ಮಾರ್ಚ್ 01ರಂದು ರಸ್ತೆ ಸಾರಿಗೆ ಕಾರ್ಮಿಕರ ದೆಹಲಿ ಚಲೋ

ಸಂಪುಟ: 
10
ಸಂಚಿಕೆ: 
06
Sunday, 31 January 2016

ಅಖಿಲ ಭಾರತ ರಸ್ತೆ ಸಾರಿಗೆ ಕಾರ್ಮಿಕರ ಫೆಡರೇಷನ್(ಎಐಆರ್‍ಟಿಡಬ್ಲ್ಯೂಎಫ್) ಸಂಘಟನೆಯ ಎರಡು ದಿನಗಳ ಅಖಿಲ ಭಾರತ ಜನರಲ್ ಕೌನ್ಸಿಲ್ ಸಭೆಯು ಕೋಲ್ಕತ್ತಾದಲ್ಲಿ ಜನವರಿ 09 ಮತ್ತು 10ರಂದು ನಡೆಯಿತು.

ಪ್ರಧಾನ ಕಾರ್ಯದರ್ಶಿ ಕೆ.ಕೆ.ದಿವಾಕರನ್ ಸಭೆಗೆ ವರದಿಯನ್ನು ಮಂಡಿಸಿ ಕಳೆದ ವರ್ಷದಲ್ಲಿ ದಿನಾಂಕ:30.04.2015 ಮತ್ತು 02.09.2015 ರಂದು ನಡೆದ 2 ಐತಿಹಾಸಿಕ ರಾಷ್ಟ್ರೀಯ ಮುಷ್ಕರ ಯಶಸ್ವಿಯಾಗಿ ಮಾಡಿದ್ದೇವೆ. ಇಂತಹ ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ನಮ್ಮ ಸಂಘಟನೆಯನ್ನು ಬಲಿಷ್ಠಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಹಾಗೂ ರಸ್ತೆ ಸಾರಿಗೆ ಸುರಕ್ಷತಾ ಮಸೂದೆ ಹಾಗು ಇತರ ತಿದ್ದುಪಡಿಗಳನ್ನು ವಿರೋಧಿಸಬೇಕಾಗಿದೆ ಎಂದು ತಿಳಿಸಿದರು. ವಿವಿಧ ರಾಜ್ಯಗಳಿಂದ ಭಾಗವಹಿಸಿದ್ದ 20 ಸಂಗಾತಿಗಳು ಚರ್ಚೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.

ದಿನಾಂಕ: 01.03.2016ರಂದು ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ ಬಳಿ ಮುಂದೆ ಪ್ರತಿಭಟನೆಯನ್ನು ನಡೆಸುವುದು. ಅದಕ್ಕೆ ವಿವಿಧ ರಾಜ್ಯದಿಂದ ರಸ್ತೆ ಸಾರಿಗೆ ಕಾರ್ಮಿಕರನ್ನು ಪ್ರತಿಭಟನೆಗೆ ಕರೆತರುವುದು. ಕರ್ನಾಟಕದಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಈ ಹೋರಾಟಕ್ಕೆ ಭಾಗವಹಿಸಬೇಕು ಮತ್ತು ಕಾರ್ಮಿಕರ ಮಧ್ಯೆ ಪ್ರಚಾರ ಮಾಡಬೇಕು.

ರಸ್ತೆ ಸಾರಿಗೆ ಕಾರ್ಮಿಕರ ಬೇಡಿಕೆಗಳು ಹೀಗಿವೆ:

1.    ಜನ ವಿರೋಧಿ, ಕಾರ್ಮಿಕ ವಿರೋಧಿ ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ-2015ನ್ನು ವಾಪಾಸಾತಿ ಮಾಡಬೇಕು.

2.    ವಿ.ವಿ.ಗಿರಿ ಲೇಬರ್ ಇನ್ಯೂಸ್ಟಿಚ್ಯೂಟ್‍ನ ಶಿಫಾರಸುಗಳನ್ನು ಜಾರಿ ಮಾಡಬೇಕು ಹಾಗು ನೇಮಕಾತಿ ಪತ್ರ ಮತ್ತು ಗುರುತಿನ ಚೀಟಿಯನ್ನು ನೀಡಬೇಕು.

3.    ಸಾಮಾಜಿಕ ಭದ್ರತಾ ಯೋಜನೆಯನ್ನು ಅಸಂಘಟಿತ ಕಾರ್ಮಿಕರಾದ ಸಾರಿಗೆ ನೌಕರರಿಗೂ ನೀಡಬೇಕು. ವಾಹನ ವಿಮಾ ಪಾಲಿಸಿ ಹಾಗೂ ಟೋಲ್ ಹಣವನ್ನು ಕಡಿಮೆ ಮಾಡಬೇಕು.

4.    ಕಾರ್ಮಿಕರ ಪರವಾದಂತಹ ಕಾನೂನು ತಿದ್ದುಪಡಿ, ಪಿ.ಎಫ್ ಹಾಗೂ ಬೋನಸ್ ಜಾರಿ ಮಾಡಬೇಕು.

5.    ರಾಷ್ಟ್ರವ್ಯಾಪಿ ಕನಿಷ್ಠ ವೇತನ ರೂ.15,000/- ಜಾರಿಯಾಗಬೇಕು.

6.    ಐಎಲ್‍ಓನ  ಶಿಫಾರಸಿನಂತೆ ಮೋಟಾರ್ ವಾಹನ ಚಾಲಕರ ಜೊತೆಗೆ ಆಟೋ ಮತ್ತು ಟ್ಯಾಕ್ಸಿ ಚಾಲಕರನ್ನು ಒಳಗೊಂಡಂತೆ ಇಎಸ್‍ಐ ಸೌಲಭ್ಯವನ್ನು ಜಾರಿ ಮಾಡಬೇಕು.

7.    ಸಾರಿಗೆ ಅಧಿಕಾರಿಗಳು ಹಾಗು ಪೋಲೀಸ್‍ರು ನೀಡುತ್ತಿರುವ ಕಿರುಕುಳವನ್ನು ನಿಲ್ಲಿಸಬೇಕು.

ಇದರ ಜೊತೆಗೆ ರಸ್ತೆ ಸಾರಿಗೆ ಸುರಕ್ಷತಾ ಮಸೂದೆ-2015ರ ಕಿರು ಪುಸ್ತಕವನ್ನು ಆಯಾಯ ರಾಜ್ಯಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಮುದ್ರಿಸಿ ಕಾರ್ಮಿಕರ ಮಧ್ಯೆ ಪ್ರಚಾರವನ್ನು ಮಾಡಬೇಕೆಂದು ಸಭೆಯು ಕರೆ ನೀಡಿದೆ.

ಸದಸ್ಯತ್ವ ಆಂದೋಲನ : ಅಖಿಲ ಭಾರತ ರಸ್ತೆ ಸಾರಿಗೆ ಕಾರ್ಮಿಕರ ಫೆಡರೇಷನ್ ವತಿಯಿಂದ ಹೊಸ ಹೊಸ ಸಂಘಗಳನ್ನು ನಮ್ಮ ಸಂಘಟನಾ ವ್ಯಾಪ್ತಿಗೆ ತರುವ ಕೆಲಸದ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಸದಸ್ಯತ್ವ ಹೆಚ್ಚಳಕ್ಕೆ ಮನೆ ಮನೆ ಪ್ರಚಾರವನ್ನು ಮಾಡಬೇಕು. ಕೇಂದ್ರ ಬಿಜೆಪಿ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಗಳ ಬಗ್ಗೆ ಪ್ರಚಾರವನ್ನು ಮಾಡುವ ಮೂಲಕ ನಮ್ಮ ಸಂಘಟನೆಯನ್ನು ಬಲಿಷ್ಟಗೊಳಿಸಬೇಕೆಂದು ತಿಳಿಸಲಾಗಿದೆ.

ರಸ್ತೆ ಸಾರಿಗೆ ಕಾರ್ಮಿಕರ ರಾಜ್ಯ ಮಟ್ಟದ ಸಮಾವೇಶ

ದೆಹಲಿಯಲ್ಲಿ ನಡೆಯುವ ಹೋರಾಟದ ಭಾಗವಾಗಿ ವಿವಿಧ ರಾಜ್ಯಗಳಲ್ಲಿ ರಾಜ್ಯ ಮಟ್ಟದ ಸಮಾವೇಶವನ್ನು ನಡೆಸಲು ತೀರ್ಮಾನಿಸಿದ್ದು ದಿನಾಂಕ :16.02.2016 ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಇ.ಎಂ.ಎಸ್ ಭವನದಲ್ಲಿ ರಸ್ತೆ ಸಾರಿಗೆ ಕಾರ್ಮಿಕರ ರಾಜ್ಯ ಸಮಾವೇಶವು ನಡೆಯುತ್ತಿದ್ದು ಈ ಕಾರ್ಯಕ್ರಮದಲ್ಲಿ ಎಐಆರ್ ಟಿಡಬ್ಲ್ಯೂಎಫ್ ನ ಪ್ರಧಾನ ಕಾರ್ಯದರ್ಶಿ ಕೆ.ಕೆ.ದಿವಾಕರನ್ ಹಾಗು ಸಿಐಟಿಯು ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂರವರು ಭಾಗವಹಿಸಲಿದ್ದಾರೆ.

 

  - ಬಿ.ವಿ.ರಾಘವೇಂದ್ರ