ಆಂಧ್ರ ಪ್ರದೇಶ: ಸಾರಾಯಿ ಅಂಗಡಿಗಳ ವಿರುದ್ಧ ಚಳವಳಿ

ಸಂಪುಟ: 
10
ಸಂಚಿಕೆ: 
07
Sunday, 7 February 2016

ಆಂಧ್ರಪ್ರದೇಶ ರಾಜಧಾನಿ ವಿಜಯವಾಡದಲ್ಲಿ ಜನವರಿ 8ರಂದು ಬೃಹತ್ ಮೆರವಣಿಗೆ ಮತ್ತು ವಿಚಾರ ಸಂಕಿರಣ ನಡೆಯಿತು. ವಿಶಾಲ ಸಂಯುಕ್ತ ವೇದಿಕೆಯೊಂದು ರಾಜ್ಯ ಸರಕಾರದ ಅವೈಜ್ಞಾನಿಕ ಸಾರಾಯಿ ನೀತಿಯ ವಿರುದ್ಧ ಈ ಚಳವಳಿಯನ್ನು ಹಮ್ಮಿಕೊಂಡಿತ್ತು. ರಾಜ್ಯ ಸರಕಾರ ತನ್ನ ಸಾರಾಯಿ ನೀತಿಯನ್ನು ವಾಪಸ್ ಪಡೆಯಬೇಕು, ಸಾರಾಯಿ ಸೇವಿಸಿ ಸಣ್ಣ ಪ್ರಾಯದಲ್ಲೇ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಬೇಕು ಮತ್ತು ಶಾಲೆ-ದೇವಸ್ಥಾನಗಳ ಸಮೀಪ ಇರುವ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿನ  ಶರಾಬು ಅಂಗಡಿಗಳನ್ನು ಮುಚ್ಚಬೇಕು ಎಂದು ರ್ಯಾಲಿ ಆಗ್ರಹಿಸಿತು. ಸಾರಾಯಿ ಮಾರಾಟದ ಮೇಲೆ ನಿರ್ಬಂಧ ವಿಧಿಸಬೇಕು ಎನ್ನುವುದು ಇನ್ನೊಂದು ಪ್ರಮುಖ ಬೇಡಿಕೆಯಾಗಿತ್ತು.

ಚಂದ್ರಬಾಬು ನಾಯ್ಡು ನೇತೃತ್ವದ ಸರಕಾರ ಎಲ್ಲಾ `ಬೆಲ್ಟ್ ಶಾಪ್'ಗಳನ್ನು ತೆಗೆದುಹಾಕುವ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿತ್ತು. ಆದರೆ ಆಂಧ್ರಪ್ರದೇಶದಲ್ಲಿ ಈಗ ಎರಡು ಲಕ್ಷ `ಬೆಲ್ಟ್ ಶಾಪ್'ಗಳು ಇದ್ದು ಇನ್ನೂ 4500 ಅಂಗಡಿಗಳಿಗೆ ಸಾರಾಯಿ ಮಾರುವ ಲೈಸೆನ್ಸ್ ನೀಡಲಾಗಿದೆ ಎಂದು ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಿಪಿಐ (ಎಂ) ಪಾಲಿಟ್‍ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಹೇಳಿದರು. ಆಂಧ್ರಪ್ರದೇಶದಲ್ಲಿ ರಾಜಕಾರಣಿಗಳು ಮತ್ತು ಲಿಕ್ಕರ್ ವ್ಯಾಪಾರಿಗಳ ಮಧ್ಯೆ ಗಾಢ ಸಂಬಂಧವಿದೆ. ಇಲ್ಲಿ ಸಾರ್ವಜನಿಕ ನಲ್ಲಿಗಳಲ್ಲಿ ಜನರಿಗೆ ನೀರು ಸಿಗದಿರಬಹುದು. ಆದರೆ, ಯಾವುದೇ ಸ್ಥಳದಲ್ಲಾದರೂ ಯಾವುದೇ ವೇಳೆಯಲ್ಲಾದರೂ ಸಾರಾಯಿ ಸಿಗುತ್ತದೆ ಎಂದು ಬೃಂದಾ ಹೇಳಿದರು.

ಶಾಲೆಗಳು, ದೇವಸ್ಥಾನಗಳು, ಹೈವೆಗಳು, ಆಸ್ಪತ್ರೆಗಳು ... ಹೀಗೆ ಎಲ್ಲಾ ಕಡೆ ಸಾರಾಯಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುವ ಮೂಲಕ ಆಂಧ್ರಪ್ರದೇಶ ಸರಕಾರ ಸಾರಾಯಿ ಸೇವನೆಗೆ ಪ್ರೋತ್ಸಾಹ ನೀಡುತ್ತಿದೆ ಎಂದಬುದು ಎಐಡಿಡಬ್ಲ್ಯುಎ ನಡೆಸಿದ ಸಮೀಕ್ಷೆಯಿಂದ ಗೊತ್ತಾಗಿದೆ. ಕಲಬೆರಕೆ ಸಾರಾಯಿ ಮಾರಿದ ಆರೋಪದ ಮೇಲೆ ಕೆಲವು ದಿನಗಳ ಹಿಂದೆ ಒಬ್ಬ ಮಾಜಿ ಕಾಂಗ್ರೆಸ್ ಶಾಸಕನನ್ನು ಬಂಧಿಸಲಾಗಿತ್ತು. ಆತನನ್ನು  ಕಾಂಗ್ರೆಸ್ ರಕ್ಷಿಸುತ್ತದೋ ಅಥವಾ ಪಕ್ಷದಿಂದ ಉಚ್ಚಾಟಿಸುತ್ತದೋ ಎಂದು ಅವರು ಪ್ರಶ್ನಿಸಿದರು. ಹೊಸದಾಗಿ ರಚನೆಯಾಗಿರುವ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಬೇಕೆಂದು ಪ್ರಧಾನಿ ಮೋದಿಯವರನ್ನು ಕೇಳುವ ಬದಲು ಆಂಧ್ರ ಮುಖ್ಯಮಂತ್ರಿ ನಾಯ್ಡು ಮೋದಿ ಮುಂದೆ ತಲೆತಗ್ಗಿಸಿ ನಿಲ್ಲುತ್ತಾರೆ. ಅದೇ ವೇಳೆ, ಸಾರಾಯಿ ಮಾರಾಟದಿಂದ ಕಡಿಮೆ ಬಿದ್ದಿರುವ ಸಂಪನ್ಮೂಲವನ್ನು ಸಂಗ್ರಹಿಸಲು ಯತ್ನಿಸುತ್ತಿದ್ದಾರೆ ಎಂದು ಬೃಂದಾ ಟೀಕಿಸಿದರು. ಸ್ಥಳೀಯ ಟಿಡಿಪಿ ನಾಯಕರು ಸಾರಾಯಿ ಅಂಗಡಿಗಳನ್ನು ನಡೆಸುತ್ತಿದ್ದಾರೆ. ಯಾವುದೇ ಲಂಗುಲಗಾಮಿಲ್ಲದೆ ಸಾರಾಯಿ ಸಿಗುತ್ತಿರುವುದರಿಂದ ಸಾವಿರಾರು ಕುಟುಂಬಗಳು ನಾಶವಾಗುತ್ತಿವೆ ಎಂದು ಅವರು ಹೇಳಿದರು.

ತಮ್ಮ ಮಾತನ್ನು ಉಳಿಸಿಕೊಳ್ಳಲಾರದ ಚಂದರಬಾಬು ನಾಯ್ಡು ಮರ್ಯಾದೆ ಕಳೆದುಕೊಂಡಿದ್ದಾರೆ ಎಂದು ಎನ್‍ಎಫ್‍ಐಡಬ್ಲ್ಯು (ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ) ನಾಯಕಿ ಆನ್ನೀ ರಾಜಾ ಹೇಳಿದರು. ರಾಜ್ಯದ ಆಳುವ ಮತ್ತು ಪ್ರತಿಪಕ್ಷಗಳ ನಾಯಕರು ಸಾರಾಯಿ ಮಾರಾಟದ ಲೈಸೆನ್ಸ್ ಹೊಂದಿದ್ದು ಅವರ ಹಣದಾಹದಿಂದಾಗಿ ರಾಜ್ಯದ ಮಹಿಳೆಯರು ಅನಾಥರಾಗುತ್ತಿದ್ದಾರೆ ಎಂದರು. ಪಡಿತರ ಅಂಗಡಿಗಳಲ್ಲಿ ದಿನಸಿ ವಸ್ತುಗಳು ಸಿಗದಿದ್ದರೂ ಸಾರಾಯಿ ಅಂಗಡಿಗಳಲ್ಲಿ ತಪ್ಪದೇ ಸಾರಾಯಿ ಸಿಗುತ್ತದೆ ಎಂದು ಪ್ರಗತಿಶೀಲ ಮಹಿಳಾ ಸಂಘಂನ ರಾಷ್ಟ್ರೀಯ ಕಾರ್ಯದರ್ಶಿ ಝಾನ್ಸಿ ಹೇಳಿದರು.

ರಾಜ್ಯ ಸರಕಾರದ ಸಾರಾಯಿ ನೀತಿಯ ವಿರುದ್ಧ ಹೋರಾಡಲು 2015ರ ಡಿಸೆಂಬರ್‍ನಲ್ಲಿ 27 ಸಂಘಟನೆಗಳು ಸೇರಿ ಸಂಯುಕ್ತ ವೇದಿಕೆಯನ್ನು ರಚಿಸಿಕೊಂಡಿದ್ದವು.

 

 

ವಿಶ್ವಾಸ್