ಸಿಪಿಐ (ಎಂ) ಸಂಸದ ಸಲೀಮ್ ಜನರನ್ನು ಭೇಟಿ ಮಾಡಬಾರದಂತೆ!

ಸಂಪುಟ: 
10
ಸಂಚಿಕೆ: 
07
Sunday, 7 February 2016

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಕಲಿಯಾಚಕ್‍ನಲ್ಲಿ ಇತ್ತೀಚೆಗೆ ನಡೆದ ಗಲಭೆಗಳಿಗೆ ಕೋಮು ಬಣ್ಣ ನೀಡಲು ಯತ್ನಿಸುತ್ತಿರುವುದನ್ನು ಸಿಪಿಐ(ಎಂ) ಬಲವಾಗಿ ಖಂಡಿಸಿದೆ. ಗುಂಪೊಂದು ಬಸ್‍ಗಳು ಮತ್ತು ಪೊಲೀಸ್ ವ್ಯಾನ್‍ಗಳಿಗೆ ಬೆಂಕಿಯಿಟ್ಟು ಕಲಿಯಾಚಕ್ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದರಿಂದ ಬಿಗುವಿನ ವಾತಾವರಣ ಉಂಟಾಗಿತ್ತು.  ಪರಿಸ್ಥಿತಿಯನ್ನು ಅವಲೋಕಿಸಿ ಜನರೊಂದಿಗೆ ಮಾತನಾಡಲು ಬಂದ ಸಂಸತ್ ಸದಸ್ಯ ಮಹಮದ್ ಸಲೀಂ ಅವರು ಜನರೊಂದಿಗೆ ಬೆರೆಯುವುದನ್ನು ಪೊಲೀಸರು ನಿರ್ಬಂಧಿಸಿದರು. ಜನವರಿ 11ರಂದು ಮಾಲ್ಡಾದಿಂದ ಕಲಿಯಾಚಕ್‍ಗೆ ತೆರಳುತ್ತಿದ್ದ ಸಲೀಂ ಅವರನ್ನು ಪೊಲೀಸರು ತಡೆದರು. ಇದಕ್ಕೆ ಯಾವುದೇ ಕಾರಣಗಳನ್ನಾಗಲೀ ದಾಖಲೆಗಳನ್ನಾಗಲೀ ನೀಡಲು ಪೊಲೀಸರು ವಿಫಲರಾದರು. ಪೊಲೀಸರ ಕ್ರಮವನ್ನು ತಿಳಿದ  ಜನರು ಅಲ್ಲಿಗೆ ಧಾವಿಸಿ ಒಂದು ಸಭೆಯನ್ನೇ ನಡೆಸಿಬಿಟ್ಟರು.

ಕಲಿಯಾಚಕ್‍ನಲ್ಲಿ ಕಳೆದ ಕೆಲವು ವರ್ಷಗಳಿಂದ ಎಗ್ಗಿಲ್ಲದಂತೆ ನಡೆಯುತ್ತಿರುವ ಕ್ರಿಮಿನಲ್ ಚಟುವಟಿಕೆಗಳೇ ಘಟನೆಗೆ ಕಾರಣ ಎಂದು ಸಲೀಂ ಹೇಳಿದರು. ಈ ಎಲ್ಲಾ ಅಕ್ರಮ ಚಟುವಟಿಕೆಗಳನ್ನು ಆಳುವ ಟಿಎಂಸಿ ಪೋಷಿಸುತ್ತಿದೆ ಎಂದು ಸಿಪಿಐ(ಎಂ) ಪಾಲಿಟ್‍ಬ್ಯೂರೊ ಸದಸ್ಯರೂ ಆದ ಸಲೀಂ ಹೇಳಿದರು. ಕಾನೂನುಬಾಹಿರವಾಗಿ ಪೊಪ್ಪಿ ಬೆಳೆಯುವವರು ಖೋಟಾ ನೋಟು ಚಲಾವಣೆ ಮಾಡುವ ದಂಧೆಯಲ್ಲಿ ಇರುವವರು ಗಲಭೆಯ ಹಿಂದೆ ಇದ್ದಾರೆ ಎಂದರು. ಈಗ ಅದನ್ನು ಒಂದು ಕೋಮು ಗಲಭೆ ಎಂದು ಬಿಂಬಿಸಲು ಆರ್‍ಎಸ್‍ಎಸ್ ಮತ್ತು ಮಾಧ್ಯಮದ ಒಂದು ವಿಭಾಗ ಪ್ರಯತ್ನಿಸುತ್ತಿದೆ. ಜನರನ್ನು ಕೋಮು ಆಧಾರದಲ್ಲಿ ವಿಭಜಿಸಲು ಟಿಎಂಸಿ ಮತ್ತು ಬಿಜೆಪಿ ಪ್ರಯತ್ನಿಸುತ್ತಿದ್ದು ಇಡೀ ರಾಜ್ಯದಲ್ಲಿ ಆ ಕೆಲಸದಲ್ಲಿ ನಿರತವಾಗಿವೆ. ಟಿಎಂಸಿ ಮತ್ತು ಬಿಜೆಪಿ ನಡುವೆ ಮ್ಯಾಚ್ ಫಿಕ್ಸಿಂಗ್  ಆಗಿದೆ ಎಂದ ಮಹಮದ್ ಸಲೀಂ, ಅವುಗಳು ಓಟನ್ನು ಗಳಿಸುವ ಸಲುವಾಗಿ ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದಿಗಳ ಜತೆ ಕೈಜೋಡಿಸುತ್ತಿವೆ ಎಂದರು. ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುವಲ್ಲಿ ಟಿಎಂಸಿ ಸರಕಾರ ನಿರತವಾಗಿದೆ ಎಂದರು. ಟಿಎಂಸಿ ಸರಕಾರದ ವಿರುದ್ಧ ಅತೃಪ್ತಿ ಹೆಚ್ಚಾಗುತ್ತಿದ್ದು ಅದನ್ನು ತಡೆಯುವ ಸಲುವಾಗಿ ಜನರನ್ನು ಧರ್ಮದ ಆಧಾರದಲ್ಲಿ ಒಡೆಯಲು ಮುಂದಾಗಿದೆ ಎಂದರು.