“ಗುಂಡಾರ್ಲಹಳ್ಳಿ ದಲಿತರಿಂದ ಡಿ.ಹೆಚ್.ಎಸ್. ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಬೇಟಿ”

ಸಂಪುಟ: 
10
ಸಂಚಿಕೆ: 
22
Sunday, 22 May 2016

ಪಾವಗಡ ತಾಲ್ಲೂಕಿನ ಗುಂಡಾರ್ಲಹಳ್ಳಿ ಗ್ರಾಮದ ದಲಿತ ಕಾಲೋನಿಯ ಸ್ಮಶಾನಕ್ಕೆ ಭೂಮಿ ನೀಡುವಂತೆ ಒತ್ತಾಯಿಸಿ ದಿನಾಂಕ:13-05-2016 ರಂದು ಡಿ.ಹೆಚ್.ಎಸ್. ರಾಜ್ಯಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ಸಂಚಾಲಕರಾದ ಗೋಪಾಲಕೃಷ್ಣ ಅರೋವಳ್ಳಿ, ಎಸ್.ಎಫ್.ಐ. ಜಿಲ್ಲಾ ಕಾರ್ಯದರ್ಶಿ, ಈ. ಶಿವಣ್ಣ, ಜೂನಿ ಮತ್ತು ಗ್ರಾಮಸ್ಥರಾದ ದುರ್ಗಪ್ಪ, ತಿಪ್ಪೇಸ್ವಾಮಿ, ಕುಮಾರ್, ರಮೇಶ್ ಮುಂತಾದವರು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುತ್ತಾ ಗುಂಡಾರ್ಲಹಳ್ಳಿ ಗ್ರಾಮದ ದಲಿತರಿಗೆ ಆಗಿರುವ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ದಲಿತ ಕಾಲೋನಿಗೆ ಸೇರಿದ ಸ್ಮಶಾನ ಭೂಮಿಯು ಸರ್ವೆ ನಂ.104 ವಿಸ್ತೀರ್ಣ 1 ಎಕ್ಟೇರ್, 10 ಗುಂಟೆ ಈ ಜಾಗದಲ್ಲಿ ಸುಮಾರು 30 ವರ್ಷಗಳಿಂದ ದಲಿತರು ಶವಸಂಸ್ಕಾರ ಮಾಡಿಕೊಂಡು ಬಂದಿದ್ದಾರೆ. ಆದರೆ ಮೇಲ್ವರ್ಗದವರು ಇತ್ತೀಚೆಗೆ ಅಲ್ಲಿದ್ದಂತಹ ಎಲ್ಲಾ ಗೋರಿಗಳನ್ನು ನೆಲಸಮ ಮಾಡಿ ಅತಿಕ್ರಮಿಸಿಕೊಂಡು ಇದು ತಮಗೆ ಸೇರಿದ ಜಾಗ ಎಂದು ದಲಿತರ ಮೇಲೆ ಹಲ್ಲೆ ನಡೆಸಿದ್ದಾರೆ. ಇದಾದ ನಂತರ ಹನುಮಂತರಾಯಪ್ಪ ಎಂಬವರು ಮರಣ ಹೊಂದಿದ ಸಂದರ್ಭದಲ್ಲಿ ಶವವನ್ನು ಈ ಜಾಗದಲ್ಲಿ ಹೂಳಬಾರದು ಎಂದು ತಡೆದು ಹಲ್ಲೆ ನಡೆಸಿರುತ್ತಾರೆ. ಇದನ್ನು ವಿರೋಧಿಸಿ ದಲಿತರು ಸುಮಾರು 2 ದಿನಗಳ ಕಾಲ ರಸ್ತೆ ತಡೆ ನಡೆಸಿ ಹೋರಾಟ ನಡೆಸಿರುತ್ತಾರೆ. ಶವ ಹೂಳಲು ಜಾಗ ನೀಡದೇ ಇರುವುದರಿಂದ ನೊಂದ ಹನುಮಂತರಾಯಪ್ಪ ಕುಟುಂಬವು ಹಳ್ಳದಲ್ಲಿ ಶವವನ್ನು ಊಳಿ ಮಳೆ ಬಂದರೆ ಕೊಚ್ಚಿ ಹೋಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. 

ನಂತರ ಆಗಮಿಸಿದ ತಾಲ್ಲೂಕು ಆಡಳಿತವೂ ಸಹ ಮೇಲ್ವರ್ಗದ ರಾಜಕೀಯ ಒತ್ತಡಕ್ಕೆ ಮಣಿದು ಪರ್ಯಾಯ ಭೂಮಿ ನೀಡುವುದಾಗಿ ಸುಮ್ಮನಾಗಿರುತ್ತದೆ. ಆದರೆ ತಾಲ್ಲೂಕು ಆಡಳಿತ ನೀಡಿರುವ ಬೇರೊಂದು ಪರ್ಯಾಯ ಭೂಮಿಯು ಸುಮಾರು ಕಿ.ಮೀ. ದೂರದಲ್ಲಿರುವುದರಿಂದ ಅಲ್ಲಿಗೆ ಹೋಗಿ ಶವ ಸಂಸ್ಕಾರ ಮಾಡಲು ದೂರವಾಗುತ್ತದೆ. ಆದ್ದರಿಂದ ನಮಗೆ ಮೊದಲು ನಡೆಸುತ್ತಿದ್ದ ಸ್ಥಳದಲ್ಲಿಯೇ ಅವಕಾಶ ನೀಡಬೇಕೆಂದು ಒತ್ತಾಯಿಸಿದರೂ ಸಹ ನೀಡಿಲ್ಲ. ಆದ್ದರಿಂದ ಮೊದಲು ಶವ ಸಂಸ್ಕಾರ ಮಾಡುತ್ತಿದ್ದ ಜಾಗವನ್ನೇ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿ ಬೇಡಿಕೆಗಳನ್ನು ಸಲ್ಲಿಸಲಾಯಿತು.

ಈ ಹಳ್ಳಿಯಲ್ಲಿ ಕೂಲಿ ಮಾಡಿಕೊಂಡು ಬದುಕುತ್ತಿರುವ ಸುಮಾರು 70 ಕುಟುಂಬಗಳಿದ್ದು, ಸಾವಿರಾರು ವರ್ಷಗಳಿಂದ ಇದೇ ವೃತ್ತಿಯನ್ನು ಮಾಡುತ್ತ ಬಂದಿರುವವರಿಗೆ 5 ಎಕ್ಟೇರ್ ಕೃಷಿ ಭೂಮಿಯನ್ನು ಸರ್ಕಾರ ನೀಡಬೇಕು. 2015 ರಲ್ಲಿಯೇ ಮನೆ ಮಂಜೂರಾಗಿದ್ದು ಅವುಗಳನ್ನು ಮೇಲ್ವರ್ಗದವರು ತಡೆಹಿಡಿದಿರುತ್ತಾರೆ. ಇದನ್ನು ಸರಿಪಡಿಸಿ ಮನೆ ಇಲ್ಲದವರಿಗೆ ಪನರ್ ವಸತಿ ಕಲ್ಪಿಸಬೇಕು ಎಂದೂ ಬೇಡಿಕೆ ಸಲ್ಲಿಸಲಾಯಿತು.

- ಶಿವಣ್ಣ .ಈ.