ಜಿಶಾ ಬರ್ಬರ ಅತ್ಯಾಚಾರ-ಕೊಲೆ ಖಂಡಿಸಿ ಪ್ರತಿಭಟನೆ

ಸಂಪುಟ: 
10
ಸಂಚಿಕೆ: 
20
Sunday, 8 May 2016

ಕೇರಳ ರಾಜ್ಯದ ಎರ್ನಾಕುಲಂ ಜಿಲ್ಲೆಯ ಪೆರುಂಬಾವೂರ್ ನಿವಾಸಿ, ಕಾನೂನು ವಿದ್ಯಾರ್ಥಿನಿ 29 ವರ್ಷದ ಜಿಶಾಳ ಮನೆಯಲ್ಲೇ ಅವಳ ಮೇಲೆ ಅತ್ಯಂತ ಬರ್ಬರ ಅತ್ಯಾಚಾರ ನಡೆಸಿ ಕೊಲೆಮಾಡಿ 6 ದಿನಗಳಾಗಿದ್ದರೂ ಈವರೆಗೆ ಆರೋಪಿಗಳನ್ನು ಬಂಧಿಸಲಾಗದ ಕಾಂಗ್ರೆಸ್ ನೇತೃತ್ವದ ಯು.ಡಿ.ಎಫ್ ಸರ್ಕಾರದ ವೈಫಲ್ಯವನ್ನು ಖಂಡಿಸಿ ಮೇ. 04ರಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಜೆ.ಎಂ.ಎಸ್.) ಹಾಗೂ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ.) ಜಂಟಿಯಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿವೆ.

ಕರುಳ ಭಾಗಗಳು, ಗರ್ಭಕೋಶದ ಭಾಗಗಳು ಹೊರಬರುವಂತೆ ನಡೆದಿರುವ ಅತ್ಯಾಚಾರ ಅವಳ ಮೇಲೆ ನಡೆದಿರುವ ಕ್ರೌರ್ಯವನ್ನು ಸಾರುತ್ತವೆ. ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನು ತಡೆಯಲೂ ಆಗದ, ಅಪರಾಧಿಗಳನ್ನು ಶಿಕ್ಷಿಸಲೂ ಆಗದ ಅಸಮರ್ಥ ರಾಜ್ಯ ಸರ್ಕಾರವೇ ಇದರ ನೇರ ಹೊಣೆ. ದೌರ್ಜನ್ಯಗಳನ್ನು ಹಗುರವಾಗಿ ನೋಡುವುದು, ಮೇಲ್ಪದರದ ಕ್ರಮಗಳನ್ನು ತೋರಿಕೆಗಾಗಿ ತೆಗೆದುಕೊಳ್ಳುವುದು, ನಿಗದಿತ ಅವಧಿಯಲ್ಲಿ ತನಿಖೆ ಮುಗಿಸಿ ಅಪರಾಧಿಗಳನ್ನು ಶಿಕ್ಷಿಸದಿರುವುದು, ಮಹಿಳೆಯರ ಕುರಿತ ಹುಸಿ ರಾಜಕೀಯ ಬದ್ಧತೆಯನ್ನು ತೋರಿಸುತ್ತದೆ.

ಜೆಎಂಎಸ್ ರಾಜ್ಯ ಉಪಾಧ್ಯಕ್ಷರಾದ ಗೌರಮ್ಮ ರವರು ಮಾತನಾಡಿ “ದೇಶದಲ್ಲಿ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲದಂತಾಗಿದೆ. ದಿನೇ ದಿನೇ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು ಅದನ್ನು ತಡೆಗಟ್ಟುವಲ್ಲಿ, ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಸರಕಾರಗಳು ವಿಫಲವಾಗಿದೆ. ವರ್ಮಾ ಸಮಿತಿ ಆಯೋಗದ ಶಿಫಾರಸ್ಸುಗಳನ್ನು ಜಾರಿಮಾಡಬೇಕು” ಎಂದು ಆಗ್ರಹಿಸಿದರು.

ಎಸ್.ಎಫ್.ಐ.ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ಮಾತನಾಡಿ “ಕಾನೂನು ಅಧ್ಯಯನದ ಮೂಲಕ ಶೋಷಿತ ಜನತೆಗೆ ನ್ಯಾಯ ಕೊಡಿಸುವ ಕನಸು ಹೊತ್ತ ಜಿಶಾಳನ್ನು ಅತ್ಯಾಚಾರಗೈದಿರುವುದು ಆತಂಕಕಾರಿಯಾಗಿದೆ. ಶಿಕ್ಷಣದಲ್ಲಿ ಪ್ರಥಮ ಸ್ಥಾನದಲ್ಲಿರುವ ಕೇರಳ ರಾಜ್ಯದಲ್ಲಿ ಇಂತಹ ಘಟನೆ ಗಟಿಸಿರುವುದಕ್ಕೆ ರಾಜ್ಯ ಸರ್ಕಾರದ ಭದ್ರತಾ ವ್ಯವಸ್ಥೆಯ ವೈಫಲ್ಯ ತೋರಿಸುತ್ತದೆ.” ಎಂದು ತಿಳಸಿದರು.

ಈ ಘಟನೆಯನ್ನು ರಾಷ್ಟ್ರೀಯ ಒಟ್ಟು ವಿದ್ಯಮಾನಗಳಿಂದ ಪ್ರತ್ಯೇಕಿಸಿ ನೋಡಲಾಗುವುದಿಲ್ಲ. ಮಹಿಳೆಯರಿಗೆ ರಕ್ಷಣೆ ಇಲ್ಲದಿರುವುದು ಕೇಂದ್ರ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. “ಹೆಣ್ಣು ಮಕ್ಕಳನ್ನು ಉಳಿಸಿ ಹೆಣ್ಣು ಮಕ್ಕಳನ್ನು ಓದಿಸಿ” ಎಂದು ಬರೇ ಭಾಷಣ ಮಾಡುವ ಪ್ರಧಾನ ಮಂತ್ರಿಗಳು ರಾಷ್ಟ್ರವ್ಯಾಪಿ ಹೆಚ್ಚುತ್ತಿರುವ ಈ ದೌರ್ಜನ್ಯ ಅತ್ಯಾಚಾರ ಹೆಚ್ಚುತ್ತಿದೆ. ಮತಗಳಾಗಿ ಮಾತ್ರ ನೋಡುವ ಕಣ್ಣೋಟವನ್ನು ಬದಲಿಸಿಕೊಳ್ಳಬೇಕೆಂದು ಸಂಘಟನೆ ಎಚ್ಚರಿಸಿದೆ.