ಮಹಿಳಾ ವಿಶ್ವವಿದ್ಯಾಲಯದ ವಿಚಾರ ಸಂಕಿರಣಕ್ಕೆ ಜಗ್ಮತಿ ಸಂಗ್ವಾನ್ ಆಹ್ವಾನ ರದ್ದು -ಹರಿಯಾಣ ಮುಖ್ಯಮಂತ್ರಿಗಳ ಹಸ್ತಕ್ಷೇಪ

ಸಂಪುಟ: 
10
ಸಂಚಿಕೆ: 
22
Sunday, 22 May 2016

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಎಐಡಿಡಬ್ಲ್ಯುಎ) ಪ್ರಧಾನ ಕಾರ್ಯದರ್ಶಿ ಜಗ್ಮತಿ ಸಂಗ್ವಾನ್ ಅವರನ್ನು ಹರಿಯಾಣದ ಖಾನ್ಪುರ್ ಕಲಾನ್ ನಲ್ಲಿರುವ ಬಿಪಿಎಸ್ ಮಹಿಳಾ ವಿಶ್ವವಿದ್ಯಾಲಯ ಒಂದು ವಿಚಾರ ಸಂಕಿರಣಕ್ಕೆ ಆಹ್ವಾನಿಸಿತ್ತು. ಚರ್ಚೆಯ ವಿಷಯ: ಭಾರತದಲ್ಲಿ ಸಾಮಾಜಿಕ ಉದ್ಯಮಶೀಲತೆ ಮತ್ತು ತಾಳಿಕೆಯ ಅಭಿವೃದ್ಧಿ. ಮೇ 13ರಂದು ಈ ಕಾರ್ಯಕ್ರಮ ನಡೆಯಲಿತ್ತು. ಮೇ12 ರ ರಾತ್ರಿ ಕಾರ್ಯಕ್ರಮದ ಸಂಘಟಕರು ಜಗ್ಮತಿಯವರಿಗೆ ಫೋನ್ ಮಾಡಿ ಹರಿಯಾಣ ಮುಖ್ಯಮಂತ್ರಿಗಳ ಕಚೇರಿ ತಮ್ಮ ಹೆಸರನ್ನು ಭಾಷಣಕಾರರ ಪಟ್ಟಿಯಿಂದ ಕೈಬಿಡಲು ಹೇಳಿದ್ದಾರೆ ಎಂದರು.

ಯಥಾಪ್ರಕಾರ, ಜಗ್ಮತಿಯವರಿಗೆ ಆಹ್ವಾನವನ್ನು ಹಿಂತೆಗೆದುಕೊಂಡಿರುವಲ್ಲಿ ಮುಖ್ಯಮಂತ್ರಿಗಳ ಕಚೇರಿಯ ಪಾತ್ರವೇನೂ ಇಲ್ಲ ಎಂದರು; ವಿಶ್ವವಿದ್ಯಾಕಯದ ಉಪಕುಲಪತಿಗಳು ವಿವಿಯ ಆವರಣದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದರ ಬಗ್ಗೆ ತನಗೇನೂ ತಿಳಿದಿಲ್ಲ ಎಂದರು. ಆದರೆ ಹರಿಯಾಣದ ಬುದ್ಧಿಜೀವಿಗಳು ಇವರ ಹೇಳಿಕೆಗಳನ್ನು ನಂಬಿಲ್ಲ. ಒಬ್ಬ ಕ್ರೀಡಾ ಪಾರಿತೋಷಕ ವಿಜೇತೆಯೂ ಆದ ಜಗ್ಮತಿಯವರಿಗೆ ನೀಡಿದ ಆಹ್ವಾನವನ್ನು ರದ್ದು ಪಡಿಸಿರುವುದರ ಬಗ್ಗೆ ಬಲವಾದ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಹರಿಯಾಣ ಸರಕಾರ ತಕ್ಷಣವೇ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವವಾದಿ ಕಾರ್ಯಕರ್ತರಿಗೆ ಶಿಕ್ಷಣ ಮತ್ತು ಕಲಕೆಯ ದಾರಿಗಳನ್ನು ಈ ರೀತಿ ಸರ್ವಾಧಿಕಾರಿಗಳಂತೆ ವರ್ತಿಸಿ ಮುಚ್ಚಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಚಂಡೀಗಡದ ಸ್ನಾತಕೋತ್ತರ ವೈದ್ಯಕೀಯ ಶಾಸ್ಯ್ರಗಳ ಅಧ್ಯಯನ ಸಂಸ್ಥೆಯ ನಿವೃತ್ತ ಹಿರಿಯ ಪ್ರಾಧ್ಯಾಪಕರೂ ಸೇರಿದಂತೆ ಹಲವು ಮಹಿಳಾ ಪ್ರಾಧ್ಯಾಪಕರು, ನಾಲ್ಕು ನಿವೃತ್ತ ಪ್ರಿನ್ಸಿಪಾಲರುಗಳು ಮತ್ತಿತರರು ಜಂಟಿ ಹೇಳಿಕೆ ನೀಡಿದ್ದಾರೆ.     

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಪಂಚಾಯತು ಚುನಾವಣೆಗಳಲ್ಲಿ ಅಭ್ಯರ್ಥಿಗಳ ಮೇಲೆ ಶರತ್ತುಗಳನ್ನು ಹಾಕಿದ್ದಕ್ಕೆ  ಜಗ್ಮತಿಯವರು ಬಹಿರಂಗವಾಗಿ  ಸವಾಲು ಹಾಕಿದ್ದರಿಂದ ಕುಪಿತರಾದವರ ಕೃತ್ಯ ಇದು ಎಂಬ ಬಗ್ಗೆ ಸಂದೇಹವಿಲ್ಲ.