‘ದಿವ್ಯಾಂಗ’ರು: ಪದ ಬದಲಾವಣೆ ತಾರತಮ್ಯವನ್ನು ಕೊನೆಗೊಳಿಸದು

ಸಂಪುಟ: 
10
ಸಂಚಿಕೆ: 
06
Sunday, 31 January 2016

-ಪ್ರಧಾನ ಮಂತ್ರಿಗಳಿಗೆ ಎನ್.ಪಿ.ಆರ್.ಡಿ. ಪತ್ರ

ಕಳೆದ ತಿಂಗಳ ‘ಮನ್ ಕೀ ಬಾತ್’ನಲ್ಲಿ ಪ್ರಧಾನ ಮಂತ್ರಿಗಳು ವಿಕಲಾಂಗರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತ “ನಾವು ಯಾಕೆ ವಿಕಲಾಂಗ ಎಂಬ ಪದದ ಬದಲು ದಿವ್ಯಾಂಗ ಎಂದು ಬಳಸಬಾರದು? ಈ ಮಂದಿ ತಮ್ಮ ಒಂದಿಲ್ಲೊಂದು ಅಂಗದಲ್ಲಿ ದಿವ್ಯಶಕ್ತಿಯನ್ನು ಪಡೆದಿರುವವರು” ಎಂದರು. ಈಗ ಸರಕಾರದ ಎಲ್ಲ ಕಾರ್ಯಕ್ರಮಗಳಲ್ಲಿ ಅದೇ ಪದ ಬಳಕೆಯಾಗುತ್ತಿದೆ, ಮಾಧ್ಯಮಗಳಲ್ಲಿ ಕೂಡ ಕೆಲವರು ಅದನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಇದು ವಿಕಲಾಂಗರ ಹಕ್ಕುಗಳನ್ನು ಬದಿಗೆ ತಳ್ಳಿ ಅವರನ್ನು ಸಮಾಜದ ‘ಕೃಪೆ’ಗೆ, ‘ಉದಾರತೆ’ಗೆ ಒಳಪಡಿಸುತ್ತದೆ ಎಂದು ರಾಷ್ಟ್ರೀಯ ವಿಕಲಾಂಗರ ಹಕ್ಕುಗಳ ವೇದಿಕೆ(ಎನ್ಪಿಆರ್ಡಿ) ಪ್ರಧಾನ ಮಂತ್ರಿಗಳಿಗೆ ಬರೆದ ಪತ್ರದಲ್ಲಿ ಹೇಳಿದೆ.

ವಿಕಲಾಂಗತೆ ಒಂದು ದೈವಿಕ ಕೊಡುಗೆಯೇನೂ ಅಲ್ಲ. ‘ದಿವ್ಯಾಂಗ’ ಎಂಬಿತ್ಯಾದಿ ಪದಬಳಕೆಯಿಂದ ವಿಕಲಾಂಗತೆಗೆ ಹಚ್ಚಿರುವ ಸಾಮಾಜಿಕ, ಸಾಂಸ್ಕೃತಿಕ ಇತ್ಯಾದಿ ಕಳಂಕಗಳನ್ನು ನಿವಾರಿಸುವುದಾಗಲೀ, ಅದರಿಂದ ಬಂದಿರುವ ತಾರತಮ್ಯವನ್ನು ತೊಡೆದು ಹಾಕುವುದಾಗಲೀ ಸಾಧ್ಯವಿಲ್ಲ. ಕೆಲವು ವಿಕಲಾಂಗರು ಈ ತಾರತಮ್ಯಗಳನ್ನೂ ಎದುರಿಸಿ ಸಾಧನೆಗಳನ್ನು ಮಾಡಿದ್ದರೆ ಅದು ಅವರ ಧೀರ ಪ್ರಯತ್ನಗಳಿಂದಲೇ ಹೊರತು ದೈವಿಕ ಶಕ್ತಿಯಿಂದಲ್ಲ. ವಿಕಲಾಂಗರಿಗೆ ಬೇಕಿರುವುದು ಇಂತಹ ಪದಗಳ ಮೂಲಕ ತೋರುವ ‘ಸಹಾನುಭೂತಿ, ಅಥವ ‘ಕೃಪೆ’ಗಳಲ್ಲ, ಅವರು ದೇಶದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸಲು ಇರುವ ಅಡೆ-ತಡೆಗಳ ನಿವಾರಣೆ ಬಯಸುತ್ತಾರೆ ಎಂದು ನೆನಪಿಸಿರುವ ಎನ್ಪಿಆರ್ಡಿ ಇಂತಹ ಪದ ಬಳಕೆಗೆ ವಿರೋಧ ಬಂದಿರುವುದು ಕೇವಲ ತಮ್ಮ ಸಂಘಟನೆಯಿಂದ ಮಾತ್ರವಲ್ಲ, ಇತರ ಹಲವು ಸಂಘಟನೆಗಳೂ, ವ್ಯಕ್ತಿಗಳೂ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಸಂಗತಿಯತ್ತ ಗಮನ ಸೆಳೆದಿದೆ.

‘ದಯವಿಟ್ಟು ‘ದಿವ್ಯಾಂಗ’ರು ಎಂದು ಬಳಸದಿರಿ, ಮತ್ತು ಈ ಪದವನ್ನು ಅಧಿಕೃತಗೊಳಿಸುವ ಯೋಜನೆಯೇನಾದರೂ ಇದ್ದರೆ ಅದನ್ನು ಕೈಬಿಡಿ’ ಎಂದು ಎನ್ಪಿಆರ್ಡಿ ಪ್ರಧಾನ ಮಂತ್ರಿಗಳನ್ನು ಕೇಳಿಕೊಂಡಿದೆ.