‘ಋಜುತ್ವ ಮತ್ತು ಕಾರ್ಯಕ್ಷಮತೆ’ಯ ಹೆಸರಲ್ಲಿ ಕೇಂದ್ರೋದ್ದಿಮೆಗಳಲ್ಲಿ ಮೋದಿ ಸರಕಾರದ ಕಡ್ಡಾಯ ನಿವೃತ್ತಿ ಹುನ್ನಾರ ದೇಶವ್ಯಾಪಿ ಪ್ರತಿಭಟನೆಗೆ ಸಿಐಟಿಯು ಕರೆ

ಸಂಪುಟ: 
10
ಸಂಚಿಕೆ: 
22
Sunday, 22 May 2016

ನರೇಂದ್ರ ಮೋದಿ ಸರಕಾರ ಕೇಂದ್ರೀಯ ಸಾರ್ವಜನಿಕ ವಲಯದ ಉದ್ದಿಮೆಗಳು ತಮ್ಮ ಉದ್ಯೋಗಿಗಳ ವರ್ತನೆ, ಶಿಸ್ತು ಮತ್ತು ಅಪೀಲು(ಸಿಡಿಎ) ನಿಯಮಗಳು ಮತ್ತು/ ಸೇವಾ ನಿಯಮಗಳಲ್ಲಿ ಶಿಕ್ಷಾ ಕ್ರಮಗಳನ್ನು ಸೇರಿಸಬೇಕು ಎಂದು ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಮೂಲಕ ನಿರ್ದೇಶನ ಕಳಿಸಿದೆ ಎಂದು ವರದಿಯಾಗಿದೆ. ಇದು ‘ಋಜುತ್ವ ಮತ್ತು ದಕ್ಷತೆ ಇರುವಂತೆ’ ಮಾಡುವ ಹೆಸರಿನಲ್ಲಿ ನೌಕರರನ್ನು ಬಲವಂತವಾಗಿ ನಿವೃತ್ತಗೊಳಿಸುವ ನಿರಂಕುಶ ಅಧಿಕಾರವನ್ನು ಆಡಳಿತ ಮಂಡಳಿಗೆ ಕೊಡಮಾಡುವ ಹುನ್ನಾರ ಎಂದು ಸಿಐಟಿಯು ಬಲವಾಗಿ ಖಂಡಿಸಿದೆ. 

ಮೋದಿ ಸರಕಾರ ಈ ಕಡ್ಡಾಯ ನಿವೃತ್ತಿಯ ಬರ್ಬರ ಕ್ರಮವನ್ನು ಜಾರಿಮಾಡಲು ಪಣ ತೊಟ್ಟಂತಿದೆ. ಈ ಬಗ್ಗೆ ಎಲ್ಲ ಕೇಂದ್ರೀಯ ಸಾರ್ವಜನಿಕ ವಲಯದ ಉದ್ದಿಮೆಗಳು ತಮ್ಮ ನಿಯಮಗಳಲ್ಲಿ ಬದಲಾವಣೆಗಳನ್ನು ಸೇರಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಈ ಬಗ್ಗೆ ವರದಿ ಒಪ್ಪಿಸಬೇಕು ಎಂದು ನಿರ್ದೇಶಿಸಲಾಗಿದೆಯಂತೆ. ಒಬ್ಬ ನೌಕರನ ವಯಸ್ಸು 50/55 ವರ್ಷ ತಲುಪುವ, ಅಥವ 30ವರ್ಷಗಳ ಸೇವೆ ಮುಗಿಸುವ  ಆರುತಿಂಗಳ ಮೊದಲು ಈ ಪ್ರಕ್ರಿಯೆ ಆರಂಭಿಸಬೇಕಂತೆ. ಉಕ್ಕು ಪ್ರಾಧಿಕಾರ ಮತ್ತು ಬೆಮೆಲ್ ಈಗಾಗಲೇ ಈ ಕ್ರಮಗಳನ್ನು ಸೇರಿಸಿದ್ದು ಅದಕ್ಕೆ ಅಲ್ಲಿನ ಕಾರ್ಮಿಕ ಸಂಘಟನೆಗಳಿಂದ ಬಲವಾದ ಪ್ರತಿಭಟನೆ ವ್ಯಕ್ತವಾಗಿದೆ.

ಇದು ನೌಕರರ ಮೂಲಭೂತ ಹಕ್ಕು ಮತ್ತು ಸ್ವಾಭಾವಿಕ ನ್ಯಾಯದ ನಿರಾಕರಣೆ ಎಂದು ಸಿಐಟಿಯು ಇದನ್ನು ವಿರೋಧಿಸಿದೆ. ಕಾರ್ಯುದಕ್ಷತೆ, ಸಾಮಥ್ರ್ಯ, ಋಜುತ್ವ ಮುಂತಾದವುಗಳನ್ನು ಹೆಚ್ಚಿಸಲು, ಅಥವ ಈ ವಿಷಯದಲ್ಲಿ ಶಿಕ್ಷಾ ಕ್ರಮಗಳಿಗೆ ಈಗಾಗಲೇ  ಸೇವಾ ನಿಯಮಗಳಲ್ಲಿ ಅವಕಾಶವಿದೆ. ಆದರೂ ಈಗ ಈ ನಿರ್ದೇಶನಗಳನ್ನು ನೀಡಿರುವುದರ ಉದ್ದೇಶ ಆಡಳಿತ ಮಂಡಳಿಗಳಿಗೆ ತಮ್ಮ ನೌಕರರನ್ನು ಹೊರಗೆಸೆಯಲು ಲಂಗುಲಗಾಮಿಲ್ಲದ ಅಧಿಕಾರಗಳನ್ನು ನೀಡುವುದು ಮತ್ತು ನೌಕರರಿಗೆ ತಮ್ಮನ್ನು ರಕ್ಷಿಸಿಕೊಳ್ಳುವ ಯಾವ ಅವಕಾಶವೂ ಇಲ್ಲದಂತೆ ಮಾಡುವುದು. ಲಂಗುಲಗಾಮಿಲ್ಲದ ಅಧಿಕಾರ ತನ್ನೊಂದಿಗೇ ದುಷ್ಟ ಉದ್ದೇಶಗಳನ್ನೂ ತರುತ್ತದೆ ಎಂದು ಎಚ್ಚರಿಸಿರುವ ಸಿಐಟಿಯು ಇದು ನೌಕರರನ್ನು ಗುಲಾಮರಾಗಿಸುವ ಕ್ರಮ ಎಂದು ವರ್ಣಿಸಿದೆ, ಮತ್ತು ಇದರ ಉದ್ದೇಶ ಕಾರ್ಮಿಕ ಆಂದೋಲನವನ್ನು ಮಟ್ಟ ಹಾಕುವುದು ಎಂದು ಹೇಳಿದೆ. 

ಇದು ನರೇಂದ್ರ ಮೋದಿ ಸರಕಾರದ ಕಾರ್ಮಿಕ ವಿರೋಧಿ ಧೋರಣೆಯ, ಕಾರ್ಮಿಕ ಸುಧಾರಣೆಯ ಹೆಸರಿನಲ್ಲಿ ಕಾರ್ಮಿಕರಿಗೆ ರಕ್ಷಣೆ ನೀಡುವ ಕಾನೂನುಗಳನ್ನು ಧ್ವಂಸ ಮಾಡುವ ಧೋರಣೆಯ ಅಭಿನ್ನ ಭಾಗ. ಅಲ್ಲದೆ ಕೇಂದ್ರೀಯ ಸಾರ್ವಜನಿಕ ವಲಯದ ‘ಮಹಾ ಆಯಕಟ್ಟಿನ ಮಾರಾಟ’ಕ್ಕೆ ಹೊರಟಿರುವ ಸಂದರ್ಭದಲ್ಲಿ ಖಾಸಗೀ ವಲಯದ ದಮನಕಾರೀ ಸಂಸ್ಕøತಿಯನ್ನು ಸಾರ್ವಜನಿಕ ವಲಯದಲ್ಲಿ ತಂದು ಅದನ್ನು ಮಾರಿ ತಿನ್ನುವುದಕ್ಕೆ ವಿರೋಧವನ್ನು ಕುಂಠಿತಗೊಳಿಸುವ ದುಷ್ಟ ಉದ್ದೇಶವೂ ಇದರ ಹಿಂದಿದೆ ಎಂದು ಸಿಐಟಿಯು ಹೇಳಿದೆ. 

ಒಬ್ಬ ಉದ್ಯೋಗಿ 50/55 ವರ್ಷ ತಲುಪುವ ವೇಳೆಗೆ ಒಂದೆಡೆಯಲ್ಲಿ ಹೆಚ್ಚಿನ ಕುಶಲತೆ ಮತ್ತು ಅನುಭವ ಗಳಿಸಿದ್ದರೆ, ಇನ್ನೊಂದೆಡೆಯಲ್ಲಿ ತನ್ನ ಕುಟುಂಬಕ್ಕೆ ಸಂಬಂಧಪಟ್ಟಂತೆ ಅತೀ ಹೆಚ್ಚು ಸಾಮಾಜಿಕ ಜವಾಬ್ದಾರಿ ಹೊರಬೇಕಾಗಿರುವ ಘಟ್ಟ. ಆದ್ದರಿಂದ ಈ ಘಟ್ಟದಲ್ಲಿ ಕಡ್ಡಾಯ ನಿವೃತ್ತಿಯ ಯೋಜನೆ ಉದ್ದಿಮೆಯ ದಕ್ಷತೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. 

ವಾಸ್ತವವಾಗಿ ಇಂತಹ ಪ್ರತಿಗಾಮಿ ನಿರ್ದೇಶನಗಳು ಆಡಳಿತದ ಉನ್ನತ ಸ್ಥಾನಗಳಲ್ಲಿರುವವರ  ‘ಋಜುತ್ವ ಮತ್ತು ಕಾರ್ಯಕ್ಷಮತೆ’ಯ ಮುಂದೆಯೇ ಪ್ರಶ್ನೆ ಚಿಹ್ನೆ ಇಟ್ಟಿದೆ ಎಂದಿರುವ ಸಿಐಟಿಯು ಕೇಂದ್ರೀಯ ಸಆರ್ವಜನಿಕ ವಲಯದ ನೌಕರರು ಮತ್ತು ಅಧಿಕಾರಿಗಳು ಕೂಡ ತಮ್ಮ ಸೇವಾ ನಿಯಮಗಳಿಗೆ ಇಂತಹ ಘೋರ ಬದಲಾವಣೆಯನ್ನು ತರುವ ಸರಕಾರದ ಇಂತಹ ಪ್ರತಿಗಾಮಿ ಕ್ರಮವನ್ನು ತೆಪ್ಪಗೆ ಸ್ವೀಕರಿಸಬಾರದು, ಅದರ ವಿರುದ್ಧ ಸಿಡಿದೇಳಬೇಕು ಎಂದು ಕರೆ ನೀಡಿದೆ. 

ಈ ನೌಕರ-ವಿರೋಧಿ ನಿರ್ಧಾರವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಸಿಐಟಿಯು ಆಗ್ರಹಿಸಿದೆ. ಸಾರ್ವಜನಿಕ ವಲಯದ ನೌಕರರು ಮತ್ತು ಅವರ ಸಂಘಟನೆಗಳು ಒಟ್ಟಾಗಿ ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಇಂತಹ ನಿರ್ದೇಶನಗಳು ಮತ್ತು ಇಂತಹ ನಿರ್ದೇಶನಗಳನ್ನು ಪಾಲಿಸಲು ಮುಂದಾಗುವ ಸಾರ್ವಜನಿಕ ವಲಯದ ಉದ್ದಿಮೆಯ ಆಡಳಿತ ಮಂಡಳಿಗಳ ವಿರುದ್ಧ ಬಲವಾದ ಪ್ರತಿಭಟನೆಗಳನ್ನು ಸಂಘಟಿಸಬೇಕು, ಕಡ್ಡಾಯ ನಿವೃತ್ತಿಗಳನ್ನು ಬಲವಾಗಿ ಪ್ರತಿರೋಧಿಸಬೇಕು ಎಂದು ಕರೆ ನೀಡಿದೆ.