ತಮಿಳುನಾಡಿನಲ್ಲಿ ಖಾಸಗಿ ಶಿಕ್ಷಣ ಮಾಫಿಯಾಗೆ 3 ವೈದ್ಯ ವಿದ್ಯಾರ್ಥಿಗಳ ಬಲಿ

ಸಂಪುಟ: 
10
ಸಂಚಿಕೆ: 
06
Sunday, 31 January 2016

ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಕಲ್ಲಕುರಿಚ್ಚಿ ತಾಲೂಕಿನ ಬಂಗಾರಂ ಗ್ರಾಮದಲ್ಲಿನ ಎಸ್.ವಿ.ಎಸ್. ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇಡೀ ರಾಜ್ಯವೇ ತಲ್ಲಣಿಸುವಂತೆ ಮಾಡಿದೆ. ಜನವರಿ 23ರಂದು ಶರಣ್ಯ, ಮೋನಿಷಾ ಮತ್ತು ಪ್ರಿಯಾಂಕಾ ಅವರ ದೇಹಗಳು ಕಾಲೇಜ್ ಸಮೀಪದ ಬವಿಯಲ್ಲಿ ಪತ್ತೆಯಾ ಗಿದ್ದು ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಸರಕಾರದಿಂದ ಮಾನ್ಯತೆ ಪಡೆದಿರುವ ಈ ಕಾಲೇಜ್ `ಇಲ್ಲಗಳ' ಸಂತೆಯಾಗಿದೆ. ತರಗತಿ ಕೊಠಡಿಗಳಿಲ್ಲ, ಪ್ರಯೋಗಾಲಯಗಳಿಲ್ಲ. ಟಾಯ್ಲೆಟ್‍ಗಳಿಲ್ಲ. ಭದ್ರತಾ ವ್ಯವಸ್ಥೆಯಂತು ದೂರವೇ ಉಳಿಯಿತು. ಆದರೆ ಶುಲ್ಕ ಮಾತ್ರ ಸರಕಾರ ನಿಗದಿಪಡಿಸಿದ್ದಕ್ಕಿಂತ ಎಷ್ಟೋ ಪಟ್ಟು ಹೆಚ್ಚು. ಉತ್ತಮ ಶಿಕ್ಷಣ ಪಡೆಯುವ ಉದ್ದೇಶದಿಂದ ಕಾಲೇಜ್ ಸೇರಿದ ಅದೆಷ್ಟೋ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕಾಲೇಜ್‍ನ ಅವ್ಯವಸ್ಥೆಯಿಂದ ರೋಸಿಹೋಗಿ ಪ್ರವೇಶ ಪಡೆದ ಕೆಲವೇ ದಿನಗಳಲ್ಲಿ ಕಾಲೇಜ್ ಬಿಡುವ ಪ್ರಯತ್ನವನ್ನು ಮಾಡಿದರು. ಆದರೆ ಕಾಲೇಜ್ ಆಡಳಿತ ಮಂಡಳಿ ಗೂಂಡಾಗಳನ್ನು ಛೂಬಿಟ್ಟು ಪ್ರತಿಭನೆ ನಿರತ  ವಿದ್ಯಾರ್ಥಿ ಹಾಗೂ ಪೋಷಕರನ್ನು ಬೆದರಿಸಲು ಪ್ರಯತ್ನಿಸಿತು.

ಇದನ್ನು ಗಮನಿಸಿದ ಅನೇಕ ರಾಜಕೀಯ ಪಕ್ಷಗಳು, ಸಾರ್ವಜನಿಕ ಸಂಘಟನೆಗಳು ಮತ್ತು ವಿದ್ಯಾರ್ಥಿಗಳು ಕಾಲೇಜ್‍ನ ಅವ್ಯವಸ್ಥೆಗಳ ಬಗ್ಗೆ ಜಿಲ್ಲಾಧಿಕಾರಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಸಚಿವರು ಮತ್ತು ಸ್ವತಃ ಮುಖ್ಯಮಂತ್ರಿಯವರಿಗೆ ಮನವಿ ಪತ್ರಗಳನ್ನು ಸಲ್ಲಿಸಿ ಸಮಸ್ಯೆಗಳನ್ನು ಬಗೆಹರಿಸಿ ಅಧ್ಯಯನಕ್ಕೆ ಉತ್ತಮ ವಾತಾವರಣವನ್ನು ಕಲ್ಪಿಸುವಂತೆ ಮನವಿ ಮಾಡಿದ್ದರು. ಕಳೆದ ವರ್ಷ ಅಕ್ಟೋಬರ್‍ನಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ವಿದ್ಯಾರ್ಥಿಗಳು ನಡೆಸಿದ ಭಾರಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾಲೇಜ್ ಕುರಿತು ತನಿಖೆ ನಡೆಸಲು ಆದೇಶಿಸಲಾಗಿತ್ತು. ಆದರೆ ಅಧಿಕಾರಿಗಳು ಸಲ್ಲಿಸಿದ ತನಿಖಾ ವರದಿಗೆ ಸಂಬಂಧಿಸಿ ಯಾವುದೇ ಕ್ರಮ ಕೈಗೊಳ್ಳದ ಆಡಳಿತವರ್ಗ ವಿದ್ಯಾರ್ಥಿಗಳನ್ನೇ ಬೆದರಿಸಿತು.

ಈ ಹಿನ್ನೆಲೆಯಲ್ಲಿ ಮೂವರು ವಿದ್ಯಾರ್ಥಿನಿಯರ `ಆತ್ಮಹತ್ಯೆ' ಎಂಬ ಸಾವನ್ನು ಗಮನಿಸಬೇಕಾಗಿದೆ. ಮೂವರೂ ವಿದ್ಯಾರ್ಥಿನಿಯರ ಕೈಗಳನ್ನು ಹಿಂದಕ್ಕೆ ಕಟ್ಟಲಾಗಿತ್ತು ಹಾಗೂ ತಲೆ, ಮೈಗಳ ಮೇಲೆ ಗಾಯದ ಗುರುತುಗಳಿದ್ದವು. ಇದು ಸಾವಿನ ಬಗ್ಗೆ ಶಂಕೆ ಮೂಡಲು ಕಾರಣವಾಗಿದೆ.

ತಮಿಳುನಾಡು ಸರಕಾರದ ಉನ್ನತ ಶಿಕ್ಷಣವೂ ಸೇರಿದಂತೆ ಒಟ್ಟಾರೆಯಾಗಿ ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಿಸುವ ನೀತಿಯೇ ಇಂಥದ್ದೊಂದು ಅನಾಹುತಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಸಿಪಿಐ (ಎಂ) ತಮಿಳುನಾಡು ರಾಜ್ಯ ಸಮಿತಿ ಅಭಿಪ್ರಾಯಪಟ್ಟಿದೆ. ಲಂಗುಲಗಾಮಿಲ್ಲದೆ ಶುಲ್ಕ ವಸೂಲಿ ಮಾಡಲು ಹಾಗೂ ಯಾವುದೇ ಮೂಲ ಸೌಕರ್ಯ ಕಲೊಇಸದೆ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಸುಲಿಗೆ ಮಾಡಲು ಹಾಗೂ ಖಾಸಗಿಯವರು ಲಾಭ ಮಾಡಿಕೊಳ್ಳಲು ಸರಕಾರ ಅವರೊಂದಿಗೆ ಕೈಜೋಡಿಸಿದ್ದು ವಿದ್ಯಾರ್ಥಿನಿಯರ ಸಾವಿಗೆ ಹೊಣೆಯಾಗಿದೆ.

ಹೋರಾಟದ ಮುಂಚೂಣಿಯಲ್ಲಿದ್ದ ಈ ಮೂವರು ವಿದ್ಯಾರ್ಥಿನಿಯರ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು, ವಿದ್ಯಾರ್ಥಿಗಳಿಂದ ವಸೂಲಿ ಮಾಡಿರುವ ಹೆಚ್ಚುವರಿ ಶುಲ್ಕವನ್ನು ವಾಪಸ್ ನೀಡಬೇಕು, ಒಂದು ಕಟ್ಟಡ ಹೊರತುಪಡಿಸಿ ಬೇರಾವುದೇ ಸೌಲಭ್ಯಗಳಿಲ್ಲದ ಕಾಲೇಜ್ ನಡೆಸಲು ಅನುಮತಿಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಕಾಲೇಜ್ ವಿರುದ್ಧ ಕ್ರಮ ಕೈಗೊಳ್ಳದ ಆರೋಗ್ಯ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಸಿಪಿಐ (ಎಂ) ಒತ್ತಾಯಿಸಿದೆ.

 

ರಾಜ್ಯಗಳ ಸುತ್ತ -   ವಿಶ್ವಾಸ್