ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗಾಗಿ ‘ವಿಶೇಷ ನಿಯಮಾವಳಿ’ ರೂಪಿಸಲು ಒತ್ತಾಯಿಸಿ ಪ್ರತಿಭಟನೆ

Saturday, 30 January 2016

ಬೆಂಗಳೂರು, ಜ.30: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಗಾಗಿ “ವಿಶೇಷ ನಿಯಮಾವಳಿ” ರೂಪಿಸಲು ಒತ್ತಾಯಿಸಿ ರಾಜ್ಯಾದ್ಯಂತ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರುಗಳ ಕಚೇರಿಗಳ ಅತಿಥಿ ಉಪನ್ಯಾಸಕರು ಎದುರು ಪ್ರತಿಭಟನೆ ನಡೆಸಿದರು. 

ಬೆಂಗಳೂರು, ಶಿವಮೊಗ್ಗ, ಕಲ್ಬುರ್ಗಿ, ಧಾರವಾಡ, ಮೈಸೂರು, ಮಂಗಳೂರು ಸೇರಿದಂತೆ ಎಲ್ಲಾ ಕಡೆಯ ಪ್ರಾದೇಶಿಕ ಜಂಟಿ ನಿರ್ದೇಶಕರುಗಳ ಕಚೇರಿ ಎದರು ಪ್ರತಿಭಟನೆ ಮಾಡಿದ ಅತಿಥಿ ಉಪನ್ಯಾಸಕರು, “ಖಾಯಂ ನೇಮಕಾತಿಗಾಗಿ ವಿಶೇಷ ನಿಯಮಾವಳಿ” ರೂಪಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡುವವರೆಗೂ ಹೋರಾಟವನ್ನು ಹಿಂತೆಗೆದುಕೊಳ್ಳುವುದಿಲ್ಲವೆಂದು ತೀರ್ಮಾನಕ್ಕೆ ಬಂದಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ತಕ್ಷಣದಲ್ಲೇ ಮಧ್ಯ ಪ್ರವೇಶ ಮಾಡಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಇದೇ ಸಂದರ್ಭದಲ್ಲಿ ರಾಜ್ಯ ಸರಕಾರವನ್ನು ಅತಿಥಿ ಉಪನ್ಯಾಸಕರು ಒತ್ತಾಯಿಸಿದರು.

ಹಾವೇರಿ ಜಿಲ್ಲೆಯಲ್ಲಿ ಜನವರಿ 31, 2016 ರಂದು ರಾಜ್ಯ ಮಟ್ಟದ ಸಭೆ, ಮುಂದಿನ ಹೋರಾಟ ಬಗ್ಗೆ ತೀರ್ಮಾನ:

ಜನವರಿ 12, 2016ರಿಂದ ನಡೆಸುತ್ತಿರುವ ತರಗತಿ ಬಹಿಷ್ಕಾರ ಮತ್ತು ಪ್ರತಿಭಟನೆಯು 20ನೇ ದಿನಕ್ಕೆ ಕಾಲಿಟ್ಟಿದ್ದು, ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಹಾವೇರಿ ಜಿಲ್ಲೆಯಲ್ಲಿ ಜನವರಿ 31, 2016 ರಂದು ರಾಜ್ಯ ಮಟ್ಟದ ಸಭೆ ನಡೆಸಲಾಗುವುದು. ಸಭೆಯಲ್ಲಿ ಮುಂದಿನ ಹೋರಾಟಗಳ ಬಗ್ಗೆ ರೂಪು ರೇಷೆಗಳ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು. ರಾಜ್ಯ ಮಟ್ಟದ ಸಭೆಯಲ್ಲಿ ಮುಂದಿನ ಹೋರಾಟ ರೂಪು ರೇಷೆಗಳ ಬಗ್ಗೆ ತೀರ್ಮಾನಕ್ಕೆ ಬರುವವರೆಗೂ ತರಗತಿ ಬಹಿಷ್ಕಾರ ಮತ್ತು ಪ್ರತಿಭಟನೆಯನ್ನು ಮುಂದುವರೆಸಲಾಗುವುದೆಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ತೀರ್ಮಾನಿಸಿದೆ.

ರಾಜ್ಯದ ವಿವಿದ ಕಡೆಗಳಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಘಟನೆಯ ಗೌರವ ಅಧ್ಯಕ್ಷರಾದ ಬಿ.ರಾಜಶೇಖರ ಮೂರ್ತಿ, ರಾಜ್ಯ ಅಧ್ಯಕ್ಷರಾದ ಶ್ರೀನಿವಾಸಚಾರ್ ಎನ್. ಬೆಂಗಳೂರು ಜಿಲ್ಲಾ ಅಧ್ಯಕ್ಷರಾದ ಗುಡಿಬಂಡೆಗಣೇಶ. ರಾಮನಗರ ಜಿಲ್ಲಾ ಅಧ್ಯಕ್ಷರಾದ ನಿಜಗುಣ, ಜಿಲ್ಲಾ ಮುಖಂಡರಾದ ಮಂಜುನಾಥ್.ವಿ., ಸುರೇಶ್, ಫಯಾಜ್ ವುಲ್ಲಾ ಭಾಗವಹಿಸಿದ್ದರು.