ಬೈಕಿನ ಸವಾರರ ಬಗ್ಗೆ ಇರುವ ಕಾಳಜಿ ರೈತರ ಬಗ್ಗೆ ಇಲ್ಲವೇ

ಸಂಪುಟ: 
10
ಸಂಚಿಕೆ: 
05
Sunday, 31 January 2016

ರೈತರ ಆತ್ಮಹತ್ಯೆ ವರದಿಗಳು ಹೆಚ್ಚುತ್ತಲೇ ಇವೆ. ರೈತರ ಸಂಕಷ್ಟಗಳ ಬಗ್ಗೆ ನಮ್ಮನ್ನಾಳುತ್ತಿರುವ ಸರಕಾರಗಳಿಗೆ ಕಾಳಜಿಯೇ ಇಲ್ಲದಾಗಿದೆ, ಬೈಕ್ ಸವಾರಿ ಮಾಡುವಾಗ ಹಿಂಬದಿ ಸವಾರನ ಜೀವರಕ್ಷಣೆಗೆ ಕೂಡಾ ಕಾಳಜಿ ಇರುವಂತೆ ಕಾನೂನು ಮಾಡುವ ಸರಕಾರಗಳಿಗೆ ರೈತನ ಜೀವ ಸಣ್ಣದಾಗಿ ಕಂಡೀತೇ? ಎಂದು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ಟೀಕಿಸಿದೆ. ಪತ್ರಿಕಾ ಹೇಳಿಕೆ ನೀಡಿದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್‍ವಾದ) ಬೆಳ್ತಂಗಡಿ ತಾಲ್ಲೂಕು ಸಮಿತಿ ಕಾರ್ಯದರ್ಶಿ ಬಿ.ಎಂ.ಭಟ್ ತಿಳಿಸಿದ್ದಾರೆ.

ಜನತೆಯ ಪ್ರಾಣ ರಕ್ಷಣೆಯ ಜವಬ್ದಾರಿ ಸರಕಾರಕ್ಕೆ ಇರಬೇಕಾದ್ದೇ. ಆದರೆ ಈ ದೇಶದ ಅನ್ನದಾತ ರೈತನೂ ಸರಕಾರದ ರೈತ ವಿರೋಧಿ ನೀತಿಯಿಂದ ಸಾಯುತ್ತಿರುವ ಬಗ್ಗೆ ಯಾಕೆ ಗಮನ ನೀಡುತ್ತಿಲ್ಲ. ಜನತೆಯ ಜೀವದ ಬಗ್ಗೆ ಸರಕಾರಕ್ಕೆ ನೈಜ ಕಾಳಜಿ ಇರುವ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ಹೆಲ್ಮೆಟ್ ಕಂಪೆನಿಯ ಲಾಬಿಯೇ ಈ ಕಟ್ಟುನಿಟ್ಟಿನ ಕಾನೂನಿಗೆ ಕಾರಣವಾಗಿರಬೇಕು ಎಂದ ಅವರು ನಿಜವಾಗಿ ಸರಕಾರಕ್ಕೆ ಜನರ ಪ್ರಾಣರಕ್ಷಣೆಯ ಬಗ್ಗೆ ಕಾಳಜಿ ಇದ್ದರೆ ರೈತರ ಸಂಕಷ್ಟಗಳ ಪರಿಹಾರಕ್ಕೆ ಕ್ರಮಕೈಗೊಂಡು ರೈತರ ಪ್ರಾಣ ರಕ್ಷಣೆಗೂ ಸೂಕ್ತ ಕಾನೂನು ಮಾಡಲಿ ಎಂದು ಸವಾಲೆಸೆದರು. ರೈತ ತಾನು ದುಡಿದು ದೇಶವನ್ನು ಸಲಹುತ್ತಿರುವಾಗ ಆತನ ಸಾಲದ ಬೇಗೆಯಿಂದ ಹೊರಬರಲಾರದ ದುಸ್ಥಿತಿಗೆ ಕಾರಣ ಹುಡುಕಲು ಸರಕಾರಕ್ಕೆ ಸಾಧ್ಯವಿದೆ. ಬೆಳೆದ ಬೆಳೆಗೆ ಯೋಗ್ಯ ಬೆಲೆ, ನೀರಾವರಿ ವ್ಯವಸ್ಥೆ, ವಿದ್ಯುತ್ ಸೌಲಭ್ಯ, ಬೆಲೆ ಏರಿಕೆಗೆ ಕಡಿವಾಣ ಇವೇ ಮೊದಲಾದ ಅನಿವಾರ್ಯ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಕ್ರಮಕೈಗೊಳ್ಳಲು ಅವರು ಸರಕಾರವನ್ನು ಒತ್ತಾಯಿಸಿದರು. ರೈತನ ಭೂಮಿಯ ಭದ್ರತೆ, ಕಸ್ತೂರಿರಂಗನ್ ವರದಿ, ಕುಮ್ಕಿ ಹಕ್ಕಿನ ಸಮಸ್ಯೆ ಮೊದಲಾದ ಸರಕಾರದ ರೈತ ವಿರೋದಿ ನೀತಿಗಳಿಂದ ರೈತನ ಬದುಕಿಗೆ ತರುತ್ತಿರುವ ಅಭದ್ರತೆಗಳನ್ನು ಇಲ್ಲವಾಗಿಸಲು ಸಾದ್ಯವಾದರೆ ಮಾತ್ರ ರೈತರಿಗೂ ನೆಮ್ಮದಿಯ ಬದುಕು ದೊರೆಯಲು ಸಾದ್ಯ ಎಂದು ತಿಳಿಸಿದ್ದಾರೆ.