ಮಾಲೇಗಾಂವ್ ಸ್ಫೋಟದ ಆಪಾದಿತರಿಗೆ ಎನ್ ಐಎ ಕ್ಲೀನ್ ಚಿಟ್ ಮೋದಿ ಸರಕಾರ ಭಯೋತ್ಪಾದನೆಯ ವಿರುದ್ಧ ಹೋರಾಟವನ್ನು ದುರ್ಬಲಗೊಳಿಸುತ್ತಿದೆ -ಸಿಪಿಐ(ಎಂ) ಪೊಲಿಟ್ ಬ್ಯೂರೊ ಖಂಡನೆ

ಸಂಪುಟ: 
10
ಸಂಚಿಕೆ: 
22
Sunday, 22 May 2016

ಹಿಂದುತ್ವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಆರೋಪಗಳನ್ನು ದುರ್ಬಲಗೊಳಿಸಿ ಈ ಬಿಜೆಪಿ ಸರಕಾರ ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟವನ್ನು ದುರ್ಬಲಗೊಳಿಸುತ್ತಿದೆ ಎಂಬುದು ಸುಸ್ಪಷ್ಟ, ಮಹಾರಾಷ್ಟ್ರ ಎಟಿಎಸ್ ಸಲ್ಲಿಸಿರುವ ಆರೋಪ ಪಟ್ಟಿಯ ಆಧಾರದಲ್ಲಿ ಸುಪ್ರಿಂ ಕೋರ್ಟ್ ಉಸ್ತುವಾರಿಯಲ್ಲಿ ಒಂದು ಸರಿಯಾದ ತನಿಖೆಯನ್ನು ಮತ್ತೆ ನಡೆಯಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೊ ಆಗ್ರಹಿಸಿದೆ.

ಮಾಲೆಗಾಂವ್ ಭಯೋತ್ಪಾದಕ ದಾಳಿಯ ಆಪಾದನೆಗೆ ಗುರಿಯಾಗಿದ್ದ, ಅದಕ್ಕಾಗಿ ಬಂಧಿಸಲ್ಪಟ್ಟು ಸಪ್ಟಂಬರ್ 29, 2008 ರಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ)ಯ ಆರೋಪ ಪಟ್ಟಿಗೂ ಒಳಗಾಗಿದ್ದವರು ಈಗ ತಪ್ಪಿತಸ್ಥರಲ್ಲ ಎಂದು ಅದೇ ಎನ್ ಐಎ ಹೇಳುತ್ತಿದೆ. ಈ ಆರೋಪಿಗಳನ್ನು ದೋಷಮುಕ್ತಗೊಳಿಸಿರುವ ರೀತಿಯನ್ನು ಸಿಪಿಐ(ಎಂ) ಪೊಲಿಟ್ ಬ್ಯೂರೊ ಬಲವಾಗಿ ಖಂಡಿಸಿದೆ.

ಮೇ 13, 2016ರಂದು ಎನ್ ಐಎ ಪ್ರಮುಖ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಮತ್ತು ಇತರ ಐವರ ಮೇಲಿನ ಆಪಾದನೆಗಳನ್ನು ಕೈಬಿಟ್ಟಿದೆ. ಅಲ್ಲದೆ ಇನ್ನೊಬ್ಬ ಪ್ರಮುಖ ಆರೋಪಿ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಮೇಲಿನ ಆಪಾದನೆಗಳನ್ನು ದುರ್ಬಲಗೊಳಿಸಿದೆ. 

ಮಹಾರಾಷ್ಟ್ರದ ಭಯೋತ್ಪಾದಕ-ನಿರೋಧಕ ದಳ (ಎಟಿಎಸ್) ಈ ಭಯೋತ್ಪಾದಕ ದಾಳಿಯ ಮೂಲ ಹಿಂದುತ್ವ ಸಂಘಟನೆ ‘ಅಭಿನವ ಭಾರತ’ ವೆಂದು ಪತ್ತೆ ಹಚ್ಚಿ ಈ ಇಬ್ಬರು ಸೇರಿದಂತೆ 16 ಮಂದಿಯನ್ನು ಈ ಕೃತ್ಯಕ್ಕಾಗಿ ಹಿಡಿದು ಹಾಕಿತ್ತು. 

ಮುಂಬೈ ಭಯೋತ್ಪಾದಕ ದಾಳಿಯ ವಿರುದ್ಧ ಹೋರಾಟ ದಲ್ಲಿ ಪ್ರಾಣಾರ್ಪಣೆ ಮಾಡಿದ್ದ ಪ್ರಖ್ಯಾತ ಪೋಲಿಸ್ ಅಧಿಕಾರಿ ಹೇಮಂತ ಕರ್ಕರೆ ನೇತೃತ್ವದಲ್ಲಿ ಈ ಬಗ್ಗೆ ವಿವರವಾದ ತನಿಖೆ ನಡೆದಿತ್ತು ಎಂಬುದನ್ನು ನೆನಪಿಸಿರುವ ಸಿಪಿಐ(ಎಂ) ಈಗ ಎನ್ ಐಎ ಅವರ ನೆನಪಿಗೆ ಅಪಮಾನ ಮಾಡಿದೆ, ಕೆಲವು ತಿಂಗಳ ಹಿಂದೆ, ಈ ಕೇಸಿನ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದವರು ಈ ಕೇಸನ್ನು ದುರ್ಬಲಗೊಳಿಸಲಾಗುತ್ತಿದೆ ಮತ್ತು ಬುಡಮೇಲು ಮಾಡಲಾಗುತ್ತಿದೆ ಎಂದು ಎಚ್ಚರಿಸಿದ್ದರು. ಅದೀಗ ನಿಜವಾಗಿದೆ ಎಂದು ಅಭಿಪ್ರಾಯ ಪಟ್ಟಿದೆ. 

ಮಾಲೇಗಾಂವ್ ಭಯೋತ್ಪಾದಕ ದಾಳಿಯ ತನಿಖೆಯ ಜಾಡು ಹಿಡಿದು ಹೊರಟಾಗ ಅಜ್ಮೇರ್ ಶರೀಫ್, ಹೈದರಾಬಾದಿನ ಮಕ್ಕಾ ಮಸೀದಿ ಮತ್ತು ಸಮಝೌತ ಎಕ್ಸ್ ಪ್ರೆಸ್ ಭಯೋತ್ಪಾದಕ ದಾಳಿಗಳಲ್ಲೂ ಹಿಂದುತ್ವ ಭಯೋತ್ಪಾದಕ ಸಂಘಟನೆಗಳ ಪಾತ್ರ ಇದ್ದದ್ದು ಕಂಡು ಬಂತು. ಈಗಿರುವ ಬಿಜೆಪಿ ಕೇಂದ್ರ ಸರಕಾರದ ಅಡಿಯಲ್ಲಿ ಈ ಎಲ್ಲ ತನಿಖೆಗಳೂ ಮೊಟಕಾಗುತ್ತವೆ ಎಂಬುದು ಸ್ಪಷ್ಟ ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೊ ಹೇಳಿದೆ. 

ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟದಲ್ಲಿ ಚೌಕಾಶಿಗೆ ಸ್ಥಾನವಿಲ್ಲ, ಅದರಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ ಎಂದು ಭಾರತೀಯ ಸಂಸತ್ತು ಮತ್ತೆ-ಮತ್ತೆ ಒಮ್ಮತದ ಅಭಿಪ್ರಾಯವನ್ನು ವ್ಯಕ್ತಗೊಳಿಸಿದೆ; ಭಯೋತ್ಪಾದನೆಗೆ ಧರ್ಮವಿಲ್ಲ, ಅದು ಸಂಪೂರ್ಣವಾಗಿಯೂ ರಾಷ್ಟ್ರ-ವಿರೋಧಿ  ಎಂದು ಮತ್ತೆ-ಮತ್ತೆ ಒತ್ತಿ ಹೇಳಿದೆ. ಆದ್ದರಿಂದ ಯಾವುದೇ ಸರಕಾರ ಬಂದರೂ ಭಯೋತ್ಪಾದನೆ ಯಾವುದೇ ಮೂಲದಿಂದ ಸಂಭವಿಸಿದರೂ ಅದನ್ನು ಎದುರಿಸಿ ನಿರ್ಮೂಲಗೊಳಿಸಲು ಕರ್ತವ್ಯಬದ್ಧವಾಗಿವೆ. ಆದರೆ ಈ ಬಿಜೆಪಿ ಸರಕಾರ ಹಿಂದುತ್ವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಆರೋಪಗಳನ್ನು ದುರ್ಬಲಗೊಳಿಸಿ ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟವನ್ನು ದುರ್ಬಲಗೊಳಿಸುತ್ತಿದೆ ಎಂಬುದು ಸುಸ್ಪಷ್ಟ ಎಂದು ಸಿಪಿಐ(ಎಂ) ಟೀಕಿಸಿದೆ. 

ಮಹಾರಾಷ್ಟ್ರ ಎಟಿಎಸ್ ಸಲ್ಲಿಸಿರುವ ಆರೋಪ ಪಟ್ಟಿಯ ಆಧಾರದಲ್ಲಿ ಸುಪ್ರಿಂ ಕೋರ್ಟ್ ಉಸ್ತುವಾರಿಯಲ್ಲಿ ಒಂದು ಸರಿಯಾದ ತನಿಖೆಯನ್ನು ಮತ್ತೆ ನಡೆಸಬೇಕು ಎಂದು ಆಗ್ರಹಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯೂರೊ, ಆಗ ಮಾತ್ರವೇ ನ್ಯಾಯ ಒದಗಿಸಲು ಸಾಧ್ಯ ಮತ್ತು ಭಯೋತ್ಪಾದನೆಯ ಬೆಳವಣಿಗೆಯನ್ನು ಎದುರಿಸಲು ಸಾಧ್ಯ ಎಂದಿದೆ.