ರೂ.18,000 ಕನಿಷ್ಟ ವೇತನಕ್ಕಾಗಿ ಸಿಐಟಿಯು ಆಗ್ರಹ

ಸಂಪುಟ: 
10
ಸಂಚಿಕೆ: 
05
date: 
Sunday, 24 January 2016
Image: 

ರಾಜ್ಯ ಕಾರ್ಮಿಕ ಇಲಾಖೆಯು ದಿನಾಂಕ 20.11.2015 ರಂದು 23 ವಿವಿಧ ಉದ್ಯಮ ಕ್ಷೇತ್ರಗಳಿಗೆ ನೀಡಬೇಕಾದ ಕನಿಷ್ಟವೇತನ ಕರಡು ಅಧಿಸೂಚನೆಗಳಿಗೆ ಸಲಹೆ/ಆಕ್ಷೇಪಣೆಗಳು ಸಲ್ಲಿಸಲು ಎರಡು ತಿಂಗಳ ಕಾಲವಕಾಶ ಕೋರಿತ್ತು. ಈ 23 ಉದ್ಯಮ ಕ್ಷೇತ್ರಗಳಲ್ಲಿ ಪಬ್ಲಿಕ್ ಮೋಟಾರ್ ಟ್ರಾನ್ಸ್ ಪೋರ್ಟ್, ಮದ್ಯ ತಯಾರಿಕೆ, ರಸ್ತೆ/ಕಟ್ಟಡ ನಿರ್ಮಾಣ, ಪ್ಲಾಸ್ಟಿಕ್ ವಸ್ತು/ಪೈಪ್/ಸ್ಯಾನಿಟರಿ ವಸ್ತು ತಯಾರಿಕೆ, ಗ್ಲಾಸ್/ಗ್ಲಾಸ್‍ವೇರ್, ಹೊಟೇಲ್, ಲಾಂಡ್ರಿ, ಇಲೆಕ್ಟ್ರಾನಿಕ್ಸ್, ಗೃಹಕೃತ್ಯ, ಸಿನಿಮಾ, ಔಷಧಿ ತಯಾರಿಕೆ, ಆಸ್ಪತ್ರೆ/ನರ್ಸಿಂಗ್ ಹೋಮ್, ಆಹಾರ ಸಂಸ್ಕರಣೆ, ಟಿಂಬರ್, ಇಲೆಕ್ಟ್ರೋಪ್ಲೇಟಿಂಗ್, ಕ್ಲಬ್ ಮುಂತಾದವು ಸೇರಿವೆ.

ಸಿಐಟಿಯು ರಾಜ್ಯ ಸಮಿತಿ ಮತ್ತು ಸಿಐಟಿಯು ನೇತೃತ್ವದ ಕಾರ್ಮಿಕ ಸಂಘಟನೆಗಳ ಪರವಾಗಿ ಈ ಅಧಿಸೂಚನೆಯನ್ನು ಅಧ್ಯಯನ ಮಾಡಿ ಈ ಕೆಳಕಂಡ ಸಲಹೆ/ಆಕ್ಷೇಪಣೆಗಳನ್ನು ಜನವರಿ 19 ರಂದು ಕಾರ್ಮಿಕ ಆಯುಕ್ತರಿಗೆ ಸಲ್ಲಿಸಿದೆ.

1.    ಎಲ್ಲಾ ಕೈಗಾರಿಕೆಗಳಿಗೂ ಸಮಾನ ವೇತನ ನಿಗದಿ ಪಡಿಸುವ ಸರ್ಕಾರದ ಕ್ರಮವನ್ನು ನಮ್ಮ ಸಂಘವು ಸ್ವಾಗತಿಸುತ್ತದೆ. ಆದರೆ, ಪ್ರತಿ ಕೈಗಾರಿಕೆಗೂ ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸುವ ಬದಲು ಎಲ್ಲಾ ಕೈಗಾರಿಕೆಗಳಿಗೂ ಕುಶಲತೆ ಹಾಗು ಹಿಂದಿನ ಸೇವೆಗೆ ಮಾನ್ಯತೆ ನೀಡುವ ಹೆಚ್ಚುವರಿ ವೇತನವನ್ನು ಸೇರಿದಂತೆ ಒಂದೇ ಅಧಿಸೂಚನೆಯನ್ನು ಹೊರಡಿಸಿ ಏಕಕಾಲಕ್ಕೆ ಕನಿಷ್ಟ ವೇತನ ಪುನರ್ ವಿಮರ್ಶೆ ಆಗುವಂತೆ ಕ್ರಮ ವಹಿಸಬೇಕು.

2.    ಸಿಐಟಿಯು ಸಂಘಟನೆ "ಜೀವನಾವಶ್ಯಕತೆಯ ಆಧಾರದಲ್ಲಿ ಕನಿಷ್ಟ ವೇತನ’ (ನೀಡ್ ಬೆಸ್‍ಡ್ ಮಿನಿಮಮ್ ವೇಜಸ್) ನಿಗದಿ ಪಡಿಸಲು ಒತ್ತಾಯಿಸುತ್ತಿದೆ. ಈ ಆಧಾರದಲ್ಲಿ 2006ರ ರಾಜ್ಯದ ಸರಾಸರಿ ಗ್ರಾಹಕ ಬೆಲೆ ಸೂಚ್ಯಾಂಕವು 2967(1960=100) ಇದ್ದು, ಅದು 2014ರಲ್ಲಿ 6205 ಅಂಶಗಳಿಗೆ ಹೆಚ್ಚಿದೆ. 2015ರ ಹೆಚ್ಚಳ ಅಂದಾಜು ಶೇ.10 ರಷ್ಟು ಅಂದು ಕೊಂಡರೂ ಅದು ಸುಮಾರು 6800 ಅಂಶಗಳನ್ನು ಮೀರಬಹುದಾಗಿದೆ. ಸುಮಾರು ಶೇ. 130ರಷ್ಟು ಹೆಚ್ಚಳವಾಗಿರುತ್ತದೆ. ಜೀವನಾವಶ್ಯಕ ಕನಿಷ್ಟ ವೇತನವನ್ನು ನಿಗದಿ ಪಡಿಸುವ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯದ ರ್ಯಾಪ್ಟಕೋಸ್ ಭ್ರೆಟ್ ವಿವಾದದಲ್ಲಿ ನೀಡಿದ ತೀರ್ಪಿನ ಆಧಾರದಲ್ಲಿ ಮನೆ ಬಾಡಿಗೆ ವೆಚ್ಚವನ್ನು ಇವತ್ತಿನ ದರದಲ್ಲಿ ಒಳಗೊಂಡು ನಿಗದಿಪಡಿಸಬೇಕು.

ಈ ಆಧಾರದಲ್ಲಿ ಅಕುಶಲ ಕಾರ್ಮಿಕರಿಗೆ ವಲಯ 3 ರಲ್ಲಿ ಕನಿಷ್ಟ ಒಂದು ದಿನಕ್ಕೆ ರೂ. 692.30ಪೈಸೆ ಎಂಟು ಗಂಟೆಗಳ ಕೆಲಸಕ್ಕೆ ನಿಗದಿಯಾಗಬೇಕು. ಅಂದರೆ 26 ದಿನಗಳ ಕೆಲಸಕ್ಕೆ ರೂ. 18,000/- ಕನಿಷ್ಟ ವೇತನವನ್ನು ನಿಗದಿಪಡಿಸಬೇಕು. ಗ್ರಾಹಕ ಸೂಚ್ಯಾಂಕದ 6205 ಅಂಶಗಳಿಗೆ ಹೆಚ್ಚಾಗುವ ಪ್ರತಿ ಆಂಶಕ್ಕೂ ಪ್ರತಿ ದಿನಕ್ಕೆ 5 ಪೈಸೆ ತುಟ್ಟಿ ಭತ್ಯೆ ಹೆಚ್ಚಳವನ್ನು ನೀಡುವಂತೆ ಕನಿಷ್ಟ ವೇತನ ನಿಗದಿಪಡಿಸಬೇಕು.
ಈಗಾಗಲೇ ಕೇಂದ್ರ ಸರ್ಕಾರಕ್ಕೆ ಏಳನೇ ವೇತನ ಆಯೋಗವು ಈ ಮಟ್ಟದ ವೇತನವನ್ನು ಶಿಪಾರಸ್ಸು ಮಾಡಿದೆ. ದೇಶಾದ್ಯಂತ ಸಮಾನ ಕನಿಷ್ಟ ವೇತನ ನಿಗದಿ ಪಡಿಸುವ ಕ್ರಮಗಳ ಬಗ್ಗೆ ಕೇಂದ್ರ ಈಗಾಗಲೇ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಸಲಹೆಯನ್ನು ಪರಿಗಣಿಸಬೇಕೆಂದು ಸಿಐಟಿಯು ಒತ್ತಾಯಿಸುತ್ತದೆ.

ಅಲ್ಲದೆ ಈಗಾಗಲೆ ನಮ್ಮ ಸಂಘವು ಒತ್ತಾಯಿಸುತ್ತಿರುವ ರೀತಿಯಲ್ಲಿ ಹೆಚ್ಚಿದ ಪ್ರತಿ ಕುಶಲತೆಯ ಹಂತಕ್ಕೂ ಶೇ. 15ರಷ್ಟು ಹೆಚ್ಚುವರಿ ವೇತನವನ್ನು ಕನಿಷ್ಟ ವೇತನವಾಗಿ ನಿಗದಿಪಡಿಸಬೇಕು. ಈಗಾಗಲೇ ಗುತ್ತಿಗೆ ಕಾರ್ಮಿಕರಿಗೆ ನಿಗದಿ ಪಡಿಸಿರುವ ರೀತಿಯಲ್ಲಿ ಎಲ್ಲಾ ಕೈಗಾರಿಕೆಯಲ್ಲಿ ದುಡಿಯುವ ಕಾರ್ಮಿಕರಿಗೆ ಅವರ ಸೇವಾವಧಿಗೆ ಮಾನ್ಯತೆ ನೀಡುವ ಸಲುವಾಗಿ ಪ್ರತಿ ವರ್ಷದ ಸೇವೆಗೆ ಮೂಲ ವೇತನದ ಶೇ. 2 ರಷ್ಟನ್ನು ಸೇವಾ ಭತ್ಯೆಯನ್ನಾಗಿ (ಸರ್ವೀಸ್ ವೈಟೇಜ್)ಮೂಲ ವೇತನಕ್ಕೆ ಸೇರಿಸಿ ನೀಡುವಂತೆ ವೇತನ ನಿಗದಿ ಪಡಿಸಬೇಕು.

ಕರ್ನಾಟಕದ ಕೌಶಲ್ಯ ಹೆಚ್ಚಳಕ್ಕೆ ಹಾಗು ಕಾರ್ಮಿಕರ ಕೌಶಲ್ಯದ ಪ್ರತಿಫಲವನ್ನು ಉತ್ಪಾದನಾ ಹಾಗು ಸೇವಾ ರಂಗದಲ್ಲಿನ ಉದ್ದಿಮೆಗಳು ಉಳಿಸಿಕೊಳ್ಳಲು ಜೀವಾನವಶ್ಯಕ ಕನಿಷ್ಟ ವೇತನವು ಸಹಕಾರಿಯಾಗುತ್ತದೆ. ಗುತ್ತಿಗೆ ಹಾಗು ಹಂಗಾಮಿ ಕೆಲಸದ ಆಧಾರದಲ್ಲಿ ದುಡಿಮೆಯನ್ನು ಕಡಿಮೆ ಕೂಲಿಗಾಗಿ ಶೋಷಿಸುವುದನ್ನು ತಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಈ ಮೇಲ್ಕಂಡ ಸಲಹೆ/ಆಕ್ಷೇಪಣೆಗಳನ್ನು ಪರಿಗಣಿಸಿ ಕನಿಷ್ಟ ವೇತನ ನಿಗದಿಪಡಿಸಲು ಸಿಐಟಿಯು ಪರವಾಗಿ ಕಾರ್ಮಿಕ ಇಲಾಖೆಯನ್ನು ಒತ್ತಾಯಿಸಿದೆ.