ಸಂಸದರ ಕಚೇರಿ ಮುಂದೆ ಬಿ.ಎಸ್.ಎನ್.ಎಲ್. ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

ಸಂಪುಟ: 
10
ಸಂಚಿಕೆ: 
05
date: 
Sunday, 24 January 2016
Image: 

ಬಿಎಸ್‍ಎನ್‍ಎಲ್ ಸಂಸ್ಥೆಯ ಕರ್ನಾಟಕ ವೃತ್ತದಲ್ಲಿ ಸಾವಿರಾರು ಕಾರ್ಮಿಕರನ್ನು ಗುತ್ತಿಗೆ ಹಂಗಾಮಿ ಕಾರ್ಮಿಕರೆಂದು ದುಡಿಸಿಕೊಳ್ಳಲಾಗುತ್ತಿದೆ. ಕಾಯಂ ಸ್ವರೂಪದ ಕೆಲಸಗಳನ್ನು ಗುತ್ತಿಗೆ ಹಾಗೂ ಹೊರಗುತ್ತಿಗೆಗೆ ನೀಡಬಾರದು ಎಂಬ ಕಾನೂನು ಇದ್ದಾಗ್ಯೂ ಭಾರತ ಸಂಚಾರ ನಿಗಮ(ಬಿಎಸ್‍ಎನ್‍ಎಲ್) ಒಂದು ಸರಕಾರಿ ನಿಗಮವಾಗಿ ಅದನ್ನು ಉಲ್ಲಂಘಿಸಿ ಈ ಕೆಲಸ ಮಾಡುತ್ತಿದೆ. ಅಲ್ಲದೆ ಅಲ್ಲಿ ದುಡಿಯುತ್ತಿರುವ ಕಾರ್ಮಿಕರು ಕಾಯಂ ನೌಕರರು ಮಾಡುವ ಕೆಲಸಗಳನ್ನೇ ನಿರ್ವಹಿಸುತ್ತಿದ್ದರೂ ಅವರಿಗೆ ‘ಸಮಾನ ಕೆಲಸಕ್ಕೆ ಸಮಾನ ವೇತನ’ ನೀಡದೇ ಶೋಷಿಸಲಾಗುತ್ತಿದೆ.

ಇಂತಹ ಹಲವು ಪ್ರಶ್ನೆಗಳನ್ನು ಹತ್ತಾರು ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರು ಎದುರಿಸುತ್ತಿದ್ದಾರೆ. ಈ ಬಗ್ಗೆ ಸಂಸತ್ತಿನ ಕಾರ್ಮಿಕ ಸ್ಥಾಯಿ ಸಮಿತಿ ಮುಂದೆಯೂ ಈ ಪ್ರಶ್ನೆಗಳನ್ನು ನಮ್ಮ ಅಖಿಲ ಭಾರತ ಸಮಿತಿ ಕೊಂಡೊಯ್ದ ಪ್ರಸ್ತಾಪಿಸಿದೆ. ಸ್ಥಾಯಿ ಸಮಿತಿಯು ಭಾರತ ಸಂಚಾರ ನಿಗಮ(ಬಿಎಸ್‍ಎನ್‍ಎಲ್) ಹಿರಿಯ ಅಧಿಕಾರಿಗಳನ್ನು ತನ್ನ ಮುಂದೆ ಕರೆಸಿ ಈ ಕಾರ್ಮಿಕರ ನ್ಯಾಯಬದ್ದ ಹಕ್ಕುಗಳನ್ನು ಖಾತ್ರಿಗೊಳಿಸಬೇಕೆಂದು ತಾಕೀತು ಮಾಡಿದೆ. ಇದರ ಪರಿಣಾಮವಾಗಿ ಪ್ರಧಾನ ಕಚೇರಿಯಿಂದ ಸುತ್ತೋಲೆಗಳು ಬಂದಿವೆ. ಆದರೆ ಕೆಳಹಂತದ ಜಿಲ್ಲೆಗಳಲ್ಲಿ ಈಗಲೂ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಸಂಬಳ ನೀಡದೇ, ವಾರದ ರಜೆ, ತಿಂಗಳ ರಜೆ, ಭವಿಷ್ಯನಿಧಿ, ವಿಮಾ ಸೌಲಭ್ಯ ನೀಡದೆ ಮತ್ತು ಕಾರ್ಮಿಕರನ್ನು ಕಾನೂನು ವಿರುದ್ದವಾಗಿ ಯಾವುದೇ ಹೆಚ್ಚುವರಿ ಭತ್ಯೆ ನೀಡದೇ 10/12 ಹಾಗೂ 24 ಗಂಟೆಗಳ ಕಾಲ ಅಮಾನವೀಯವಾಗಿ ದುಡಿಸಿಕೊಳ್ಳಲಾಗುತ್ತಿದೆ.

ಈ ಹಿನ್ನಲೆಯಲ್ಲಿ ಸಂಸದರು ತಮ್ಮ ಕ್ಷೇತ್ರದ ವ್ಯಾಪಿಯಲ್ಲಿ ಬರುವ ಬಿ.ಎಸ್.ಎನ್.ಎಲ್ ಗಳ ಅಧಿಕಾರಿಗಳಿಗೆ ಕಾರ್ಮಿಕ ಕಾನೂನು ಜಾರಿ ಹಾಗೂ ಕಾನೂನುಬದ್ದ ಸೌಲಭ್ಯಗಳ ಜಾರಿಗೆ ಒತ್ತಾಯ ತರಬೇಕು ಹಾಗೂ ಮುಂದಿನ ಸಂಸತ್ತಿನ ಅಧಿವೇಶನದಲ್ಲಿ ತಾವೂ ಈ ಕುರಿತಾದ ಪ್ರಶ್ನೆಗಳನನ್ನು ಎತ್ತಿ ಈ ನೊಂದ ಕಾರ್ಮಿಕರ ಪರವಾಗಿ ಕೆಲಸ ಮಾಡಬೇಕೆಂದು ಕೋರಿ ಸಂಸದರ ಕಚೇರಿ ಮುಂದೆ ಸಿಐಟಿಯು ನೇತೃತ್ವದ  ಕರ್ನಾಟಕ ರಾಜ್ಯ ಬಿಎಸ್‍ಎನ್‍ಎಲ್ ನಾನ್-ಪರ್ಮನೆಂಟ್ ಕಾರ್ಮಿಕರ ಸಂಘದಿಂದ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಧಾರವಾಡ ಮತ್ತು ಬೆಂಗಳೂರಿನಲ್ಲಿ ಸಂಸದರ ಕಚೇರಿ ಮುಂದೆ ಪ್ರತಿಭಟನೆ ನಡೆದ ವರದಿಗಳು ಬಂದಿವೆ.