ಕಾರ್ಮಿಕ ಮಂತ್ರಿಯನ್ನು ವಜಾ ಮಾಡಬೇಕು..

ಸಂಪುಟ: 
10
ಸಂಚಿಕೆ: 
07
date: 
Sunday, 7 February 2016

2015 ರ ನವೆಂಬರ್ 24 ರಂದು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ರಾಜೀನಾಮೆ ನೀಡಬೇಕೆಂದು ಸಿಐಟಿಯು ರಾಜ್ಯ ಸಮಿತಿ ಕರೆಯಂತೆ ರಾಜ್ಯದ್ಯಂತ ಪ್ರತಿಭಟನೆ ನಡೆದಿದ್ದು ಓದುಗರಿಗೆ ನೆನಪಿದೆ. ಕೋಟ್ಯಾಂತರ ಸಂಖ್ಯೆಯಲ್ಲಿರುವ ಕಾರ್ಮಿಕ  ವರ್ಗಕ್ಕೆ ಇಲಾಖೆ ಮೂಲಕ ಮಾಡಬೇಕಾದ ಕೆಲಸಗಳನ್ನು ಮಾಡದೆ, ಮಾಡಬಾರದ ಕೆಲಸಗಳಿಗೆ ಕೈ ಹಾಕಿ ಎಲ್ಲಾ ವಿಭಾಗಗಳಿಂದ ಧಿಕ್ಕಾರದ ಘೋಷಣೆಗಳನ್ನು ಕೂಗಿಸಿಕೊಂಡಿದ್ದೇ ಅವರ ಸಾಧನೆ.

ಬೀಡಿ ಕಾರ್ಮಿಕರಿಗೆ ನ್ಯಾಯಬದ್ದವಾಗಿ ಸಲ್ಲಬೇಕಾದ ತುಟ್ಟಿಭತ್ಯೆಯನ್ನು ಮಾಲೀಕರ ಒತ್ತಾಯಕ್ಕೆ ಮಣಿದು ತಡೆಹಿಡಿದಿದ್ದು, ಕಟ್ಟಡ ಕಾರ್ಮಿಕ ಮಂಡಳಿಯಲ್ಲಿ ಸಂಗ್ರಹವಾಗಿರುವ ಸಾವಿರಾರು ಕೋಟಿ ಹಣವನ್ನು ಮನಸೋ ಇಚ್ಚೆಯಂತೆ ವೆಚ್ಚ ಮಾಡಲು ತೀರ್ಮಾನಿಸಿರುವುದು, ವಿವಿಧ ಉಧ್ಯಮಗಳ ಕನಿಷ್ಟ ಕೂಲಿ ಪರಿಷ್ಕರಣೆ ಕರಡು ಅಧಿಸೂಚನೆ ಮಾಡಲು ವಿಳಂಬ ಮಾಡಿದ್ದು, ಅಧಿಕಾರಿಗಳ ಮೇಲೆ ನಿರಂತರ ದೌರ್ಜನ್ಯ.. ಹೀಗೆ ಸಚಿವರ ವಿಫಲತೆಗಳ ಪಟ್ಟಿಯೇ ಸಾಗುತ್ತದೆ.

ಇಡೀ ಕಾರ್ಮಿಕ ವರ್ಗಕ್ಕೆ ಅನ್ಯಾಯ ಮಾಡುತ್ತಿರುವ ಈ ಸಚಿವರನ್ನು ಮುಖ್ಯಮಂತ್ರಿಗಳು ವಜಾಗೊಳಿಸಬೇಕು ಎಂಬ ಬೇಡಿಕೆಯನ್ನು ಮುಂದು ಮಾಡಿದ ರಾಜ್ಯ ಕಾರ್ಮಿಕರು ನಡೆಸಿದ ಹೋರಾಟ ಇನ್ನೂ ಹಸಿಯಾಗಿರುವಾಗಲೇ... ಇದೀಗ ಒಂದರ ಮೆಲೊಂದಂತೆ ಹಲವು ವಿವಾದಗಳನ್ನು ಸ್ವಯಂ ಸೃಷ್ಟಿಸಿಕೊಂಡು ರಾಜ್ಯದ ಸುದ್ದಿಮಾಧ್ಯಮದ ಕೆಂಗಣ್ಣಿಗೆ ಪಿ.ಟಿ.ಪರಮೇಶ್ವನಾಯ್ಕ ಬಲಿಯಾಗಿದ್ದಲ್ಲದೆ ಜನರಿಂದಲೂ ಛೀಮಾರಿಗೊಳಗಾಗಿದ್ದಾರೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಡಿವೈಎಸ್‍ಪಿ ಅನುಪಮ ಶಣೈ ಅವರು ತನ್ನ ಫೋನ್ ಕರೆಯನ್ನು ಸ್ವೀಕರಿಸಿಲ್ಲವೆಂಬ ನೆಪವೂಡ್ಡಿ ಒಂದೇ ದಿನ ಎರಡು ಕಡೆ ವರ್ಗಾಯಿಸಿದ ಅಪಾದನೆ ಸಚಿವರ ಮೇಲೆ ಬಂದಿದೆ. ಕೊಲೆ ಪ್ರಕರಣವೊಂದನ್ನು ಆತ್ಮಹತ್ಯೆ ಪ್ರಕರಣವನ್ನಾಗಿ ದಾಖಲು ಮಾಡಲು ಆ ಮಹಿಳಾ ಆಧಿಕಾರಿ ಮೇಲೆ ಸಚಿವರು ಒತ್ತಡ ಹಾಕಲು ಯತ್ನಿಸಿದ್ದರಿಂದಲೇ ಡಿವೈಎಸ್‍ಪಿ ಸಹಜವಾಗಿ ಈ ಕರೆಯನ್ನು ಸ್ವೀಕರಿಸಿಲ್ಲ. ಇದನ್ನೇ ನೆಪಮಾಡಿ ತನ್ನ ಅಧಿಕಾರ ಬಳಸಿ ಆ ಅಧಿಕಾರಿಯನ್ನು ತನ್ನ ಮನಸೋ ಇಚ್ಚೆ ವರ್ಗಾಯಿಸಿದ್ದಲ್ಲದೇ ತಾನು ಮಾಡಿದ ಆ ವರ್ಗಾವಣೆಯನ್ನು ಬಹಿರಂಗವಾಗಿ ದರ್ಪದಿಂದ ಬೆನ್ನು ಚಪ್ಪರಿಸಿಕೊಂಡ ವಿಡಿಯೋ ಕ್ಲಿಪಿಂಗ್ ಮಾಧ್ಯಮಗಳ ಮೂಲಕ ಬಹಿರಂಗಗೊಂಡು ರಾಜ್ಯದಲ್ಲಿ ಕಾರ್ಮಿಕ ಸಚಿವರ ಆ ನಡೆಯ ವಿರುದ್ದ ಬಂದ್, ಪ್ರತಿಭಟನೆಗಳು ನಡೆದಿವೆ. ರಾಜ್ಯದ ಮುಖ್ಯಂತ್ರಿಗಳು ಹಾಗೂ ಗೃಹಸಚಿವರು ಇಂತಹ ಆಯೋಗ್ಯ ಸಚಿವರನ್ನು ಸಮರ್ಥಿಸಿಕೊಳ್ಳುತ್ತಿರುವುದು ಖಂಡನಾರ್ಹವಾದ ಸಂಗತಿ.

ಗಣಿಧಣಿಗಳು ಸ್ಥಾಪಿಸಿಕೊಂಡಿದ್ದ ಬಳ್ಳಾರಿ ರಿಪಬ್ಲಿಕ್ ವಿರುದ್ದ ತೊಡೆತಟ್ಟಿದ್ದ ಸಿದ್ದರಾಮಯ್ಯನವರು ಇದೀಗ ಅದೇ ಬಳ್ಳಾರಿ ಉಸ್ತುವಾರಿ ಸಚಿವರಿಂದಲೇ ಅಪಖ್ಯಾತಿ ಗಳಿಸುತ್ತಿದ್ದಾರೆ. ಆರಂಭದಿಂದಲೂ ಒಂದಲ್ಲ ಒಂದು ಹಗರಣ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನೇ ಪ್ರದರ್ಶಿಸುತ್ತಿರುವ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರನ್ನು ಸ್ವತಃ ಮುಖ್ಯಮಂತ್ರಿಗಳೇ ವಜಾ ಮಾಡಬೇಕು ಮತ್ತು ಅವರ ಕುರಿತಾಗಿ ರಾಜ್ಯದ ಕಾರ್ಮಿಕ ವರ್ಗ ಹಾಗೂ ಮಾಧ್ಯಮಗಳು ಎತ್ತಿರುವ ಹಲವು ಪ್ರಶ್ನೆಗಳ ಕುರಿತು ತನಿಖೆ  ನಡೆಸಬೇಕು ಆ ಮೂಲಕ ಮುಂಬರುವ ದಿನಗಳಲ್ಲಿ ಎದ್ದುಬರುವ ಮತ್ತಷ್ಟು ಪ್ರತಿರೋಧಗಳನ್ನು ತಡೆಹಿಡಿಯುವ ಬುದ್ದಿವಂತಿಕೆಯನ್ನು ಸಿದ್ದರಾಮಯ್ಯ ನವರು ಪ್ರದರ್ಶಿಸಬೇಕು.

 

- ಮಹಾಂತೇಶ್ ಕೆ.