ಶಾರದಾ ಚಿಟ್ ಫಂಡ್ ಹಗರಣ: ಸಿಬಿಐಗ ಜನರ ನೋಟಿಸ್

ಸಂಪುಟ: 
10
ಸಂಚಿಕೆ: 
06
Sunday, 31 January 2016

ಇಡೀ ದೇಶದ ಗಮನವನ್ನು ಸೆಳೆದಿರುವ, ಸಾವಿರಾರು ಕೋಟಿ ರೂಪಾಯಿಗಳ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ಮೋಸಕ್ಕೊಳಗಾದ ಸಾವಿರಾರು ಜನರು ಈಗ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಬಗ್ಗೆಯೇ ಸಂಶಯದ ದೃಷ್ಟಿಯಿಂದ ನೋಡುವಂತೆ ಆಗಿದೆ. ತನಿಖೆ ನಿಧಾನಗತಿಯಲ್ಲಿ ಸಾಗಿರುವುದೇ ಇದಕ್ಕೆ ಕಾರಣ. ಕೋಲ್ಕತಾದ ಸಾಲ್ಟ್ ಲೇಕ್ ನಲ್ಲಿರುವ ಸಿಬಿಐ ಪೂರ್ವ ವಲಯ ಕಚೇರಿ ಮುಂದೆ ಜನವರಿ 12ರಂದು ಸಾವಿರಾರು ಜನರು ಧರಣಿ ನಡೆಸಿ ಕಚೇರಿಗೆ ಮುತ್ತಿಗೆ ಹಾಕಿದರು.

ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವಿಚಾರಣೆ ನಡೆಸಬೇಕು ಎಂಬುದು ಪ್ರತಿಭಟನೆಕಾರರ ಒಕ್ಕೊರಲ ಬೇಡಿಕೆಯಾಗಿತ್ತು. ಎಡರಂಗದ ಕರೆಯ ಮೇರೆಗೆ ಈ ಪ್ರತಿಭಟನೆ ನಡೆಯಿತು. ಆಳುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ನಡುವೆ ಒಳ ಒಪ್ಪಂದ ಏರ್ಪಟ್ಟಿರುವುದರಿಂದ ಶಾರದಾ ಚಿಟ್ಫಂಟ್ ಹಗರಣದ ತನಿಖೆ ವಿಳಂಬವಾಗುತ್ತಿದೆ ಹಾಗೂ ದುರ್ಬಲವಾಗುತ್ತಿದೆ ಎಂಬ ಅನುಮಾನ ಜನತೆಯಲ್ಲಿ ಉಂಟಾಗಿದೆ. 

ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ (ಎಂ) ಪಶ್ಚಿ ಬಂಗಾಳ ರಾಜ್ಯ ಕಾರ್ಯದರ್ಶಿ ಸೂರ್ಯಕಾಂತ ಮಿಶ್ರಾ, ನಾವೇನೂ ಇಲ್ಲಿ ಸಿಬಿಐಗೆ ಮನವಿ ಕೊಡಲು ಬಂದಿಲ್ಲ ಎಂದರು. ಬದಲಿಗೆ ತನಿಖೆಯ ವಿಳಂಬದ ವಿರುದ್ಧ ಮತ್ತು ಹಗರಣಗಳನ್ನು ಪೋಷಿಸುವ ಸರಕಾರವನ್ನು ಕಿತ್ತೊಗೆಯಲು ನಾವಿಲ್ಲಿ ಸೇರಿದ್ದೇವೆ ಎಂದವರು ಘೋಷಿಸಿದರು. 

2011ರ ಚುನಾವಣೆಗಳ ಮುನ್ನವೇ ಈ ಹಗರಣ ಬಗ್ಗೆ ಎಡರಂಗವು ಮೊದಲ ಬಾರಿಗೆ ಗಮನಸೆಳೆದಿದ್ದನ್ನನ್ನು ಅವರು ನೆನಪಿಸಿದರು. ಟಿಎಂಸಿ ಸರಕಾರ ಅಧಿಕಾರಕ್ಕೆ ಬಂದ ನಂತರ ಅಸೆಂಬ್ಲಿಯಲ್ಲೂ ಈ ವಿಷಯವನ್ನು ಪ್ರಸ್ತಾವಿಸಿದಾಗ ಆಡಳಿತ ಪಕ್ಷದ ಸದಸ್ಯರು ಸಿಪಿಐ (ಎಂ) ಶಾಸಕರ ಮೇಲೆ ದಾಳಿ ಮಾಡಿದರು ಎಂದೂ ಅವರು ಹೇಳಿದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಬಿಐ ತನಿಖೆಯನ್ನು ಎದುರಿಸಲೇ ಬೇಕು. ಅಗತ್ಯ ಬಿದ್ದರೆ ಅವರನ್ನು ಬಂಧಿಸಬೇಕು ಎಂದು ಮಿಶ್ರಾ ಹೇಳಿದರು. ಸಿಪಿಐ (ಎಂ) ಪಾಲಿಟ್ ಬ್ಯೂರೊ ಸದಸ್ಯ ಮಹಮದ್ ಸಲೀಂ ಮಾತನಾಡಿ ಎಡರಂಗ ಸರಕಾರ ಅಧಿಕಾರಕ್ಕೆ ಮರಳಿದರೆ ಠೇವಣಿದಾರರ ಹಣವನ್ನು ವಾಪಸ್ ಕೊಡುವುದಾಗಿ ಹೇಳಿದರು. ಚಿಟ್ ಫಂಡ್ ಮಾಲಿಕರು ಮತ್ತು ಟಿಎಂಸಿ ನಾಯಕರ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಠೇವಣಿದಾರರ ಹಣವನ್ನು ಮರಳಿಸಲಾಗುವುದು ಎಂದರು. ಎಡರಂಗದ ಸಂಚಾಲಕ ಬಿಮನ್ ಬೋಸ್ ಅಧ್ಯಕ್ಷತೆ ವಹಿಸಿದ್ದರು.