ಮಾನವ ಹಕ್ಕು ಎಂಬ ಪರಿಕಲ್ಪನೆಯನ್ನು ನಗೆಪಾಟಲು ಮಾಡಬೇಡಿ

ಸಂಪುಟ: 
10
ಸಂಚಿಕೆ: 
06
Sunday, 31 January 2016

ಉತ್ತರಪ್ರದೇಶ ಮುಖ್ಯಮಂತ್ರಿಗಳಿಗೆ ಸುಭಾಷಿಣಿ ಅಲಿ ಪತ್ರ

ಲೈಂಗಿಕ ಕಿರುಕುಳದ ಆಪಾದನೆಗೆ ಗುರಿಯಾಗಿದ್ದ ಹಿರಿಯ ಪೊಲೀಸ್ ಅಧಿಕಾರಿ ಡಿ.ಪಿ. ಶ್ರೀವಾಸ್ತವ ಅವರನ್ನು ಮಾನವ ಹಕ್ಕುಗಳ ಡಿಐಜಿಯಾಗಿ ಉತ್ತರ ಪ್ರದೇಶ ಸರಕಾರ ನೇಮಿಸಿರುವುದರ ಬಗ್ಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘದ ಉಪಾಧ್ಯಕ್ಷರೂ ಸಿಪಿಐ(ಎಂ) ಪೊಲಿಟ್ಬ್ಯುರೊ ಸದಸ್ಯರೂ ಆಗಿರುವ ಸುಭಾಷಿಣಿ ಅಲಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿಗಳಿಗೆ ಅವರು ಈ ಕುರಿತು ಬರೆದಿರುವ ಪತ್ರದಲ್ಲಿ ಈ ನೇಮಕದ ಮೂಲಕ ಅವರು ಉತ್ತರಪ್ರದೇಶದಲ್ಲಿ ಮಹಿಳೆಯರಿಗೆ ಭದ್ರತೆ ನೀಡುವ ತಮ್ಮ ಭರವಸೆಗಳನ್ನೇ ಅಪಹಾಸ್ಯ ಮಾಡಿದ್ದಾರೆ, ಮಾನವ ಹಕ್ಕುಗಳು ಎಂಬ ಪರಿಕಲ್ಪನೆಯನ್ನು ನಗೆಪಾಟಲಿನ ಮಟ್ಟಕ್ಕೆ ಇಳಿಸಿದ್ದಾರೆ ಎಂದು ಸುಭಾಷಿಣಿ ಅಲಿಯವರು ಅಭಿಪ್ರಾಯ ಪಟ್ಟಿದ್ದಾರೆ. 

ಐಪಿಎಸ್ ಅಧಿಕಾರಿ ಶ್ರೀಮತಿ ತಾಪಾ ಸುತಪ ಸನ್ಯಾಲ್ರವರ ನೇತೃತ್ವದ ಪೊಲೀಸ್ ಇಲಾಖೆಯ ತನಿಖಾ ಸಮಿತಿಯೇ ಸಬ್ ಇನ್ಸ್ಪೆಕ್ಟರ್ ಅರುಣಾ ರಾಯ್ ಅವರಿಗೆ ಈತ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂಬ ಆಪಾದನೆ ಎಲ್ಲ ರೀತಿಯಿಂದಲೂ ಸರಿ ಎಂಬ ತೀರ್ಮಾನಕ್ಕೆ ಬಂದಿತ್ತು. ಆತನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಜನವಾದಿ ಮಹಿಳಾ ಸಂಘಟನೆ ಆಗ್ರಹಗಳನ್ನು ಮಾಡಿದಾಗಲೆಲ್ಲ ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಸರಕಾರದ ಮುಖ್ಯ ಕಾರ್ಯದರ್ಶಿಗಳು ಭರವಸೆ ನೀಡಿದ್ದರು. 

ಆದರೆ ಈಗ ಆತನಿಗೇ ಮಾನವ ಹಕ್ಕುಗಳನ್ನು ರಕ್ಷಿಸುವ ಹೊಣೆ ವಹಿಸಿ ತಾವು ತಮ್ಮ ಭರವಸೆಯನ್ನು ಈಡೇರಿಸಿದ್ದೀರಾ ಎಂದು ಸುಭಾಷಿಣಿಯವರು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆ. ಈಗಲಾದರೂ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಜನತೆಗೆ, ನಿರ್ದಿಷ್ಟವಾಗಿ ಉತ್ತರಪ್ರದೇಶದ ಮಹಿಳೆಯರಿಗೆ ಈ ಮೂಲಕ ಮಾಡಿರುವ ತೀವ್ರ ಅವಮಾನವನ್ನು ಸರಿಪಡಿಸಬೇಕು, ಆ ವ್ಯಕ್ತಿಗೆ ಸೂಕ್ತ ಶಿಕ್ಷೆಯನ್ನು ವಿಧಿಸಬೇಕು ಎಂದು ಸುಭಾಷಿಣಿಯವರು ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.