರಿಗೂ ನಿಗದಿತ ಬೆಲೆಯ ಶೇ. ಅರ್ಧದಷ್ಟನ್ನು ಸಹಾಯ ಧನದ ರೂಪದಲ್ಲಿ (ಸಬ್ಸಿಡಿ) ನೀಡುತ್ತೇವೆಂದು ಅದಕ್ಕಾಗಿ ರಾಜ್ಯ ಸರ್ಕಾರ 2 ಕೋಟಿ ರೂ.ಗಳನ್ನು ಮೀಸಲಿಸಿಟ್ಟಿದೆ ಎಂದೂ ಹೇಳಿದ್ದರು. ಆದರೆ ಈ ಕುರಿತು ಯಾವುದೇ ರೈತರಿಗೂ ಇದುವರೆಗೂ ಸರಿಯಾದ ಮಾಹಿತಿಗಳಿಲ್ಲ. ಮಾತ್ರವಲ್ಲದೆ ಬಿತ್ತನೆ ಬೀಜಕ್ಕೆ ಜಿಲ್ಲಾಡಳಿತವೇ ನಿಖರವಾದ ಬೆಲೆಯನ್ನು ನಿಗದಿಪಡಿಸದೆ ವರ್ತಕರ ಇಚ್ಚೆಗೆ ಬಿಟ್ಟಿರುವುದು ರೈತರಿಗೆ ದೊಡ್ಡ ಅನ್ಯಾಯ ಮಾಡಿದಂತಾಗಿದೆ.

ಆದ್ದರಿಂದ ಜಿಲ್ಲಾಡಳಿತ ಈ ಕೂಡಲೆ ರೈತ ಸಂಘಟನೆಗಳ ಪ್ರತಿನಿಧಿಗಳು ವರ್ತಕರು ಮತ್ತು ಕೃಷಿ, ತೋಟಗಾರಿಕಾ ಇಖೆಯ ಅಧಿಕಾರಿಗಳಳು ಮತ್ತು ಕೃಷಿ ತಜ್ಞರನ್ನೊಗೊಂಡ ಸಭೆಯನ್ನು ನಡೆಸದೆ ಯಾವುದೇ ಕಾರಣಕ್ಕೂ ಮಾರುಕಟ್ಟೆಯಲ್ಲಿ ಬಿತ್ತನೆ ಆಲೂಗೆಡ್ಡೆಯ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡಬಾರದೆಂದು ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿವೆ.