108 ನೌಕರರ ಹೋರಾಟ ಹತ್ತಿಕ್ಕುತ್ತಿರುವ ಸಚಿವರು

ಸಂಪುಟ: 
10
ಸಂಚಿಕೆ: 
06
date: 
Sunday, 31 January 2016
Image: 

ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಜನವರಿ 24 ರಿಂದ ರಾಜ್ಯದ್ಯಂತ ಆರೋಗ್ಯ ಕವಚ ‘108’ ಅಂಬೂಲೆನ್ಸ್ ಸಿಬ್ಬಂದಿಗಳು ಹೋರಾಟ ನಡೆಸುತ್ತಿದ್ದಾರೆ. ಅವರು ಮುಷ್ಕರಕ್ಕೆ ಹೋಗುವ ಪೂರ್ವದಲ್ಲಿ ಸರಕಾರಕ್ಕೆ ಮೊದಲೇ ಮನವಿ ಸಲ್ಲಿಸಿದ್ದಾರೆ. ಆದರೆ ಅದು ನಮಗೆ ಸಂಬಂಧಿಸಿಲ್ಲ ಎಂದು ಹಾರಿಕೆ ಉತ್ತರ ನೀಡಿದ ಆರೋಗ್ಯ ಸಚಿವ ಯು.ಟಿ.ಖಾದರ್ ‘ಎಸ್ಮಾ’ ಜಾರಿಗೊಳಿಸುವ ಬೆದರಿಕೆಯನ್ನು ಹಾಕಿದ್ದರು. ಆದರೆ ಇದಕ್ಕೆ ನೌಕರರು ಕಿವಿಗೊಡದೇ ಹೋರಾಟ ನಿರತರಾಗಿದ್ದಾರೆ.

ಇದಕ್ಕೆ ಸ್ಪಂದಿಸಬೇಕಾದ ಸಚಿವರು ಮತ್ತು ಜಿವಿಕೆ ಕಂಪನಿ ಮಾತ್ರ ಯವುದೋ ಎರಡು ನೌಕರರು ಪೋನ್ ನಲ್ಲಿ ಸಂಘವು ನಡೆಸುವ ಹೊರಾಟವನ್ನು ಹೇಗೆ ಯಶಸ್ವಿಗೊಳಿಸಬೇಕು ಎಂದು ನಡೆಸಿದ ಸಂಭಾಷಣೆಯ ಧ್ವನಿ ಮುದ್ರಣವನ್ನೆ ಬಂಡವಾಳವಾಗಿಸಿಕೊಂಡು ಆ ನೌಕರರನ್ನು ಕೆಲಸದಿಂದ ಅಮಾನತು ಮಾಡಿದೆ. ಸಾಲದೆಂಬಂತೆ ಸರಕಾರದ ನಿರ್ಲಕ್ಷ್ಯ ಧೋರಣೆಯನ್ನು ಪ್ರತಿಭಟಿಸಿ ಸ್ವಚ್ಚತಾ ಆಂದೋಲನ ನಡೆಸಲು ಮುಂದಾದ ಸಂಘದ ಪದಾಧಿಕಾರಿಗಳನ್ನು ಮತ್ತು ನೌಕರರನ್ನು ಅನಗತ್ಯವಾಗಿ ಬಂಧಿಸಲಾಗಿದೆ. ನೌಕರರು ಮುಂದಿಟ್ಟಿರುವ ಹೆಚ್ಚುವರಿ ವೇತನ, ಮೂಲಭೂತ ಸೌಲಭ್ಯ ಮೊದಲಾದ ಬೇಡಿಕೆಗಳ ಕುರಿತು ಮಾತುಕತೆ ನಡೆಸುವುದನ್ನು ಬಿಟ್ಟು ಸಂಘ ಕಟ್ಟಬಾರದು, ಮಾಧ್ಯಮಗಳೊಂದಿಗೆ ಮಾತನಾಡಬಾರದು ಎಂಬ ಅನಗತ್ಯ ಕಿರುಕುಳಗಳನ್ನು ನೀಡಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಫೆಬ್ರವರಿ ಮೊದಲ ವಾರದಿಂದ ಬಂಡವಾಳ ಹೂಡಿಕೆದಾರರ ಅಂತರಾಷ್ಟ್ರೀಯ ಸಮಾವೇಶ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಭರ್ಜರಿಯಾಗಿ ನಡೆಸುವ ಉಮೇದಿನಲ್ಲಿರುವ ಸಿದ್ದರಾಮಯ್ಯ ಸರಕಾರಕ್ಕೆ 108 ಕಾರ್ಮಿಕರ ಈ ಹೋರಾಟ ಮಗ್ಗಲು ಮುಳ್ಳಾಗಿ ಕಾಡುತ್ತಿರುವುದಂತೂ ಸತ್ಯ.

 

 

ಕೆ.ಮಹಾಂತೇಶ್