‘ಹೋರಾಟದಿಂದ ಮಾತ್ರ ಬೇಡಿಕೆಗೆ ಮನ್ನಣೆ’

ಸಂಪುಟ: 
10
ಸಂಚಿಕೆ: 
20
Sunday, 1 May 2016

ಜಿಲ್ಲೆಯ ವಿವಿಧೆಡೆ ಕಾರ್ಮಿಕರ ದಿನಾಚರಣೆ 

ಬ್ರಹ್ಮಾವರ: ಕಾರ್ಮಿಕ ಚಳವಳಿಯ ನೆನಪಿಗಾಗಿ ಮೇ 1 ರಂದು ಕಾರ್ಮಿಕರ ದಿನವನ್ನಾಗಿ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ದಿನವೊಂದಕ್ಕೆ 8 ಗಂಟೆಗಳ ಕೆಲಸವನ್ನು ನಿಗದಿಗೊಳಿಸಬೇಕೆಂಬ ಚಳವಳಿ 1860 ರಿಂದ ಆರಂಭವಾಯಿತು ಎಂದು ನಿವೃತ್ತ ಪ್ರಾಧ್ಯಾಪಕ ಭಾಸ್ಕರ ಮಯ್ಯ ಹೇಳಿದರು.

ಬ್ರಹ್ಮಾವರದಲ್ಲಿ ಭಾನುವಾರ ಅವರು ಬ್ರಹ್ಮಾವರ ವಲಯ ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಸಿಕಾಲ್ ಫ್ಯಾಕ್ಟರಿ ಕಾರ್ಮಿಕರು ಮತ್ತು ಬ್ರಹ್ಮಾವರ ವಲಯ ರಿಕ್ಷಾ ಚಾಲಕರು ಮೇ ದಿನಾಚರಣೆಯ ಸಂದರ್ಭ ಹಮ್ಮಿಕೊಂಡ ಸಭೆಯಲ್ಲಿ ಅವರು ಕಾರ್ಮಿಕರ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು.

ಬ್ರಹ್ಮಾವರ ವಲಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಸುಭಾಷ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ವಿಠಲ ಪೂಜಾರಿ, ಕಾರ್ಮಿಕ ಮುಖಂಡರಾದ ಉದಯ ಕುಮಾರ್, ಹರಿಪ್ರಸಾದ್, ರಾಮ ಕಾರ್ಕಡ, ಬೀಡಿ ಕಾರ್ಮಿಕರ ಅಧ್ಯಕ್ಷೆ ಭವಾನಿ ಪೂಜಾರಿ,

ಅಕ್ಷರ ದಾಸೋಹದ ಭವಾನಿ, ಶಂಕರ ಕುಲಾಲ್ ಸಾಸ್ತಾನ, ಬ್ರಹ್ಮಾವರ ವಲಯ ರಿಕ್ಷಾ ಚಾಲಕರ ಸಂಘದ ಕಾರ್ಯದರ್ಶಿ ಸದಾಶಿವ ಪೂಜಾರಿ, ಕೃಷ್ಣ ಹಿಲಿಯಾಣ ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ನೂರಾರಯ ಕಾರ್ಮಿಕರು ಬ್ರಹ್ಮಾವರ ಪೇಟೆಯಲ್ಲಿ ಮೆರವಣಿಗೆ ನಡೆಸಿದರು.

ಹೋರಾಟ ಅನಿವಾರ್ಯ

ಬೈಂದೂರು: 1896ರಲ್ಲಿ ಚಿಕಾಗೋದಲ್ಲಿ ಕಾರ್ಮಿಕರು ನಡೆಸಿದ ಮೊದಲ ಹೋರಾಟದ ದಿನದ ನೆನಪಿಗಾಗಿ ಜಗತ್ತಿನಾದ್ಯಂತ ಮೇ ದಿನಾಚರಣೆ ನಡೆಯುತ್ತಿದೆ. ಅಂದಿನಿಂದ ಇಂದಿನ ವರೆಗೂ ದುಡಿಯುವ ವರ್ಗ ತನ್ನ ನ್ಯಾಯಯುತ ಬೇಡಿಕೆಗಳನ್ನು ದಕ್ಕಿಸಿ ಕೊಳ್ಳಲು ಹೋರಾಟ ನಡೆಸುತ್ತಲೇ ಬಂದಿದೆ.

ಉದ್ಯಮಪತಿಗಳು ಮತ್ತು ಸರ್ಕಾರ ತಾವಾಗಿ ಬೇಡಿಕೆ ಈಡೇರಿಸಿದ ನಿದರ್ಶನವಿಲ್ಲ. ಭಾರತದ ಪ್ರಸಕ್ತ ಸ್ಥಿತಿ ಅದಕ್ಕೆ ಹೊರತಾಗಿಲ್ಲ ಎಂದು ಸಿಐಟಿಯು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮೀ ಹೇಳಿದರು. ಸಿಐಟಿಯು ಬೈಂದೂರು ಘಟಕದ ಆಶ್ರಯದಲ್ಲಿ ಭಾನುವಾರ ನಡೆದ ಮೇ ದಿನಾಚರಣೆಯಲ್ಲಿ ಅವರು ಮಾತನಾಡಿದರು. ದೇಶದ ಸಂಪತ್ತಿನ ನಿರ್ಮಾಪಕರು ಕಾರ್ಮಿಕರು. ಆದರೆ, ಸರ್ಕಾರಗಳು ಅವರ ಪರ ನಿಲ್ಲುವ ಬದಲು ಉದ್ಯಮಿ ಗಳ ಪರ ನಿಲ್ಲುತ್ತಿವೆ.

ಅವರ ಹಿತಾಸಕ್ತಿಗೆ ವಿರುದ್ಧವಾದ ಕಾಯಿದೆಗಳನ್ನು ರೂಪಿಸುತ್ತಿವೆ. ದೇಶದ 65 ಕೋಟಿ ಕಾರ್ಮಿಕರಲ್ಲಿ ಶೇ 5ರಷ್ಟು ಕಾರ್ಮಿಕರು ಸಂಘಟಿತರಾಗಿರುವುದು ಈ ವಿದ್ಯಮಾನ ಕ್ಕೆ ಕಾರಣ. ಎಲ್ಲ ಕಾರ್ಮಿಕರು ಸಂಘಟಿತ ರಾದರೆ ದೇಶದ ಅಧಿಕಾರ ಅವರ ಕೈಗೆ ಬರುತ್ತದೆ. ದುಡಿಯುವವರು ಇದನ್ನು ಅರಿತುಕೊಂಡು ಸಂಘಟಿತರಾಗಬೇಕು ಎಂದು ಹೇಳಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಕೆ. ಶಂಕರ್, ತಾಲ್ಲೂಕು ಕಾರ್ಯದರ್ಶಿ ಸುರೇಶ ಕಲ್ಲಾಗರ ಮಾತನಾಡಿದರು. ಸ್ಥಳೀಯ ಮುಖಂಡ ಗಣೇಶ ತೊಂಡೆಮಕ್ಕಿ ಸ್ವಾಗತಿಸಿದರು. ನಿರೂಪಿಸಿದ ವೆಂಕಟೇಶ ಕೋಣಿ ವಂದಿಸಿದರು. ಮುಖಂಡರಾದ ದಾಸ ಭಂಡಾರಿ, ಶೀಲಾವತಿ, ಗಣೇಶ ಮೊಗವೀರ, ರಾಧಾಕೃಷ್ಣ, ಸುಶೀಲಾ ನಾಡ, ಜಯಶ್ರೀ, ನಾಗರತ್ನ ನಾಡ, ಶಾರದಾ ಬೈಂದೂರು, ಮಂಜು ಪೂಜಾರಿ, ಇತರರು ಇದ್ದರು.

ಸಭೆಯ ಪೂರ್ವದಲ್ಲಿ ಕಾರ್ಮಿಕರ ಜಾಥಾ ನಡೆಯಿತು.