ಮಾರ್ಚ 11ರ ಕಾರ್ಮಿಕರ ‘ವಿಧಾನ ಸೌಧ ಚಲೋ’ ದ ಹಕ್ಕೊತ್ತಾಯಗಳು

ಸಂಪುಟ: 
10
ಸಂಚಿಕೆ: 
07
date: 
Sunday, 7 February 2016
Image: 

•    ಕೇಂದ್ರ ಸರ್ಕಾರವು ಬೋನಸ್ ಪಾವತಿ ಕಾಯ್ದೆಯಲ್ಲಿ ಕನಿಷ್ಠ ಬೋನಸ್ ಮಿತಿಯನ್ನು ರೂ.7000/-ಕ್ಕೆ ಹಾಗೂ ಅರ್ಹತಾ ಮಿತಿಯನ್ನು ರೂ.21,000/-ಕ್ಕೆ ಹೆಚ್ಚಿಸಿ ತಿದ್ದುಪಡಿ ಮಾಡಿದೆ. 2014-15ರ ಸಾಲಿನಿಂದ ಇದು ಜಾರಿಗೊಂಡಿರುವ ಕಾರಣ, ಬಾಕಿ ಬೋನಸ್ ಪಡೆಯಲು ಕಾರ್ಮಿಕರು ಅರ್ಹರಾಗಿದ್ದಾರೆ. ಆದರೆ ಇದುವರೆಗೆ ಅದನ್ನು ಜಾರಿಗೊಳಿಸದ ಮಾಲೀಕರು ಇದೀಗ ಹೈಕೋರ್ಟ ಮೂಲಕ ತಡೆಯಾಜ್ಞೆ ತಂದಿದ್ದಾರೆ.  ಇದನ್ನು ಸರಕಾರ ತೆರವುಗೊಳಿಸಲು ಕ್ರಮವಹಿಸಬೇಕು.

•    ರಾಜ್ಯ ಸರ್ಕಾರವು ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಶಿಫಾರಸ್ಸಿನಂತೆ 9 ಅನುಸೂಚಿತ ಉದ್ದಿಮೆಗಳಿಗೆ ಕನಿಷ್ಠ ವೇತನವನ್ನು ರೂ. 10,050ಕ್ಕೆ ಹೆಚ್ಚಿಸಿ ಪರಿಷ್ಕರಿಸಿದೆ. ಉಳಿದಂತೆ ಒಮ್ಮೆ 4 ಮತ್ತು 23 ಸೇರಿ ಒಟ್ಟು 27 ಅನುಸೂಚಿತ ಉದ್ದಿಮೆಗಳ ಕನಿಷ್ಠ ವೇತನ ಪರಿಷ್ಕರಣೆಯ ಕರಡು ಅಧಿಸೂಚನೆಗಳನ್ನು ಹೊರಡಿಸಿದೆ. ಅವುಗಳಿಗೆ ಮಾಲೀಕರು ಇಲ್ಲಸಲ್ಲದ ಕುಂಟು ನೆಪಮಾಡಿ, ಪರಿಷ್ಕರಿಸಿರುವ 9 ಉದ್ದಿಮೆಗಳ ಕನಿಷ್ಠ ವೇತನವನ್ನು ಹಿಂಪಡೆಯಲು ಹಾಗು ಕರಡು ಅಧಿಸೂಚನೆಗಳನ್ನು ಅಂತಿಮಗೊಳಿಸದಿರಲು ಒತ್ತಡ ಹೇರುತ್ತಿದ್ದಾರೆ. ಬೀಡಿ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯಿದೆಯಡಿ ಸಿಗಬೇಕಾಗದ ತುಟ್ಟಿಭತ್ಯೆ ಹೆಚ್ಚಳವನ್ನು ತಡೆಹಿಡಿದಿರುವ ಸರ್ಕಾರ ಆದೇಶ ರದ್ದು ಮಾಡಬೇಕು. ಮತ್ತು ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಒದಗಿಸಿದ ನಂತವೇ ತಂಬಾಕು ನಿಷೇಧದ ಕ್ರಮಕ್ಕೆ ಮುಂದಾಗಬೇಕು.

•    ಕನಿಷ್ಠ ವೇತನ ವ್ಯಾಪ್ತಿಗೆ ಒಳಪಡದ ಸರ್ಕಾರದ ಸ್ಕೀಂ ನೌಕರರಾದ ಅಂಗನವಾಡಿ, ಬಿಸಿಊಟ, ಆಶಾ ಮುಂತಾದ ನೌಕರರನ್ನು ಕನಿಷ್ಠ ವೇತನ ಅನುಸೂಚಿಗೆ ಒಳಪಡಿಸಬೇಕು ಮತ್ತು 7ನೇ ಕೇಂದ್ರ ವೇತನ ಆಯೋಗದ ಶಿಫಾರಸ್ಸಿನಂತೆ ರೂ.18,000/- ಮಾಸಿಕ ಸಮಾನ ಕನಿಷ್ಠ ವೇತನ ನಿಗದಿ ಮಾಡಬೇಕು.

•    ಕಳೆದ 2 ವರ್ಷಗಳಿಂದ ರಾಜ್ಯದಲ್ಲಿ ಕನಿಷ್ಠ ವೇತನ ಅರ್ಜಿ ಸಲ್ಲಿಸಲು ಪ್ರಾಧಿಕಾರಿಗಳೇ ಇಲ್ಲದಂತಾಗಿದೆ. ಕೂಡಲೆ ಪ್ರಾಧಿಕಾರವನ್ನು ಅಧಿಸೂಚಿಸಬೇಕಾಗಿ ಒತ್ತಾಯ.

•    ಕಾರ್ಮಿಕ ನ್ಯಾಯಾಲಯಗಳು ಇಲ್ಲದ ಜಿಲ್ಲೆಗಳಲ್ಲಿ ಕೈಗಾರಿಕಾ ವಿವಾದಗಳನ್ನು ಸಿವಿಲ್ ನ್ಯಾಯಾಲಯಗಳಿಗೆ ವರ್ಗಾಯಿಸಲಾಗಿದೆ. ಪರಿಣಾಮವಾಗಿ ಈಗಾಗಲೇ ವಿಳಂಬವಾಗಿ ಇತ್ಯರ್ಥವಾಗುತ್ತಿರುವ ವಿವಾದಗಳು ಮತ್ತಷ್ಟು ವಿಳಂಬವಾಗಲಿವೆ. ಆದಕಾರಣ ಕಾರ್ಮಿಕ ನ್ಯಾಯಾಲಯಗಳು ಇಲ್ಲದ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಮಿಕ ನ್ಯಾಯಾಲಯಗಳ ಸ್ಥಾಪನೆ ಆಗಬೇಕು.

•    ವ್ಯಾಪಕವಾಗಿ ಹೆಚ್ಚುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ನ್ಯಾಯ ಒದಗಿಸಲು ಗುತ್ತಿಗೆ ಕಾರ್ಮಿಕರು, ಟ್ರೈನಿಗಳು ಮುಂತಾದವರನ್ನು ಕಾಯಂಗೊಳಿಸಲು ಅನುವಾಗುವಂತೆ, ಗುತ್ತಿಗೆ ಕಾರ್ಮಿಕರ ಕೆಲಸವನ್ನು ಕಾಯಂಗೊಳಿಸುವ ಶಾಸನ ಜಾರಿ ಮಾಡಬೇಕು. ಸಂಘ ರಚನೆ ಮಾಡಿದ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಸಂಘ ಮಾನ್ಯತಾ ಶಾಸನ ರಚನೆಯಾಗಬೇಕು. ಗ್ರಾಮ ಪಂಚಾಯ್ತಿ, ಮುನ್ಸಿಪಲ್, ಬಿಎಸ್‍ಎನ್‍ಎಲ್, ವಿದ್ಯುತ್ ಕಂಪನಿಗಳಲ್ಲಿ ದುಡಿಯುತ್ತಿರುವ ನೌಕರರನ್ನು ಕಾಯಂಗೊಳಿಸಬೇಕು.

•    ಕೇಂದ್ರ ಸರ್ಕಾರವು ಮೇಕ್-ಇನ್-ಇಂಡಿಯಾ, ಸ್ಟಾರ್ಟ್-ಅಪ್-ಇಂಡಿಯಾ ಹೆಸರಿನಲ್ಲಿ ಕಾರ್ಖಾನೆ ಪ್ರಾರಂಭಿಸಿದ ಮೊದಲ 5 ವರ್ಷಗಳು ಎಲ್ಲಾ ಕಾರ್ಮಿಕ ಕಾನೂನುಗಳಿಂದ ವಿನಾಯ್ತಿ ನೀಡಿರುವುದನ್ನು ವಿರೋಧಿಸಿ, ಅದನ್ನು ಜಾರಿಗೊಳಿಸಬಾರದು.

•    ಅಸಂಘಟಿತ ಕಾರ್ಮಿಕರಿಗೆ ಸರಕಾರವೇ ಭವಿಷ್ಯ ನಿಧಿ ಯೋಜನೆ ರೂಪಿಸಿ ಜಾರಿಗೊಳಿಸಲು, ಸಾಮಾಜಿಕ ಭದ್ರತಾ ಮಂಡಳಿಗೆ ಹಣ ನೀಡಿ ಯೋಜನೆಗಳ ರೂಪಿಸಿ ಜಾರಿಗೊಳಿಸಲು, ಆಮ್ ಆದ್ಮೀ ಮತ್ತು ಆರ್.ಎಸ್.ಬಿ.ವೈ ವಿಮಾ ಮೊತ್ತವನ್ನು ವಾರ್ಷಿಕ ಲಕ್ಷ ರೂಗಳಿಗೆ ಹೆಚ್ಚಿಸಬೇಕು.

•    ಕೇಂದ್ರ ಸರಕಾರದ ರಸ್ತೆ ಸಾರಿಗೆ ಸುರಕ್ಷತಾ ಮಸೂದೆ 2015 ಮತ್ತು ರಾಜ್ಯ ಸರಕಾರದ ‘ಎಸ್ಮಾ’ ಕಾನೂನು ಜಾರಿ ಮಾಡಬಾರದು.

ಈಗಾಗಲೇ ಈ ಬೇಡಿಕೆಗಳ ಆಧಾರದಲ್ಲಿ ಫೆಬ್ರವರಿ-5ರಂದು ಪ್ರತಿಭಟನೆ ನಡೆಸಲಾಗಿದೆ. ಹಾಗೂ  ಮಾರ್ಚ್ 11ರ ವಿಧಾನ ಸೌಧ ಚಲೋಗೆ ಈಗಾಗಲೇ ವಿವಿಧ ಕಾರ್ಮಿಕ ವಿಭಾಗಗಳ ಮಧ್ಯೆ ತಯಾರಿ ಆರಂಭಿಸಲಾಗಿದೆ.

ಕನಿಷ್ಟ ಕೂಲಿ ಹೆಚ್ಚಳಕ್ಕಾಗಿ ಬೆಂಗಳೂರಿನಲ್ಲಿ ಹೋರಾಟ

ಗುತ್ತಿಗೆ ಕಾರ್ಮಿಕರ ಖಾಯಂಗೆ ಒತ್ತಾಯಿಸಿ, ಕನಿಷ್ಟ ವೇತನ ಪರಿಷ್ಕರಣೆ ಅಧಿಸೂಚನೆ ಹಾಗೂ ಕರಡು ಅಧಿಸೂಚನೆಗೆ ವಿರೋಧ ವ್ಯಕ್ತಪಡಿಸಿರುವ ಮಾಲೀಕರ ಒತ್ತಡಕ್ಕೆ ಮಣಿಯದೆ ಜಾರಿಗೊಳಿಸಬೇಕೆಂದು, ಎಲ್ಲಾ ಕಾರ್ಮಿಕರಿಗೂ ಕನಿಷ್ಟ ಕೂಲಿಯನ್ನು ರೂ.18,000ಕ್ಕೆ ಹೆಚ್ಚಿಸಬೇಕೆಂದು, ಅಸಂಘಟಿತ ಕಾರ್ಮಿಕರಿಗೂ ಭವಿಷ್ಯ ನಿಧಿ ಜಾರಿಗಾಗಿ, ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಾಲಯಗಳ ಸ್ಥಾಪನೆಗಾಗಿ, ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಜಂಟಿ ಕಾರ್ಮಿಕ ಸಂಘಟನೆಗಳ ಒಕ್ಕೂಟ(ಜೆಸಿಟಿಯು) ನೇತೃತ್ವದಲ್ಲಿ ಫೆ. 05ರಂದು ದೇಶದ ವಿವಿದೆಡೆ ಪ್ರತಿಭಟನೆಗಳು ನಡೆದಿದೆ.

ಬೆಂಗಳೂರಿನ ಟೌನ್‍ಹಾಲ್ ಬಳಿ ಸೇರಿದ ನೂರಾರು ಕಾರ್ಮಿಕರು ಮೇಲಿನ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು. ಸಿಐಟಿಯುವಿನ ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಜಿಲ್ಲಾ ಮುಖಂಡರಾದ ಪ್ರತಾಪ್‍ಸಿಂಹ ಸೇರಿದಂತೆ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಹೋರಾಟದ ಭಾಗವಾಗಿ ಫೆ.2ರಂದು ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕ ಆಯುಕ್ತರ ಕಛೇರಿ ಬಳಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ಅದೇ ರೀತಿಯಲ್ಲಿ ಕರ್ನಾಟಕ ವರ್ಕರ್ಸ್ ಯೂನಿಯನ್ ನೇತೃತ್ವದಲ್ಲೂ ಪ್ರತಿಭಟನೆಗಳು ನಡೆದಿದೆ.

 

ಕೆ.ಮಹಾಂತೇಶ್